ಗರ್ಭದಾಚೆಯ ಅನಾಥ.
ನನ್ನನ್ನೇಕೆ ನಿನ್ನೊಡಲಾಳದಿಂದ ಹೊರದಬ್ಬಿದೆ ಅಮ್ಮ
ನಿನ್ನೊಳಗೇ ಅವಿತಿಟ್ಟುಕೊ ನನ್ನ, ಬಿಸಿ ಅಪ್ಪುಗೆಯಲ್ಲಿ.
ಪ್ರತಿ ಕ್ಷಣವೂ ನಿನ್ನೊಟ್ಟಿಗಿದ್ದ ನಾನು ನಿಧಾನವಾಗಿ ಎರಡು ದೇಹಗಳಾಗಿ
ಎರಡು ಮನಸ್ಸು, ಬುದ್ಧಿಗಳಾಗಿ, ಎರಡು ವಿಚಾರವಾಗಿ ಅನುಭವಿಸುತ್ತಿರುವ ಈ ಪರಿತಾಪನೆ ನನ್ನಿಂದಾಗದು.
ನಾನು ನಿನ್ನನ್ನೇ ಮಾತಾಡಬಯಸುತ್ತೇನೆ, ಕೇವಲ ನಿನ್ನನ್ನೇ ಕೇಳಬಯಸುತ್ತೇನೆ, ನಿನ್ನನ್ನೇ ನೋಡಬಯಸುತ್ತೇನೆ,
ನಿನ್ನದೇ ವಿಚಾರಗಳನ್ನೇ ಚಿಂತಿಸಬಯಸುತ್ತೇನೆ.
ಬೇರಾವ ಚಿಂತನ ಮಂಥನಗಳ ಹೊರೆ ನನಗಿಲ್ಲದಂತೆ
ಮತ್ತೊಮ್ಮೆ ಕರೆದುಕೊ ನನ್ನನ್ನು ನಿನ್ನೊಡಲಾಳಕ್ಕೆ.
ನನಗೆ ನೀನು ಕಗ್ಗತ್ತಲೆಯ ಅನುಭವ ಕೊಟ್ಟೆಯಾದರೂ
ಈ ಭುವಿಯ ಕಗ್ಗತ್ತಲೆಯ ಭೀಭತ್ಸತೆ ನನ್ನಿಂದ ತಡೆಯಲಾಗದು.
ನಿನ್ನ ಗರ್ಭದಲ್ಲಿ ನಾನದೆಷ್ಟೋ ಬಾರಿ ಕಣ್ಣೀರು ಸುರಿಸಿದರೂ ಈ ಭುವಿಯ ಕಣ್ಣೀರುಗಳ ಯಾತನೆ ತಡೆಯಲಾಗದು.
ನಿನ್ನೊಡಲಾಚೆಗೀಗ ನಾನು ಅನಾಥ, ಅನರ್ಥ, ಅನವಶ್ಯಕ.
ನಿನ್ನೊಡಲ ದೇಗುಲದ ಆಸರೆಯೇ ನನಗೆ ಮುಕ್ತಿ.
ಅಪ್ಪಿಕೋ ಒಡಲಾಳದೊಳಗೆ ಮತ್ತೊಮ್ಮೆ ಪೂರ್ಣ ಶೂನ್ಯದಂತೆ.
ಮತ್ತೊಂದು ಇನ್ನೊಂದು ಬೇಕೆಂಬ ತೊಳಲಾಟ ಮಾಡೇನು,
ನೀನುಂಡದ್ದೇ ನಾನುಣ್ಣುವೆ, ಕುಡಿಯುವೆ ಮತ್ತೇನೂ ಕೇಳದೆ.
ನಿನ್ನ ಗರ್ಭದಾಚೆ ನಾ ಈ ಭುವಿಗೆ ಭಾರವೆಂಬ ಭ್ರಾಂತಿಗೆ
ಬೇಕೊಂದು ನಿನ್ನೊಡಲಾಳದಲ್ಲಿ ಹೋರಾಟವಿಲ್ಲದ ವಿಶ್ರಾಂತಿ.
ಬೇಕೊಂದು ಶ್ರಮಿಸದ, ಸೊರಗದ, ದಣಿಯದ ಚಿತ್ತಶಾಂತಿ.
ಬದುಕುವೆ ಸದಾ ನಿನ್ನೊಡಲಾಳದಲ್ಲೇ ಮತ್ತಾವ ತೊಡಕು ತಕರಾರುಗಳಿಲ್ಲದೆ.
ಬಚ್ಚಿಟ್ಟುಕೊ ಸ್ವರ್ಗದಂತಿರುವ ನಿನ್ನ ಗರ್ಭದಲ್ಲಿ
ಲೌಕಿಕದ ಇನ್ನಾವ ವಕ್ರ ದೃಷ್ಟಿಯೂ ಬೀಳದಂತೆ.
..........ಬಸವ.
Comments
Post a Comment
Thank you