ಊಟಿ - ಬೆಟ್ಟಗಳಲ್ಲೊಂದು ಸ್ವರ್ಗ. ಭಾಗ-2.
ಬೆಳಿಗ್ಗೆ ಬೇಗ ಏಳುವುದು ಅಂತ ನಿರ್ಧರಿಸಿದ್ದರೂ ಎದ್ದದ್ದು ತಡವಾಗಿಯೇ. ಕಣ್ಣು ಬಿಡುತ್ತಿದ್ದಂತೆಯೇ ಸಿದ್ಲಿಂಗ್ ಊಟಿಯಲ್ಲಿ ಭೇಟಿ ಕೊಡಲೇಬೇಕಾದ ಕೆಲ ಸ್ಥಳಗಳ ಮಾಹಿತಿ ಕಲೆಹಾಕುತ್ತಿದ್ದ. ತಡವಾಗಿದ್ದಕ್ಕೆ ಬಿಸಿಲಿಗೆ ಹೆದರುವ ಅವಶ್ಯಕತೆ ಇರಲಿಲ್ಲ, ಅದು ಊಟಿ, ಅಲ್ಲಿ ಬಿಸಿಲಿನ ವರ್ಚಸ್ಸು ಕಮ್ಮಿ. ತಡ ಮಾಡದೆ ಎದ್ದು ರೆಡಿಯಾಗಿ ಅಲ್ಲೇ ಉಪಹಾರ ಮುಗಿಸಿಕೊಂಡು ಗಂಟುಮೂಟೆ ಕಟ್ಟಿಕೊಂಡೆವು. ಬೈಕಿನ ಹಿಂಬದಿಗೆ ಸಿದ್ಲಿಂಗ್ ಮತ್ತು ಲಗೇಜನ್ನ ಕುಳ್ಳಿರಿಸಿ ಮೊದಲಿಗೆ ಹೊರಟದ್ದು ಕರ್ನಾಟಕ ಪಾರ್ಕ್ ಗೆ. ಉದ್ಯಾನವನಗಳಿಗೆ ಭೇಟಿಕೊಡುವ ಮುತವರ್ಜಿ ನಮಗಂತೂ ಇರಲಿಲ್ಲ. ಹೆಸರು ಕೇಳಿ ಆಕರ್ಷಿತಗೊಂಡಿದ್ದೆವು. ಗೂಗಲ್ ಮ್ಯಾಪ್ ಹಿಂಬಾಲಿಸಿ ಒಂದೆರಡು ಕಿಮೀ ಕ್ರಮಿಸಿ, ಒಂದೆರಡೆಡೆ ಸಿಕ್ಕ ಸೆಲ್ವಂ ರನ್ನ ರಸ್ತೆ ಕೇಳಿದ್ವಿ. ಗೂಗಲ್ ಮ್ಯಾಪ್ ತೋರಿಸುವ ಸಂದಿಗಳನ್ನ ಗೊತ್ತಿಲ್ಲದ ಊರುಗಳಲ್ಲಿ ನಂಬಲಾಗದು. ಸೆಲ್ವಂ ತೋರಿದ ಮಾರ್ಗದಲ್ಲಿ ಬೈಕು ತೂರುತ್ತಿದ್ದಂತ್ತೆ ಸಂಪೂರ್ಣ ಇಳಿಜಾರು. ಊಟಿಯ ಪಾತಾಳಲೋಕಕ್ಕೆ ಹೋಗುವ ಮಾರ್ಗವಿರಬಹುದೇನೋ. ಕಣ್ಣಿಗೆ ಕಾಣಿಸುವಷ್ಟು ದೂರಕ್ಕೆ ಸಂಪೂರ್ಣ ಇಳಿಜಾರು. ಬೈಕ್ ಇಗ್ನಿಷನ್ ಆಫ್ ಮಾಡಿಯೇ ಬಿಟ್ಟೆ. ಎರಡು ಮೂರು ಕಿಮೀ ತನಕ ಇಳಿಜಾರಲ್ಲೇ ಹೋದ್ವಿ, ಎದುರಿಗೆ ಯಾವ ವಾಹನವೂ ಬರುತ್ತಿಲ್ಲ, ಬಂದರು ಅವುಗಳು ಹತ್ತಲಿಕೆ ಆಗುವುದೇ? ಆ ಪರಿಯ ಇಳಿಜಾರು. ಈ ಮಧ್ಯೆ ನಮ್ಮ ಎದೆಯಲ್ಲಿ ಶುರುವಾಗಿದ್ದ ನಡುಕ ಒಂದೇ, ಅಲ್ಲಿ ಮುಗಿಸಿಕೊಂಡು ಹಿಂತಿರುಗುವುದು ಹೇಗೆ?. ಬೇರಾವುದೋ ಇನ್ನೊಂದು ರಸ್ತೆ ಇದ್ದೆ ಇರುತ್ತೆ ಎನ್ನುವ ಬಲವಾದ ನಂಬಿಕೆ ಇಂದ ಇನ್ನಷ್ಟು ಆಳಕ್ಕೆ ಬೈಕ್ ಇಳಿಯ ತೊಡಗಿತು. ಅದೆಷ್ಟು ಮಜವಾಗಿತ್ತು ಅದೆಂದರೆ, ನಾವು ಹೋಗಬೇಕಿದ್ದ ಸ್ಥಳ ಅದೆಲ್ಲೋ ಹಿಂದೆಯೇ ಕಳೆದು ಹೋಗಿತ್ತು. "ಗಾರ್ಡನ್ಸ್ ಫಾರ್ ಕಿಡ್ಸ್ ಅಂಡ್ ಓಲ್ಡ್ ಏಜೆಸ್, ಲೇಟ್ಸ್ ಎಂಜಾಯ್ ದಿಸ್ ಅಡವೆಂಚರ್" ಎಂದ ಸಿದ್ಲಿಂಗ್. ಮುಖ ಮುಚ್ಚಿದ ಹೆಲ್ಮಿಟಿನಿಂದಲೇ ಅವನಿಗೆ ಕೇಳುವ ಸಲವಾಗಿ ಯಾಂತ್ರಿಕವಾಗಿ ಜೋರಾಗಿ ನಕ್ಕು ಮತ್ತೆ ರಸ್ತೆ ಕಡೆ ಗಮನಹರಿಸಿದೆ. ಕೆಲವೇ ನಿಮಿಷಗಳಲ್ಲಿ ಪಾತಾಳಕ್ಕೆ ತಲುಪಿದೆವು. ಅಲ್ಲಿಂದ ಸಮತಟ್ಟವಾದ ಮುಖ್ಯ ರಸ್ತೆಯೊಂದು ಕಣ್ಣಿಗೆ ಬಿತ್ತು. ಎಡಕ್ಕೂ ಮತ್ತು ಬಲಕ್ಕೂ. ಇಲ್ಲಿಗೆ ನನ್ನ ಕೆಲಸ ಮುಗಿಯಿತು ಎಂಬಂತ್ತೆ ಬೈಕ್ ನಿಲ್ಲಿಸಿದೆ. ಕರ್ನಾಟಕ ಗಾರ್ಡನ್ ನೆನಪಿನಲ್ಲಿಂದ ಮಾಯವಾಯ್ತು. ನಿಂತಲ್ಲಿಂದ ಅದರ ಕಡೆ ಕಣ್ಣು ಹಾಯಿಸಿದೆವು, ನೋಡಲಿಕೆ ತ್ರಾಸು ತೆಗದುಕೊಳ್ಳುವ ಯಾವುದೇ ಅಂಶ ಅಲ್ಲಿ ಕಾಣಿಸಲಿಲ್ಲ. ಬಿಟ್ಟು ಬಂದ ಯಾವುದೇ ನೋವು ನಮಗಿರಲಿಲ್ಲ. ಅಲ್ಲಿಂದ ಮುಂದಿನ ನಿಲ್ದಾಣ ದೊಡ್ಡ ಬೆಟ್ಟ ಅಂತ ನಿರ್ಧರಿಸಿ ಬೈಕ್ ಸ್ಟಾರ್ಟ್ ಮಾಡಿ ಎಡಕ್ಕೆ ಹೊರಟೆವು. ಹೋಗು ಹೋಗುತ್ತಲೇ ತೆಳುವಾಗಿ ಎತ್ತರಕ್ಕೆ ಕರೆದುಕೊಂಡು ಹೋಗುತ್ತಿತ್ತು ರಸ್ತೆ. ಮತ್ತದೇ ತಿರುವಗಳ ಔತಣ. ಹಾದಿಯಲ್ಲೇ ರೈಲ್ವೆ ನಿಲ್ದಾಣಕ್ಕೆ ಹೋಗುವ ಬೋರ್ಡ್ ಸಿಕ್ಕಿತು. ಒಬ್ಬರಿಗೊಬ್ಬರು ಮಾತನಾಡದೆ ಬೈಕ್ ಆಕಡೆ ಹೊರಳಿಸಿಯೇ ಬಿಟ್ಟೆವು.
ರೈಲ್ವೆ ನಿಲ್ದಾಣಕ್ಕೆ ಹೋಗುವುದು ಸ್ವಲ್ಪ ತಡವಾಯಿತೇನೋ, ಅದಾಗಲೇ ಒಂದು ರೈಲು ಹೊರಟು ಹೋಗಿತ್ತು. ಹಳೆಯ ಕಾಲದ ರೈಲು ನಿಲ್ದಾಣ. ಉದಗಮಂಡಲ ಮತ್ತು ಕುನೂರಿಗೆ ಮಾತ್ರ ರೈಲು. ಊಟಿಯ ಹೆಸರು ಉದಗಮಂಡಲ ಅಂತ ಮೊದ್ಲೆಲ್ಲಿಯೋ ಕೇಳಿದ್ದರೂ, ಅಲ್ಲಿ ನೊಡಿ ಖಾತರಿಯಾಗುವ ತನಕ ನೆನಪಲ್ಲಿರಲಿಲ್ಲ. ಉದಗಮಂಡಲವನ್ನೇ ಊಟಿ ಅಂತ ಕರೆಯಲ್ಪಡುತ್ತದೆ. ಇದರ ಅರ್ಥ ಬೆಟ್ಟಗಳಲ್ಲಿ ಮನೆ ಎನ್ನುವುದು ಅಲ್ಲಲ್ಲಿ ಹುಡುಕಿದಾಗ ಸಿಕ್ಕ ಉತ್ತರ. ರೈಲ್ವೆ ನಿಲ್ದಾಣದಲ್ಲೊಂದು ವಸ್ತುಸಂಗ್ರಹಾಲಯವಿತ್ತು. ಬ್ರಿಟಿಷರ ಅವಧಿಯ ಕೆಲ ಕುರುಹುಗಳು ನೋಡಲಿಕೆ ಸಿಕ್ಕವು. ಪ್ಲಾಟ್ಫಾರ್ಮ್ ನ ಕಲ್ಲು ಬೆಂಚಿನ ಮೇಲೆ ತುಸು ಹೊತ್ತು ಕೂತು ಅನಾದಿ ಕಾಲದ ಸ್ನೇಹಿತರಿಬ್ಬರು ಸುಖ ದುಃಖ ಹಂಚಿಕೊಳ್ಳುತ್ತಿದ್ದಾರೆನೋ ಎಂಬಷ್ಟು ಆರಾಮದಾಯಕವಾಗಿ ಕುಳಿತಿದ್ದೆವು. ತಣ್ಣನೆಯ ವಾತಾವರಣದಲ್ಲಿ ಹಬ್ಬಿಕೊಳ್ಳಲು ಬಿಸಿಲು ಪೈಪೋಟಿ ನಡೆಸುತ್ತಿತ್ತು. ಒಬ್ಬರಿಗೊಬ್ಬರು ಮುಖ ನೋಡಿ ತಲೆ ಅಲ್ಲಾಡಿಸಿದ್ವಿ. ಬೈಕ್ ತೊಡೆಗಳ ಮಧ್ಯೆ ಸಿಲುಕಿಕೊಂಡಿತು. ಇಗ್ನಿಷನ್ ಸ್ಟಾರ್ಟ್ ಆಗಿತ್ತು. ಮತ್ತೇ ಸಾಂಪ್ರದಾಯಿಕ ಎಂಬಂತ್ತೆ ಮುಂದಿನ ನಿಲ್ದಾಣ ದೊಡ್ಡಬೆಟ್ಟ ಅಂತ ನಿರ್ಧರಿಸಲಾಯ್ತು. ಒಂದೆರಡು ತಿರುವು ದಾಟಿ, ಎದೆಯೆತ್ತರದ ತಿರುವುಗಳನ್ನ ದಾಟು ದಾಟುತ್ತಲೇ ಬಲಕ್ಕೆ ಕಂಡದ್ದು ಟೀ ಫ್ಯಾಕ್ಟರಿ. ಸಿದ್ಲಿಂಗ್ ಹೆಗಲಮೇಲೆ ಎರಡು ಬಾರಿ ಥಪಥಪಿಸಿದ. ಬೈಕ್ ತಾನಾಗಿಯೇ ಯೂ ಟರ್ನ ತೆಗೆದುಕೊಂಡು ಟೀ ಫ್ಯಾಕ್ಟರಿಯ ಪಾರ್ಕಿಂಗ್ ಅಲ್ಲಿ ಸ್ಟಾಂಡ್ ಬಲದಿಂದ ತಂಗಿತ್ತು.
