ಊಟಿ - ಬೆಟ್ಟಗಳಲ್ಲೊಂದು ಸ್ವರ್ಗ. ಭಾಗ-1
ತುಂಬಾ ದಿನಗಳ ನಂತರ ಕ್ಯಾಲೆಂಡರಿನಲ್ಲಿ ಲಾಂಗ್ ವಿಕೇಂಡ್ ರಾರಾಜಿಸುತ್ತಿತ್ತು. ಅದಕ್ಕೆ ಪೂರಕವಾಗಿ ಗೂಗಲ್ ಮ್ಯಾಪಿನಲ್ಲಿ ವಿಹರಿಸಿ ರೋಡ್ ಮ್ಯಾಪ್ ಸಿದ್ಧಪಡಿಸಲಿಕೆ ಮ್ಯಾಪ್ ಮಾಸ್ಟರ್ ಸಿದ್ಲಿಂಗನಿಗೆ ಗುತ್ತಿಗೆ ಕೊಟ್ಟಿದ್ದೆ. ಅದಕ್ಕೆ ತಕ್ಕಂತ್ತೆ ಕೆಲವೇ ದಿನಗಳಲ್ಲಿ ಇಲ್ಲಿಲ್ಲಿಗೆ ಹೀಗ್ಹಿಗೆ ಹೋಗ್ಬೇಕು ಅಂತ ಪ್ಲಾನ್ ಸಿದ್ಧಪಡಿಸಿದ್ದ. ಮೊದಲಿಗೆ ಹಾಸನ, ಚಿಕ್ಕಮಗಳೂರಿನ ಬೆಟ್ಟಗುಡ್ಡಗಳಿಗೆ ಭೇಟಿಕೊಟ್ಟು ಮುಂದೆ ಶಿವಮೊಗ್ಗದಲ್ಲೆಲ್ಲಾ ಸುತ್ತಾಡಿ ಹೊನ್ನಾವರಕ್ಕೆ ಹೋಗುವುದಾಗಿತ್ತು. ಬರುವಾಗ ಹೊನ್ನಾವರದಿಂದ ಮುರುಡೇಶ್ವರ, ಉಡುಪಿ ಮಂಗಳೂರು, ಅಲ್ಲಿಂದ ಕೊಡಗಿನಿಂದ ಬೆಂಗಳೂರಿಗೆ. ಭರ್ಜರಿ ಪೂರ್ತಿ ಒಂದು ವಾರದ ಪ್ಲಾನ್ ರೆಡಿಯಾಗಿತ್ತು. ಆದರೇ...! ನಿಧಾನವಾಗಿಯೇ ಆದರೂ ಬಿರುಸು ಬಿಸಿಲಿನ ಮಾತುಗಳು ಕಿವಿಗೆ ಬಿಳಲು ಶುರುವಾಗಿದ್ದವು. ಸಿದ್ಲಿಂಗನಿಗೆ ಹೆಚ್ಚಾಗಿಯೇ ಕೇಳಿಸತೊಡಿಗಿದ್ವು. ಇತ್ತ ಇಬ್ಬರ ಲೀವ್ಸ್ ಸಮ್ಮತಿ ಸಿಕ್ಕಿಯೂ ಆಗಿತ್ತು. ದಿನಗಳು ಸಮೀಪಿಸುತ್ತಿದ್ದಂತ್ತೆ ಬಿಸಿಲಿನ ಭಯ ಸಿದ್ಲಿಂಗನ ತುಂಬೆಲ್ಲಾ ಆವರಿಸಿ ಬಿಟ್ಟಿತ್ತು. ನಿಧಾನವಾಗಿ ಟ್ರಿಪ್ ಕ್ಯಾನ್ಸಲ್ಲಿನ ರಾಗ ಎಳೆಯಲು ಶುರುವಿಟ್ಟ. "ಭಾಳ್ ಬಿಸ್ಲ್ ಅದಾ, ಹೀಟ್ ಸ್ಟ್ರೋಮ್ ಅದಾ ಸುಮ್ನೆ ಆರಾಮ್ ತಪ್ಪಿದ್ರ್ ರಿಕವರ್ ಆಗ್ಲಾಕ್ ಒಂದು ವಾರ ಬೇಕು, ಸುಮ್ನೆ ರಿಸ್ಕ್ ಬ್ಯಾಡ ಇವಾಗ" ಅಂತ ಮೊದಲನೆಯ ಮತ್ತು ಕೊನೆಯ ಪರದೆ ಎಳದೇ ಬಿಟ್ಟಿದ್ದ. ಅದಕ್ಕೆ ಪೂರಕ ಎನ್ನುವಂತ್ತೆ ಹೊನ್ನಾವರಕ್ಕೆ ಹೋಗಿದ್ದ ಅವನ ಸ್ನೇಹಿತರಿಂದ ಪಡೆದಿದ್ದ ಟಿಪಿಕಲ್ ವೆದರ್ ರಿಪೋರ್ಟ್ ಕೂಡ ಮುಂದಿಟ್ಟಿದ್ದ. ಸರಿ ಎನ್ನದೆ ಮತ್ತೇನೂ ಹೇಳಲಿಕೂ ನನ್ನಲ್ಲಿ ಏನು ಇರಲಿಲ್ಲ.
ಆಗ ತಾನೇ ಶೋರೂಮಿನಿಂದ ರಸ್ತೆಗೆ ಇಳಿದಿದ್ದ ನನ್ನ ಬೈಕ್ ಸುಜುಕಿ ವಿಸ್ಟ್ರಾಮ್ ಎಸ್ಎಕ್ಸ್ 250 ಮೊದಲ ಸರ್ವಿಸ್ ಪೂರ್ಣಗೊಳಿಸಿಕೊಂಡು ಮೈ ಮನ ಬಿಚ್ಚಿ ತಿರುಗಾಡಲು ಸಿದ್ಧವಾಗಿತ್ತು. ಇತ್ತ ನನ್ನ ಮನಸ್ಸು ಕೂಡ ಅದೇ ಹಂಬಲಿಸುತ್ತಿತ್ತು. ಆದರೆ ಸಿದ್ಲಿಂಗ್ ಒತ್ತಿ ಇಟ್ಟಿದ್ದ ಪೂರ್ಣವಿರಾಮ ಎಲ್ಲೂ ಅಲುಗಡದಂತ್ತೆ ದಿಗ್ಭಂಧನದಂತ್ತೆ ಕಟ್ಟಿಹಾಕಿತ್ತು. ಪುಸುಲಾಯಿಸುವಲ್ಲಿ ಅಥವಾ ಬ್ರೈನ್ವಾಷ್ ಮಾಡುವುದರಲ್ಲಿ ಸಿದ್ಲಿಂಗನಷ್ಟು ಚಾಕಚಕ್ಯತೆ ನನ್ನಲ್ಲಿಲ್ಲವಾದರೂ ಒಂದು ಭಂಡ ಧೈರ್ಯಕ್ಕೆ ಮುಂದಾಗಿ ಒಪ್ಪಿಸಲು ಮುಂದಾದೆ. "ಡೈಲಿ ಏಸಿ ನ್ಯಾಗ್ ಇದ್ದು ಹೊರಗಿನ ಸ್ವಲ್ಪ್ ಟೆಂಪ್ರೇಚರ್ ನು ಭಾಳ್ ಅನಿಸ್ತಿರ್ಬಹುದು ನಮಗ, ಬೇಕಾದ್ರ್ ಅರ್ಲಿ ಮಾರ್ನಿಂಗ್ ಇಂದ ಮಧ್ಯಾನ್ 12 ಗಂಟೆ ತನಕ ಗಾಡಿ ಓಡಿಸಿ ನೆಕ್ಸ್ಟ್ 2 ಅವರ್ ರೆಸ್ಟ್ ಮಾಡಿದ್ರ್ ಆಯ್ತು, ಏನಂತಿ?" ಎಂಬ ಪ್ರಸ್ತಾವನೆ ಇಟ್ಟೆ. ಒಂದೆರಡು ಸೆಕೆಂಡಿನ ತನಕ ಆಲಸಿ ರಾಗ ಎಳೆದು "ಕಮಾನ್, ಮಜಾ ಬರಲ್ಲ ದೋಸ್ತ್ ಹಿಂಗಾದ್ರ್" ಮತ್ತೊಂದು ಚೆಕ್ ಮೇಟ್ ಕೊಟಬಿಟ್ಟ.
