ಬಾಬಾ ಶಿವಾನಂದ - ಒಂದು ವ್ಯಕ್ತಿ ಪರಿಚಯ.
ತುಂಬಾ ದಿನಗಳಿಂದ ತಿರುವಣ್ಣಮಲೈನ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡುವ ವಿಚಾರವಿತ್ತು. ಈ ಬಾರಿಯ ವಾರಾಂತ್ಯದ ಒಂದು ದಿನ ಅದಕ್ಕಂತಲೇ ಮೀಸಲಿಟ್ಟು ಬೆಳಿಗಿನ ಜಾವ 5.30 ಗೆ ಹೊರಟವರು 200ಕಿಮೀ ಕ್ರಮಿಸಿ ಕೆಲ ತಾಸಿನಲ್ಲಿಯೇ ಸುಂದರ ದೇವಸ್ಥಾನದ ಗೋಪುರಗಳ ಮುಂದೆಯೇ ನಿಂತಿದ್ವಿ. ನಾನು ಮತ್ತೆ ನನ್ನ ಸಹದ್ಯೋಗಿ, ಸ್ನೇಹಿತ ಸುವೆಂದು.
ಅರುಣಾಚಲೇಶ್ವರ ಪಂಚಭೂತ ಲಿಂಗಗಳಲ್ಲಿ ಅಗ್ನಿಯನ್ನ ಪ್ರತಿನಿಧಿಸುತ್ತಾನೆ. ದೇವಸ್ಥಾನದೊಳಗೆ ಶಿವ ತನ್ನ ಮಡದಿ ಪಾರ್ವತಿಯೊಂದಿಗೆ ಭವ್ಯ ಮತ್ತು ಸುಂದರ ಕಟ್ಟಡದೊಳಗೆ ಒಂದೊಂದು ಪ್ರತ್ಯೇಕ ಗರ್ಭಗೃಹಗಳಲ್ಲಿ ನೆಲೆಯುರಿದ್ದಾರೆ. ಭಾರತದಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನ ಪ್ರಾಂಗಣ ಹೊಂದಿರುವ ದೇವಸ್ಥಾನ ಇದು. ಅರುಣಾಚಲ ಬೆಟ್ಟದಡಿಯಲ್ಲಿ ಗಗನಚುಂಬಿ ಗೋಪುರಗಳ ಮಧ್ಯಗಿನ ಸುಂದರ ದೇವಸ್ಥಾನದಲ್ಲಿ ಅಂಗಾಲುಗಳು ನೆಲಕ್ಕೆ ಸ್ಪರ್ಶಿ ಅಲ್ಲಿ ತಿರುಗಾಡುತ್ತಾ ಪಡೆದುಕೊಳ್ಳುವ ದಿವ್ಯ ಅನುಭೂತಿಯೇ ವಿಶೇಷ ನೆಮ್ಮದಿ.
ದೇವರ ದರ್ಶನ ಮುಗಿಸಿಕೊಂಡು ಅಲ್ಲೇ ದೇವಸ್ಥಾನದ ಪ್ರಾಂಗಣದಲ್ಲಿ ತಿರುಗಾಡುತ್ತಿದ್ದಾಗ ಸುಮಾರು 65ರ ಮೇಲಿನ ವಯಸ್ಕರೊರ್ವ ಬಿಳಿಯ ಪಂಚೆ, ಕಾವಿ ಜುಬ್ಬಾ, ಉದ್ದನೆಯ ಬಿಳಿಕೂದಲಿಗೆ ಜುಟ್ಟೊಂದು ಹಾಕಿಕೊಂಡಿದ್ದ. ಕೊರಳಲ್ಲಿ ಒಂದೆರಡು ರುದ್ರಾಕ್ಷಿಗಳು, ಹೆಗಲಮೇಲೊಂದು ಕಾವಿ ಶಾಲು, ಹುಬ್ಬುಗಳ ಮಧ್ಯೆ ಕುಂಕುಮ, ಸ್ವಲ್ಪ ಉದ್ದನೆಯ ಬಿಳಿ ಗಡ್ಡ ಮತ್ತು ಬೆಳ್ಳನೆಯ ತೇಜಸ್ಸು ಭರಿತ ಮುಖ. ಈ ಕಾಯ ಅಲ್ಲಿ ಕಂಡದ್ದೇ ತಡ ಇವರನ್ನ ಮಾತಾಡಿಸಲೇಬೇಕೆಂದು ಮನಸ್ಸು ಹಾತೊರೆಯಿತು. ಈತರ ಸುಮಾರು ಜನಗಳು ಸಿಕ್ಕರೂ ಅವರನ್ನ ಮಾತಾಡಿಸುವ ಮುತವರ್ಜಿಯೇನು ಬಂದಿರಲಿಲ್ಲ, ಆದರೆ ಈ ಆಸಾಮಿ ವಿದೇಶಿಗ ಎನ್ನುವುದು ವಿಶೇಷ.