ಅದು ಟೀ ಮತ್ತು ಚಾಕೊಲೇಟ್ ಫ್ಯಾಕ್ಟರಿ. ಪ್ರವೇಶ ಶುಲ್ಕ ಹತ್ತು ರೂಪಾಯಿಗಳು. ಮೊದಲಿಗೆ, ಟೀ ಜಗತ್ತಿನಲ್ಲಿ ಹೇಗೆ ಉದ್ಭವಿಸಿತು ಮತ್ತು ಭಾರತದಲ್ಲಿ ಹೇಗೆ ಈ ಪ್ರಮಾಣದಲ್ಲಿ ಬೇರೂರಿತು ಎಂಬ ಮಾಹಿತಿಯ ಬೋರ್ಡ್ ಸಾಲು ಸಾಲಾಗಿ ಸ್ವಾಗತಿಸಿದವು. ಅದೇಕೆ ಅಮೆರಿಕ್ಕನರು ಟೀ ಬದಲಾಗಿ ಕಾಫಿಗೆ ಪ್ರಾವಧಾನ ಕೊಡುತ್ತಾರೆ ಎಂಬ ಮಾಹಿತಿ ನಮ್ಮ ಗ್ರಹಿಕೆಗೆ ವಿಶೇಷವೆನಿಸಿತ್ತು. ಬ್ರಿಟಿಷರು ಅವರ ಮೇಲೆ ಮಾಡಿದ ದೌರ್ಜನ್ಯ ಮತ್ತು ಅವರೊಂದಿಗೆ ನಡೆದುಕೊಂಡ ಹ್ಯೆಯ ವರ್ತನೆಗೆ ಅಮೆರಿಕ್ಕನ್ನರು ಟೀ ಬಹಿಷ್ಕರಿಸಿದ್ದರು. ಭಾರದಲ್ಲಿ ಚಾಯ್ ಎಂಬ ಹೆಸರಿನ ಮೂಲ ಉಗಮ ಜಪಾನಿನದು ಎಂಬ ಸತ್ಯವು ನಮ್ಮೆದುರಿಗೆ ಮುಗುಳ್ನಗೆ ಕೊಟ್ಟಿತು. ಮುಂದಕ್ಕೆ ನಾಲ್ಕ್ಹೆಜ್ಜೆ ಇಡುತ್ತಿದ್ದಂತ್ತೆ ಟೀ ಉತ್ಪಾದಕ ಘಟಕದ ನೀಲ ನಕ್ಷೆ. ಕಾಲೇಜು ದಿನಗಳು ನೆನಪಾದವು. ನೀಲ ನಕ್ಷೆಯ ಮೇಲೆ ಎಲ್ಲಿಲ್ಲದ ಕುತೂಹಲ, ಅದೊಂದಿದ್ದರೆ ಸಾಕಿತ್ತಲ್ಲವೇ ಕಾಲೇಜಿನಲ್ಲಿ ಇಡಿಯ ಪಾಠ ಅರ್ಥ ಮಾಡಿಕೊಂಡು ಮನಸೋ ಇಚ್ಛೆ ಪರೀಕ್ಷೆಯ ಪೇಪರ ತುಂಬಿಸಲು? "ದಿ ನೋಸ್ಟಾಲಾಜಿಕ್ ಮುಮೆಂಟ್" ಅದಾಗಿತ್ತು. ನೀಲ ನಕ್ಷೆಯಂತ್ತೆ ಫ್ಯಾಕ್ಟರಿ ಸುತ್ತಿಕೊಂಡು ಹಂತ ಹಂತವಾಗಿ ಟೀ ಪುಡಿ ಸಿದ್ಧಗೊಂಡು ಹೊರಬೀಳುತ್ತಿರುವುದನ್ನ ಅಚ್ಚುಕಟ್ಟಾಗಿ ನೋಡಲು ವ್ಯವಸ್ಥೆ ಮಾಡಿದ್ದರು. ಅದಾದಮೇಲೆ ಒಂದು ಕಪ್ ಚಹಾ. ಚಾಕೊಲೇಟ್ ಮಿಶ್ಚಿತ್ ಚಹಾ. ಬಲು ಮಜವಾಗಿಯೇ ಇತ್ತು. ಅಲ್ಲಿಂದಲೇ ಶುರುವಾಗುವ ಚಾಕೊಲೇಟ್ ಉತ್ಪಾದಕ ಘಟಕ. ಅದರಿಂದ ಹೊರ ಬರುತ್ತಲೇ ಒಂದೆರಡು ಚಾಕೊಲೇಟ್ ಗುಳಿಗೆಗಳು. ಕೊಟ್ಟ ಶುಲ್ಕ ಪಾವತಿಯಾಯ್ತು ಎಂಬಂತ್ತೆ ಸಿದ್ಲಿಂಗ್ ಹಲ್ಲೆರಡು ಕಿಸಿದ. ತಡಮಾಡದೆ ಅಲ್ಲಿಂದ ಕಾಲ್ಕಿತ್ತೆವು. ಮುಂದಿನ ನಿಲ್ದಾಣ ಮತ್ತೆ ದೊಡ್ಡ ಬೆಟ್ಟ.
ಅತ್ಯಂತ ಎತ್ತರವಾದ ಬೆಟ್ಟ ದೊಡ್ಡ ಬೆಟ್ಟ ಎಂಬುದು ಗೊತ್ತಿದ್ದ ವಿಷಯ. ಅದಕ್ಕೆ ಸಾಕ್ಷಿ ಎಂಬಂತ್ತೆ ನಾವು ಹೊರಟ ರಸ್ತೆ ಮೇಲಕ್ಕೆ ಏರುತ್ತಲೇ ಇತ್ತು. ತಿರುವುಗಳ ಸರಮಾಲೆಗಳು. ಎಡಕ್ಕೊಮ್ಮೆ ಬಲಕ್ಕೊಮ್ಮೆ ಕಾಣ ಸಿಗುವ ಊಟಿ ಊರು ಪಾತಾಳದಲ್ಲಿದೆ ಎಂಬಂತ್ತೆ ಅನಿಸುತ್ತಿತ್ತು. ಊಟಿಯೇ ಎತ್ತರದಲ್ಲಿದೆ, ದೊಡ್ಡ ಬೆಟ್ಟದ ನಡು ರಸ್ತೆಯಿಂದಲೇ ಊಟಿ ಈ ಪರಿಯ ಕೆಳಗೆ ನೋಡಲು ಸಿಗುತ್ತಿದೆ ಎಂಬಲ್ಲಿಗೆ ಅದೆಷ್ಟು ಎತ್ತರದಲ್ಲಿ ದೊಡ್ಡಬೆಟ್ಟವಿದೆ ಎಂಬ ಅಂದಾಜು ನಮ್ಮ ಗಮನಕ್ಕೆ ಸಿಕ್ಕಿತು. ಯಾವ ಸ್ಥಳಕ್ಕೂ ಸಿಗದ ಟ್ರಾಫಿಕು ದೊಡ್ಡ ಬೆಟ್ಟದ ಹತ್ತಿರ ಸಿದ್ಧವಾಗಿತ್ತು. ಮುಂದಿನ ಕಾರುಗಳ ಎಡಕ್ಕೊಮ್ಮೆ ಬಲಕ್ಕೊಮ್ಮೆ ಹೋಗಿ, ಅತ್ತಲಿತ್ತಲಿಗೊಮ್ಮೆ ರಸ್ತೆಗೆ ಕಾಲು ತಾಕಿಸಿ ಓವರ್ಟೆಕ್ ಮಾಡಿ ಮುಂದೆ ಬಂದೆವು. ಮುಂದೆ ಬಂದೆವು ಎನ್ನುತಲೆ ಸಿಕ್ಕಿದ್ದು ದೊಡ್ಡ ಬೆಟ್ಟದ ಪಾರ್ಕಿಂಗ್ ಏರಿಯಾ. ಬೈಕುಗಳನ್ನ ಅಸ್ಪರ್ಶರು ಎಂಬಂತ್ತೆ ವರ್ತಿಸಿದ್ದರು ಅಲ್ಲಲ್ಲಿ ಸಿಕ್ಕ ಕಾರುಗಳ ಮಧ್ಯೆಗಿನ ಸಂದಿಯಲ್ಲಿ ಪಾರ್ಕ್ ಮಾಡಲು ಹೊರಟಾಗ. ಕೇಳುವುದು ಸಲ್ಲದು ಅಂತ ನಿರ್ಧರಿಸಿ ಪಾರ್ಕಿಂಗ್ ನ ತುತ್ತತುದಿಯಲ್ಲಿ ಪಾರ್ಕ್ ಮಾಡಿ ವಿವ್ ಪಾಯಿಂಟ್ ಕಡೆ ನಡೆದೆವು.
ಕಿಕ್ಕಿರಿದ ಜನ. ಸಾಲು ಸಾಲಾಗಿ ವ್ಯಾಪಾರದ ಮಳಿಗೆಗಳು. ಬಿಸಿಲು ತನ್ನ ಅಸ್ತಿತ್ವ ತೋರುತ್ತಿತ್ತು. ಹತ್ತಾರು ಮೆಟ್ಟಿಲಿನ ಹಾದಿ ಮುಂದೆ ಬರುತ್ತಲೇ ಶುಲ್ಕಪಾವತಿಯ ಗೇಟ್. ರಶೀದಿಗಳೆರಡು ಪಡೆದು ಮುಂದಕ್ಕೆ ಸಾಗಿದೆವು. ಸುತ್ತಲಿಗೆ ಎತ್ತರದ ಗ್ರಿಲ್ಸ್ ಹಾಕಿದ್ದಾರೆ. ಕಾಲಿಟ್ಟು ಸುತ್ತಲಿನ ಸ್ಥಳ ನೋಡಲಿಕು ಅವಕಾಶವಿಲ್ಲದಷ್ಟು ತುಂಬಿಕೊಂಡಿದ್ದ ಜನ. ಅಲ್ಲೆಲ್ಲೋ ಸಿಕ್ಕ ಅಲ್ಪಸ್ವಲ್ಪದ ಸಂದಿಯಲ್ಲೇ ನೂಕಿಕೊಂಡು ನಿಂತೆವು. ಸುತ್ತಲಿನ ಬೆಟ್ಟಗಳು ನಮ್ಮ ಅಡಿಯಲ್ಲಿವೆ ಎನ್ನುವಷ್ಟು ಚಿಕ್ಕದಾಗಿ ಕಾಣಿಸುತ್ತಿದ್ದವು. ತೆಳುವಾದ ಮಂಜಿಗೆ ನೆಲ ಅಸ್ಪಷ್ಟವಾಗಿ ಕಾಣುತಿತ್ತು. ಅಕ್ಷರಶಃ ಅದು ದೊಡ್ಡ ಬೆಟ್ಟವೇ ಹೌದು. ಇನ್ನಷ್ಟು ಸಮಯ ವ್ಯಯಿಸಿ ನೋಡುವ ಅವಕಾಶ ಅಲ್ಲಿ ತುಂಬಾ ಕಮ್ಮಿ ಇತ್ತು, ಬಿಸಿಲಿತ್ತು. ಹೊರ ಬರುವಾಗ ಫಾರೆಸ್ಟ್ ಆಫೀಸರ್ ಗಳ ತರಬೇತಿ ಗುಂಪೊಂದು ಬಂದಿತ್ತು. ಎತ್ತಲಿಗೂ ನಮ್ಮ ಕಾಲುಗಳು ಕಿತ್ತಲಾಗದಂತ್ತೆ ತಡೆಹಿಡಿದುಕೊಂಡಿದ್ದಳು ಫಾರೆಸ್ಟ್ ಆಫೀಸರ್ ಚಲುವೆಯೊಬ್ಬಳು. ಹತ್ತಾರೂ ನಿಮಿಷ ಅಲ್ಲಿ ವ್ಯಯಿಸಿದೆವು, ಅದಕ್ಕಿಂತ ಜಾಸ್ತಿ ಸಮಯ ವ್ಯಯ ಮಾಡಲೂ ಯೋಗ್ಯವಾದ ಚೆಲುವೆಯೇ ಅವಳು. ನಮ್ಮ ಸಂಧರ್ಭ ಆ ಅಂದಕ್ಕೆ ಮಾರುಹೋಗುವಂತಿರಲಿಲ್ಲ. ಒಲ್ಲದ ಮನಸ್ಸಿನಿಂದ ಆ ಅಧ್ಯಾಯ ಅಲ್ಲಿಗೆ ಮುಗಿಸಿ ಪಾರ್ಕಿಂಗ್ ಸ್ಥಳಕ್ಕೆ ಬಂದೆವು. ಮುಂದೆ ಮತ್ತೇನು ಎಂದು ಚರ್ಚಿಸಿ ಮುಂದಿನ ನಿಲ್ದಾಣ ನೇರ ಕೂನೂರಿಗೆ ಎಂದು ನಿರ್ಧರಿಸಲಾಯಿತು.
