Posts

ಗರ್ಭದಾಚೆಯ ಅನಾಥ.

ನನ್ನನ್ನೇಕೆ ನಿನ್ನೊಡಲಾಳದಿಂದ ಹೊರದಬ್ಬಿದೆ ಅಮ್ಮ ನಿನ್ನೊಳಗೇ ಅವಿತಿಟ್ಟುಕೊ ನನ್ನ, ಬಿಸಿ ಅಪ್ಪುಗೆಯಲ್ಲಿ. ಪ್ರತಿ ಕ್ಷಣವೂ ನಿನ್ನೊಟ್ಟಿಗಿದ್ದ ನಾನು ನಿಧಾನವಾಗಿ ಎರಡು ದೇಹಗಳಾಗಿ ಎರಡು ಮನಸ್ಸು, ಬುದ್ಧಿಗಳಾಗಿ, ಎರಡು ವಿಚಾರವಾಗಿ ಅನುಭವಿಸುತ್ತಿರುವ ಈ ಪರಿತಾಪನೆ ನನ್ನಿಂದಾಗದು. ನಾನು ನಿನ್ನನ್ನೇ ಮಾತಾಡಬಯಸುತ್ತೇನೆ, ಕೇವಲ ನಿನ್ನನ್ನೇ ಕೇಳಬಯಸುತ್ತೇನೆ, ನಿನ್ನನ್ನೇ ನೋಡಬಯಸುತ್ತೇನೆ, ನಿನ್ನದೇ ವಿಚಾರಗಳನ್ನೇ ಚಿಂತಿಸಬಯಸುತ್ತೇನೆ. ಬೇರಾವ ಚಿಂತನ ಮಂಥನಗಳ ಹೊರೆ ನನಗಿಲ್ಲದಂತೆ ಮತ್ತೊಮ್ಮೆ ಕರೆದುಕೊ ನನ್ನನ್ನು ನಿನ್ನೊಡಲಾಳಕ್ಕೆ. ನನಗೆ ನೀನು ಕಗ್ಗತ್ತಲೆಯ ಅನುಭವ ಕೊಟ್ಟೆಯಾದರೂ ಈ ಭುವಿಯ ಕಗ್ಗತ್ತಲೆಯ ಭೀಭತ್ಸತೆ ನನ್ನಿಂದ ತಡೆಯಲಾಗದು. ನಿನ್ನ ಗರ್ಭದಲ್ಲಿ ನಾನದೆಷ್ಟೋ ಬಾರಿ ಕಣ್ಣೀರು ಸುರಿಸಿದರೂ ಈ ಭುವಿಯ ಕಣ್ಣೀರುಗಳ ಯಾತನೆ ತಡೆಯಲಾಗದು. ನಿನ್ನೊಡಲಾಚೆಗೀಗ ನಾನು ಅನಾಥ, ಅನರ್ಥ, ಅನವಶ್ಯಕ. ನಿನ್ನೊಡಲ ದೇಗುಲದ ಆಸರೆಯೇ ನನಗೆ ಮುಕ್ತಿ. ಅಪ್ಪಿಕೋ ಒಡಲಾಳದೊಳಗೆ ಮತ್ತೊಮ್ಮೆ ಪೂರ್ಣ ಶೂನ್ಯದಂತೆ. ಮತ್ತೊಂದು ಇನ್ನೊಂದು ಬೇಕೆಂಬ ತೊಳಲಾಟ ಮಾಡೇನು, ನೀನುಂಡದ್ದೇ ನಾನುಣ್ಣುವೆ, ಕುಡಿಯುವೆ ಮತ್ತೇನೂ ಕೇಳದೆ. ನಿನ್ನ ಗರ್ಭದಾಚೆ ನಾ ಈ ಭುವಿಗೆ ಭಾರವೆಂಬ ಭ್ರಾಂತಿಗೆ ಬೇಕೊಂದು ನಿನ್ನೊಡಲಾಳದಲ್ಲಿ ಹೋರಾಟವಿಲ್ಲದ ವಿಶ್ರಾಂತಿ. ಬೇಕೊಂದು ಶ್ರಮಿಸದ, ಸೊರಗದ, ದಣಿಯದ ಚಿತ್ತಶಾಂತಿ. ಬದುಕುವೆ ಸದಾ ನಿನ್ನೊಡಲಾಳದಲ್ಲೇ ಮತ್ತಾವ ತೊಡಕು ತಕರಾರುಗಳಿಲ್ಲ...