"ಹೆಲೋ ಡಿಯರ್, ಮೇ ಐ ನೋವ್ ಅಬೌಟ್ ಯು? ಯು ಸೀಮ್ಸ್ ಟು ಬಿ ಕ್ವೈಟ್ ಸ್ಪೆಶಲ್ ಫಾರ್ ಮೀ" ಅಂತ ನಾ ಶುರು ಮಾಡಿದ್ದೆ ತಡ. ನಗುಮೊಗದಿಂದ ಉತ್ಸುಕನಾಗಿ ಉತ್ತರಿಸಿದ. ತಾನು ಇಟಲಿಯ ದೇಶದವನು ಇಲ್ಲಿ ಅಧ್ಯಾತ್ಮ ಪಯಣಕ್ಕೆ ಆಗಾಗ ಬಂದು ಹೋಗ್ತೇನೆ ಅಂತ ಹೇಳಿದ. ಮೊದಲು ಬಂದದ್ದು 1983 ರಲ್ಲಿ ಅವನ ಸ್ನೇಹಿತನ ಪರಿಚಯದ ಮೇರೆಗೆ. ತನ್ನ ವೃತ್ತಿ ಬದುಕಿನ ಮಧ್ಯೆ ಆಗಾಗ ಸಮಯ ಮಾಡಿಕೊಂಡು ಬರುತ್ತಲೇ ಇರುತ್ತೇನೆ ಎಂತ ಹೇಳುತ್ತಾ ತಾನು ವೃತ್ತಿಪರ ಶಿಕ್ಷನೆಂದು ಹೇಳಿಕೊಂಡರು.
ಇಲ್ಲಿಯವರೆಗೆ ಭಾರತದಲ್ಲಿನ ಅನೇಕ ಪುಣ್ಯಸ್ಥಗಳಲ್ಲಿ ಇದ್ದಿದ್ದು ಮತ್ತು ಹರಿದ್ವಾರದಲ್ಲಿ ಹೆಚ್ಚಿನ ಸಮಯ ಕೆಳೆದಿರುವ ವಿಷಯ ಹೇಳಿದರು.
ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಭೇಟಿಗೆ ಸಿಕ್ಕ ಸಂತರೊರ್ವರು ನನಗೆ ಅಧ್ಯಾತ್ಮ ಪ್ರೇರಣೆ. ಅಲ್ಲಿಂದಲೇ ಧ್ಯಾನ, ಸನಾತನ ತತ್ವಶಾಸ್ತ್ರದ ಅಧ್ಯಾಯನ, ಶಂಕರಾಚಾರ್ಯರ ಅಧ್ಯಾಯನ, ಭಗವಂತನ ಅರಿವು ಹೀಗೆ ಶುರುವಾಯ್ತು. ಆಗಾಗ ನಾನು ಇಟಲಿಗೆ ಹೋಗಿ ಬರಬೇಕು ಕೆಲಸದ ನಿಮಿತ್ತ ಮತ್ತು ತುಂಬಾ ದಿನಗಳ ಕಾಲ ವಿಸಾ ಪಡೆದುಕೊಳ್ಳೋದು ಕಷ್ಟ. ಆಗಾಗ ನನ್ನ ಹೆಂಡತಿಯ ಜೊತೆಗೂ ಬಂದಿದ್ದೆ, ಆದರೆ ಅವಳಿಗೆ ಇಲ್ಲಿಯ ತಾಪಮಾನ, ಇಲ್ಲಿಯ ಮಸಾಲೆ ಭರಿತ ಊಟ ತುಂಬಾ ದಿನಗಳ ಕಾಲ ಹಿಡಿಸದೆ ಹೋದ್ದರಿಂದ ಇದೀಗ ನಾನೊಬ್ಬನೇ ಬಂದು ಹೋಗ್ತಾ ಇರ್ತೇನೆ. ಹಾಗೆ ಸಂಚರಿಸುತ್ತಲೆ ಇರುತ್ತೇನೆ. ಹಿಂದೂ ತತ್ವಶಾಸ್ತ್ರದ ಬಗ್ಗೆ ನನಗಿಂತ ನಿಮಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ನಾನಿನ್ನೂ ಎಷ್ಟು ವರ್ಷ ಇರುತ್ತೇನೆ ಗೊತ್ತಿಲ್ಲ, ತುಂಬಾ ತಡವಾಗಿ ನನಗೆ ಇದೆಲ್ಲಾ ಅರಿವಾಯ್ತು, ಮುಂದೆ ಇನ್ನೆಷ್ಟು ದಿನ ನನ್ನಲ್ಲಿ ಇದೆಯೋ, ಇರುವಷ್ಟು ದಿನ ಮೋಕ್ಷಕ್ಕೆ ಹತ್ತಿರವಾಗಬೇಕು ಅದೇ ಉದ್ದೇಶ.ಬಾಯಿ ಬಡಬಡಿಸುತ್ತ ಗೊತ್ತಿರುವ ಅಲ್ಪ ಸ್ವಲ್ಪ ಇಂಗ್ಲೀಷಿನಲ್ಲಿ ಹೇಳಿದ್ರು.
ನೀವು ನಿಮ್ಮ ಪೂರ್ವ ಜನ್ಮದಲ್ಲಿ ಅಧ್ಯಾತ್ಮದ ಹಾದಿಯಲ್ಲಿ ಅಥವಾ ಮೋಕ್ಷದ ಹಾದಿಯಲ್ಲಿ ಸ್ವಲ್ಪ ದೂರ ಬಂದಿದ್ರಿ ಅನಿಸುತ್ತೆ. ಅದಕ್ಕಾಗಿಯೇ ಈ ಜನ್ಮದಲ್ಲಿ ಅಲ್ಲಿಯ ಇಟಲಿಯಿಂದ ಇಲ್ಲಿಯ ಭಾರತಕ್ಕೆ ಸೆಳೆದುಕೊಂಡು ಬಂದಿರುವಿರಿ. ಇಲ್ಲಿಂದ ಉಳಿದ ಇನ್ನಷ್ಟು ಮತ್ತೆ ಮುಂದಿನ ಜನ್ಮದಲ್ಲಿ ಪ್ರಾರಂಭವಾಗುತ್ತದೆ. ತಡವಾಯ್ತು ಅನ್ನುವುದಕ್ಕಿಂತ ಕೊನೆಯ ಪಕ್ಷ ಶುರುವಾಯ್ತಲ್ಲ ಈ ಬದುಕು ಎಂಬುದರ ಬಗ್ಗೆ ಖುಷಿ ಪಡಿ ಅಂತ ಹೇಳಿದೆ.
