Posts

Showing posts from July, 2022

ನನ್ನ ಮನೆ.

ಅದು ನನ್ನ ಮನೆ ನನ್ನೂರಿನ ನನ್ನ ಮನೆ, ಅದೆಷ್ಟೋ ನೆನಪುಗಳ ಬುತ್ತಿ ಬಿಚ್ಚಿಡುವ ಮನೆ, ಅಂಬೆಗಾಲಿಟ್ಟು ಬೆಳೆದ ಮನೆ,ಅತ್ತಿತ್ತ ಜಿಗಿದಾಡಿದ ಮನೆ, ನೆಲಕ್ಕುರುಳಿ ಅತ್ತು,ಮೇಲೆದ್ದು ನಕ್ಕು ನಲಿದಾಡಿದ ಮನೆ, ನನ್ನ ಮನೆ ಅದು ನನ್ನೂರಿನ ಮನೆ ಅದು. ಅಮ್ಮನ ಸೇರಗಿನಂಚು ಹಿಡಿದು ಎಲ್ಲೆಡೆ ನಾ ಸುತ್ತಾಡಿದ ಮನೆ, ಸೋತಾಗಲೂ ಗೆದ್ದಾಗಲೂ ನಾ ಹಿಂತಿರುಗಿ ಬಂದ ಮನೆ, ನನ್ನವರು ನನಗಾಗಿ,ನನ್ನವರಿಗಾಗಿ ನಾನು ಕಾದು ಕೂತಿರುವ ಮನೆ, ನನ್ನ ಮನೆ ಅದು ನನ್ನೂರಿನ ಮನೆ ಅದು. ಬಿಗು ಕಲ್ಲುಗಳಂತ್ತೆ ಸಂಬಂಧಗಳನ್ನೂ ಗಟ್ಟಿಗೊಳಿಸಿದ ಮನೆ, ನೆರೆ ಹೊರೆಯಯವರೊಂದಿಗೆ ಬೆಸೆದು ಬೆರೆತ ಮನೆ, ತನ್ನ ಬುನಾದಿಯಷ್ಟೇ ಅಳುಕು ಮನಸ್ಸುಗಳ ಬಿಗಿಗೊಳಿಸುವ ಮನೆ, ನನ್ನ ಮನೆ ಅದು ನನ್ನೂರಿನ ಮನೆ ಅದು. ನನ್ನ ಮನದಲ್ಲಿ ನೂರೆಂಟು ಖಯಾಲಿಗಳ ಬಿತ್ತಿದ ಮನೆ, ಗೋಡೆಗಂಟಿದ ಸುಣ್ಣದಷ್ಟೇ ಸ್ಪಷ್ಟ ಪ್ರೀತಿಯ ಕೊಟ್ಟ ಮನೆ, ಹೊರಡುವಾಗ ಮತ್ತೆ ಮತ್ತೆ ಹಿಂತಿರುಗವಂತ್ತೆ ಪಿಡಿಸುವ ಮನೆ, ನನ್ನ ಮನೆ ಅದು ನನ್ನೂರಿನ ಮನೆ ಅದು.                              .............ಬಸವ.

ಎಲ್ಲವೂ ಮುಗಿದಮೇಲೆ.

ಬಯಸುವುದು ಮನ ಮತ್ತೊಮ್ಮೆ ಬದುಕಲು ಬಯಸದೆ ಏನನ್ನೂ ಎಲ್ಲವೂ ಮುಗಿದಮೇಲೆ, ಬದುಕಿನುದ್ದಕ್ಕೂ ವಿಶ್ರಾಂತಿಗಳ ಪಡೆದು ಕೊನೆಯಲ್ಲಿ ಬಾನೆತ್ತರದ ಮುಕ್ತಿಯಡೆಗೆ ಜಿಗಿಯುವ ಹೆಬ್ಬಯಕೆ, ಅಂತರಾಳ ಅಳುತ್ತಿದೆಯಲ್ಲ ಬದುಕ ಕೊನೆಯ ಹೊಸ್ತಿಲಲ್ಲಿ ಈ ಸಂಜೆಗೊ, ಕತ್ತಲೆಗೊ ತನ್ನಾತ್ಮದಿಂದ ದೂರವೆಂದರಿತು. ಜೀವನದ ತತ್ವಗಳ ತಳಕುಗಳೆಲ್ಲವೂ ತಿಳಿದರೂ  ಅಜ್ಞಾನದ ಹೊದಿಕೆ ಹೊದಿಸಿಕೊಂಡೆ ಬುದ್ಧಿಯ ಮೇಲೆ, ಅಲ್ಲೆಲ್ಲೋ ನಿನಗಾಗಿ ಗುರು ಗಸ್ತು ಹಿಡಿದು ಕಾಯುತ್ತಿದ್ದರೂ ತನ್ನೊಳಗಿನ ಮನೋ ಅಜ್ಞಾನಿಯನ್ನೇ ಗುರುವಾಗಿಸಿಕೊಂಡೆ, ಪರಮ ಸತ್ಯದ ಬೆಳಕು ಕಂಡರೂ ಲೌಕಿಕ ಕತ್ತಲೆಯ ಬಯಸಿ ಮತ್ತೆ ಮತ್ತೆ ಹುಟ್ಟು ಸಾವೆಂಬ ಕತ್ತಲೆ ಬೆಳಕಿನಾಟದಲ್ಲಿ ಸಿಲುಕಿಕೊಂಡೆ. ಅಂದು ಎಲ್ಲವೂ ಅಲ್ಲಗಳೆದು ಇಂದು ಅಳುತ್ತಿದೆ ಬುದ್ದಿ ತೀರಾ ವಿಳಂಬವಾಯಿತೆಂದು ಅರಿಯುವಲ್ಲಿ ಬದುಕ ಸತ್ಯ, ಸೃಷ್ಟಿಯ ಕಟು ಸತ್ಯಗಳ ಕಂಡು ಅಂದು ನಗುತ್ತಿದ್ದ ಅಂತರಾಳ ಭೋರ್ಗರೆದು ಅಳುತ್ತಿದೆಯಲ್ಲ ಇಂದು ಕೋನೆಯುಸಿರಲ್ಲಿ  ಅರಿತಾಗ ಎಲ್ಲಾ ಮಿಥ್ಯ, ಕ್ಷಣಕ್ಕಾದರೂ ಸರಿ ಆರಾಧಿಸು ಅವನೆಂಬ ಅಂತಿಮ ಸತ್ಯವ ಮತ್ತೆಂದು ಕಳಿಸದಿರೆಂದು ಮರುಜನ್ಮವೆಂಬ ಸುಳಿಗೆ.                                                 ........ಬಸವ.