ಇನ್ನೇನು ಮಾಡುವುದು ಅಂತ ಯೋಚನೆ ಮಾಡುವಷ್ಟರಲ್ಲೇ ಟ್ರಿಪ್ಪಿನ ಪ್ಲಾನ್ ನೆ ಬದಲಾಯಿಸಿ ಬಿಡಬೇಕು ಅನ್ನುವುದೊಂದು ಹೊಳೆಯಿತು. "ಇಲ್ಲ ಅಂದ್ರ್ ಕಂಪ್ಲೀಟ್ ಮೈಸೂರ್ ಔಟ್ಸ್ಕರ್ಟ್ ಮುಗ್ಸ್ಕೊಂಡು ಬರೋಣ ಎರಡ್ ಮೂರು ದಿನ, ಲೈಕ್ ಓಲ್ಡ್ ಟೆಂಪಲ್ಸ್ ಇನ್ ಎಂಟೈರ್ ಮೈಸೂರ್, ವಾಟ್ ಯು ಸೆ?" ಎರಡನೇ ಪ್ಲಾನ್ ಸ್ವಲ್ಪ ಬ್ರಿಫ್ ಆಗಿ ಇಟ್ಟೆ. "ಎಲ್ಲಾಕಡಿ ಬಿಸ್ಲ್ ಸೇಮ್ ನೆ ಅದಾ, ಮೈಸೂರ್ ಅಂದಮ್ಯಾಗ್ ನಿನಗ್ ಸ್ಪೆಷಲ್ ಪ್ರಿವಿಲೇಜ್ ಎನ್ ಕೊಡಲ್ಲ ಸೂರ್ಯ, ಬಿ ಪ್ರಾಕ್ಟಿಕಲ್" ಅಂದ. "ದೇನ್ ಹೌವ್ ಅಬೌಟ್ ಹಿಲ್ ಸ್ಟೇಷನ್?" ಮತ್ತೊಂದು ಪ್ರಸ್ತಾವನೆ ನನ್ನಿಂದ. ಅದಕ್ಕೂ ಒಂತರದ ಇರುಸು ಮುರುಸಿನ ರಾಗ.
ಬೇರೆ ಬೇರೆ ಪ್ಲಾನ್ಸ್ ಗೆ ಬಗ್ಗುವ ಆಸಾಮಿ ಇದ್ದಲ್ಲ ಅನ್ನುವುದು ಗೊತ್ತಾಗಿಹೋಯಿತು. ಕೆಲವು ದಿನಗಳ ಹಿಂದೆ ನನ್ನೆದುರಿಗೆ ತಾನೇ ಹೇಳುತ್ತಿದ್ದ ಎಂಜಾಯ್ಮೆಂಟ್ ಪಾಠಗಳು ನನಗೆ ನೆನಪಿಗೆ ಬಂದ್ವು. " ಇವಾಗ ಬಿಸ್ಲ್ ಅದಾ ಅದಕ್ ಬ್ಯಾಡ್ ಅಂತಿ, ನಾಳಿಗ್ ಮಳಿ ಇರ್ತದ ಅದ್ಕನು ಬ್ಯಾಡ್ ಅಂತಿ ಮುಂದ ಚಳಿ, ಫಾಗ್ ಇರ್ತದ ಬ್ಯಾಡ್ ಅಂತಿ, ಹಿಂಗೆ ಕಾಂಪ್ರಮೈಸ್ ಆಗ್ಬೇಕ್ ಆಗ್ತದ, ಒಂದಲ್ಲ ಒಂದುಕಡೆ ಬ್ಯಾನಿ ಇರೋದೇ, ಕಮ್ ಔಟ್ ಆಫ್ ದಿ ಕಂಪೋರ್ಟ್ ಜೋನ್ ಮ್ಯಾನ್" ಒಂದು ಜೋರಾದ ಮಾಸ್ಟರ್ ಕಾರ್ಡ್ ಎಸೆದೆ ಎನ್ನುವ ಖುಷಿ. ಅದು ಚೆನ್ನಾಗಿಯೇ ಕೆಲ್ಸ ಮಾಡ್ತು. "ಅದು ಅಂತೂ ಖರೆ ಅದಾ ಬಟ್ ಎಲ್ಲಿಗ್ ಹೋಗದು?" ಮೊದಲ ಸಮ್ಮತಿ ಸಿಕ್ಕಾಯ್ತು. "ಊಟಿ ಕುನೂರ್, ಈ ವೆದರ್ ಕಂಡೀಷನ್ ಗೆ ಹೇಳಿ ಮಾಡಿಸಿದ ಪ್ಲೇಸೆಸ್". ಅದಕ್ಕೆ ಇನ್ನಷ್ಟೂ ಖಾತರಿ ಪಡಿಸಲಿಕೆ ನನ್ನೊಬ್ಬ ಫ್ರೆಂಡ್ ಅಲ್ಲಿಗೆ ಹೋಗಿರುವುದು ಮತ್ತು ಅಲ್ಲಿ ಬಿಸಿಲು ಇಲ್ಲವೇ ಇಲ್ಲ ಅನ್ನುವ ಕಥಾನುಕಥಿತ ಸುಳ್ಳನ್ನ ಎಳೆ ಎಳೆಯಾಗಿ ಇಟ್ಟೆ. "ಬೇಕಾದ್ರ್ ನೀನೇ ಇದರ ಬಗ್ಗೆ ರಿಸರ್ಚ್ ಮಾಡು" ಅಂತ ಹೇಳಿ ಹರಸಾಹಸ ಪಟ್ಟು ಸಿದ್ಧನಿಗೆ ಸಿದ್ದ ಪಡಿಸಿಯೇ ಬಿಟ್ಟೆ. ಗೆಲುವಿನ ನಗೆ, ತೃಪ್ತಿ ನನ್ನದಾಗಿದ್ವು.
