ಇನ್ನೆಲ್ಲಿಯ ಭೇಟಿ?
ಭೇಟಿಯಾಗಿ ರೂಪಿಸಬೇಕಿದ್ದ ರೂಪಾಂತರಗಳು ನಿರರ್ಥಕವೆಂಬಂತೆ ಮುಟುಕುಗೊಂಡಾಗ, ಇನ್ನೆಲ್ಲಿಯ ಭೇಟಿ?
ಇನ್ನಾವ ಕ್ಷಮೆ-ದಮೆಗಳ ಪೀಠಿಕೆ ಹೆಣೆಯಲಿ
ನೀನೇ ಆಗಲೇ ಉತ್ತರಗಳನ್ನು ತಲುಪಿಸಿರುವಾಗ.
ಇದೀಗ ಹೃದಯದೊಳಗೆ ಮೂಡಿದ್ದ ಮೊದಲ ಭೇಟಿಯ ಚೊಚ್ಚಲತೆಯ ಕೌತುಕತೆ ಇನ್ನೊಂದು ಕಥೆಯಾಗಿಹೋಗಿದೆ.
ಬಿಗುದನಿಗಳ ನಾಚಿಕೆಯ ಕಣ್ಣೋಟದ ಬಿಡುವಿನಲ್ಲಿ
ಸಲ್ಲಿಸಬೇಕಿದ್ದ ವಿನಂತಿಯ ಲಘು ಪ್ರಸ್ತಾವನೆ
ಅದಾಗಲೇ ಬಹಿರಂಗಗೊಂಡಿದೆ.
ಇನ್ನೂ ನಾ ಹಾಡಬೇಕಿದ್ದ ಪ್ರತಿ ರಾಗಗಳೀಗ
ಶುರುವಾಗುವ ಮೊದಲೇ ಭಾವ ಚೆಲ್ಲಿ ನಿಂತಾಗಿವೆ.
ವಿನಂತಿಯ ಸ್ವರಗಳು ಹೊರಚಿಮ್ಮುವ ಮೊದಲೇ
ಗಂಟಲೊಳಗೆ ಮುಳುಗಿವೆ.
ಸಂಧಿಸಿ ಮೂಡಬೇಕಿದ್ದ ಒಲವಿನೊಳಗಿನ ತರಾತುರಿ,
ಅದೊಂದು ಭೇಟಿಯ ವಿದಾಯದ ವಿರಹಭಾವ,
ಮತ್ತೆ ಭೇಟಿಯಾಗುವ ಆಶ್ವಾಸನೆಯ ನಿಟ್ಟುಸಿರುಗಳು,
ಎಲ್ಲವೂ ಹಗಲುಗನಸಾಗಿ ಅಸ್ತಿತ್ವಕ್ಕೆ ಬಾರದ ನೂರೆಂಟು ಆಲೋಚನೆಗಳಲ್ಲಿ ಬೆರೆತುಹೋಗಿವೆ.
ಮತ್ತಾವ ಸಂಭವನೆಗಳಿಗೂ ತಾವುಗಳು ಅನರ್ಹವೆಂಬಂತೆ.
........ಬಸವ.
Comments
Post a Comment
Thank you