ಸೂರಿನಾಚೆಗೊಂದು ಸೂರು.
ಇಲ್ಲಿಯೇ ಹೀಗೆಯೇ ಹುಟ್ಟಲು
ಅಂದು ಗಸ್ತು ಹಿಡಿದು ಕೂತದ್ದು ಇಂದು ಮರೆತೆವು.
ಮರೆತೆವು, ಎಂದಿಗೂ ಮತ್ತೆ ಏನನ್ನೂ ಮರುಕಳಿಸದಂತ್ತೆ
ಅವನಲ್ಲಿ ತಟಸ್ತವಾಗುವುದ ಮರೆತೆವು.
ಬದುಕಿಗೊಂದೇ ಏಕಮಾತ್ರ ಬಿಂದು ಇರುವುದ ಅರಿತಿದ್ದರೂ
ಇಲ್ಲಿ ಮುಕ್ತಿಯೊಂದರ ಬಿಂದು ಬಿಟ್ಟು ಇನ್ನೆಲ್ಲವೂ ಕೂಡಿಸಲು ಹೊರೆಟವಲ್ಲ.
ಎಲ್ಲವನ್ನ ತ್ಯಜಿಸಿ,ತಾಳಿ,ತಪಸ್ಸುಗೈದರೂ ಸಿಗದ ತತ್ವವನ್ನ
ಲೋಭಗಳಲ್ಲಿ ತಪಿಸಿ ತಪಿಸಿ ಕಳೆದುಕೊಳ್ಳುತ್ತಿರುವೆವಲ್ಲ.
ಸದಾ ರಂಜನೆಗಳಲ್ಲಿ ರಂಜಿಸುತ ನಿರಂಜನನಾಗಬೇಕೆಂದೇವಲ್ಲ.
ಅಧ್ಯಾತ್ಮದಾಳಕ್ಕೆ ಮುಳುಗಿ ಪಡೆವ ಮುತ್ತೊಂದನ್ನ ಬರಿಗಣ್ಣಿಂದ ಮೇಲೆಯೇ ಹುಡುಕ ಹೊರಟೆವಲ್ಲ.
ಸಿಗದಲ್ಲಿಗೆ, ಸೋತ ಭಾವವೂ ಇಲ್ಲದೆ ಮತ್ತೇ ಹೀಗೆಯೇ ಹುಟ್ಟಲು ಹುಲ್ಲುಕಡ್ಡಿಯಾಗಿಯೋ, ಅದರಡಿಯ ಇರುವೆಯಾಗಿಯೋ ಅಳತೊಡಗಿದೆವಲ್ಲ.
ಮರೆತೆವಲ್ಲ ಮೋಕ್ಷವನ್ನ ಮಾಯೆಗಳಡಿಯಲ್ಲಿ.
ನೆನಪಿಗೂ ಬಾರದ ಸುಕರ್ಮಗಳಿಂದ ಕೂಡಿಟ್ಟ ಕೂಳನ್ನ
ಇಂದು ಬೇಡದ ಪಾಪವೆಂಬ ಮಾಂಸ ಮಜ್ಜನಗಳಲ್ಲಿ ಮುಳಿಗಿಸಿ ಮೋಕ್ಷಕ್ಕೆ ಮೈಲಿಗೆಯಾಯಿತೆಂದವಲ್ಲ.
ಸೂರಿನಾಚೆಗೊಂದು ಸೂರಿರುವದ ಅರಿತರೂ
ಮತ್ತೆ ಮತ್ತೆ ಇದೇ ಸೂರಿನೊಳಗೇ ಸಿಲುಕಿ ಸೋತೆವಲ್ಲ.
...........ಬಸವ.
ಪರಿಣಿತ ಯುವ ಕವಿ
ReplyDelete