ಹೋಗುವುದು ಖಾತರಿಯಾದ್ದರಿಂದ ಬೇಕಾದ ಬಟ್ಟೆ ಬರೆಗಳನ್ನೆಲ್ಲ ಹೊಂದಿಸಿಟ್ಟುಕೊಂಡು ಮೂಟೆಕಟ್ಟಿ ಮಲಗಿದ್ವಿ. ಮಲಗುವ ಹೊತ್ತಿಗೆ ಬೆಳಿಗ್ಗೆ 4.30 ಕ್ಕೆ ನೆ ಬಿಡಬೇಕು ಅಂತ ನಿರ್ಧರಿಸಿ ಅದಕ್ಕೆ ತಕ್ಕಂತೆ ಅಲಾರ್ಮ್ ಇಟ್ಟೆ. ನಿದ್ದೆ ಬರಲೇ ಇಲ್ಲ. ಇನ್ನೊಮ್ಮೆ ಅಲಾರ್ಮ್ ಬದಲಾಯಿಸಿ 5 ಕ್ಕೆ ಹೊರಡುವಾದಾಗಿ ನಿಶ್ಚಯಿಸಲಾಯಿತು. ಅಂತೆಯೇ ನಿದ್ದೆ ಕಮ್ಮಿಯಾದರೂ ಬೆಳಿಗ್ಗೆ 5ಕ್ಕೆ ಸಿದ್ಧವಾದ್ವಿ. ಬೈಕಿನ ಹಿಂಬದಿಗಿ ಬ್ಯಾಗು ಅಚ್ಚುಕಟ್ಟಾಗಿ ಕಟ್ಟಿದ್ದಾಯ್ತು. 5 ಕ್ಕೆ ಹೊರಟವರು ಬೆಂಗಳೂರಿನ ಹೊರವಲಯ ತಲುಪಲಿಕೆ ಸರಿಸುಮಾರು 1 ಗಂಟೆ ಸಮಯ ವ್ಯಯ ಮಾಡಬೇಕಾಯ್ತು. ಮೈಸೂರಿನ ಸರ್ವಿಸ್ ರಸ್ತೆಯಿಂದ ಹೋಗುವುದು ಬೇಡವೆಂದು ಮೊದಲೇ ನಿರ್ಧರಿಸಿಯಾಗಿತ್ತು, ಕಾರಣ ಅಲ್ಲಿ ಪದೆ ಪದೇ ಸಿಕ್ಕು ಹೈರಾಣಾಗಿಸುವ ರೋಡ್ ಬ್ರೇಕರ್ಸ್, ಸಣ್ಣ ಪುಟ್ಟ ಹಳ್ಳಿಗಳು. ಕನಕಪುರ ರಸ್ತೆಯೇ ಉತ್ತಮ ಅಂತ ನಿರ್ಧರಿಸಲಾಗಿತ್ತು. ನೇರವಾಗಿ ಹೊರಟವರು 80 90ರ ವೇಗದಲ್ಲಿ 8 ಮುಕ್ಕಾಲಿನ ಸಮಯಕ್ಕೆ ಮೈಸೂರಿನ ಹೊರವಲಯದ ಊಟಿ ರೋಡಿಗೆ ತಲುಪಿದೆವು. ಬನ್ನೂರು ಮಾರ್ಗವಾಗಿ ತೆಗೆದುಕೊಂಡ ರಸ್ತೆ ಚೆನ್ನಾಗಿಯೇ ಇತ್ತಾದರೂ ಅಲ್ಲಲ್ಲಿ ಅಲ್ಪ ಸ್ವಲ್ಪ ಕೆಟ್ಟ ರಸ್ತೆ. ವೇಗ 50 ರಿಂದ 60 ಕ್ಕೆ ಇಳಿಯಬೇಕಾಗುತ್ತದೆ. ಒಂದೇ ಸ್ಟ್ರೆಚ್ ನಲ್ಲಿ ಸುಮಾರು 165 ಕಿಮೀ ಕ್ರಮಿಸಿದ್ದು ಮತ್ತು ಬಿಸಿಲು ಬಿಸಿಲೇರುವ ಮೊದಲೇ ಅರ್ಧದಷ್ಟು ಕ್ರಮಿಸಿರುವ ಎರಡು ಖುಷಿ ನಮ್ಮದಾಗಿತ್ತು. ಹೈವೇಯಲ್ಲೇ ಒಳ್ಳೆ ಉಪಹಾರಾಗೃಹ ಹುಡುಕುವತ್ತ ಕಣ್ಣೋಟಗಳು. ಸ್ವಲ್ಪವೇ ದೂರದಲ್ಲಿ ರುಚಿ ಮನೆ ಪ್ಯೂರ್ ವೆಜ್ ಎಂಬ ಬೋರ್ಡ್ ಕಾಣಿಸಿದ್ದೆ ತಡ ಬೈಕು ಹೋಟೆಲಿನ ಪಾರ್ಕಿಂಗ್ ಆವರಣಕ್ಕೆ ನುಗ್ಗಿತು.
ದೊಡ್ಡ ಹೋಟೆಲಿನ ಬಿಲ್ಲುಗಳೂ ಸಹ ದೊಡ್ಡದಾಗಿಯೇ ಇರುತ್ತವೆ ಆದರೆ ಪ್ಯೂರ್ ವೆಜ್ ಅನ್ನೋ ಟ್ಯಾಗ್ ಲೈನೇ ಹಾಗೆ, ಏನು ಮಾಡಲಿಕೆ ಆಗಲ್ಲ. ಬಿಲ್ಲಿನ ಬಗ್ಗೆ ಆಮೇಲೆ ಚಿಂತಿಸದರಾಯ್ತು ಅಂತ ಭರ್ಜರಿ ಹೊಟ್ಟೆ ಪೂಜೆಗೆ ಮಣೆ ಹಾಕಿದ್ವಿ. ಉಪಹಾರದ ನಂತರ ಕೆಲ ನಿಮಿಷದ ವಿಶ್ರಾಂತಿ ಸಮಯದಲ್ಲಿ ಹಾಗೆ ಗೂಗಲ್ ಮ್ಯಾಪ್ ಅಲ್ಲಿ ವಿಹರಿಸುವಾಗ ಅದೇ ರಸ್ತೆ ಯಲ್ಲೇ ಸಿಗುವ ನಂಜನಗೂಡು. "ಶ್ರೀಕಂಠೇಶ್ವರ ದೇವಸ್ಥಾನ, ಫೇಮಸ್ ಟೆಂಪಲ್, ವಿಸಿಟ್ ಹಾಕಿ ಹೋಗೋಣ" ಸಿದ್ಲಿಂಗ್ ಯಾಂತ್ರಿಕ ದ್ವನಿಯಲ್ಲಿ ಉದ್ಗರಿಸಿದ. ದೇವಸ್ಥಾನದ ಕ್ಲೋಸಿಂಗ್ ಸಮಯೂ ದೂರ ಇತ್ತು. ದಿನವೂ ಯುಗಾದಿಯ ದಿನ, ಒಳ್ಳೆದಿನದಂದು ಒಳ್ಳೆಯ ದೇವಸ್ಥಾನಕ್ಕೆ ಭೇಟಿ ಕೊಡುವ ಬಂಪರ್ ಆಫರ್ ಅಲ್ಲಿ ಕೈಗೆಟಕಿತ್ತು. ಅಂತೆಯೇ ಬೈಕ್ ಸ್ಟಾರ್ಟ್ ಮಾಡಿ ಹಿಡಿದ ಎಕ್ಸೆಲರೇಟರ್ ಬಿಟ್ಟದ್ದು ಶ್ರೀಕಂಠೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿಯೇ. ಅದಾಗಲೇ ಹತ್ತು ಗಂಟೆಯ ಮೇಲಾಗಿದ್ದರಿಂದ ಬಿಸಿಲು ಚುರುಗುಟ್ಟಲು ಶುರುವಿಟ್ಟಿತ್ತು. ಹೆಲ್ಮೆಟ್ ಒಳಗಿನಿಂದ ತಲೆ ತೆಂವವಾಗುವಷ್ಟು ಶಕೆ. ಸುಧಾರಿಸಿಕೊಳ್ಳಣವೇನೋ ಎನ್ನುವಷ್ಟರಲ್ಲೇ ನಂಜನುಗುಡು ಸಮೀಪಿಸಿತ್ತು, ಮತ್ತೇಕೆ ರೆಸ್ಟ್ ಅಂತ ನೇರವಾಗಿಯೇ ದೇವಸ್ಥಾನಕ್ಕೆಯೇ ತಲುಪಿದೆವು. ದೂರದಿಂದಲೇ ಸುಂದರ ಗೋಪುರಗಳು ಕಾಣಿಸುತ್ತಿದ್ದವೂ. ಸುಂದರ ದೇವಾಲಯದ ಸೌಂದರ್ಯ ಹೋರಗಿದ್ದಾಗಿನಿಂದಲೇ ಆಕರ್ಷಿಸುತ್ತಿತ್ತು. ಹೂವಿನಂಗಡಿಯೊಂದರ ಹತ್ತಿರ ಬೈಕ್ ಪಾರ್ಕ್ ಮಾಡಿ ಅಲ್ಲಿಯೇ ಹೂವು ಹಣ್ಣು ಕೊಂಡುಕೊಂಡು ಒಳಗಡೆ ಹೊರಟಾಯ್ತು. ಬಿಸಿಲು ಕಾವೇರಿದ್ದು ಕಾಲಿಗೂ ತ್ರಾಸದಾಯಕವಾಗಿತ್ತು. ಆದಷ್ಟು ಬೇಗ ಬಿಸಿಲಿನಿಂದ ತಪ್ಪಿಸಿಕೊಳ್ಳಲಿಕೆ ಹಾಕಿದ್ದ ಬಿಳಿ ಬಣ್ಣದ ಪಟ್ಟಿಗಳ ಮೇಲೆ ನಡೆಯಲು ಎಲ್ಲಿಲ್ಲದ ಅವಸರ. ಬಿಸಿಲುನಾಡಿನ ಕಲಿಗಳು ಇಂತಹ ತುಸು ಬಿಸಿಲಿಗೆ ತತ್ತರಿಸುವ ಮಟ್ಟಕ್ಕೆ ನಾವುಗಳು ಬದಲಾಗಿದ್ದು ನಂಬಲಿಕೆ ಅಸಾಧ್ಯವೆನ್ನುವಂತಿತ್ತು. ಹಬ್ಬವಾಗಿದ್ದರೂ ಅಷ್ಟೇನು ಜನಸಂದಣಿ ಇರಲಿಲ್ಲ. ಅದು ಮಂಗಳವಾರ. ಸೋಮವಾರವೇ ಬಹುತೇಕ ಜನ ಭೇಟಿ ಕೊಟ್ಟು ಹೋಗಿರುವ ವಿಚಾರವನ್ನ ಹೂವಿನಂಗಡಿಯವನು ಕಿವಿಯ ಪಕ್ಕದಿಂದ ಜಾರಿಸಿದ್ದ. ಗ್ರಾನೈಟ್ ಕಲ್ಲುಗಳಿಂದ ಕಟ್ಟಿದ್ದ ದೇವಸ್ಥಾನ. ದೇವಸ್ಥಾನದ ಗೋಡೆಗಳ ಮೇಲೆಲ್ಲಾ ವಾಸ್ತುಶಿಲ್ಪದ ಮೆರಗು. ತೃಪ್ತದಾಯಕ ಭಾವ ದೇವಸ್ಥಾನದೊಳಗೆ. ದರ್ಶನ ಮುಗಿಸಿಕೊಂಡು ದೇವಸ್ಥಾನದೊಳಗೆಯೇ ಕೊಂಚ ಹೊತ್ತು ಕೂತು ವಿಶ್ರಾಂತಿಸಿದಾಯ್ತು. "ಸ್ವಲ್ಪ್ ಅಡ್ಡಾಗ್ತೀನಿ, ನಿದ್ದಿ ಬೆಕ್ ಅನಸ್ತದ" ಭಾಗಶಃ ಹಲ್ಲು ಕಿಸಿದು ಹೇಳಿದ ಸಿದ್ಲಿಂಗ್ ಅಲ್ಲೇ ಕಂಬಗಳಿಗೆ ವರಗಿ ಕುಳಿತ. ಹೊರಗಿನ ಚುರುಗುಡುವ ಬಿಸಿಲು ಜಾಸ್ತಿ ಹೊತ್ತು ಕುಳಿತುಕೊಳ್ಳುವ ಹಾಗಿಲ್ಲ ಎನ್ನುವಂತ್ತೆ ವರ್ತಿಸುತ್ತಿತ್ತು. ಕ್ರಮಿಸಬೇಕಾದ ದೂರ ದೂರವೇ ಇದೆ ಎಂಬದು ಅರಿವಿಗೆ ಬಂದ ತಕ್ಷಣ ನೆಲಕ್ಕೆ ಕೈಯೂರಿ ಮೆಲೆದ್ವಿ.