ಇನ್ನೆಲ್ಲಿಯ ಭೇಟಿ?

ಭೇಟಿಯಾಗಿ ರೂಪಿಸಬೇಕಿದ್ದ ರೂಪಾಂತರಗಳು ನಿರರ್ಥಕವೆಂಬಂತೆ ಮುಟುಕುಗೊಂಡಾಗ, ಇನ್ನೆಲ್ಲಿಯ ಭೇಟಿ? ಇನ್ನಾವ ಕ್ಷಮೆ-ದಮೆಗಳ ಪೀಠಿಕೆ ಹೆಣೆಯಲಿ ನೀನೇ ಆಗಲೇ ಉತ್ತರಗಳನ್ನು ತಲುಪಿಸಿರುವಾಗ. ಇದೀಗ ಹೃದಯದೊಳಗೆ ಮೂಡಿದ್ದ ಮೊದಲ ಭೇಟಿಯ ಚೊಚ್ಚಲತೆಯ ಕೌತುಕತೆ ಇನ್ನೊಂದು ಕಥೆಯಾಗಿಹೋಗಿದೆ. ಬಿಗುದನಿಗಳ ನಾಚಿಕೆಯ ಕಣ್ಣೋಟದ ಬಿಡುವಿನಲ್ಲಿ ಸಲ್ಲಿಸಬೇಕಿದ್ದ ವಿನಂತಿಯ ಲಘು ಪ್ರಸ್ತಾವನೆ ಅದಾಗಲೇ ಬಹಿರಂಗಗೊಂಡಿದೆ. ಇನ್ನೂ ನಾ ಹಾಡಬೇಕಿದ್ದ ಪ್ರತಿ ರಾಗಗಳೀಗ ಶುರುವಾಗುವ ಮೊದಲೇ ಭಾವ ಚೆಲ್ಲಿ ನಿಂತಾಗಿವೆ. ವಿನಂತಿಯ ಸ್ವರಗಳು ಹೊರಚಿಮ್ಮುವ ಮೊದಲೇ  ಗಂಟಲೊಳಗೆ ಮುಳುಗಿವೆ. ಸಂಧಿಸಿ ಮೂಡಬೇಕಿದ್ದ ಒಲವಿನೊಳಗಿನ ತರಾತುರಿ, ಅದೊಂದು ಭೇಟಿಯ ವಿದಾಯದ ವಿರಹಭಾವ, ಮತ್ತೆ ಭೇಟಿಯಾಗುವ ಆಶ್ವಾಸನೆಯ ನಿಟ್ಟುಸಿರುಗಳು, ಎಲ್ಲವೂ ಹಗಲುಗನಸಾಗಿ  ಅಸ್ತಿತ್ವಕ್ಕೆ ಬಾರದ ನೂರೆಂಟು ಆಲೋಚನೆಗಳಲ್ಲಿ ಬೆರೆತುಹೋಗಿವೆ. ಮತ್ತಾವ ಸಂಭವನೆಗಳಿಗೂ  ತಾವುಗಳು ಅನರ್ಹವೆಂಬಂತೆ.                                                      ........ಬಸವ.

ಇಂದು ನಾ ಗಂಡಸು ವರವೋ ಶಾಪವೋ?