ದೊಡ್ಡ ಬೆಟ್ಟ ಇಳಿದು ಬಲಕ್ಕೆ ಕೂನೂರಿನ ಕಡೆ ಹೊರಟೆವು. ತುಂಬಾ ಚಕ್ಕದಾದ ರಸ್ತೆ. ಕೆಲವೇ ದೂರ ಕ್ರಮಿಸುತ್ತಿದ್ದಂತ್ತೆ ಬಲಕ್ಕೊಂದು ಟಿ ಪಾರ್ಕ್ ಬೋರ್ಡ್ ಕಾಣಿಸಿತು. ಹೋಗುವ ಮನಸ್ಸಿರಲಿಲ್ಲ, ಆದರೂ ಊಟಿ ಇಂದ ಬೇಗ ಹೊರಬಂದೆವು ಎನ್ನುವುದಕ್ಕೆ ಒಳ ಹೊಕ್ಕೆವು, ಶುಲ್ಕ ಒಂದಿಷ್ಟು ಪಾವತಿಸಿ. ತೆಳುವಾಗಿ ಹಬ್ಬಿದ ಟೀ ತೋಟದಲ್ಲಿ ಅಲ್ಲಲ್ಲಿ ಗಾರ್ಡನ್ ಮಾಡಿದ್ದಾರೆ. ಕುಳಿತು ಮಾತನಾಡಲಿಕೆ ಬೆಂಚುಗಳು. ನೆಮ್ಮದಿಯ ಉಸಿರಾಟಕ್ಕೆ ಚೆಂದದ ವ್ಯವಸ್ಥೆ ಅದು ಎನ್ನುವಂತಿತ್ತು. ಮೇಲೊಂದು ಗಾರ್ಡನ್ ಮಧ್ಯದಲ್ಲಿ ಹೆಂಚಿನ ಚಪ್ಪರದ ಅಡಿಯಲ್ಲಿ ಕುರಲಿಕೆ ವ್ಯವಸ್ಥೆ ಮಾಡಿದ್ದರು, ಆಕರ್ಷಿಸುವಂತಿತ್ತು, ಅಂತೆಯೇ ಅಲ್ಲಿಯೇ ಹೋಗಿ ಕುಳಿತೆವು. ಸುತ್ತಲಿಗೂ ನೋಡಲಿಕೆ ಸಿಗುವ ಪರ್ವತಶ್ರೇಣಿಗಳು ಮನಸ್ಸನ್ನ ಹಗುರಗೊಳಿಸುತ್ತವೆ. ಅಲ್ಲಿಯೇ ನಮ್ಮಿಬ್ಬರದೊಂದು ಭೌದ್ದಿಕ ಚರ್ಚೆಯೊಂದು ಜರುಗಿತು. ಅಲ್ಲಿ ಹುಟ್ಟಿಕೊಂಡ ಟೀ ತೋಟಗಳಿಂದ ಹಿಡಿದು, ಬ್ರಿಟಿಷರ ಸ್ವತ್ತಾಗಿದ್ದು, ಇಲ್ಲಿಯ ಜನರ ಬದುಕು, ಅವರ ಕಷ್ಟಗಳು, ಅವರಿಗೇನು ಇಷ್ಟು, ನಮಗೆಷ್ಟು ಹಂತದವರೆಗೆ ಈ ವಾತಾವರಣ ಮುದ ನೀಡಬಲ್ಲದು ಎಂಬಂತ್ತೆ ಅನೇಕ ಚರ್ಚೆಗಳು ಅಲ್ಲಿಯ ಬೆಂಚುಕಲ್ಲಿನ ಮಧ್ಯೆ ಬಂದು ಹರಿದಾಡಿದವು. ಆ ಚರ್ಚೆಗಳ ಸಾಧಕ ಬಾಧಕ ನಮ್ಮಲ್ಲಿಯೇ ಇರಲಿ ಬಿಡಿ. ಅಲ್ಲಿಂದ ಹೊರಡುವ ಮುನ್ನ ತೆಳುವಾದ ಒಂದು ಗ್ರೀನ್ ಟೀ ಹಿರಿ ಮುಂದೆ ಸಾಗಿದೆವು.
ಬಿಸಿಲು ಚುಮುಗುಡುತಿತ್ತು. ಎಡಕ್ಕೆ ಕಾಣಸಿಗುವ ರಮಣೀಯ ಪರ್ವತಶ್ರೇಣಿಗಳ ಸೌಂದರ್ಯ. ಪ್ರತಿ ಹೆಜ್ಜೆಯೂ ಒಂದು ವಿವ್ ಪಾಯಿಂಟ್ ಅನ್ನುವ ತರಹ ಸಾಲು ಸಾಲಾಗಿ ಹಬ್ಬಿದೆ ಪ್ರಕೃತಿಯ ಸೌಂದರ್ಯ. ಹಾಗೊಂದೇರಡು ತಿರುವುಗಳ ದಾಟುತ್ತಿದ್ದಂತ್ತೆ ಎದುರಿಗೆ ಸಿಕ್ಕ ಬೆಟ್ಟಗಳಲ್ಲಿ ಬೇರೂರಿದ ಟೀ ತೋಟಗಳ ಚೆಲುವು ನಮ್ಮನ್ನ ಏಕಾಏಕಿ ಕಟ್ಟಿ ಹಾಕಿತು. ನಾವೂ ಒಪ್ಪಲೇಬೇಕಾಯಿತು. ಬೈಕ್ ಎಡಕ್ಕೆ ನಿಲ್ಲಿಸಿ, ಕೆಳಗಿಳಿದು ಹೆಲ್ಮೆಟ್ ತೆಗೆದು ಆ ಸೌಂದರ್ಯವನ್ನ ಕಣ್ಣುಗಳಲೊಮ್ಮೆ ಸೆರೆ ಹಿಡಿದು, ಮನಸ್ಸಿಗೂ ಉಣಬಡಿಸಿಯಾಯಿತು. ಸಾಕ್ಷ್ಯಕ್ಕೆ ಎಂಬಂತ್ತೆ ಫೋನಿನ್ನಲ್ಲಿ ನಾಲ್ಕಾರು ಚಿತ್ರಗಳನ್ನ ಕ್ಲಿಕ್ಕಿಸಿಕೊಂಡೆವು. ಅದೆಷ್ಟೇ ಬಾರಿ ಸಿದ್ಲಿಂಗನ ಚಿತ್ರಗಳನ್ನ ತೆಗದರು ಅವನಿಗೆ ತೃಪ್ತಿಯೇ ಇಲ್ಲ. ನನ್ನ ಫೋಟೋಗ್ರಾಫಿ ಅಲ್ಲಿ ಶೂನ್ಯಕ್ಕೆ ಸಮ. ಅದಕ್ಕೆ ಪೈಪೋಟಿ ಕೊಟ್ಟಂತ್ತೆ ನನ್ನ ಫೋಟೋ ಅದ್ಹೇಗೆ ಕ್ಲಿಕ್ಕಿಸಿದರೂ ನನಗದು ತೃಪಿ. ತೃಪ್ತಿಗೊಳ್ಳದಿದ್ದಲ್ಲಿ ಒದ್ದು ತೃಪ್ತಿಗೊಳಿಸುವ ಮನೋ ಅಧಿಕಾರಶಾಹಿ ಸಿದ್ಲಿಂಗ್. ಹೀಗಿರುವಾಗ ಮುಖ ತಿರುಗಿಸಿಕೊಂಡು ಬೇಜಾರಾಗಿದ್ದ ಬೈಕಿನವೂ ಒಂದೆರಡು ಫೋಟೋ ಕ್ಲಿಕ್ಕಿಸಿ ಅದಕ್ಕೂ ಸಂತೋಷಗೊಳಿಸಿದೆವು. ಮತ್ತೆ ಪಯಣ ಶುರು. ತಿರುವುಗಳ ಭರಪೂರ ಔತಣ. ಬೈಕು ಎಡಕ್ಕೊಮ್ಮೆ ಬಲಕ್ಕೊಮ್ಮೆ ಎಂಬಂತ್ತೆ ನೆಲಕ್ಕಪ್ಪಳಿಸಿ ಏಳುತ್ತಿತ್ತು. ಸುತ್ತಲಿಗೂ ಸ್ವರ್ಗದೊಪಾದಿಯಲ್ಲಿ ಹಬ್ಬಿದ ಟೀ ತೋಟಗಳು. ಊಟಿಯ ಕೆಳಗಿನ ಹಂತದಲ್ಲಿ ಕೂನೂರಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸಿತ್ತು. ಸಂಪೂರ್ಣ ಇಳಿಜಾರು. "ನಾನು ಜರ ನಡಸ್ತೀನಿ, ನಿಲ್ಸು" ಸಿದ್ಲಿಂಗನ ಏಕಾಏಕಿ ತಾಕೀತು. ಸರಿ ಎಂದು ಹಿಂದಕ್ಕೆ ಸರಿದು ಮುಂದಿನ ಜವಾಬ್ದಾರಿ ಅವನಿಗೆ ಕೊಟ್ಟೆ. ನಾಲ್ಕು ತಿರುವುಗಳು ದಾಟುತ್ತಿದ್ದಂತ್ತೆ ತಿರಾ ಕಿರುದಾದ ರಸ್ತೆ. ಹೈರ್ ಪಿನ್ ಅಂತಹ ತಿರುವುಗಳು ಬರುತ್ತಿದ್ದಂತ್ತೆ ಸಿದ್ಲಿಂಗನ ತೊಡೆಗಳಲ್ಲಿ ನಡುಕ ಹುಟ್ಟಿತು. ಯಾವುದೇ ರೀತಿಯ ಅಲಕ್ಷ್ಯಕ್ಕೆ ಟೀ ಎಸ್ಟೇಟಿನ ಪಾತಾಳಕ್ಕೆ ತಲುಪುತ್ತೇವೆ, ಅದರ ಸ್ಪಷ್ಟ ಅರಿವಾಗಿ ಬೈಕ್ ಬದಿಗೆ ನಿಲ್ಲಿಸಿ ನನ್ನ ಕೈಗಿಟ್ಟ ಬೈಕು.
ನನ್ನದು ಮತ್ತದೇ ತಿರುವಗಲ್ಲಿನ ಮಜವಾದ ಮಜಲು ಶುರುವಾಯ್ತು. ಆಗಲೊಮ್ಮೆ ಇಗಲೊಮ್ಮೆ ಎಂಬಂತ್ತೆ ಸಿಗುವ ಅನಾಮಧೇಯ ಚಿಕ್ಕ ಪುಟ್ಟ ಹಳ್ಳಿಗಳು. ಕೂನೂರಿನುದ್ದಕ್ಕೂ ರಸ್ತೆ ಹೀಗೆಯೇ ಇಳಿಜಾರಾಗಿಯೇ ಇದೆ ಎಂಬ ಸತ್ಯಂಶ ಅರಿವಾಗುತ್ತಿದ್ದಂತ್ತೆ ಮತ್ತೆ ಬೈಕ್ ಇಗ್ನಿಷನ್ ಆಫ್ ಮಾಡಿದೆ. ಇಳಿಜಾರಿನ ತಿರುವುಗಳಲ್ಲಿ ಇಂಜಿನ್ ಬ್ರೇಕಿಂಗ್ ತುಂಬಾ ಮುಖ್ಯ. ವೇಗ ಕಮ್ಮಿ ಇದ್ದಿದ್ದರಿಂದ ಇಗ್ನಿಷನ್ ಆಫ್ ಮಾಡುವ ರಿಸ್ಕ್ ನಾವು ತಗೊಂಡೆವು. ಕ್ರಮಿಸಿದ್ದು ನಾಲ್ಕಾರು ಕಿಮೀ, ಮಧ್ಯದಲ್ಲೆಲ್ಲೋ ಒಂದು ರಿಕ್ಷಾವನ್ನ ಇಗ್ನಿಷನ್ ಆಫ್ ಅಲ್ಲಿಟ್ಟುಕೊಂಡೇ ಓವರ್ ಟೆಕ್ ಮಾಡಿದ್ದು ನಿಜಕ್ಕೂ ಬರೆದಿಡಬೇಕಾದ ಸಹಾಸಗಾತೆಯೇ ಹೌದು. ಇನ್ನಷ್ಟು ತಿರುವುಗಳನ್ನ ದಾಟುತ್ತಿದ್ದಂತ್ತೆ ವೇಗ ಕ್ರಮಿಸುವುದು ಮುಖ್ಯವೆನಿಸಿ ಬೈಕ್ ಸ್ಟಾರ್ಟ್ ಮಾಡಿ ಮತ್ತೆ ತಿರುವುಗಳಲ್ಲಿ ಮಲಾಗುತ್ತ ಏಳುತ್ತ ಹೊರಟೆವು. ಹೋಗು ಹೋಗುತ್ತಿದ್ದಂತ್ತೆ ಟ್ರಾಫಿಕ್ ಕಾಣತೊಡಗಿತು, ಅಲ್ಲಿಗೆ ಕೂನೂರು ಬಂದಾಯಿತು ಎಂಬುದು ಅರಿವಿಗೆ ಬಂತು. ಮಧ್ಯಾಹ್ನದ ಸಮಯ 2 ಗಂಟೆಯ ಮೇಲಾಗಿತ್ತು. ಕೂನೂರಲ್ಲಿ ಭೇಟಿ ಕೊಡಬೇಕಾದ ಯಾವ ಸ್ಥಗಳ ಮಾಹಿತಿಯು ನಮಗಿಲ್ಲ, ಅಲ್ಲಿ ಹೋದಮೇಲೆಯೇ ಅಲ್ಲವೇ ನಮ್ಮ ಲೆಕ್ಕಾಚಾರ ಶುರುವಾಗುವುದು. ಎಡಕ್ಕೆ ಒಂದೆರಡು ತಿರುವು ಇಳಿಯುತ್ತಿದ್ದಂತ್ತೆ ಕೂನೂರು ಸ್ವಾಗತಿಸಿಯೇ ಬಿಟ್ಟಿತು.
ಅಷ್ಟೇನು ದೊಡ್ಡದಾದ ನಗರ ಅನ್ನುವಂತೆನಿಲ್ಲ. ಸುತ್ತಲೂ ಎರಡು ಮೂರು ಕಿಮೀ ಹಬ್ಬಿರುವ ಚಿಕ್ಕ ನಗರ. ಚಿಕ್ಕದೊಂದು ರಸ್ತೆಯಿಂದ ಹೋಗು ಹೋಗುತ್ತಲೇ ಎಡಕ್ಕೆ ಕಣ್ಣಿಗೆ ಬಿದ್ದದ್ದು ಕೂನೂರಿನ ರೈಲ್ವೆ ನಿಲ್ದಾಣ. ಊಟಿಯಲ್ಲಿ ನೋಡಿಯೇ ಆಗಿದೆ ಮತ್ತೇನಿದೆ ಇಲ್ಲಿ ಎನ್ನುವಂತಿರಲಿಲ್ಲ. ಅಲ್ಲಿ ನಿಂತದ್ದು ಹಬೆ ಇಂಜಿನಿನ ರೈಲು. ನಮ್ಮ ಹರುಷಕ್ಕೆ ಪಾರವೇ ಇಲ್ಲ. ರೈಲು ಶುರುವಾಗಿದೆ, ಶಬ್ದ ಮಾಡುತ್ತಿದೆ, ಇದನ್ನ ನೋಡುವುದು ಯಾವುದೇ ಕಾರಣಕ್ಕೂ ಬಿಡುವ ಪ್ರಮೇಯವೇ ಇಲ್ಲ. ಎದ್ದುಬಿದ್ದೇನೋ ಎಂಬಂತ್ತೆ ರೈಲ್ವೆ ನಿಲ್ದಾಣದ ಪಾರ್ಕಿನಲ್ಲಿ ಬೈಕನ್ನ ಎರಡು ಕಾರುಗಳ ಮಧ್ಯೆ ನಿಲ್ಲಿಸಿಯಾಯ್ತು. ಪಾರ್ಕಿಂಗ್ ಇಂಚಾರ್ಜ್ ಬೊಬ್ಬೆ ಹೊಡೆಯುತ್ತಿದ್ದ. ಬೈಕ್ ಪಾರ್ಕಿಗ್ ಬೇರೆ ಕಡೆ, ಇದು ಕೇವಲ ಕಾರಿನದು ಎಂಬಂತ್ತೆಲ್ಲ. ಅವನ ಮಾತು ಕೇಳುವರಾರು? ರೈಲು ಹೊರಡಲು ಸಿದ್ಧವಾಗಿ, ಇಂತಹ ಚರ್ಚೆಗೆ ಕಿವಿಗೋಡುವ ಸಮಯ ನಮಗಿಲ್ಲ. ಪಾರ್ಕಿಂಗ್ ಶುಲ್ಕವೂ ಪಾವತಿ ಮಾಡದೆ ರೈಲ್ವೆ ನಿಲ್ದಾಣದ ಒಳ ಹೊಕ್ಕೆವು. ಆಟದ ಸಾಮನೊಂದು ನೋಡಿದಂತಾಯ್ತು. ಹೃದಯ ತುಂಬಾ ಹರ್ಷಿತಗೊಂಡಿದೆ. ಚಿಕ್ಕವನಿದ್ದಾಗಿನಿಂದಲೂ ಹಬೆಯ ಇಂಜಿನ ನೋಡುವ ನನ್ನ ಇಚ್ಛೆ ಅಲ್ಲಿ ಸಾಕಾರಗೊಂಡಿದೆ. ಎಂಟ್ಹತ್ತು ಬೋಗಿಗಳನ್ನ ಲಗತ್ತಿಸಿಕೊಂಡು ಸ್ಟೀಮ್ ಇಂಜಿನ ಗೋಗೊರೆಯುತ್ತ ನಿಂತಿದೆ. ಕರ್ಮಚಾರಿಗಳು ಹೊರಡಲು ಎಲ್ಲಾ ಸಿದ್ಧತೆಗಳನ್ನ ರೈಲಿಗೆ ಮಾಡುತ್ತಿದ್ದಾರೆ. ನಾನೊಮ್ಮೆ ಅತ್ತಲಿಂದಿತ್ತ ಎಂಬಂತ್ತೆ ನಾಲ್ಕಾರು ಬಾರಿ ತಿರುಗಾಡಿ ಕಣ್ಣು ತುಂಬಿಕೊಳ್ಳುತ್ತಿದ್ದೇನೆ, ರೈಲಿನ ಎಲ್ಲಾ ಭಾಗಗಳು ಕಾಣುವಂತ್ತೆ ಫೋಟೋ ಕ್ಲಿಕ್ಕಿಸುತ್ತಿದ್ದೇನೆ, ವಿಡಿಯೋ ಮಾಡುತ್ತಿದ್ದೇನೆ. ಅದರ ಇಂಜಿನಿನ ಮುಂಬಾಗದಲೊಮ್ಮೆ, ಮಧ್ಯದಲ್ಲಿ, ಕೊನೆಯಲ್ಲಿ ಎಂಬಂತ್ತೆ ಎಲ್ಲಾ ಕಡೆ ನಿಂತು ಪೊಸು ಕೊಟ್ಟು ಸಿದ್ಲಿಂಗನಿಗೆ ಫೋಟೋ ಕ್ಲಿಕ್ಕಿಸಲು ಹೇಳಿದೆ. ನಾವು ಅಲ್ಲಿಗೆ ಬಂದ ಹತ್ತಾರು ನಿಮಿಷದಲ್ಲೇ ರೈಲು ಹೊರಡಲು ಶುರುವಾಯ್ತು. ಉದ್ದನೆಯ ಟ್ಯಾಂಕ್ ಅಲ್ಲಿ ಕುದಿಯುತ್ತಿರುವ ನೀರು ಹಬೆ ಸಿದ್ಧಪಡಿಸುತ್ತಿದೆ. ಹಬೆ ಅದೆಷ್ಟರ ಮಟ್ಟಿಗೆ ತಯಾರಾಗಿರಬೇಕು ಅಂತಹ ರೈಲನ್ನ ತಳ್ಳುವಷ್ಟು. ಪಿಸ್ಟಿನ್ ಇಂದ ಹೊರಬಂದ ಕಪ್ಲಿಂಗ್ ರಾಡ್ ರೈಲಿನ ಗಾಲಿಯೊಂದಿಗೆ ತಳುಕುಹಾಕುತ್ತಿದ್ದರೆ ರೈಲು ಮುಂದಕ್ಕೆ ಕ್ರಮಿಸಲು ಶುರುವಾಗುತ್ತದೆ. ಪೈಲೆಟ್ ನ ಕಾಕ್ ಪಿಟ್ ಅಲ್ಲಿನ ಚಿಕ್ಕ ಚಿಕ್ಕ ಮೀಟರ್ ಮತ್ತು ಇಂಡಿಕೆಟರ್ ಗಳು, ಅಲ್ಲಲ್ಲಿ ನೋಡಲಿಕೆ ಸಿಗುವ ಹತ್ತಾರು ವಾಲ್ವ್ ಗಳು ಅದೇನನ್ನ ನಿಯಂತ್ರಿಸುತ್ತವೆ ಅನ್ನುವ ಸ್ವಲ್ಪ ಅರಿವೂ ನಮಗಿಲ್ಲ. ಮೆಕ್ಯಾನಿಕಲ್ ಎಂಜಿನಿಯರ್ ಗೆ ಸ್ಟೀಮ್ ಇಂಜಿನ ಮೇಲೆ ಎಲ್ಲಿಲ್ಲದ ಪ್ರೀತಿ, ನಮ್ಮ ಕೂಸು ಎಂಬ ಹಿರಿಮೆ, ಹಿಗ್ಗು. ಒಮ್ಮೆ ಅಪ್ಪಿ ಬಿಡಲೇ ಎಂಬಷ್ಟು ಮುದ್ದಾಗಿ ಕಾಣಿಸುತ್ತದೆ ನಮಗೆ. ರೈಲು ಇನ್ನೇನು ಹೊರಡಲು ಸಿದ್ಧವಾಯ್ತು ಎನ್ನುವಲ್ಲೇ ಕಾರಂಜಿಯಾಗಿ ಇಂಜಿನಿನಿಂದ ನೀರು ಚಿಮ್ಮಿತು. ಕ್ಷಣಕ್ಕೆ ಗಾಬರಿಯಾಯ್ತು, ಬಿಸಿನೀರು ಹೀಗೆ ಚಿಮ್ಮಿದರೆ ಪ್ಲಾಟ್ ಫಾರ್ಮ್ ಅಲ್ಲಿ ಇರುವ ಜನಗಳ ಚರ್ಮದ ಗತಿ ಏನು? ಆದರೆ ಅದು ಬಿಸಿನಿರಲಿಲ್ಲ. ಚಕ್ರಗಳ ಸುತ್ತಲೆಲ್ಲ ಹಬೆ ಹೊರ ಬರುತ್ತಿದೆ. ಒಮ್ಮೆ ರೈಲು ಹಳೆಯ ನಾಸ್ಟಾಲಜಿಕ್ ಹಾರ್ನ್ ಹೊಡೆಯಿತು, ಅದೇ ಹಬೆಯನ್ನ ಬಳಸಿ. ಕಪ್ಲಿಂಗ್ ರಾಡ್ ಗಳು ಮೇಲೊಮ್ಮೆ ಕೆಳಗೊಮ್ಮೆ ತಿರುಗುತ್ತಿವೆ, ರೈಲು ಮುಂದಕ್ಕೆ ಸಾಗುತ್ತಿದೆ. ನೋಡು ನೋಡುತ್ತಿದ್ದಂತ್ತೆ ಮುಂದಿನ ಬೆಟ್ಟಗಳಲ್ಲಿ ಮಾಯವಾಯಿತು, ನಮ್ಮ ಮನಸ್ಸಿಗೆ ಹಿತವಾದ ಒಂದು ಬಾಯ್ ಹೇಳಿ. ಈ ಔತಣಕ್ಕೆ ಮನಸ್ಸು ಸಂಪೂರ್ಣವಾಗಿ ತುಂಬಿತ್ತು. ಆದರೆ ಹೊಟ್ಟೆ? ಹಸಿವಾಗಿದೆ, ಸಮಯ ಮಧ್ಯಾಹ್ನ ಮುಗಿಸಿ ಸಂಜೆಯತ್ತ ಹೊರಟಿದೆ. ಕಂಡಲ್ಲಿನ ಸಸ್ಯಾಹಾರಿ ಹೋಟೆಲ್ಲಲ್ಲಿ ಊಟ ಮುಗಿಸಬೇಕು ಅಂತ ಹೊರ ನಡೆದ್ವಿ. ಪಾರ್ಕಿಂಗ್ ಇಂಚಾರ್ಜ್ ಬಿಹಾರದವನಾಗಿಯೂ ಗಡದ್ದಾಗಿ ತಮಿಳು ಮಾತನಾಡುತ್ತಿದ್ದ. ಮಾತನಾಡದೆ ಹೋದಲ್ಲಿ ಅವನು ತಮಿಳುನಾಡಿನಲ್ಲಿ ಬದುಕಬಲ್ಲನೆ? ಸುತ್ತಲಿನ ಸೆಲ್ವಂಗಳು ಬಿಡುವರೇ?. ಅವನಿಗೊಮ್ಮೆ ಹಿಂದಿಯಲ್ಲಿ ಸಮಜಾಯಿಸಿ ಶುಲ್ಕ ಪಾವತಿ ಮಾಡಿ ಹೊರ ನಡೆದೆವು. ಹೊರ ಬರುತ್ತಲೇ ಕೆಲವೇ ದೂರದಲ್ಲಿ ಬಲಕ್ಕೆ ಕಣ್ಣಿಗೆ ಬಿದ್ದದ್ದು ಶ್ರೀ ರಾಮಚಂದ್ರ ಲಂಚ್ ಹೋಮ್, ಪಕ್ಕದಲ್ಲಿ ವೆಜ್ ಅಂತ ಬೋಲ್ಡ್ ಆಗಿ ಬರೆದಿದೆ, ನಮಗಿನ್ನೆನು ಬೇಕು? ಬೈಕ್ ಹೋಟೆಲ್ಲಿನೆದುರೆ ಪಾರ್ಕ್ ಮಾಡಿ ಒಳಗೆ ಹೋದೆವು.