ಮಧ್ಯಾಹ್ನದ ಬಿಸಿಲು ಸಂಪೂರ್ಣವಾಗಿ ಹಬ್ಬಿತ್ತು. ಹೆಲ್ಮೆಟ್ ಒಳಗಿನಿಂದಲೇ ಬೆವರು ಹನಿಗಳು ಕುತ್ತಿಗೆ ತುಂಬೆಲ್ಲಾ ಹಬ್ಬಿವೆ. ಹೆಲ್ಮೆಟಿನ ಮುಚ್ಚಳ ಸ್ವಲ್ಪ ತೆರೆದರೂ ಬಿಸಿ ಗಾಳಿ ಮುಖಕ್ಕೆ ರಪ್ ಅಂತ ಬಾರಿಸುತ್ತಿದೆ. ಇಂತಹದರ ಮಧ್ಯೆ ಸಿದ್ಲಿಂಗ್ ಧರಿಸಿ ಕೂತಿದ್ದದ್ದು ಎಮರ್ಜೆನ್ಸಿ ಫೆರಾರಿ ಹೆಲ್ಮೆಟ್, 150 ರೂಪಾಯಿಯ ತೆಂಗಿನ ಚಿಪ್ಪಿನಂತಹ ಹೆಲ್ಮೆಟ್. ಇದರಲ್ಲಿ ಅಷ್ಟು ದೂರ ಬಂದದ್ದೇ ಸಾಹಸವಾಗಿತ್ತು, ತಡಮಾಡದೆ ಒಳ್ಳೆ ಹೆಲ್ಮೆಟ್ ತಗೊಂಡರಾಯ್ತು ಅಂತ ಸುಮಾರೂ ದೂರವೇ ಬಂದು ಬಿಟ್ಟಿದ್ವಿ. ಗುಂಡ್ಲುಪೇಟೆಯ ಹತ್ತಿರ ರಸ್ತೆ ಬದಿ ಹೆಲ್ಮೆಟ್ ಖರೀದಿಸಿದ್ವಿ. ಅಲ್ಲಿಂದ ಹಾಗೆ ವೇಗ ಕ್ರಮಿಸುತ್ತಾ ಹೋಗಿ ಮುಂದಿನ ನಿಲ್ದಾಣ ಊಟಕ್ಕೇನೆ ಎನ್ನುವ ತಾಕೀತು ಮನದಟ್ಟು ಮಾಡಿಕೊಂಡು ಮುನ್ನುಗುತ್ತಲೇ ಇದ್ವಿ. ಗುಂಡ್ಲುಪೇಟೆಯ ನಂತರ ಕೆಲವೇ ಕಿಮೀ ಗಳಲ್ಲಿ ಸಿಕ್ಕಿದ್ದು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯ. ಸುಂದರ ಬೆಟ್ಟ ಗುಡ್ಡಗಳ ಮಧ್ಯೆಗಿನಿಂದ ಹಾದು ಹೋಗುವ ಚಿಕ್ಕ ರಸ್ತೆ, ಸುಂದರವಾದ ರಸ್ತೆ. ಬಂಡೀಪುರ ಶುರುವಾಗಿದ್ದೆ ತಡ, ಹೆಜ್ಜೆಗೆಜ್ಜೆಗೂ ಹೇರಳವಾಗಿ ನೋಡ ಸಿಗುವ ಜಿಂಕೆಗಳು. ಸುಂದರ ರಸ್ತೆಯಲ್ಲಿ ಆಗಾಗ ಸಿಗುವ ತಿರುವುಗಳು, ಕಡಿಮೆವೆಗದಲ್ಲಿ ಬೈಕ್ ತಿರುವುಗಳಲ್ಲಿ ಮಲಗಿ ಏಳುವಾಗ ಕೊಡುವ ಆಹ್ಲಾದತೆ ಮತ್ತೊಂದರಲ್ಲಿಲ್ಲ ಎನ್ನಬಹುದು, ಅಷ್ಟು ಅದ್ಭುತವಾದ ಅನುಭವ. ಹೀಗೆ ತಿರುವುಗಳಲ್ಲಿ ಹೊರಳುತ್ತ ಅತ್ತಲಿತ್ತ ನೋಡುತ್ತಲೇ ಬಂಡೀಪುರ ದಾಟಿದೆವು. ಮುಂದೆ ಮಧುಮಲೈ ಅರಣ್ಯಪ್ರದೇಶ ಸ್ವಾಗತಿಸಿತು, ತಮಿಳುನಾಡಿನಲ್ಲಿ ಕಾಲಿಟ್ಟೆವು. ಬಂಡೀಪುರ ಪ್ರವೇಶದಲ್ಲಿ ಕೇಳದ ಮತ್ತು ಇರದ ಚೆಕಿಂಗ್ ಇಲ್ಲಿ ಭಾರಪೂರವಾಗಿಯೇ ನಡೆದಿತ್ತು, ಬೈಕುಗಳಿಗೇನು ಅಡಚಣೆ ಇರಲಿಲ್ಲ. ಚೆಕ್ ಪೋಸ್ಟ್ ದಾಟುತ್ತಿದ್ದಂತ್ತೆ ಎಡಕ್ಕೆ ಹರಿಯುವ ಹಳ್ಳದಲ್ಲಿ ಮಾವುತನೊರ್ವ ಆನೆಗೆ ಸ್ನಾನ ಮಾಡಿಸುತ್ತಿದ್ದ. ಅದನ್ನ ಕಂಡು ನಮ್ಮ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ಆನೆ ನೋಡುವುದು ಮತ್ತು ಆನೆಯನ್ನ ಕಾಡಿನಲ್ಲಿ ನೋಡುವುದಕ್ಕೆ ಇರುವ ವ್ಯತ್ಯಾಸ ಅಲ್ಲಿ ಗೊತ್ತಾಗಿತ್ತು. ಮುಂದೆ ಹೋಗುತ್ತಿದ್ದಂತ್ತೆ ಮರಗಳನ್ನಾವರಿಸಿದ ಕಾಡುದಾರಿ ಇನ್ನಷ್ಟು ಮನಮೋಹಕವಾಗಿ ಕಾಣಿಸುತ್ತಿತ್ತು. ಬಹುಶಃ ಮಳೆಗಾಲದಲ್ಲಿಯೂ ಅಥವಾ ಮಳೆ ನಂತರದ ಚಳಿಗಾಲದಲ್ಲಿ ಬಂದಿದ್ದರೆ ಈ ಸೊಬಗು ಸ್ವರ್ಗವನ್ನೇ ಮೀರಿಸುವಂತಿರುತ್ತಿತ್ತೇನೋ ಎಂಬ ಮಾತುಗಳನ್ನ ಆನೊಂದು ತಾಂವೊಂದು ಎಂಬಂತ್ತೆ ಹಿಂಬದಿಯಲ್ಲಿ ಕೂತ ಸಿದ್ಲಿಂಗ್ ಉಸುರುತ್ತಲೇ ಇದ್ದ. ಕಾಡುದಾರಿಯಾಗಿದ್ದರಿಂದ ಪ್ರತಿ ಕಿಮೀ ಗೆ ಒಂದು ಎಂಬಂತ್ತೆ ರೋಡ್ ಬ್ರೇಕರ್ ಹಾಕಿದ್ದರು. ಬೈಕಿಗೂ ನಮಗೂ ತ್ರಾಸದಾಯಕ ಆದರೆ ಅಲ್ಲಿರುವ ಪ್ರಾಣಿಗಳ ಬಗೆಗಿನ ಕಾಳಜಿಗೆ ಅದೆಲ್ಲ ಅವಶ್ಯಕವೇ ಎನ್ನುವುದು ಒಪ್ಪಲೇಬೇಕಾದ ಸತ್ಯ. ಸುಂದರವಾದ ಮಧುಮಲೈ ಅರಣ್ಯಪ್ರದೇಶ ಮುಗಿಸಿ ಬೈಕಿನ ಎಕ್ಸೆಲರೇಟರ್ ಎಳೆಯುತ್ತಿದ್ದಂತ್ತೆ ಮುಂದೆ ಬಂದು ಸ್ವಾಗತಿಸಿದ್ದು ಗುಡುಲೂರು.