ವಿಧಿ ವಿಧಿಸಿದ ಶಾಪವೋ ವರವೋ, ನಾ ಇಂದು ಗಂಡಸು ಎಲ್ಲವೂ ನನ್ನಿಂದಲೇ ಆಗಬೇಕೆಂಬ ಬದುಕಿನ ಅಲಿಖಿತ ಜೀತ. ಹೊರೆಯಾದ ಹೆಗಲ ಮೇಲೂ ಹೊರೆ ಹೊರುವ ಹೊರೆಗೆ ಜವಾಬ್ದಾರಿಯ ಹೆಸರಿಟ್ಟ ಸಮಾಜದಲ್ಲಿ, ಈ ಜವಾಬ್ದಾರಿಗೆ ನಾ ಗಂಡಸು ವರವೋ ಶಾಪವೋ? ಅಳಲು ನನ್ನಲ್ಲಿಯೂ ಕಣ್ಣೀರಿದ್ದರೂ, ಭಾವಜೀವಿಯಾಗಲು ನನ್ನಲ್ಲೂ ಭಾವನೆಗಳಿದ್ದರೂ, ದಣಿದ ದೇಹಕ್ಕೆ ವಿಶ್ರಾಂತಿಯ ಹಂಬಲವಿದ್ದರೂ, ನಾ ಇಂದು ಗಂಡಸಾಗಿ ತ್ಯಾಗಗೈಯ್ಯಲೇಬೇಕಿದೆ. ಈ ತ್ಯಾಗಕ್ಕೆ ನಾ ಗಂಡಸು ವರವೋ ಶಾಪವೋ? ಇಂದು ನಾ ಏನನ್ನೂ ಅರಿಯದಿದ್ದರೂ, ಎಲ್ಲವನ್ನೂ ನಾ ಕೇಳಿ, ಸುಧಾರಿಸಿ, ಸಾಗಿಸಬೇಕು. ಬದುಕಿನ ಬಂಡಿಗೆ ನೀನೊಬ್ಬನೇ ಎತ್ತು ಎಂಬ ನಿಯಮಾವಳಿ. ನಾ ಬೆವತು ಬಸವಳಿದರೂ, ಬದುಕಿನ ಸಾಗಾಟಕ್ಕೆ ಮತ್ತೆದ್ದು ನಿಲ್ಲಬೇಕು. ಈ ಬೇಗೆಗಳಿಗೆ ನಾ ಗಂಡಸು ವರವೋ ಶಾಪವೋ?                                             .......ಬಸವ.

ಅಪ್ರಸ್ತುತಿ.

ಅದೆಷ್ಟು ತ್ರಾಸದಾಯಕ ಭಾವಗಳನ್ನು ತಾವು ಬಯಸಿದ ಭಾವಗಳೊಂದಿಗೆ ಬೆಸೆಯುವುದು. ಬೆಸೆದ ಭಾವವೀಗ ರಂಗುರಂಗಾಗಿ ಕಂಡರೂ, ಕೂಡಿ ತಿಳಿಯಾಗುವುದೋ, ಅಥವಾ ತೀರಾ ತಿಳಿಯಾಗಿ ಭಾವಹೀನವಾಗುವುದೋ? ಬೆಸುಗೆಯ ಆಶ್ವಾಸನೆ ಕೊಟ್ಟ ಒಲವು, ಬೆರೆಯುವ ಭರವಸೆಯ ಕರಾರಿಗೆ ಮಾತ್ರ ಗೈರು. ಹೊತ್ತು ಹೊತ್ತಿಗೆ ಇಳಿಸಂಜೆಯ ಇಂಪಿನ ಸೂಚನೆ; ತಂಪು ಎಂಬ ಭಾವನೆಯಲ್ಲಿ ಪ್ರೀತಿ ತೇಲುತೇಲುತ್ತಲೇ ಕ್ಷಣಾರ್ಧದಲ್ಲಿ ಕತ್ತಲು. ಸ್ಫುಟವಾಗಿ ಸಿದ್ಧವಿದ್ದ ಒಲವಿನ ಆಕೃತಿ ಮಾತ್ರ ಮತ್ತದೇ ಕತ್ತಲಿನಲ್ಲಿ ವಿಲೀನ. ಮತ್ತೆ ಸಂಧಿಸುವೆನೆಂಬ ಒಲವಿನ ಒಡಲ ಮಾತುಗಳು ಕತ್ತಲೆಯ ಜೀರುಂಡೆಗಳ ಸದ್ದಿನಲ್ಲಿ ಅಸ್ಪಷ್ಟ. ಒಲವಿನ ಬೆಸುಗೆಯ ಸಂಧಾನದ ಪೀಠಿಕೆ ಗೆಲುವಿನದ್ದೇ ಆದರೂ, ವಿಸ್ತಾರವಾದ ವಿವರಣೆ ಮಾತ್ರ ಸದ್ಯಕ್ಕೆ ಅಸಾಧ್ಯವೆಂಬುದಿತ್ತು. ಹಲವು ಬಾರಿ ಗೀಚಿ ತೆಗೆದ ಹಾಳೆಗಳು ಪ್ರತಿಬಾರಿಯೂ ಒಪ್ಪಿಗೆಯ ಸ್ವೀಕೃತಿಯನ್ನೇ ನೀಡುತ್ತಿದ್ದವು ತಾವೂ ಒಲವಿನ ಕಥೆಗೆ ಸಾಥಿ ಎಂಬಂತೆ. ಬೆಸುಗೆಯ ರಚನೆ ರೂಪಗೊಳ್ಳುವಲ್ಲೇ ಕಥಾಪಾತ್ರ ವಿರಾಮವನ್ನಿಡುತ್ತಿತ್ತು; ಇಂದೇಕೋ ಒಲವಿಗೆ ಬೆಸುಗೆ ಒಪ್ಪದ ವಸ್ತುವೆಂದು.                                         ......ಬಸವ.