ಚಿಕ್ಕದಾದ ಹೋಟೆಲ್ ಎನಿಸುತ್ತದೆ ಮೊದಲಿಗೆ ಒಳಹೋದಾಗ. ಕೆಳಗಡೆ ತಿಂಡಿ, ಮೇಲ್ಗಡೆ ಊಟ. ಸಿದ್ಲಿಂಗ್ ಎರಡು ಫುಲ್ ಮೀಲ್ಸ್ ತಗೆದು ಕೊಂಡಿದ್ದ. ಹಳೆಯ ಹೋಟೆಲು, ಒಳಗಡೆ ಸಂಪೂರ್ಣ ಕಟ್ಟಿಗೆಯ ಕಟ್ಟಡ. ಕಟ್ಟಿಗೆಯ ಮೆಟ್ಟಿಲು ಹತ್ತಿ ಮೇಲೆ ಹೋದೆವು. ನಾಲ್ಕಾರು ಉದ್ದನೆಯ ಟೇಬಲ್ ಗಳಿಂದ ಕೂಡಿತ್ತು ಹೋಟೆಲ್. ತಲೆಯೇ ಮೇಲೆಯೇ ಸೂರಿದೆ ಎಂಬಷ್ಟು ಕಮ್ಮಿ ಎತ್ತರದ ಮಾಳಿಗೆ. ಮುಖಕ್ಕೆ ನೀರೆರಚಿ ಕೈ ತೊಳೆದುಕೊಂಡು ಟೇಬಲ್ ಒಂದರ ಸೀಟು ನಮ್ಮದಾಗಿಸಿಕೊಂಡ್ವಿ. ಊಟ ಬಡಿಸುವರು ವಯಸ್ಕರರು, ತುಂಬಾ ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಶುದ್ಧ ಬ್ರಾಹ್ಮಣರ ಹೋಟೆಲ್ಲು. ಹಿರಿಜಿವವೊಂದು ಬಂದು ತೆಳುವಾಗಿ ಬಾಳೆ ಎಲೆ ಹಾಸಿ ಹೋದ. ಬಾಳೆ ಎಲೆಯ ದಂಟನ್ನ ತೆಳುವಾಗಿ ಅಂಗೈಯಿಂದ ಗುದ್ದಿ ಎರಡು ಕಡೆ ಎಲೆ ಸಮತಟ್ಟಾವಾಗಿಸಿ, ಅಂಗೈಯಿಂದ ನಾಲ್ಕಾರು ಹನಿ ನೀರು ಚಿಮುಕಿಸಿ ತೆಳುವಾಗಿ ಸವರಿ ಎಲೆ ಸಿದ್ದ ಮಾಡಿಕೊಂಡೆವು. ಕಣ್ಣು ಸುತ್ತಲೊಮ್ಮೆ ನೋಡಿತು, ಭರ್ಜರಿಯಾಗಿಯೇ ಬಾರುಸುತ್ತಿದ್ದಾರೆ ಆಸುಪಾಸಿನವರು. ಹೆಡ್ಡ ಸಿದ್ಲಿಂಗ್ ಬೇರೆ ಫುಲ್ ಮೀಲ್ಸ್ ತೆಗೂಡುಕೊಂಡಿದ್ದಾನೆ. ವೆರಾಯಿಟಿ ಔತಣ ನಮ್ಮದಾಗಲಿಲ್ಲವೇ?. ಹರೆಯದ ಮಾಣಿಯೋರ್ವ ಬಂದು ಮೊದಲಿಗೆ ತರಹೇವಾರಿ ಎರಡು ಹೆಸರು ಗೊತ್ತಿರದ ಗೊಜ್ಜು ಬಡಿಸಿದ, ಆಮೇಲೆ ಟೊಮ್ಯಾಟೋ ಗೊಜ್ಜು. ಪಾಯಸದೊಂದು ಬಟ್ಟಲು, ಮೊಸರಿನದೊಂದು ಮತ್ತು ಗ್ಲಾಸ್ ಭರ್ತಿ ಮಜ್ಜಿಗೆ. ಮೂಲೆಯಲ್ಲೊಂದೇರಡು ಎಳೆ ನಿಂಬೆ ಹಣ್ಣಿನ ಉಪ್ಪಿನಕಾಯಿ, ಒಂದು ದೊಡ್ಡದಾದ ತೆಳುವಾದ ಹಪ್ಪಳ. ಹೊಟ್ಟೆಯಲ್ಲಿ ಹಸಿವು ತಾಂಡವವಾಡುತ್ತಿದೆ ಎನ್ನುವಾಗಲೇ ಇನ್ನೋರ್ವ ಮಾಣಿ ಎಡಗೈಯಲ್ಲಿ ಅನ್ನದ ಬುಟ್ಟಿಯೊಂದು ಹಿಡಿದು ನಮ್ಮತ್ತ ನಗುತ್ತ ಬಂದ. ಬಲಗೈಯಿಂದ ತೆಳುವಾಗಿ ಅನ್ನವನ್ನ ನಮ್ಮ ಎಲೆಯ ಮೇಲೆ ಹಾಸಿದ. ಬಿಸಿ ಬಿಸಿಯಾದ ಅನ್ನ. ಪಕ್ಕದ ಟೇಬಲ್ ಮೇಲಿದ್ದ ಸಂಬಾರಿನ ಒಂದು ಬಕೆಟ್ ನಮ್ಮೆದುರಿಗಿಟ್ಟ. ಅನ್ನದ ಮೇಲೆ ಸಾಂಬಾರ ಪೇಲವವಾಗಿ ಹಾಸಿ, ಬೆರಳುಗಳಿಗೆ ಉಪ್ಪಿನಕಾಯಿಯೊಮ್ಮೆ ಅಂಟಿಸಿ ಮೊದಲೊಂದು ತುತ್ತು ತಿನ್ನುತ್ತಿದ್ದಂತ್ತೆ ರುಚಿಯ ತೃಪ್ತಿ ಸ್ವರ್ಗಧಾನುಭೂತಿ ಕೊಟ್ಟಿತು. ನೋಡು ನೋಡುತ್ತಿದ್ದಂತ್ತೆ ಹದವಾಗಿ ಹಾಸಿದ್ದ ಅನ್ನ ಎಲೆಯಿಂದ ಖಾಲಿಯಾಗಿತ್ತು, ಮತ್ತೆ ಇದೆಯೇ ಅಥವಾ ಇಷ್ಟಕ್ಕೆ ಖಾಲಿಯೇ ಎಂಬ ನನ್ನ ಪ್ರಶ್ನಾರ್ಥಕ ಮುಖಭಾವಕ್ಕೆ ಸಿದ್ಲಿಂಗ್ ನಗುತ್ತಿದ್ದ. ಉತ್ತರ ಕೊಡುತ್ತಿಲ್ಲ. ಪಕ್ಕದಲ್ಲಿರುವ ಮಾಹಾಶಯರೆಡೆ ನೋಡಿದೆ. ಉಂಡ ಎಲೆಯಲ್ಲೇ ಅನ್ನ ಬಡಿಸಿಕೊಳ್ಳುತ್ತಿದ್ದರು. ಅಣ್ಣಾ, ರೈಸ್ ಅಂತ ಮಾಣಿಗೆ ಕರೆದೆ. ಮತ್ತೊಮ್ಮೆ ಅನ್ನ ಎಲೆಯ ಮೇಲೆ ಹಾಸಿದ, ಟೊಮ್ಯಾಟೋ ಗೊಜ್ಜು ತುಂಬಾ ಚೆನ್ನಾಗಿತ್ತು, ಅದನ್ನೆರಡು ಬಾರಿ ಖಾಲಿ ಮಾಡಿದೆ. ಎಲ್ಲಿಲ್ಲದ ಹಸಿವಿಗೆ 2 ಬಾರಿ ಎಲೆ ಭರ್ತಿ ಮಾಡಿ ತಿಂದೆ. ಸಿದ್ಲಿಂಗ್ ಇನ್ನೂ ಮೊದಲ ಹಂತದಲ್ಲೇ ಇದ್ದಾನೆ. ಅವನದು ಎರಡನೇ ಹಂತಕ್ಕೆ ನನ್ನದು ಮೂರನೆಯದು, ಹೆಸರಿಗೆ ಮಾತ್ರವೆಂಬಂತ್ತೆ ಬಡಿಸಿಕೊಂಡು ಮಜ್ಜಿಗೆಯೊಂದಿಗೆ ಮತ್ತು ಮೊಸರಿನೊಂದಿಗೆ 3ನೇ ಹಂತ ಮುಗಿಸಿ, ಬೆರಳುಗಳಿಗೆ ಉಪ್ಪಿನಕಾಯಿ ಅಂಟಿಸಿ ಹೀರತೊಡಗಿದೆ. ಆಮೇಲೆ ಗೊತ್ತಾಗಿದ್ದು, ಅಲ್ಲಿಯ ಫುಲ್ ಮೀಲ್ಸ್ ಎಲ್ಲದರಲ್ಲೂ ಅನ್ಲಿಮಿಟೆಡ್. ಹಾಗಾಗಿ ಮಜ್ಜಿಗೆಯ ಗ್ಲಾಸ್ ಇನ್ನೊಮ್ಮೆ ಭರ್ತಿ ಮಾಡಿಸಿಕೊಂಡು ಕುಡಿದೆ. ಪಾಯಸದ ಬಟ್ಟಲು ಕಾಯುತ್ತಿತ್ತು. ಅದಕ್ಕೂ ಮುಕ್ತಿ ತೋರಿದೆ. ಹೊಟ್ಟೆ ಶಾಂತಸಾಗರವಾಗಿತ್ತು. ಅನ್ನದಾತೋ ಸುಖಿಭವಃ. ಕೈ ತೊಳೆದುಕೊಂಡು ಬರಲೂ ಉದಾಸೀನ. ಮೆಲ್ಲಗೆ ಬಸುರಿ ಹೆಂಗಸಿನಂತ್ತೆ ಎದ್ದು ಕೈ ತೊಳೆದು ಬಂದು ಕೂತೆ. ಸಿದ್ಲಿಂಗ್ ಇನ್ನೂ ಅನ್ನ ಕಲೆಸುತ್ತಲೇ ಇದ್ದ. ಬ್ಲಡಿ ಲೇಟ್ ಲತೀಫ್. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಹೋಟೆಲಿನ ಒಳಗೆ ಕಣ್ಣಾಡಿಸಿದೆ. ತುಂಬಾ ಹಳೆಯ ಹೋಟೆಲು ಎಂದು ಕಾಣಿಸುತ್ತದೆ. ಒಳಗಡೆ ಎಲ್ಲವೂ ಕಟ್ಟಿಗೆಯ ಕಟ್ಟಡವೆ. ಸುಂದರವಾದ ಹೋಟೆಲು, ಅಷ್ಟೇ ಅದ್ಭುತವಾದ ಅಡುಗೆ. ಅಬ್ಬಾ...! ಆ ರುಚಿ ಸವಿದ ನಾವೇ ಧನ್ಯರು ಎಂಬ ಭಾವ ನಮ್ಮದಾಗಿತ್ತು. ಭರ್ಜರಿ ಭೋಜನಕ್ಕೆ ಕಣ್ಣು ಮುಚ್ಚಿಕೊಳ್ಳುತ್ತಿದ್ದವು, ಹಾಸಿಗೆಯೊಂದಿದ್ದರೆ ಇದೇ ಸ್ವರ್ಗವೆಂದು ಎಲ್ಲಾ ರೀತಿಯಲ್ಲಿ ಪ್ರತಿಪಾದಿಸುತ್ತಿದ್ದೆ, ನಿದ್ರೆಯಲ್ಲಿ. ಇತ್ತ ಸಿದ್ಲಿಂಗನೂ ಕೈ ತೊಳೆದು ಬಂದ. ಮೆಲ್ಲಗೆ ಕೆಳಗೆ ನಡೆದೆವು. ಬರುವಾಗ ಕೌಂಟರ್ ಅಲ್ಲಿ ಸೆಲ್ವಂ ಅಂಕಲ್ ಇದ್ದಿದ್ದರು, ಬರುವಾಗ ಸೆಲ್ವಿ ಆಂಟಿ. "ಸಾಪಡ್ ನಲ್ಲ ಇರ್ಕ ಆಂಟಿ" ಅಂತ ಹೇಳಿ ಧನ್ಯವಾದ ಅರ್ಪಿಸಿದೆವು. ನಗು ಮುಖದಿಂದ ಎರಡು ಕೈ ಮುಗಿದು ಬಿಳ್ಕೊಟ್ಟರು.