ಗುಡುಲೂರಿಗೆ ತಲುಪುವಹೊತ್ತಿಗೆ ಮಧ್ಯಾಹ್ನದ 2 ಗಂಟೆ ದಾಟಿಯಾಗಿತ್ತು. ಊಟದ ಸಮಯ, ಅತ್ತಲಿತ್ತ ನೋಡುವಾಗ ಬಲಕ್ಕೆ ಉಡುಪಿ ಹೋಟೆಲೊಂದು ಕಂಡಿತಾದರೂ ಮುಂದೆ ಮತ್ತೆ ಸಿಗಬಹುದೆಂದು ನಿಧಾನವಾಗಿಯೇ ಹೊರಡುತ್ತಿದ್ದೆವು, ಆದರೆ ಎಲ್ಲಿಯೂ ಪ್ಯೂರ್ ವೆಜ್ ಅಲ್ಲದಿದ್ದರೂ ಸಾಮಾನ್ಯ ವೆಜ್ ಹೋಟೆಲು ಕೂಡ ಕಾಣಸಿಗುತ್ತಿಲ್ಲ. "ಇಲ್ಲಿ ಎಲ್ಲಾ ಹಿಂಗೆ ಇದೆ ಅನಸ್ತದ" ಸಿದ್ಲಿಂಗ್ ಹೆಲ್ಮೆಟಿನ ವೈಸರ್ ಎತ್ತಿ ಹೇಳಿದ. "ಹೆಂಗ್ ಇವಾಗ, ಯು ಟರ್ನ್ ತಗೋಬೇಕಾ?" ಅಂತ ಕೇಳಿದ್ದಕ್ಕೆ ಹೆಗಲಮೇಲೆ ಇರುವೆ ಶಹಬಾಶಿ ಕೊಟ್ಟಂತ್ತೆ ತಟ್ಟಿದ. ಬೈಕಿನ ಮುಖ ಬಲಕ್ಕೆ ಹೊರಳಿಸುತ್ತ ಬಲಗಾಲು ನೆಲಕ್ಕೊಮ್ಮೆ ಉರುತ್ತ ಹಿಂದೆ ಹೋಗಿದ್ದ ಉಡುಪಿ ಹೋಟೆಲಿಗೆ ಹೋದ್ವಿ. ಹೊರಗಡೆ ಬೈಕ್ ಪಾರ್ಕ್ ಮಾಡಿ ಒಳಗೆ ಬಂದು ಟೇಬಲ್ಲೊಂದರ ಮೇಲೆ ಹಕ್ಕು ಜಮಾಯಿಸಿ ಮುಖಕ್ಕೆ ನೀರು ತಾಕಿಸಿ ಫ್ರೆಶ್ ಆಗಿ ಬಂದು ಕುಳಿತು, ಊಟದ ಮೆನುವಿನಲ್ಲಿ ತಲೆಯಾಡಿಸುತಿದ್ವಿ. ಮೆನು ನೋಡುತ್ತಿದ್ದಂತ್ತೆ ಇಬ್ಬರೂ ಒಬ್ಬರಿಗೊಬ್ಬರು ಆಶ್ಚರ್ಯಚಕಿತವಾಗಿ ನೋಡಿದ್ವಿ. ಮೆನು ಅಲ್ಲಿ ನಾನ್ ವೆಜ್ ಕೂಡ ಇತ್ತು. ಪ್ಯೂರ್ ವೆಜ್ ಬಿಕೆಮ್ ಜೋಕ್ ಆನ್ ಡಿ ಸ್ಪಾಟ್. ಉಡುಪಿ ಹೋಟೆಲಿನ ಲಕ್ಷಣಗಳು ಹೋಟೆಲಿನಲ್ಲೂ ಇಲ್ಲ, ಅಲ್ಲಿನ ಕೆಲಸದವರಲ್ಲೂ ಇಲ್ಲ, ಇತ್ತ ಮೆನುವಿನಲ್ಲೂ ಇಲ್ಲ. ಸಮೀಪದ ವೇಟರ್ ಕಡೆ ಪ್ರಶ್ನಾರ್ಥಕವಾದ ಮುಖಭಾವದೊಂದಿಗೆ ನೋಡಿದ ಸಿದ್ಲಿಂಗ್, ವೆಜ್ ಅಂತ ಕೇಳಿದ. ವೇಟರ್ ರಪ್ ಅಂತ ಇನ್ನೊಂದು ಮೆನು ತಂದಿಟ್ಟ. ಉಡುಪಿ ಹೋಟೆಲಿನ ಹೆಸರಲ್ಲಿತ್ತು, ಮೆನು ವೆಜ್ ಆಗಿತ್ತು. ಇವರ ಅಸಲಿಯತ್ತು ಮೇಲ್ನೋಟಕ್ಕೆ ಅರ್ಥವಾಯ್ತು, ಉಡುಪಿ ಹೋಟೆಲ್ ಎಂಬ ಹೆಸರಿನಲ್ಲಿ ನಯವಾಗಿಯೇ ತಲೆಮೇಲೆ ಕೈಸವರುತ್ತಾರೆ. ಹೊಟ್ಟೆ ಅಳುತ್ತಿದ್ದರಿಂದ ಬೇರಾವ ವಿಷಯಕ್ಕೂ ಅಳಲು ನಮ್ಮಲ್ಲಿ ಪ್ರಾವಧಾನವಿರಲಿಲ್ಲ. ಒಲ್ಲದ ಮನಸ್ಸಿನಿಂದ ಸಿದ್ಲಿಂಗ್ ಎರಡು ಮೀಲ್ಸ್ ಹೇಳಿದ. ಊಟ ಆ ಉಡುಪಿ ಹೋಟೆಲಿನ ಸತ್ಯದಷ್ಟೇ ರುಚಿಯಾಗಿತ್ತು. "ಉಡುಪಿ ಹೋಟೆಲ್ ದು ಒಂದ್ DNA ನು ಇಲ್ಲ ಇದ್ರಾಗ್" ಅಂತ ಹೇಳಿ ಗಹಗಹಿಸಿ ನಕ್ಕ ಸಿದ್ಲಿಂಗ್. ತೃಪ್ತಿ ಎಂಬ ಅತೃಪ್ತಿ ಮಾಡಿಕೊಂಡು ಕೆಲಹೊತ್ತು ಹೋಟೆಲಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಾ ಗೂಗಲ್ ಮ್ಯಾಪಿನಲ್ಲಿ ಕಣ್ಣಾಡಿಸಿದ್ದಾಯ್ತು. ಅವಾಗಲೇ ಗೊತ್ತಾಗಿದ್ದು, ಬರುವಾಗ ಊಟಿ-ಮೈಸೂರು ಮಾರ್ಗ ಬಿಟ್ಟು ಗುಡುಲೂರು ಕೊಯಂಬತುರು ಮಾರ್ಗ ಹಿಡಿದ್ದೇವೆ ಅಂತ. ಅದು ನಮ್ಮ ಮರ್ಮಕ್ಕೆ ತಲುಪಿ ಘಾಸಿಗೊಳಿಸುವುದರಲ್ಲೇ ಸಿದ್ಲಿಂಗ್ ಶಾಂತಗೊಳಿಸಿದ. ನಾವು ಊಟಿಗೆ ಹೋಗಿ ನೋಡಬೇಕಿರುವ ಹಲವು ಸ್ಥಳಗಳು ಅದೇ ರೂಟ್ ಅಲ್ಲಿ ಸಿಗುವಂತಹವು. ಚಿಕ್ಕದೊಂದು ಲಿಸ್ಟ್ ತಲೆಯಲ್ಲೇ ಸಿದ್ಧಪಡಿಸಿಕೊಂಡು ನಾಲ್ಕೈದು ಸ್ಥಳಗಳ ಹೆಸರೇನೋ ಹೇಳಿದ. ಅದೆಲ್ಲ ಚೆಕ್ ಮಾಡುವುದು ನನ್ನ ವ್ಯಾಪ್ತಿಗೆ ಸೇರಿದ್ದಲ್ಲ ಎನ್ನುವ ದನಿಯಲ್ಲೇ ಹುಂಗುಡುತ್ತಿದ್ದೆ. ಈನ್ನೊಮ್ಮೆ ಕೊಟ್ಟ ಹಣ ವಸೂಲಿ ಆಗಲಿ ಎಂಬಂತ್ತೆ ಕಂಠಪೂರ್ತಿ ನೀರು ಕುಡಿದು ಬೈಕ್ ಹೊರಳಿಸಿ ಮುಂದೆ ಸಾಗಿದ್ವಿ. ಊಟವಾಗಿದ್ದರಿಂದ ನೆಲಕಚ್ಚಿದ್ದ ಹುಮ್ಮಸ್ಸು ಜಾಗೃತವಾಯ್ತು. ಎಕ್ಸೆಲರೇಟರ್ ಜೋರಾಗದೊಡಗಿತು, ಮುಂಬರುವ ಸುಂದರ ಸ್ಥಳಗಳತ್ತ.
