Posts

Showing posts from July, 2026

ಪ್ರೇಮಗೀತೆ.

ಪ್ರೇಮಗೀತೆಯೊಂದ ಹೇಳುವಾಸೆ ಕೊನೆಯದೊಂದು ಬಾರಿಗೆ, ಮನಸೂರೆಗೊಳಿಸಿದ ನನ್ನೊಲವ ಮಯೂರಿಗೆ ಮೇರು ಪರ್ವತದಷ್ಟು, ಸಾಗರ ಆಕಾಶದಷ್ಟು ಪ್ರೇಮಗೀತೆಯೊಂದು ಹೇಳುವಾಸೆ. ಸಂಜೆ ಚಂದ್ರನ ಕಣ್ ತಪ್ಪಿಸಿ, ನಲಿವ ಗುಲಾಬಿಯಿಂದ ಕಣ್ ತಪ್ಪಿಸಿ, ಕುಣಿವ ನವಿಲಿನಿಂದ ಕಣ್ ತಪ್ಪಿಸಿ, ಯಾವ್ ಚೆಲುವಿನ ದೃಷ್ಟಿಯೂ ಬೀಳದಂತ್ತೆ ನನ್ನೊಲವ ರಾಣಿಗೆ ಪ್ರೇಮಗೀತೆಯೊಂದು ಹೇಳುವಾಸೆ. ಮತ್ತೆಂದೂ ಮತ್ತಾರಿಗೂ ಸಿಗದ ಶಬ್ದಗಳ ಪೋಣಿಸಿ, ನನ್ನ ಅವಳ ಒಲವಷ್ಟೇ ಕೇಳುವ ರಾಗದಲ್ಲಿ, ಹೃದಯದ ಬಡಿತಗಳೇ ಸಂಗೀತವಾಗಿಸಿ, ಕಣ್ಣೋಟಗಳ ಕೊಳಲ ನುಡಿಸಿ, ಒಮ್ಮೆ ನನ್ನಾಕೆಯ ಮನಸ್ಸು ತಣಿಸುವಂತ್ತೆ ಪ್ರೇಮಗೀತೆಯೊಂದ ಹೇಳುವಾಸೆ. ಇನ್ನೆಂದೂ ಇನ್ನಾರಿಗೂ ಲಭಿಸದ ರಾಗದಲ್ಲಿ, ನನ್ನವಳಿಗಾಗಿಯೇ ಮೀಸಲಿಟ್ಟ ಶೃತಿಯಲ್ಲಿ, ಜಗವೆಂದೂ ಕಾಣದ ಹಾವ ಭಾವದಲ್ಲಿ, ಹಸಿರು ಇಳಿಸಂಜೆಯ ಕಾಮನಬಿಲ್ಲಿನ ಬೆಳಕಿನಲ್ಲಿ, ನನ್ನ ಹೃದಯದ ರಾಣಿಗೆ ಒಂದೊಮ್ಮೆ ಕೊನೆಯ ಪ್ರೇಮಗೀತೆ ಹೇಳುವಾಸೆ.                   .......ಬಸವ.

ಲೋಹದ ಹಕ್ಕಿ.

ಲೋಹದ ಹಕ್ಕಿಯಲ್ಲಿ ಮೋಡಗಳ ಕಣ್ಮರೆಯಲ್ಲಿ ತೇಲುವ ಅನುಭವಕ್ಕೆ ನಾನು ಮೋಹಿತನಾದೆನು. ಹಾಗೊಮ್ಮೆ ಹೀಗೊಮ್ಮೆ ಹೊರಳುವ ಹಕ್ಕಿ ಮೇಲಕೊಮ್ಮೆ ಹತ್ತುವುದು, ಕೆಳಗೊಮ್ಮೆ ಇಳಿಯುವುದು ಬಲಕೊಮ್ಮೆ ಎಡಕ್ಕೊಮ್ಮೆ ವಾಲುವುದು, ತೇಲುವುದು ನಭದೊಳಗೆ. ಬಿರ್ರನೆ ಸೀಳುತ್ತಾ ಗಾಳಿಯನ್ನು ಹೊತ್ತೊಯ್ಯುವುದು ಆಗಸದೊಳಗೆ. ಕಿವಿಯೊಳಗಿನ ಪದರುಗಳ ನಿಮಿರಿಸುತ, ಹೊಟ್ಟೆಯೊಳಗೆ ಗಾಳಿಯ ತೇಲಿಟ್ಟು ಹಾಯಾಗಿ ಹಿತವಾಗಿ ಹಾರುವುದು ನಭದೊಳಗೆ.                                ..........ಬಸವ.