ಹೊರಬಂದು ಸಿದ್ಲಿಂಗ್ ಗೂಗಲ್ ಮ್ಯಾಪ್ ಅಲ್ಲಿ ವಿಹರಿಸಿ ಕೂನೂರಿನಲ್ಲಿ ಭೇಟಿ ಕೊಡಬೇಕಾದ ಒಂದೆರಡು ಸ್ಥಗಳ ಮಾಹಿತಿ ಕಲೆಹಾಕಿದ. ಲಾಂಬ್ಸ್ ರಾಕ್ ವಿವ್ ಪಾಯಿಂಟ್ ಅಂತ ಮ್ಯಾಪ್ ಅಲ್ಲಿ ನಮೂದಿಸಿ ಅತ್ತಕಡೆ ಹೊರಟ್ವಿ. ಪಕ್ಕದಲ್ಲೇ ಸಿಕ್ಕ ಪೆಟ್ರೋಲ್ ಬಂಕ್ ಅಲ್ಲಿ ಪೆಟ್ರೋಲ್ ಸುರಿಸಿಕೊಂಡಾಯ್ತು. ವಿವ್ ಪಾಯಿಂಟ್ ನ ಕೊನೆಯ ಸಮಯ ಸಮೀಪಿಸಿದ್ದರಿಂದ ವೇಗವಾಗಿಯೇ ಹೊರಟ್ವಿ. ದಟ್ಟ ಕಾಡೊಂದು ಪಾರುಮಾಡಿ ಹೋಗಬೇಕು. ಮತ್ತದೇ ಕಿರುದಾದ ರಸ್ತೆಗಳು, ತಿರುವುಗಳು. ಕೆಲವೇ ನಿಮಿಷದಲ್ಲಿ ಅಲ್ಲಿಗೆ ಹೋಗುವಷ್ಟರಲ್ಲಿ ಕ್ಲೋಸ್ ಮಾಡಲಾಗಿತ್ತು ಟಿಕೆಟ್ ಕೌಂಟರ್. ಎರಡು ಮೂರು ನಿಮಿಷ ಮೊದಲು ಬಂದರು ಬಿಡಲು ಚಕಾರವೆತ್ತುತ್ತಿದ್ದ ಇಂಚಾರ್ಜ್. ಬರುವಾಗ ನಮಗೇ ಕಾಣಲಿಕೆ ಸಿಕ್ಕ ಬೃಹತ್ ಪರ್ವತಶ್ರೇಣಿಗಳು ಈ ವಿವ್ ಪಾಯಿಂಟ್ ನೋಡುವ ಹಂಬಲ ಹೆಚ್ಚಿಸಿದ್ದವು. ಆದರಿಲ್ಲಿ ಒಳಗೆ ಹೋಗಲು ಬಿಡುತ್ತಿಲ್ಲ. ಅದೆಷ್ಟೇ ವಿನಂತಿಸಿದರೂ ಕ್ಯಾರೆ ಅನ್ನುತ್ತಿಲ್ಲ. ಇಂಚಾರ್ಜ್ ನ ಮ್ಯಾನೇಜರ್ ಕಣ್ಮರೆಯಾಗುತ್ತಿದ್ದ ಹಾಗೆ ಅಲ್ಲಿರುವ ವ್ಯಾಪಾರಿ ಹೆಂಗಸರಿಂದ ಅವನಲ್ಲಿ ವಿನಂತಿಸಿದೆವು. "ಪೊಯಿಟ್ಟು ಸಿಗ್ರಮಾ ವಾಂಗಾ" ಅಂದ. ಒಪ್ಪಿಗೆ ಕೊಟ್ಟದ್ದೇ ತಡ, ಅತ್ತಲಿಗೆ ಒಡಲಾರಂಭಿಸಿದೆವು. 5 ನಿಮಿಷಗಳ ನಂತರ ತುತ್ತ ತುದಿ ಕಾಣಿಸಿತು. ಅಲ್ಲೇ ತುದಿಯಲ್ಲಿ ನಿಂತು ನೋಡಲಿಕೆ ವ್ಯವಸ್ಥೆ ಇತ್ತು. ದೂರ ದೂರಕ್ಕೆ ನೋಡಲು ಸಿಗುವ ವಿಹಂಗಮ ನೋಟ. ಬೆಟ್ಟವೊಂದು ರಾಣಿ ಮಲಗಿದಂತ್ತೆ ಕಾಣುತ್ತದೆ. ಸುತ್ತಲಿನ ಎಲ್ಲಾ ಕಡೆಯೂ ಕಣ್ಣು ಹಾಯಿಸಲು ಪ್ರಾವಧಾನ ಕೊಡುವ ವಿವ್ ಪಾಯಿಂಟ್ ಅದು. ಅಲ್ಲಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕ ಮೂರು ರಾಜ್ಯಗಳನ್ನ ನೋಡಬಹುದು ಎಂಬುದು ಅಲ್ಲಿನ ವಿಶೇಷತೆ. ಆದರೆ ಯಾವ ರಾಜ್ಯ ಯಾವ ಕಡೆ ಇದೆ ಎಂಬುದು ನಮ್ಮ ಅರಿವಿಗೆ ಬಾರದ ವಿಷಯ.ಲಾಂಬ್ಸ್ ಅನ್ನೋ ಬ್ರಿಟಿಷ್ ಅಧಿಕಾರಿ ಮೊದಲಿಗೆ ಪತ್ತೆ ಹಚ್ಚಿದ್ದರಿಂದ ಈ ಸ್ಥಳಕ್ಕೆ ಆ ಮಹಾಶಯನ ಹೆಸರಂತ್ತೆ. ಅಲ್ಲೊಂಧೋತ್ತು ಕೂತು ಸ್ವರ್ಗವನ್ನ ಸವಿದೆವು. ಕೆಳಗೆ ಹಚ್ಚ ಹಸುರಿನಲ್ಲಿ ಕಪ್ಪಗೆ ಹಾದು ಹೋಗುವ ರಸ್ತೆಗಳು. ಪ್ರಕೃತಿಗೆ ಹಿಂಸೆ ಕೊಟ್ಟ ಹಾಗೆ ಕಾಣಿಸುತ್ತದೆ. ಕಪ್ಪಗೆ ಹಾದು ಹೋಗುವ ರಸ್ತೆಗಳು, ಪ್ರಕೃತಿಯ ಮೇಲೆ ನಾವೆರಗಿದ ಅತ್ಯಾಚಾರದ ಕುರುಹುಗಳು ಎಂಬಂತ್ತೆ ಕಾಣುತ್ತದೆ. ಅದೆಂತಹ ಮಾಗದ ಹ್ಯೆಯ ನಾವು ಮೆರೆದಿದ್ದೇವೆ ಎನ್ನುವುದು ಅರಿವಾದಗಾ ಮನಸ್ಸೋಮ್ಮೆ ಮಂಕಾಗುತ್ತದೆ. ಗಂಟಲಲ್ಲಿ ಶಬ್ದಗಳು ಸಿಕ್ಕಿಕೊಳ್ಳುತ್ತವೆ. ಇದರ ನಡುವೆ ಸೌಂದರ್ಯದ ನರ್ತನಕ್ಕೆ ಮಾರುಹೋದ ನಾನು ಮೆಲ್ಲಗೆ ನಾಲ್ಕಾರು ಸಾಲು ಕವಿತೆ ಉದ್ಗರಿಸಿದೆ. "ನೈಸ್ ನೈಸ್" ಎಂದ ಸಿದ್ಲಿಂಗ್. ಇದರ ಮಧ್ಯೆ ಇಳಿಸಂಜೆ ಅದಾಗಲೇ ಹಾಯ್ ಹೇಳಿದ್ದು ಮರೆತೇ ಹೋಗಿದ್ದೆವು. ಕತ್ತಲು ಶುರುವಾಗಿತ್ತು. ತಡಮಾಡುವುದು ಬೇಡವೆಂದು ಹೊರಬರಲು ನಿಂತೆವು. ಬರುತ್ತಲೇ ಎದುರಿಗೆ ಸಿಕ್ಕ ಗಾರ್ಡ್ ಮನಸೋ ಇಚ್ಛೆ ನಮ್ಮ ಮೇಲೆ ಅರಚಲು ಶುರುವಿಟ್ಟುಕೊಂಡ, ಇಂಚಾರ್ಜ್ ಗೂ ಬೈಯುತ್ತಿದ್ದ. ಮೈನ್ ಗೇಟ್ ಮುಚ್ಚುವುದು ಲೇಟ್ ಆಗ್ತಿದೆ, ಬೇಗ ಹೋಗಿ ಅನ್ನುವುದು ನಮಗೆ ಅರ್ಥವಾಗುತ್ತಿತ್ತು. ಅಂತೆಯೇ ಬೇಗನೆ ಹೊರಬಂದೆವು. ಅಲ್ಲಿಂದ ಹೋಗಬೇಕು ಎಂದದ್ದು ಡಾಲ್ಫಿನ್ ವಿವ್ ಪಾಯಿಂಟ್ ಗೆ, ಆದರೆ ಇದೇ ಸಿಕ್ಕದ್ದೇ ನಮಗೆ ಅದೃಷ್ಟ, ಅಲ್ಲಿ ಒಳಗಡೆ ಹೋಗುವುದಕ್ಕೂ ಬಿಡರು ಎಂಬುದು ಗೊತ್ತಾಯಿತು. ಪ್ಲಾನ್ ಕ್ಯಾನ್ಸಲ್ ಮಾಡಿ ಬಂದ ಹಾದಿಗೆ ಹಿಂತಿರುಗಿದೆವು. ಕೂನೂರಿನಿಂದ ನೇರವಾಗಿ ಬೆಂಗಳೂರಿಗೆ ಹಿಂತಿರುಗುವುದೆಂದು ಹೊರಡುವಾಗಲೇ ನಿರ್ಧರಿಯಾಗಿತ್ತು. ಮರುದಿನ ಬೇರೆ ಎಲ್ಲಾದರೂ ಹೋಗುವುದು ಎಂದಾದರೂ ಬಿಡದ ಬಿಸಿಲು. ಇಷ್ಟಕ್ಕಾದರೂ ಸಿದ್ಲಿಂಗ್ ಒಪ್ಪಿದ್ದೆ ದೊಡ್ಡ ವಿಷಯವಾಗಿತ್ತು. ಕೂನೂರಿನಿಂದ ಬೆಂಗಳೂರಿಗೆ ಹೋಗಲು ಮೊದಲಿಗೆ ಊಟಿ ಕೊಯಂಬತುರಿನ ರಸ್ತೆ ಹಿಡಿದು ಹೊರೆಟೆವು. ಎಲ್ಲೋ ಒಂದು ಕಡೆ ಸೂರ್ಯಾಸ್ತವಾಗುವ ವಿಹಂಗಮ ನೋಟ ಕಾಣ ಸಿಕ್ಕಿತು, ಅಲ್ಲೊಂದೆರಡು ನಿಮಿಷ ನಿಂತು ಸೂರ್ಯನಿಗೆ ವಿದಾಯ ಹೇಳಿ ಮುಂದೆ ಹೊರಟ್ವಿ. ಮುಂದೆ ಒಂದೆರಡು ತಿರುವುಗಳು ದಾಟು ದಾಟುತ್ತಿದ್ದಂತ್ತೆ ದೂರದ ಪರ್ವತ ಕೆಳಗೆ ಸೂರ್ಯ ಇನ್ನು ಮುಳುಗುತ್ತಲೇ ಇದ್ದ. ಪ್ರಕೃತಿ ನಮ್ಮೊಂದಿಗೆ ಮಾಡುವ ಪರಿಹಾಸ್ಯವದು ಎನಿಸಿತು. ಅದಕ್ಕೆ ಅದು ಇಂದಿಗೂ ಎಂದಿಗೂ ವಿಸ್ಮಯವೇ ಹೌದು.
ಮೆಟ್ಟುಪಾಳ್ಯಮ್ ತನಕ ಕೊಯಂಬತುರಿನ ರಸ್ತೆಯೇ ಹಿಡಿದು ಹೋಗಬೇಕಿದೆ. ಹತ್ತಾರು ಹೈರ್ ಪಿನ್ ತಿರುವುಗಳುಳ್ಳ ದಟ್ಟ ನೀಲಗಿರಿ ಪರ್ವತಶ್ರೇಣಿಗಳ ಮಧ್ಯೆ ಹಾದುಹೋಗುವ ಸಿಂಗಲ್ ಲೈನ್ ರಸ್ತೆ. ಕಣ್ಣು ಕಾಣಿಸದಷ್ಟು ಕತ್ತಲಾಗುವುದರ ಒಳಗೆಡೆಯೇ ಘಾಟ್ ಸೆಕ್ಷನ್ ದಾಟುವದು ನಮ್ಮ ಮೊದಲ ಗುರಿ. ಅಂತೆಯೇ ತಿರುವಗಳಿಗೆ ಅದಾಗಲೇ ಒಗ್ಗಿಕೊಂಡಿದ್ದ ದೇಹ ಮತ್ತು ಬೈಕ್, ನಿರ್ಭಯವಾಗಿ ಮುನ್ನುಗ್ಗುತಿತ್ತು. 60 70ರ ವೇಗ. ತಿರುವುಗಳಲ್ಲಿ ತುಸು ಕಮ್ಮಿ. ಹೈರ್ ಪಿನ್ ತಿರುವುಗಳಲ್ಲಿ ಟ್ರಾಫಿಕ್ ಜಾಮ್ ಆಗುವುದಂತೂ ಸಹಜ. ಉದ್ದನೆಯ ಲಾರಿಯೊಂದು ತಿರುಗುತ್ತಿದ್ದರೆ ಹಾವಿನ ಬಾಲದಂತ್ತೆ ಟ್ರಾಫಿಕ್ ಜಮೆಯಾಗಿ ನಿಂತಿರುತ್ತದೆ. ಆದರೆ ನಾವು ಬೈಕಿನವರು. ಇದೆಲ್ಲವೂ ನಮಗೆ ಅಸಂಬಂಧಿತ. ಬಲಕ್ಕೆ ಖಾಲಿ ಇರುವ ಲೈನ್ ಅಲ್ಲಿ ನುಗ್ಗಿ ಮುಂದೆ ಯಾವುದಾದರು ವಾಹನ ಬಂದರೆ ಎದುರಿಗಿರುವ ವಾಹನದ ಹಿಂದೆ ತಗ್ಗಿ ನಿಂತರಾಯ್ತು, ಮತ್ತೆ ಖಾಲಿಯಾದ ರಸ್ತೆ ನಮ್ಮದೇ. ತಿರುವಿನಲ್ಲಿ ಲಾರಿಯೋ ಬಸ್ಸೋ ಹೊರಳುತ್ತಿದ್ದಲ್ಲಿ, ಸಿಕ್ಕ ಸೈಕಲ್ ಗ್ಯಾಪ್ ಅಲ್ಲಿ ಬೈಕ್ ಇಳಿಸಿಕೊಂಡು ತಿರುವು ಪಾರು ಮಾಡಿ ಹೋಗುತ್ತಿದ್ದಾರೆ ನಾವೇ ಅದೃಷ್ಟವಂತರು ಎಂಬ ಖುಷಿ. ತಿರುವೊಂದು ಬಂದರೆ ಸಾಕು, ಹಿಂದೆ ಮತ್ತು ಮುಂದೆ ಎರಡು ಲೈನ್ ಅಲ್ಲಿ ಉದ್ದುದ್ದಕ್ಕೆ ಟ್ರಾಫಿಕ್ ಜಾಮ್. ದೇವರೇ ಇವರಿಗೆ ಇಲ್ಲಿಂದ ಪಾರು ಮಾಡಬೇಕು ಎಂದು ಹಾರೈಸಿ ಬೈಕಿನ ಎಕ್ಸಲರೇಟರ್ ತಿರುವುತ್ತಿದ್ದೆ. ಹತ್ತಾರು ಹೈರ್ ಪಿನ್ ಗಳ ಬಗ್ಗೆ ಮಾಹಿತಿ ಕೊಡುತ್ತಲೇ ಇದ್ದ ಮಾಸ್ಟರ್ ಸಿದ್ಲಿಂಗ್. ಸಂಜೆಯ 8ರ ಆಸು ಪಾಸಿನಲ್ಲಿ ನಾವು ಅರಣ್ಯಪ್ರದೇಶ ಇಳಿದು ಸಮತಟ್ಟವಾದ ರಸ್ತೆ ಮೇಲೆ ಬಂದಿಳಿದಿದ್ದೆವು. ಮುಂದೆ ಸಿಕ್ಕ ಮೆಟ್ಟುಪಾಳ್ಯಮ್ ಇಂದ ನಮ್ಮ ತಿರುವು ಬದಲಾಗಬೇಕು. ಸತ್ಯಮಂಗಲದಿಂದ ಭವಾನಿಗೆ ತಲುಪಿ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 44 ಕ್ಕೆ ಸೇರಿಕೊಳ್ಳುವುದು ಸಿದ್ಲಿಂಗ್ ತಯಾರಿಸಿದ್ದ ನಿಲ ನಕ್ಷೆ. ಮೆಟ್ಟುಪಾಳ್ಯಮ್ ಇಂದ ಹೊರ ಬರುತ್ತಿದ್ದಂತ್ತೆ ನಯವಾದ ರಸ್ತೆ. ಹಿಂದೆ ಮುಂದೆ ನಾಲ್ಕಾರು ಕಿಮೀ ತನಕ ಯಾವ ವಾಹನಗಳ ಕುರುಹುಗಳಿಲ್ಲ. ಒಂದುಕ್ಷಣಕ್ಕೆ ಎದೆ ಝಲ್ ಎನ್ನಿಸುವಷ್ಟು ನಿರವ ವಾತಾವರಣ. ಅದು ಸತ್ಯಮಂಗಲದ ಕಡೆ ಹೊರಡುವ ಮಾರ್ಗ. ಸತ್ಯಮಂಗಳವೆಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಲಾರ್ಡ್ ವೀರಪ್ಪನ್. ಅವನ ನೆನಪಿಗೂ ಮತ್ತು ಅಲ್ಲಿನ ನಿರವ ಹೆದ್ದಾರಿಗೂ ಎಲ್ಲವೂ ಸಿಂಕ್ ಆಗುತಿತ್ತು.ಈ ಮಧ್ಯೆ ಏಕಾಏಕಿ ಬೈಕಿನ ಡಾಶಬೋರ್ಡ್ ಅಲ್ಲಿ ಒಂದು ಸೆಟ್ಟಿಂಗ್ ಇಂಡಿಕೆಟರ್ ಬ್ಲಿಂಕ್ ಆಗ ತೊಡಗಿತು. ಸಂಧರ್ಭ ತೀರಾ ಗಾಬರಿಗೊಳ್ಳುವಂತಿತ್ತು. ಅದೇನೆಂದು ನಮಗೆ ಯಾವ ಮಾಹಿತಿಯೂ ಇಲ್ಲ. ಬೈಕ್ ತೊಂದರೆಗೆ ಇಡಾಯಿತೇ ಎಂಬ ಭಯ ಒಂದೆಡೆ ಆದರೆ, ನಿರ್ವಾತ ಹೈವೇ ರಸ್ತೆಯ ಮಧ್ಯದಲ್ಲೇ ನಾವಿದ್ದೇವೆ, ಸುತ್ತಲಿಗೂ ಯಾವ ಜೀವಂತ ಕ್ರಿಮಿಯೂ ಕಾಣಿಸುತ್ತಿಲ್ಲ. ಆದಷ್ಟು ಬೇಗ ತೊಂದರೆ ಉಂಟು ಮಾಡುತ್ತಿದ್ದ ಆ ಸಿಗ್ನೇಲ್ ಏನೆಂದು ಗೂಗಲ್ ಪರೀಕ್ಷೆಗೆ ಒಳಪಡಿಸಿದೆವು. ಆತಂಕಪಡುವ ವಿಷಯ ಅದಲ್ಲವೇನೆಂಬುದು ಹತ್ತಾರು ನಿಮಿಷದ ನಂತರ ಅರಿವಾಯಿತು. ನಿಟ್ಟುಸಿರು ಬಿಟ್ಟು ಬೈಕ್ ಸ್ಟಾರ್ಟ್ ಮಾಡಿ ಎಕ್ಸಲರೇಟರ್ ತಿರುವಿದೆ. ಒಳ್ಳೆ ರಸ್ತೆಯಾದ್ದರಿಂದ ಒಳ್ಳೆಯ ವೇಗ ಕ್ರಮಿಸಿದೆವು. ಆಯಾಸವಾಗಿದ್ದರಿಂದ ಸತ್ಯಮಂಗಳದಲ್ಲಿ ತಂಗಿದಾರಾಯ್ತು ಈ ರಾತ್ರಿ ಎಂಬ ನಿರ್ಧಾರಕ್ಕೆ ಬಂದೇವಾದರೂ ಒಳ್ಳೆಯ ಹೋಟೆಲ್ ಅಲ್ಲಿ ಸಿಗುತ್ತಿಲ್ಲ. ಗೊತ್ತಿಲ್ಲದ ಊರಿನ ರಸ್ತೆಗೆ ಅಂಟಿ ಬೈಕ್ ಇಡಿಯ ರಾತ್ರಿ ನಿಲ್ಲಿಸುವ ಹುಚ್ಚುತನಕ್ಕೆ ನಾವು ಮುಂದಾಗಲಿಲ್ಲ. ಮುಂದೆ ಭವಾನಿಯಲ್ಲಿ ನೋಡಿದರಾಯ್ತು ಅಂತ ಭವಾನಿ ಕಡೆ ಪಯಣ ಮುಂದುವರೆಸಿದೆವು. 60 ಕೀಮಿ ಆಸುಪಾಸಿನ ದೂರ. ದೇಹದಲ್ಲಿ ತ್ರಾಣ ಅಡಗಿ ಹೋಗಿದೆ. ತುಂಬಾ ಹೊತ್ತಿಂದ ಬೈಕ್ ಓಡುಸುತ್ತಿದ್ದಕ್ಕೆ ಕೂರಲಿಕೂ ಅಗದಷ್ಟು ಉರಿ ಹತ್ತುಕೊಂಡಿದೆ. ಸೀಟಿನ ಮೇಲೆಯೇ ಅತ್ತಲಿತ್ತ ಹೊರಳಾಡಿ ಸಮಾಧಾನ ಮಾಡಿಕೊಳ್ಳುತ್ತಿದ್ದೆವು. ಸಿದ್ಲಿಂಗ್ ಆಗಾಗ ಏಕಾಏಕಿ ಎದ್ದು ಹಿಂದೆ ಕಟ್ಟಿಟ್ಟಿದ್ದ ಲಗೇಜ್ ಮೇಲೆಯೇ ಕುತುಬಿಡುತ್ತಿದ್ದ. ಅವನ ಎಕ್ಸ್ಪೆರಿಮೆಂಟ್ ಗಳಿಗೆ ನಾನು ಅಡಚಣೆ ಒಡ್ಡುವಂತಿಲ್ಲ. ಅವನದೇ ಇಚ್ಛೆ, ಆಮೇಲೆ ತಾನಾಗಿಯೇ ಕೆಳಗಿಳಿದು ಕುರುವನು. ಒಮ್ಮೊಮ್ಮೆ ಫುಟ್ ಪೆಗ್ ಮೇಲೆ ಏಕಾಏಕಿ ನಿಂತುಕೊಳ್ಳುವನು. ಹಾಗೋ ಹೀಗೋ, ಅಸಮಾಧಾನಗೊಂಡಿದ್ದ ಅವನ ಬಡವನ್ನೊಮ್ಮೆ ಶಾಂತಗೊಳಿಸಿಕೊಳ್ಳುತ್ತಿದ್ದ. ಅವನ ಬುಡಕ್ಕಾದರೂ ಶಾಂತಿ ಸಿಗಲಿ ಎನ್ನುವ ದೊಡ್ಡ ಮನಸ್ಸು ಅಲ್ಲಿ ನನ್ನದು.
ಹೊರಳಾಡುತ್ತ ಹೋಗುತ್ತಿದ್ದಂತ್ತೆ ಭವಾನಿ ಬಂದೆ ಬಿಟ್ಟಿತು. ಮ್ಯಾಪ್ ಅಲ್ಲಿ ಕಂಡ ಒಂದೆರಡು ಹೋಟೆಲ್ ವಿಚಾರಿಸಲು ಹೋದೆವು. ತೀರಾ ಸಾಮಾನ್ಯವಾದ ಹೋಟೆಲಿಗೆ ಗಗನಚುಂಬಿ ದರ. ಇಲ್ಲಿ ತಂಗಿದರೂ ಆ ಅಪಾರ ರಾತ್ರಿ ಊಟಕ್ಕೆ ಯಾವ ವ್ಯವಸ್ಥೆಯೂ ಅಲ್ಲಿ ಕಾಣಸಿಗಲಿಲ್ಲ. ಹಾಗಿದ್ದಲ್ಲಿ ತಂಗಿದರೂ ಅದು ವ್ಯರ್ಥವೇ ಅನಿಸಿ, ಮುಂದೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹೋಟೆಲ್ ಮತ್ತು ಊಟ ಎರಡೂ ಸಿಗುತ್ತವೆ ಎಂಬ ಬಲವಾದ ನಂಬಿಕೆಯಿಂದ ಮುಂದೆ ಹೊರಟೆವು. ರಾಷ್ಟ್ರೀಯ ಹೆದ್ದಾರಿ ಕೈಗೆಟಕಿತ್ತು. ಕಾವೇರಿ ನದಿ ದಾಟಿ ರಾಷ್ಟ್ರೀಯ ಹೆದ್ದಾರಿ 44ರ ಮೇಲೆ ಒಡಲಾರಂಭಿಸಿದೆವು. ಎಡಕ್ಕೆ ಹೋಟೆಲ್ ಹುಡುಕುತ್ತ ಕೆಲ ದೂರ ಕ್ರಮಿಸುತ್ತಲೇ ಕಂಡದ್ದು ಸರವಣ ಭವನ ಹೋಟೆಲ್. ಊಟಕ್ಕೆ ಮುಚ್ಚಿತ್ತು, ತಂಗಲು ತೆರೆದಿತ್ತು. ಮತ್ತದೇ ಅನವಶ್ಯಕ ಸಂಧರ್ಭ. ಮುಂದೆ ಅವರದ್ದೇ ಇನ್ನೊಂದು ಹೋಟೆಲ್ ಇರುವುದಾಗಿ ಅಲ್ಲಿರುವನೋರ್ವ್ ಹೇಳಿದ. ಅಂತೆಯೇ ಅತ್ತಕಡೆ ಹೋದಾಯ್ತು. ನಾಲ್ಕಾರು ಕಿಮೀ ಕ್ರಮಿಸಿದೆವು. ಎಡಕ್ಕೆ ಸಿಕ್ಕಿತು ಅದೇ ಹೋಟೆಲ್. ಬೈಕ್ ಪಾರ್ಕ್ ಮಾಡಿ ಇಳಿಯಲಿಕೆ ಆಗದಷ್ಟು ಸಂಕಟ. ಕಣ್ಣು ನಿದ್ರೆಗೆ ಹವಣಿಸುತ್ತಿದೆ, ಮೈ ಭಾರವಾಗಿದೆ, ಆಯಾಸ ಆಕಾಶ ಮುಟ್ಟಿದೆ. ಈ ಮಧ್ಯೆ ಎರಡನೇ ಬಾರಿ ಸಿಕ್ಕ ಸರವಣ ಭವನ ಹೋಟೆಲ್ ವೆಜ್ ಮತ್ತು ನಾನ್ ವೆಜ್ ಅನ್ನುವುದು ಗಮನಕ್ಕೆ ಬರಲೇ ಇಲ್ಲ. ಅದಾಗಲೇ ಒಳಗೆ ಬಂದು ಟೇಬಲ್ ಕಾಯ್ದಿರಿಸಿಕೊಂಡು ಕುತಿದ್ದೆವು, ಬೇರಾವ ದಾರಿಯೂ ಇಲ್ಲ. ಇಲ್ಲಿಯೇ ಊಟ ಮುಗಿಸಿದರಾಯ್ತು ಅಂತ ನಿರ್ಧರಿಸಿದೆವು. ಬೇಡವಾದ ಪರೋಟ ಊಟ ಹೇಳಿ ಮುಖಕ್ಕೆ ನೀರೆರಚಿ ಹಗುರಾದೆವು. ಆಯಾಸಕ್ಕೆ ಊಟ ಹೇಗಿದೆ ಎನ್ನುವ ಮುತವರ್ಜಿಯೇ ಇರಲಿಲ್ಲ. ಸಿಕ್ಕದ್ದು ಶಿವ ಎಂಬಂತ್ತೆ ತಿಂದು ಕೆಲ ಹೊತ್ತು ಕೂತೆವು. ಟೀ ಕುಡಿದು ಹೊರಾಟರಾಯ್ತು ಅಂತ ಟೀ ಹೇಳಿದೆ. ಹೇಳಿ ನಮ್ಮದೇ ಚಿಂತೆಯಲ್ಲಿ ಕೂತಿರುವಾಗ, ಸೆಲ್ವಂ ಮಾಣಿ ಟೀ ಗ್ಲಾಸ್ ಹಿಡಿದ ಕೈ ಹತ್ತಾರು ಬಾರಿ ತನ್ನ ತಲೆಯ ಸುತ್ತಲೊಮ್ಮೆ ಬೆನ್ನ ಸುತ್ತಲೊಮ್ಮೆ ಸುತ್ತಾಡಿಸಿ ರಪ್ ಅಂತ ಟೆಬೆಲ್ ಮೇಲೆ ಬಾರಿಸಿಯೇ ಬಿಟ್ಟ, ಅವಕ್ಕಾಗಿ ಮುಖ ಮುಖ ನೋಡುತ್ತಾ ಕುಳಿತೆವು. ಈ ನಡು ರಾತ್ರಿ ಈ ಪರಿಯ ಸ್ಕಿಲ್ ತೋರಿಸುವುದು ಬೇಕಿತ್ತೆ? ರೋಮಗಳು ನಿಮಿರಿನಿಂತಿದ್ದವು. .