ಬೆಟ್ಟದ ಒಂದು ಬದಿಯಲ್ಲಿ ಅತ್ತಲೊಮ್ಮೆ ಇತ್ತಲೊಮ್ಮೆ ಎಂಬಂತ್ತೆ ಕೊರೆದು ಸಿದ್ಧಪಡಿಸಿದ್ದ ರಸ್ತೆಗಳು. ತಿರುವುಗಳನ್ನ ಎಣಿಸುತ್ತಲೇ ಮೇಲಕ್ಕೆ ಹತ್ತುತ್ತೇವೆ, ಎಡಕ್ಕೊಮ್ಮೆ ಬಲಕ್ಕೊಮ್ಮೆ ಬರುವ ಪ್ರಪಾತಗಳು, ಒಂದು ಕ್ಷಣ ಆಕಡೆ ನೋಡಬೇಕು ಅನ್ನಿಸಿದರೂ ನೋಡಲಿಕೆ ಆಗುವುದಿಲ್ಲ, ನೋಡು ನೋಡುತ್ತಲೇ ತಿರುವಿನ ಮರೆಯಿಂದ ಒಮ್ಮೆ ಮುಂದೆ ಬರುವ ವಾಹನಗಳು, ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಹಗುರವಾಗಿಯೋ ಜೋರಾಗಿಯೋ ಅಪಘಾತ ತಪ್ಪಿದ್ದಲ್ಲ. ಆಗ ತಾನೆ ಚಿಕ್ಕ ಪುಟ್ಟ ತಿರುವಗಳಿಗೆ ಪರಿಚಯವಾಗಿದ್ದ ಬೈಕು ಮತ್ತು ನನಗೆ ಹೋಗು ಹೋಗುತ್ತಲೇ ಒಂದೊಂದಾಗಿ ಹೈರ್ ಪಿನ್ ತಿರುವುಗಳು ಸ್ವಾಗತಿಸತೊಡಗಿದವು. ಮೊದಲಿಗೆ ಒಂದೆರಡು ಬಾರಿ ನಿಧಾನವಾಗಿಯೇ ನಿಭಾಯಿಸಿ, ಅವುಗಲ ಉದ್ದ ಅಗಲ ಅರಿವಿಗೆ ಬರುತ್ತಿದ್ದಂತ್ತೆ ಬೈಕು ನೆಲಕ್ಕೆ ಅಪ್ಪುವಂತಹ ಚಾಕಚಕ್ಯತೆ ಅಳವಡಿಸಿಕೊಂಡಿತ್ತು. ತಿರುವುಗಳಲ್ಲಿ ಮಲಗಿ ಏಳುವ ಪರಿಗೆ ಸಿದ್ಲಿಂಗ್ ಕೊಂಚ ಸಿಡಿಮಿಡಿಗೊಳ್ಳುತ್ತಿದ್ದ. ಮುಂದೆ ಸಾಗುತ್ತಲೇ ಹಲವು ಚಿಕ್ಕಪುಟ್ಟನಗರಗಳ ಸ್ವಾಗತ. ಕಿಕ್ಕಿರಿದ ಟ್ರಾಫಿಕ್. ಹಾಗೂ ಹೀಗೂ ಬೈಕು ನುಗ್ಗಿಸುತ್ತ ಆ ದಟ್ಟಣೆ ದಾಟಿದರಾಯ್ತು ಅನ್ನುವುದೊಂದೆ ನಮ್ಮ ಲಕ್ಷ್ಯ. ಬೆಟ್ಟಗಳಲ್ಲಿಯೇ ಕೊರೆದು ನಿರ್ಮಿಸಿದ್ದ ಮನೆಗಳು ಅಚ್ಚುಕಟ್ಟಾದ ಭಿನ್ನ ಭಿನ್ನ ಬಣ್ಣಗಳಿಂದ ಅಲಂಕೃತಗೊಂಡಿದ್ದವು. ಮಳೆಗಾಲದಲ್ಲಿಯೋ ಅಥವಾ ಚಳಿಯಲ್ಲಿಯೋ ಬೆಳಗಿನ ಜಾವದ ಸುಂದರ ಸೊಬಗು ಸವಿಯಲು ಸಿಗುವ ಇವರುಗಳೇ ಅದೃಷ್ಟವಂತರು ಎನಿಸುತ್ತದೆ. ಅಷ್ಟು ಸುಂದರವಾಗಿ ಪ್ರಕೃತಿಯ ಮಧ್ಯೆ ವಸುಹಾತುಗಳು ನಿಂತಿದ್ದವು. ಹೀಗೆ ಕೆಲವು ಕಿಮೀ ಕ್ರಮಿಸುತ್ತಲೇ ಕೆಲವು ತಿರುವುಗಳನ್ನ ದಾಟಿದಾಗ ಏಕಾಏಕಿ ಪ್ರಕೃತಿಯ ಸೌಂದರ್ಯದ ಉತ್ತುಂಗವೇ ಇದು ಎನ್ನುವಷ್ಟು ಮನಮೋಹಕ ಸ್ತಳಕ್ಕೆ ಕಾಲಿಟ್ಟೆವೆಂಬ ಅನುಭೂತಿ. ಅದು ಪೈನ್ ಟ್ರೀಗಳ ಗುಚ್ಛ. ಉದ್ದಕೆ ನೂರಾರು ಅಡಿ ಎತ್ತರದ ಮರಗಳ ಗುಚ್ಛ ಕಂಡದ್ದೆ ತಡ, ವಾವ್ ಎಂದು ಉದ್ಘರಿಸಿ ಬೈಕನ್ನ ಸಡಿಗೆ ತಲುಪಿಸಿ ಇಗ್ನಿಷನ್ ಆಫ್ ಮಾಡಿದ ಅರಿವೇ ನಮಗಿರಲಿಲ್ಲ. ಅಲ್ಲೊಂದು ತುಸು ಹೊತ್ತು ತಂಗಿ ಪ್ರಕೃತಿಯ ಇಂತಹದೊಂದು ಸೊಬಗಿಗೆ ಸಮಯದ ಕಂದಾಯ ಪಾವತಿ ಮಾಡಿ, ಸೌಂದರ್ಯ ಕೊಂಡುಕೊಂಡು ಮೈಮನ ಮುದಗೊಳಿಸಿಕೊಂಡ್ವಿ. ಅಲ್ಲಿಂದಲೇ ಬೈಕು ಮತ್ತೆ ಸ್ಟಾರ್ಟ್ ಮಾಡಿ ಒಂದೆರಡು ತಿರುವುಗಳಿಗೆ ಮಲಗಿ ಏಳುವುದರಲ್ಲಿ ಮ್ಯಾಪ್ ಅಲ್ಲಿ ಗುರುತಿಸಿದ್ದ "ನೀಡಲ್ ರಾಕ್ ವೀವ್ ಪಾಯಿಂಟ್" ಹಾಯ್ ಹೇಳಿತ್ತು.