ಪಶ್ಚಿಮ ದೇಶಗಳಲ್ಲಿ ಅದು ಹೇಗೆ ಎಲ್ಲಾ ವಿಷಯಗಳನ್ನ ತುಂಬಾ ಕಟುವಾಗಿ ವಿಂಗಡಿಸಿಟ್ಟು ಯಾವುದು ಯಾವುದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಭಕ್ತಿಯೇ ಬೇರೆ ವಿಜ್ಞಾನಾವೇ ಬೇರೆ, ದೈಹಿಕ ಬದುಕೇ ಬೇರೆ, ಮಾನಸಿಕ ಬದುಕೇ ಬೇರೆ ಅಂತ ಹೇಳಿ ಹೇಳಿ ನಿಜವಾದ ಬುನಾದಿಯನ್ನು ಮರೆಯುವ ಹಾಗೆ ಮಾಡಿದ್ದಾರೆ. ಆದರೆ ಇಲ್ಲಿ ಭಾರತದಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡೇ ಇವೆ. ಎಲ್ಲದರ ಬುನಾದಿ ಇಲ್ಲಿ ಒಂದೇ. ಇಲ್ಲಿ ಶ್ರೀಮಂತ ಮತ್ತು ಕಡುಬಡವ ಎಲ್ಲರೂ ದೇವರನ್ನ ಅಷ್ಟೇ ಆರಾಧಿಸುತ್ತಾರೆ. ಪ್ರತಿ ಕಣದಲ್ಲೂ ದೇವರನ್ನ ಕಾಣುತ್ತಾರೆ. ಆಫೀಸು ಮನೆ ಕಚೇರಿ ದೇವಸ್ಥಾನ ಅಂತ ಬೇರ್ಪಡಿಸದೆ ಎಲ್ಲಾ ಕಡೆ ದೇವರ ಪೂಜೆ ಆಗುತ್ತಲೇ ಇರುತ್ತದೆ. ಇದು ನನಗೆ ತುಂಬಾ ವಿಶೇಷ ಅನಿಸಿದ್ದು ಅಂತ ಮತ್ತೊಂದು ವಿಚಾರವನ್ನ ಒಂದೇ ಉಸಿರಿನಲ್ಲಿ ಹೇಳಿದ್ರು.
ಹೇಗೆ ಜೀವನ ಎಲ್ಲಿಂದ ಎಲ್ಲಿಗೆ ಹೊಂದಿಕೊಂಡಿರುತ್ತದೆ, ಹೇಗೆ ಮುಂದಕ್ಕೆ ಸಾಗುತ್ತದೆ ಎಂಬೆಲ್ಲಾ ಅನೇಕ ಅಧ್ಯಾತ್ಮದ ನಾನಾ ವಿಚಾರಗಳು ನಮ್ಮಲ್ಲಿ ಮಂಥನಕ್ಕೆ ಜರುಗಿದವು. ಕೆಲಹೊತ್ತು ನಾ ಕೇಳುಗನಾದರೆ ಇನ್ನೂ ಕೆಲಹೊತ್ತು ಅವರು.
ಭಗವದ್ಗೀತೆಯಲ್ಲಿ ಅರ್ಜುನ ಕೃಷ್ಣನಿಗೆ ಕೇಳುತ್ತಾನೆ "ನಾವುಗಳು ಸಾಯುವ ತನಕ ಮೋಕ್ಷ ಮಾರ್ಗದಲ್ಲಿಯೇ ಬದುಕಿ ಕೊನೆಯಲ್ಲಿ ಅದನ್ನು ತಲುಪದೇ ನಾವು ಸತ್ತರೆ ನಾವು ಕೂಡಿಟ್ಟ ಈ ಸುಕರ್ಮ ನಶಿಸಿಹೋಗುತ್ತದೆಯೇ? ಮತ್ತೆ ನಾವು ಅದನ್ನ ಮೊದಲಿನಿಂದ ಪ್ರಾರಂಭಿಸಬೇಕೇ? ಇಲ್ಲಿಯವರೆಗೆ ಸಂಪಾದಿಸಿದ ಈ ಬದುಕಿನ ಮೌಲ್ಯಗಳು ಎನಾಗುತ್ತವೆ?" ಎಂಬ ಪ್ರಶ್ನೆಗಳು ಕೇಳಿದಾಗ ಕೃಷ್ಣ ಹೇಳುತ್ತಾನೆ "ಈ ಜೀವನದಲ್ಲಿ ನಾವು ಎಲ್ಲಿಗೆ ನಮ್ಮ ಮೋಕ್ಷ ಮಾರ್ಗ ಬಿಟ್ಟಿದ್ದೇವೆಯೋ ಅಲ್ಲಿಂದಲೇ ಮುಂದಿನ ಜನ್ಮದಲ್ಲಿ ಪ್ರಾರಂಭವಾಗುತ್ತದೆ. ಅದಕ್ಕೆ ತಕ್ಕಂತಹ ವಾತಾವರಣವಿರುವ ಪ್ರದೇಶದಲ್ಲಿ ಆ ಆತ್ಮಕ್ಕೆ ದೇಹ ಸಿಗುತ್ತದೆ, ಅದಕ್ಕೆ ಬೇಕಾದ ಮಟ್ಟದ ಬುದ್ಧಿ ಸಿಗುತ್ತದೆ, ಹೀಗೆ ಅದರ ಮೋಕ್ಷ ಮಾರ್ಗ ಪ್ರಾರಂಭವಾಗುತ್ತದೆ. ಇದ್ದಕ್ಕೆ ನಾವು ಗಳಿಸಿಕೊಂಡಿರುವ ಪುಣ್ಯ ಕರ್ಮದ ಫಲವೇ ದೊಡ್ಡ ಪಾತ್ರ ನಿರ್ವಹಿಸುತ್ತದೆ. ಸುಕರ್ಮದ ಫಲವಿದ್ದಷ್ಟು ಫಲವತ್ತಾದ ವಾತಾವರಣದಲ್ಲಿ ಹುಟ್ಟುತ್ತೇವೆ. ಮೋಕ್ಷಕ್ಕೆ ಪ್ರೇರೇಪಿಸುವ ಕುಟುಂಬವೊ, ಸಮಾಜದಲ್ಲಿಯೋ ಅಥವಾ ಸಾಂಗತ್ಯದಲ್ಲಿಯೋ ಹುಟ್ಟುತ್ತೆವೆ ಅಲ್ಲಿಂದ ಮತ್ತೆ ಈ ಮಾರ್ಗ ಮುಂದುವರೆಯುತ್ತದೆ" ಅಂತ ಹೇಳ್ತಾನೆ. ಅದಕ್ಕಾಗಿಯೇ ಭಾರತದಲ್ಲಿ ಹುಟ್ಟುವುದು ಮತ್ತು ಅಧ್ಯಾತ್ಮದ ಅರಿವಿರುವ ಸಮಾಜದಲ್ಲಿ ಹುಟ್ಟುವುದು ನಮ್ಮ ಪುಣ್ಯದ ಫಲವೇ ಹೌದು. ಅದನ್ನ ಆದಷ್ಟು ಸುಕರ್ಮಗಳನ್ನೇ ಮಾಡುತ್ತಾ ಇನ್ನಷ್ಟೂ ಮೊಕ್ಷದತ್ತ ಹೋಗಲು ಗಳಿಸಿ ಬೆಳಸಿಕೊಳ್ಳಬೇಕು. ಅದಕ್ಕಾಗಿಯೇ ನೀವು ನೋಡಿ. ಎಲ್ಲಿಯ ಇಟಲಿ ದೇಶ ಎಲ್ಲಿಯ ಭಾರತ, ಅಲ್ಲಿಂದ ಇಲ್ಲಿಗೆ ಬಂದು ಈ ಬದುಕು ಅಳವಡಿಸಿಕೊಳ್ಳುತ್ತಿದ್ದೀರಿ ಎಂದಲ್ಲಿ ಏನಾದರೂ ಒಂದು ಉದ್ದೇಶವಿರಲೇಬೇಕಲ್ಲವೇ? ಆ ಉದ್ದೇಶವೇ ನಿಮ್ಮನ್ನ ಇಲ್ಲಿಯ ತನಕ ತಂದದ್ದು ಎಂಬ ವಿಚಾರ ಹೇಳಿದೆ. ಕೃಷ್ಣನ ಈ ವಾಣಿ ನಾ ಮೊದಲು ಕೇಳಿದಾಗ ಅರ್ಥವಾಗಿತ್ತು. ಆದರೆ ಪ್ರತ್ಯಕ್ಷ ನಿದರ್ಷನವೊಂದು ಸಿಕ್ಕಿರಲಿಲ್ಲ. ಇಲ್ಲಿ ನಿಮ್ಮನ್ನ ಈ ತೆರನಾಗಿ ನೋಡಿದಾಗ ಮಾತಾಡಿ ಈ ವಿಚಾರಕ್ಕೆಯೇ ನೀವು ಇಲ್ಲಿಗೆ ಬಂದದ್ದು ಎನ್ನುವುದು ಉದಾಹರಣೆಯೊಂದಿಗೆ ನನ್ನೊಳಗೆ ಇನ್ನಷ್ಟು ಖಚಿತಪಡಿಸಬೇಕು ಎನ್ನುವುದು ದೈವ ಅನುಗ್ರಹವೇ ಆಗಿತ್ತೇನೋ. ನಾನು ನಿಮ್ಮನ್ನ ಮಾತಾಡಿಸುವುದರ ಹಿಂದಿರುವ ಮುತುವರ್ಜಿಯ ವಿಚಾರ ಇದುವೇ ಅಂತ ಹೇಳಿದೆ.