ಊಟವಾದ ಮೇಲೆ ಎಲ್ಲಿಲ್ಲದ ಉತ್ಸಾಹ ಬಂದು ಲಗ್ಗೆಯಿಟ್ಟಿತ್ತು, ಆಯಾಸವೆಲ್ಲ ಮಾಯವಾಗಿತ್ತು, ಪುಟಿದೇಳುವ ಹುಮ್ಮಸ್ಸು. ಮ್ಯಾಪ್ ಅಲ್ಲಿ ಬೆಂಗಳೂರು 300 ಕಿಮೀ ಉಳಿದಿದೆ. ರಾತ್ರಿ ತಂಗಿ ಹೋಗುವುದರಲ್ಲಿ ಅರ್ಥವಿಲ್ಲ. ತಣ್ಣನೆ ಗಾಳಿಯಲ್ಲಿ ತಾಸಿಗೊಂದು ಬ್ರೇಕ್ ತೆಗೆದುಕೊಂಡು ಬೆಳಗಿನಜಾವದೊಳಗೆ ಬೆಂಗಳೂರು ತಲುಪೋಣವೆಂದು ನಿರ್ಧರಿಸಿ ಬೈಕ್ ಲಗೇಜ್ ಮತ್ತೊಮ್ಮೆ ಸರಿ ಪಡಿಸಿ ಇಗ್ನಿಷನ್ ಒತ್ತಿ, ಎಕ್ಸಲರೇಟರ್ ಬಿಗಿದುಹಿಡಿದೆ. ಮೊದಲೆರಡು ಬಾರಿ ಪರಿಚಯಗೊಂಡಿದ್ದ ಹೈವೇ ಅದು. ನಿರ್ಭಯವಾಗಿ 80 90ರ ವೇಗದಲ್ಲಿ ಓಡುತ್ತಿದೆ ಬೈಕು. ಈ ರಾತ್ರಿಯಲ್ಲಿ ಹೈವೇಯಲ್ಲಿ ಹೋಗುವುದು ಮಜವು ಹೌದು, ಅಪಾಯವೂ ಹೌದು. ಶಯನ ಪೆಟ್ಟಿಗೆಗಳಂತ್ತೆ ರಸ್ತೆ ಉದ್ದಕ್ಕೂ ಹೋಗುವ ಸ್ಲೀಪರ್ ಕ್ಲಾಸ್ ಬಸ್ಸುಗಳು. 100ರ ಮೇಲೆ ವೇಗ. ಕಮ್ಮಿಯಾದಲ್ಲಿ ಅವುಗಳ ಮರ್ಮಕ್ಕೆ ನಾಚಿಕೆಗೇಡು ಎನ್ನುವಂತಹ ಅಲಿಖಿತ ಯೋಚನೆಯಲ್ಲಿ ಓಡುತ್ತಲೇ ಇರುತ್ತವೆ. ಹೈವೇಯಲ್ಲಿ ಓವರ್ ಟೆಕ್ ತೆಗೆದುಕೊಳ್ಳುವುದೇ ಚಾಲೆಂಜಿಂಗ್ ವಿಷಯ. ಬಲಕ್ಕೆ ಎಡಕ್ಕೆ ಸರಿಯುವ ಮುನ್ನ ಸೂಚಕ ದೀಪ ತೋರಿಸಿ ಸರಿಯಬೇಕು. ಅದು ಹೈವೇ ಡ್ರೈವರ್ ಗಳ ಅಲಿಖಿತ ನಿಯಮ, ಬೌದ್ಧಿಕತೆ ಮತ್ತು ಪ್ರಭುದ್ಧತೆ. ಒಂದಾದರೊಂದಂತ್ತೆ ಸಿಗುತ್ತಲೇ ಇರುವ ಟ್ರಕ್ಕು, ಬಸ್ಸುಗಳನ್ನ ಹಿಂದೆ ಬಿಡುತ್ತಾ ವೇಗ ಕ್ರಮಿಸುತ್ತಾ, ಅಲ್ಲಲ್ಲಿ ಟೀ ಕುಡಿಯಲು ನಿಲ್ಲಿಸಿ ವಿಶ್ರಾಂತಿ ಎಂಬ ಐದಾರು ನಿಮಿಷದ ಬ್ರೇಕ್ ಗಳ ಮುಗಿಸುತ್ತ ಹೊರಟೆವು.
ಸೇಲಂ ಸಮಿಪುಸುತ್ತಿದ್ದಂತ್ತೆ ಶಯನ ಬಸ್ ಗಳ ಹಾವಳಿ ಜಾಸ್ತಿ. ಇಂತಿಪ್ಪಲ್ಲಿಗೆ, ಮುಂದೆ ಹೋಗುತ್ತಿದ್ದ ಬಸ್ ಗೆ ಹಾದಿ ಬಿಡದ ಎಡಬಿಡಂಗಿ ಚಿಕ್ಕ ಕಾರಿನವನು,. ನಿದ್ದೆಯಲ್ಲಿದ್ದನೋ ಏನೋ. ಅದೆಷ್ಟೇ ಸಿಗ್ನಲ್ ಕೊಟ್ಟರು ದಾರಿ ಬಿಡುತ್ತಿಲ್ಲ. ಸೆಲ್ವಂ ಡ್ರೈವರ್ ಕೇಳಬೇಕೆ? ಸಿಕ್ಕ ಸ್ವಲ್ಪ ಜಾಗದಲ್ಲೇ ಮುನ್ನುಗ್ಗಿಸಿದ, ಬಸ್ಸಿನ ಎಡಕ್ಕೆ ಅದೇ ಕಾರು ಬಸ್ಸಿನ ಇನ್ನಷ್ಟು ಹತ್ತಿರಕ್ಕೆ ಬಂದೇ ಬಿಟ್ಟಿತು. ಉದ್ಭವಿಸಿತು ನೋಡಿ ಒಂದು ಹೈವೇ ಚುಮ್ಮಾ. ಬಸ್ಸಿನ ಬಳ ಭಾಗಕ್ಕೆ ತಗುಲಿದ ಕಾರಿನ ಕನ್ನಡಿ ಪುಡಿ ಪುಡಿಯಾಗಿ ಬಿತ್ತು ನೆಲಕ್ಕೆ. ರಭಸವಾಗಿಯೇನೋ ಇರಲಿಲ್ಲ ಡಿಕ್ಕಿ, ಆದರೂ ಕಾರು ತೆಳುವಾಗಿ ಬಲಕ್ಕೆ ಸರಿದು ಹೋಯಿತು. ಅದೃಷ್ಟವಶಾತ್ ಯಾವುದೇ ಕೆಟ್ಟದ್ದು ಸಂಭವಿಸಿಲ್ಲ. ಕಾರು ಎಚ್ಚರಗೊಂಡಿತು. ಬಸ್ಸು ತನೆಗೇನು ಗೊತ್ತೇ ಇಲ್ಲ, ತನಗೇನು ಆಗಿಯೇ ಇಲ್ಲವೆಂಬಂತ್ತೆ ಮುಂದಕ್ಕೆ ಹೊಯಿತು. ಇದೆಲ್ಲವೂ ನಮ್ಮ ಕಣ್ಣೆದುರಿಗೆಯೇ ನಡೆಯುತ್ತಿದೆ, ಅದೆಷ್ಟು ಸಮಾನ್ಯವಾಯಿತಲ್ಲ ಇತರಹ ಘಟನೆಗಳು ಎನಿಸಿ ಒಂದು ಕ್ಷಣಕ್ಕೆ ಗಾಬರಿಯಾಯ್ತು. ನಿದ್ದೆಬುರುಕರಿಗೆ ರಾತ್ರಿಯ ರೈಡ್ ಅಲ್ಲವೇ ಅಲ್ಲ, ರಿಸ್ಕ್ ತೆಗೆದುಕೊಳ್ಳುವ ಹುಚ್ಚಾಟವೂ ಮಾಡಕೂಡದು. ಹೀಗೆ ಓವರ್ ಟೇಕ್ ಮಜಲುಗಳನ್ನ ಮುಂದುವರೆಸಿ ಆಗಾಗ ಒಂದೊಂದು ಬ್ರೇಕ್ ತೆಗೆದುಕೊಳ್ಳುತ್ತ ಹೊರಟೆವು.
ರಸ್ತೆಯುದ್ದಕ್ಕೂ ಊಟಿ ಕೂನೂರಿನ ರಮಣೀಯ ಪರ್ವತ ಶ್ರೇಣಿಗಳು, ಆ ತಣ್ಣನೆಯ ವಾತಾವರಣದಲ್ಲಿ ಕಳೆದ ಸಮಯ ನೆನಪಿನಲ್ಲಿ ಹಾದು ಹೋಗುತ್ತಿವೆ. ಸಿಕ್ಕ ನಾಲ್ಕೈದು ದಿನಗಳ ರಾಜೆಯೂ ಮುಗಿಯುತ್ತಿದೆ. ಮತ್ತದೇ ಆಫೀಸು, ಅದೇ ಜೀವನ. ಹೀಗೆಯೇ ಆಗಾಗ ಮಧುರ ನೆನಪಿನ ಬುತ್ತಿ ಕಟ್ಟಿಕೊಂಡು ಹೋಗುತ್ತಿರಬೇಕು, ಇಲ್ಲವಾದಲ್ಲಿ ತಲೆ ತಿಪ್ಪೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಇಡಿಯ ಪ್ರವಾಸದಲ್ಲಿ ಬೈಕ್ ಒಳ್ಳೆಯ ಮೈಲೇಜ್ ಕೊಟ್ಟಿದೆ, ಅಂದುಕೊಂಡಿದ್ದಕ್ಕಿಂತ ಒಳ್ಳೆಯ ಫಲಿತಾಂಶವೇ ಸಿಕ್ಕಿದೆ. ಎಲ್ಲವೂ ಸೇರಿ ಸರಾಸರಿ 40 ಮೈಲೇಜ್ ಅಲ್ಲಿಗೆ ಬಂದು ನಿಂತದ್ದು. ಒಟ್ಟಾರೆ 800 ಕೀಮಿ ಪಯಣ. ಮತ್ತದೇ ಮುದ ನೀಡುವ ನೆನಪುಗಳನ್ನ ಕಲೆಹಾಕುತ್ತ ಎಕ್ಸಲರೇಟರ್ ತಿರುವುತ್ತಿದ್ದೆ. ಅಲ್ಲೆಲ್ಲೋ ಓವರ್ ಟೇಕ್ ಮಾಡಿ ಹಿಂದೆ ಬಿಟ್ಟಿದ್ದ ವಾಹನಗಳು ಟೀ ಕುಡಿಯುವಾಗ ಮತ್ತೆ ಮುಂದೆ ಹೋಗಿರುತ್ತವೆ. ಮತ್ತದೇ ವಾಹನಗಳನ್ನ ಮತ್ತೊಮ್ಮೆ ಓವರ ಟೇಕ್ ಮಾಡುತ್ತ ಸಾಗುತ್ತದೆ ನಮ್ಮ ಪಯಣ. ಬೆಳಗಿನಜಾವದ ನಾಲ್ಕು ಗಂಟೆಗೆ ಬೆಂಗಳೂರು ಸ್ವಾಗತಿಸುತ್ತದೆ. ಇಡಿಯ ಪ್ರಯಾಣದಲ್ಲಿ ಆಗಿರದ ರಸ್ತೆಯ ಕಿರಿಕಿರಿ ಬೆಂಗಳೂರು ಸೇರುತ್ತಿದ್ದಂತ್ತೆ ಶುರುವಾಯ್ತು. ಅದೇ ಅವೈಜ್ಞಾನಿಕ ರಸ್ತೆಗಳು. ಎಲ್ಲೆಂದರಲ್ಲಿ ಸಿಗುವ ಸರ್ಪ್ರೈಸ್ ಗುಂಡಿಗಳು. 800 ಕಿಮೀ ಅಲ್ಲಿ ಆಗದ ಹೈರಾಣ 8 ಕಿಮೀ ಅಲ್ಲಾಯ್ತು ಎಂದರೆ ತಪ್ಪಾಗದು. ಬೆಳಗಿನ 5 ರ ಸುಮಾರಿಗೆ ಮನೆ ತಲುಪಿ ಹಾಸಿಗೆಗೆ ಒರಗಿದೆವು. ತಲೆಯತುಂಬ ಕೆಲಹೊತ್ತು ಮಧುರ ನೆನಪುಗಳು ಹಾದುಹೋಗುತ್ತಿದ್ದಂತ್ತೆ ದೇಹ ಮತ್ತು ಮನಸ್ಸು ಅನಸ್ತೇಶಿಯ ಕೊಟ್ಟವರಂತ್ತೆ ನಿದ್ರೆಗೆ ಜಾರಿದವು, ದಿನವಿಡೀ ಕಂಡ ಸ್ವರ್ಗವನ್ನೇ ಇನ್ನೊಮ್ಮೆ ಕನಸುಗಳಲ್ಲಿ ಕಾಣಲು. ಮತ್ತೊಮ್ಮೆ ಮನಸ್ಸು ಅದೇ ಮುದ ಬಯಸುತ್ತಿರುವುದಂತ್ತು ನಿಜ. ಇದೇ ಖಯಾಲಿಯಲ್ಲವೆ ಮತ್ತೊಂದು ಸುಂದರ ಪಯಣಕ್ಕೆ ಮುನ್ನಡಿಯಾಗುವುದು..........
..........ಬಸವ.
👏👏
ReplyDelete