ಹೃದಯ ರಾಗ.

ಪ್ರೇಮಗೀತೆಯೊಂದ ಹೇಳುವಾಸೆ ಕೊನೆಯದೊಂದು ಬಾರಿಗೆ, ಮನಸೂರೆಗೊಳಿಸಿದ ನನ್ನೊಲವ ಮಯೂರಿಗೆ ಮೇರು ಪರ್ವತದಷ್ಟು, ಸಾಗರ ಆಕಾಶದಷ್ಟು ಪ್ರೇಮಗೀತೆಯೊಂದು ಹೇಳುವಾಸೆ. ಸಂಜೆ ಚಂದ್ರನ ಕಣ್ ತಪ್ಪಿಸಿ, ನಲಿವ ಗುಲಾಬಿಯಿಂದ ಕಣ್ ತಪ್ಪಿಸಿ, ಕುಣಿವ ನವಿಲಿನಿಂದ ಕಣ್ ತಪ್ಪಿಸಿ, ಯಾವ್ ಚೆಲುವಿನ ದೃಷ್ಟಿಯೂ ಬೀಳದಂತ್ತೆ ನನ್ನೊಲವ ರಾಣಿಗೆ ಪ್ರೇಮಗೀತೆಯೊಂದು ಹೇಳುವಾಸೆ. ಮತ್ತೆಂದೂ ಮತ್ತಾರಿಗೂ ಸಿಗದ ಶಬ್ದಗಳ ಪೋಣಿಸಿ, ನನ್ನ ಅವಳ ಒಲವಷ್ಟೇ ಕೇಳುವ ರಾಗದಲ್ಲಿ, ಹೃದಯದ ಬಡಿತಗಳೇ ಸಂಗೀತವಾಗಿಸಿ, ಕಣ್ಣೋಟಗಳ ಕೊಳಲ ನುಡಿಸಿ, ಒಮ್ಮೆ ನನ್ನಾಕೆಯ ಮನಸ್ಸು ತಣಿಸುವಂತ್ತೆ ಪ್ರೇಮಗೀತೆಯೊಂದ ಹೇಳುವಾಸೆ. ಇನ್ನೆಂದೂ ಇನ್ನಾರಿಗೂ ಲಭಿಸದ ರಾಗದಲ್ಲಿ, ನನ್ನವಳಿಗಾಗಿಯೇ ಮೀಸಲಿಟ್ಟ ಶೃತಿಯಲ್ಲಿ, ಜಗವೆಂದೂ ಕಾಣದ ಹಾವ ಭಾವದಲ್ಲಿ, ಹಸಿರು ಇಳಿಸಂಜೆಯ ಕಾಮನಬಿಲ್ಲಿನ ಬೆಳಕಿನಲ್ಲಿ, ನನ್ನ ಹೃದಯದ ರಾಣಿಗೆ ಒಂದೊಮ್ಮೆ ಕೊನೆಯ ಪ್ರೇಮಗೀತೆ ಹೇಳುವಾಸೆ.                   .......ಬಸವ.