ಕೊನೆಗೆ ನಿಮ್ಮ ಹೆಸರು ಕೇಳುವುದೇ ಮರೆತು ಬಿಟ್ಟೆ ಎಂದಾಗ "ಸೋಫಿನೋ, ಬಟ್ ಮೈ ಗುರು ಗೇವ್ ಮೀ ಶಿವಾನಂದ ನೇಮ್" ಅಂತ್ಹೇಳಿ ನಕ್ಕು ನನ್ನ ಹೆಸರನ್ನು ತಿಳಿಕೊಂಡರು. ಈ ಮಧ್ಯೆ ಸುವೆಂದು ಪಡುತ್ತಿದ್ದ ವೇದನೆಯ ಬಗ್ಗೆ ನನ್ನ ಗಮನವೇ ಇರಲಿಲ್ಲ. ಸುಮಾರು ಅರ್ಧಗಂಟೆಕಾಲ ಮೀರಿದ ನಮ್ಮ ಸಂಭಾಷಣೆ ತುಂಬಾ ಕಮ್ಮಿ ಅನಿಸಿತ್ತು. ಇನ್ನು 17 ದಿನಗಳಲ್ಲಿ ಅವರ ವಿಸಾ ಮುಗಿಯಲಿದ್ದು ಮತ್ತೆ ಅವರು ಹೋರಡುವುದಾಗಿ ಹೇಳಿದರು. ಮತ್ತೊಮ್ಮೆ ದಕ್ಷಿಣ ಭಾರತದ ಕಡೆ ಬಂದಾಗ ನನಗೊಮ್ಮೆ ಹೇಳಿ ಅಂತ ಹೇಳಿ ಅವರೊಡನೆ ನೆನಪಿಗಾಗಿ ಒಂದೆರಡು ಚಿತ್ರಗಳನ್ನ ಕ್ಲಿಕ್ಕಿಸಿಕೊಂಡು ನಂಬರ್ ಎಕ್ಸ್ಚೇಂಜ್ ಮಾಡಿಕೊಂಡು ಒಂದು ಹಸನ್ಮುಖಿ ವಿದಾಯ ಹೇಳಿ ಅವರಿಗೆ ಬಿಡುವು ಮಾಡಿಕೊಟ್ಟೆ.
ಅಧ್ಯಾತ್ಮದ ಚಿಂತನೆ ಮೊದಲಿಂದಲೂ ಎಲ್ಲರಲ್ಲಿಯೂ ಇದ್ದು ಅದು ಸ್ಪುಟಗೊಳ್ಳುವುದೇ "ನಾವೇಕೆ? ಏನು ಮುಂದೆ? ಹೀಗೇಕೆ ಬದುಕು" ಎಂಬ ಪ್ರಶ್ನೆಗಳಿಂದಲೇ. ಅದಕ್ಕಾಗಿ ಉತ್ತರ ಹುಡುಕುವವರು ಸ್ಟಿಫಿನೋ ಇಂದ ಶಿವಾನಂದರಾಗ್ತಾರೆ, ಹುಡುಕದೆ ಹೋದಲ್ಲಿ ಭಾರತದಲ್ಲೇ ಹುಟ್ಟಿದ ಶಿವಾನಂದರು ಬರೀಯ ಶವವಾಗಿ ಹೋಗುತ್ತಾರಷ್ಟೇ.
.................ಬಸವ.
Payanada nenapu
ReplyDeleteNice
ReplyDeleteKeep it up boi
ReplyDelete👌👌
ReplyDelete👌👌😊
ReplyDeleteSuper 🙏🏽
ReplyDeleteExllent conversation,,,
ReplyDeleteCreative journey 🏍️,,,
With positive moral,, and nice to read the words used 😀.
Very nice experience with that Man 👌👌 beautiful wordings 👏👏👏👏
ReplyDelete👏👏👏👌🙏🙏
ReplyDelete