ಅಪ್ರಸ್ತುತಿ.
ಅದೆಷ್ಟು ತ್ರಾಸದಾಯಕ
ಭಾವಗಳನ್ನು ತಾವು ಬಯಸಿದ ಭಾವಗಳೊಂದಿಗೆ ಬೆಸೆಯುವುದು.
ಬೆಸೆದ ಭಾವವೀಗ ರಂಗುರಂಗಾಗಿ ಕಂಡರೂ,
ಕೂಡಿ ತಿಳಿಯಾಗುವುದೋ,
ಅಥವಾ ತೀರಾ ತಿಳಿಯಾಗಿ ಭಾವಹೀನವಾಗುವುದೋ?
ಬೆಸುಗೆಯ ಆಶ್ವಾಸನೆ ಕೊಟ್ಟ ಒಲವು,
ಬೆರೆಯುವ ಭರವಸೆಯ ಕಾರಾರಿಗೆ ಮಾತ್ರ ಗೈರು.
ಹೊತ್ತು ಹೊತ್ತಿಗೆ ಇಳಿಸಂಜೆಯ ಇಂಪಿನ ಸೂಚನೆ;
ತಂಪು ಎಂಬ ಭಾವನೆಯಲ್ಲಿ ಪ್ರೀತಿ ತೇಲುತೇಲುತ್ತಲೇ
ಕ್ಷಣಾರ್ಧದಲ್ಲಿ ಕತ್ತಲು.
ಸ್ಫುಟವಾಗಿ ಸಿದ್ಧವಿದ್ದ ಒಲವಿನ ಆಕೃತಿ ಮಾತ್ರ
ಮತ್ತದೇ ಕತ್ತಲಿನಲ್ಲಿ ವಿಲೀನ.
ಮತ್ತೆ ಸಂಧಿಸುವೆನೆಂಬ ಒಲವಿನ ಒಡಲ ಮಾತುಗಳು
ಕತ್ತಲೆಯ ಜೀರುಂಡೆಗಳ ಸದ್ದಿನಲ್ಲಿ ಅಸ್ಪಷ್ಟ.
ಒಲವಿನ ಬೆಸುಗೆಯ ಸಂಧಾನದ ಪೀಠಿಕೆ
ಗೆಲುವಿನದ್ದೇ ಆದರೂ,
ವಿಸ್ತಾರವಾದ ವಿವರಣೆ ಮಾತ್ರ
ಸದ್ಯಕ್ಕೆ ಅಸಾಧ್ಯವೆಂಬುದಿತ್ತು.
ಹಲವು ಬಾರಿ ಗೀಚಿ ತೆಗೆದ ಹಾಳೆಗಳು
ಪ್ರತಿಬಾರಿಯೂ ಒಪ್ಪಿಗೆಯ ಸ್ವೀಕೃತಿಯನ್ನೇ ನೀಡುತ್ತಿದ್ದವು
ತಾವೂ ಒಲವಿನ ಕಥೆಗೆ ಸಾಥಿ ಎಂಬಂತೆ.
ಬೆಸುಗೆಯ ರಚನೆ ರೂಪಗೊಳ್ಳುವಲ್ಲೇ
ಕಥಾಪಾತ್ರ ವಿರಾಮವನ್ನಿಡುತ್ತಿತ್ತು;
ಇಂದೇಕೋ ಒಲವಿಗೆ ಬೆಸುಗೆ ಒಪ್ಪದ ವಸ್ತುವೆಂದು.
......ಬಸವ.
Comments
Post a Comment
Thank you