ಲೋಹದ ಹಕ್ಕಿ.

ಲೋಹದ ಹಕ್ಕಿಯಲ್ಲಿ ಮೋಡಗಳ ಕಣ್ಮರೆಯಲ್ಲಿ ತೇಲುವ ಅನುಭವಕ್ಕೆ ನಾನು ಮೋಹಿತನಾದೆನು. ಹಾಗೊಮ್ಮೆ ಹೀಗೊಮ್ಮೆ ಹೊರಳುವ ಹಕ್ಕಿ ಮೇಲಕೊಮ್ಮೆ ಹತ್ತುವುದು, ಕೆಳಗೊಮ್ಮೆ ಇಳಿಯುವುದು ಬಲಕೊಮ್ಮೆ ಎಡಕ್ಕೊಮ್ಮೆ ವಾಲುವುದು, ತೇಲುವುದು ನಭದೊಳಗೆ. ಬಿರ್ರನೆ ಸೀಳುತ್ತಾ ಗಾಳಿಯನ್ನು ಹೊತ್ತೊಯ್ಯುವುದು ಆಗಸದೊಳಗೆ. ಕಿವಿಯೊಳಗಿನ ಪದರುಗಳ ನಿಮಿರಿಸುತ, ಹೊಟ್ಟೆಯೊಳಗೆ ಗಾಳಿಯ ತೇಲಿಟ್ಟು ಹಾಯಾಗಿ ಹಿತವಾಗಿ ಹಾರುವುದು ನಭದೊಳಗೆ.                                ..........ಬಸವ.

ಅಳುವ ನೋವುಗಳು.

ಇಂದೇಕೋ ನೋವುಗಳು ಅಳುತ್ತಿವೆ ನೆನಪುಗಳ ಬೇನೆಯಲ್ಲಿ ಬೇಯುತ್ತಿವೆ. ಮತ್ತೆ ಮತ್ತೆ ಅವಳ ಅಸ್ತಿತ್ವದ ನೆನಪುಗಳನ್ನ ನನ್ನೆದುರಿಗೆ ತಂದೊಡ್ಡಿ ನೋವುಗಳು ಅಳುತ್ತಿವೆ. ಅದೆಷ್ಟು ಗಡುಸಾಗಿಯೇ ದ್ವೇಷಿಸಿತ್ತು ಆ ಧ್ವನಿ ತೆಳುವಾದ ಕಣ್ಣೀರುಗಳು ಕಣ್ಣಲ್ಲಿಯೇ ಇಟ್ಟುಕೊಂಡು. ಆಲಿಂಗನಕ್ಕೆ ಒಲ್ಲೆನೆನ್ನುವ ಎದೆಯೊಳಗಿನ ಹೃದಯ ಇನ್ನಷ್ಟು ಜೋರಾಗಿ ಬಡಿದು ಬಾ ಎಂಬುದ ನಾ ಕಂಡಿದ್ದೆ. ವಿರಹದಲ್ಲಿ ಚಿತ್ಕರಿಸುವ ಒಲವಿಗೆ ದನಿಯೊಂದ ಬೇಕಿತ್ತು ಕೇಳಿಸಿದರೂ ತನಗೆ ಕೇಳದೆ ಹೋಯಿತೆಂದ ನಗುವಿನ ಅಳು ಇಂದಿಗೂ ನನ್ನೆದುರಿಗೆ ಅಳುತ್ತಲೇ ಇದೆ. ನನ್ನೊಲವು ಎಲ್ಲಾ ಕರಾರುಗಳನ್ನ ಇಂದಿಗೂ ಆಪ್ಯಾಯಮಾನವಾಗಿ ಪಾಲಿಸುತ್ತಿದೆ.                                   ..............ಬಸವ.