ಅಳುವ ನೋವುಗಳು.

ಇಂದೇಕೋ ನೋವುಗಳು ಅಳುತ್ತಿವೆ ನೆನಪುಗಳ ಬೇನೆಯಲ್ಲಿ ಬೇಯುತ್ತಿವೆ. ಮತ್ತೆ ಮತ್ತೆ ಅವಳ ಅಸ್ತಿತ್ವದ ನೆನಪುಗಳನ್ನ ನನ್ನೆದುರಿಗೆ ತಂದೊಡ್ಡಿ ನೋವುಗಳು ಅಳುತ್ತಿವೆ. ಅದೆಷ್ಟು ಗಡುಸಾಗಿಯೇ ದ್ವೇಷಿಸಿತ್ತು ಆ ಧ್ವನಿ ತೆಳುವಾದ ಕಣ್ಣೀರುಗಳು ಕಣ್ಣಲ್ಲಿಯೇ ಇಟ್ಟುಕೊಂಡು. ಆಲಿಂಗನಕ್ಕೆ ಒಲ್ಲೆನೆನ್ನುವ ಎದೆಯೊಳಗಿನ ಹೃದಯ ಇನ್ನಷ್ಟು ಜೋರಾಗಿ ಬಡಿದು ಬಾ ಎಂಬುದ ನಾ ಕಂಡಿದ್ದೆ. ವಿರಹದಲ್ಲಿ ಚಿತ್ಕರಿಸುವ ಒಲವಿಗೆ ದನಿಯೊಂದ ಬೇಕಿತ್ತು ಕೇಳಿಸಿದರೂ ತನಗೆ ಕೇಳದೆ ಹೋಯಿತೆಂದ ನಗುವಿನ ಅಳು ಇಂದಿಗೂ ನನ್ನೆದುರಿಗೆ ಅಳುತ್ತಲೇ ಇದೆ. ನನ್ನೊಲವು ಎಲ್ಲಾ ಕರಾರುಗಳನ್ನ ಇಂದಿಗೂ ಆಪ್ಯಾಯಮಾನವಾಗಿ ಪಾಲಿಸುತ್ತಿದೆ.                                   ..............ಬಸವ.

ನೆನಪುಗಳ ಮಳೆ.

ಆಗಾಗ ಅವಳ ನೆನಪುಗಳು ಸಂಧಿಸಿ ಹೋಗುತ್ತಿರುತ್ತವೆ ಜೋರಾಗಿಯೇ ಸುರಿಯಲು ಬಂದ ಮಳೆ ಕೆಲ ಹನಿಗಳ ಉದಾಹರಣೆ ತೋರಿಸಿ ಹೋದ ಹಾಗೆ. ಜೋರಾಗಿ ಸುರಿಯದೀದ್ದರೂ ನೆಲಕಪ್ಪಿ ಹಬ್ಬಿಸಿದ ನೆನಪುಗಳ ಕಂಪು ಗಾಢವಾಗಿಯೇ ಆವರಿಸಿದೆ.  ನೆನಪುಗಳ ಹನಿ ಹಗುರವಾಗಿ ಮುದವೇನೋ ನೀಡುತ್ತವಾದರೂ ಭಯಂಕರವಾಗಿ ಆವರಿಸಿ ಸೃಷ್ಟಿಸುವ ಪ್ರವಾಹದ ಭಯವು ಜೊತೆಗಿರುವುದು. ಜೋರಾದ ಸಿಡಿಲು ಗುಡುಗುಗಳಂತ್ತೆ ಕೆಲ ನೆನಪುಗಳು ಹೆದರಿಸಿಯೂ ಹೋಗುತ್ತವೆ. ನೆನಪುಗಳ ಜೋರು ಮಳೆಗೆ ತತ್ತರಿಸದೆ ಉಳಿಯಬಹುದಿತ್ತೇನೋ ನನ್ನೊಲವೀಗ ಮತ್ತೊಂದು ಒಲವಿನ ಮಾಳಿಗೆಯೊಳಗೆ ಬೆಚ್ಚಗೆ ಅವಿತು ಕುಳಿತಿದ್ದರೆ. ಬಟಬಯಲಿನ ಒಂಟಿ ಬದುಕಿಗೆ ನೆನಪುಗಳ ಜಿಟಿ ಮಳೆಯೂ ಸಾಕು ಕಣ್ಣೀರುಗಳ ತುಂತುರಿಗೆ.                                                  ........ಬಸವ.

ಕರಗುವ ಕಾರ್ಮೋಡಗಳು.

ಕಾರ್ಮೋಡದ ಕತ್ತಲೆಯಲ್ಲಿ ಹತಾಶೆ ಕಂಡ ಬದುಕಿಗೆ ನೀರ್ ಹೊಯ್ದು, ಸಾಂತ್ವಾನಿಸಿ ಹಸಿರೊಡೆಸಿದ್ದು ಅದೇ ಕಾರ್ಮೋಡಗಳು. ಇದೀಗ ಅಗಸಕ್ಕೆ ಪರಕೀಯವೆಂಬ್ಬಂತೆ ಸಂಪೂರ್ಣವಾಗಿ ಕರಗಿ ನೆಲಕಪ್ಪಿವೆ. ಸಂತೃಪ್ತ ಭಾವದದೊಂದು ಕಣ್ಣೀರ ಹನಿಯ ಅಪ್ಪುಗೆಗೆ ಇಂದು ಅದೇ ಮೋಡಗಳು ನೆಲದಲ್ಲೆಲ್ಲೂ ಸಿಗದಿದ್ದರೂ ಸಾಗರದೊಂದು ಬೃಹತ್ ಅಲೆಯಲ್ಲಿ ಹನಿಯಾಗಿಯಾದರೂ ಜೀವಂತಾಗಿವೆ.  ಇದೀಗ ಅಲೆಗಳಾಗಿ ಬರುವ ಎಲ್ಲಾ ಅಲೆಗಳಿಗೊಂಡೊಂಡು ಕಣ್ಣೀರ ಹನಿಯ ಋಣವೊಂದು ಬಾಕಿ ಇದೆ. ಇಲ್ಲಿಗೆ ಇಷ್ಟೇ ಎಂಬಂತೆ ಪೊಟ್ಟಣದೊಳಗೆ ಕೂಡಿಟ್ಟ ಬದುಕಿನ ಭಾಗ್ಯಗಳನ್ನ ಒಂದೊಂದಾಗಿಯೇ ಹಂಚುವವನಿಗೆ ಅದಾವ ಅವಸರವೂ ಇಲ್ಲ. ಇಂದಿಗೆ ಹೀಗೆ, ನಾಳೆಗೆ ಇನ್ನೇಹೆಗೊ  ಮತ್ಹೇಗೋ ತಿರುವುಗಳೇ ಕೂಡಿರುವ ಬದುಕಿನಲಿ. ಅವನಾಗಿಯೇ ಕೃತಜ್ಞತೆ ಒಲ್ಲೆನೆಂದರೂ ಅವನೆಂದಿಗೂ ಅರ್ಹನೆಂಬ ಅರಿವೊಂದಿರಲಿ.                                       ........ಬಸವ.