ಅದಾಗಲೇ ಎತ್ತರದ ಪ್ರದೇಶಕ್ಕೆ ಪ್ರವೇಶಿಸಿದ್ದರಿಂದ ಬಿಸಿಲು ತಣ್ಣಗೆನಿಸುತ್ತಿತ್ತು. ಬೈಕ್ ಪಾರ್ಕ್ ಮಾಡಿ ಟಿಕೆಟ್ ಪಡೆದುಕೊಂಡು ಇನ್ನೂರು ಮೀಟರ್ ದೂರಕ್ಕೆ ಕ್ರಮಿಸುತ್ತಿದ್ದಂತ್ತೆ ನೆಟ್ಟಗೆ ನೆಟ್ಟ ಎತ್ತರದ ಬೆಟ್ಟ, ಸುತ್ತಲು ಕಬ್ಬಿಣದ ಗ್ರಿಲ್ಸ್ ಹಾಕಿ ವೀಕ್ಷಣೆಗೆ ಅನುವು ಮಾಡಿಟಿದ್ದರು. ಸುತ್ತಲೂ ಮನಮೋಹಕ ದ್ರಶ್ಯ. ಒಂದು ಕಡೆ ಭೂಮಿಯಿಂದ ಮೇಲೆದ್ದ ಅನುಭವವಾದರೆ ಇನ್ನೊಂದೆಡೆ ಗಗನಚುಂಬಿ ಪರ್ವತಗಳು, ಅವುಗಳ ಮಧ್ಯೆಯೇ ಹಾದು ಹೋಗುವ ರಸ್ತೆ. ಸೂಜಿಯಾಕಾರದ ಕಲ್ಲು ಎಂಬರ್ಥ ನೀಡಲ್ ರಾಕ್, ಹೆಸರಿಗೆ ತಕ್ಕಂತೆಯೇ ನೀಳವಾಗಿ ನಿಂತಿತ್ತು. ಅಲ್ಲೊಂದು ತುಸು ಹೊತ್ತು ನೆಮ್ಮದಿಯೆನ್ನುವಷ್ಟು ಸಮಯ ಕಳೆದು, ಜಿಗುಪ್ಸೆ ಬರುವಂತಹ ಫೋನುಗಳಲ್ಲಿ ಸಾಕ್ಷಿಗೆಂಬಂತ್ತೆ ನಾಲ್ಕಾರು ಚಿತ್ರಗಳನ್ನ ಕ್ಲಿಕ್ಕಿಸಿಕೊಂಡೆವು. ಸ್ವಲ್ಪ ಆಯಾಸವೆನಿಸುತ್ತಿರುವುದಕ್ಕೋ ಅಥವಾ ಬಿಸಿಲ ಬೇಗೆಗೋ, ನಿರಾದರೂ ಸರಿ, ಸೋಡಾವಾದರು ಸರಿ ಎಂದು ಅಲ್ಲಿದ್ದ ಫಾರೆಸ್ಟ್ ಪೋಸ್ಟ್ ನಲ್ಲಿಯೇ ಇದ್ದ ಪಾನೀಯ ಹೊಟ್ಟೆಗಿಳಿಸಿ ತಂಪೆರೆಚಿಕೊಂಡಾಯ್ತು. ಅಲ್ಲಿಂದ ಊಟಿ ಮೂವತ್ತೋ ನಾಲವತ್ತೋ ಕಿಮೀ ಇತ್ತೇನೋ. ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಪಡೆದದ್ದಾಯ್ತು. ಹೆಲ್ಮೆಟ್ ಧರಿಸಿ ಮುಂದಿನ ನಿಲ್ದಾಣ ಊಟಿಯಂತಲೆ ನಿರ್ಧರಿಸಿ ಗಿಯರ್ ಕೆಳಕ್ಕೆ ತುಳಿದ ಎಕ್ಸಲರೇಟರ್ ತಿರುವಿದೆ. ಆಗಾಗ ಪೈನ್ ಟ್ರೀ ಗುಚ್ಛಗಳ ಮಧ್ಯೆಗಿನಿಂದ ದಟ್ಟ ಕಾಡಿನಲ್ಲಿ ತಿರುವಗಳನ್ನ ದಾಟುತ್ತ ಹೋಗುತ್ತಿದ್ದ ಅನುಭವವಂತು ಹೇಳ ತೀರದು. 50 60ರ ವೇಗದಲ್ಲಿ ಹೋಗುತ್ತಿದ್ದ ಆವೇಶಕ್ಕೆ ಬೈಕಿಗೆ ಒಂತರಹದ ಮಜವೆನಿಸುತ್ತಿತ್ತೇನೋ, ಒಂತರಹ ಸಂತೃಪ್ತಿಯ ಶಬ್ದ ಬೈಕಿನ ಸೈಲೆನ್ಸರಿನದಾಗಿತ್ತು. ಕೇಳಲು ಇಂಪೆನಿಸುತ್ತಿತ್ತು, ಓಡಿಸಲೂ ಸಹ ಹಿತ. ಹೀಗೆ ಹತ್ತಾರು ಕಿಮೀ ಕ್ರಮಿಸುತ್ತಿದ್ದಂತ್ತೆ ಬಲಬದಿಯಲ್ಲಿ ಕಾಣ ಸಿಕ್ಕಿದ್ದು "ಪೈಕರಾ ಬೋಟ್ ಹೌಸ್". ಬೈಕ್ ನಿಧಾನಿಸಿ ನಿಲ್ಲಿಸಿ ಯೋಚನೆ ಮಾಡಿದ್ವಿ. ಇನ್ನು ಸಮಯವಿದ್ದ ಕಾರಣ ಹೋಗಿಬಂದರಾಯ್ತು ಅಂತ ನಿರ್ಧರಿಸಿ ಟಿಕೆಟ್ ಪಡೆದು ಹೊರಟ್ವಿ. ಎರಡು ಕಿಮೀ ಆಫ್ ರೋಡ್. ಮೇಲೆರಿ ಕೆಳಗಿಳಿದು ದಟ್ಟ ಕಾಡು ದಾಟುತ್ತಿದ್ದಂತ್ತೆ ಕಣ್ಣಿಗೆ ತೆಳು ನೀಲಿ ಬಣ್ಣದ ದೊಡ್ಡ ಕೆರೆ. ಪೈಕರಾ ಕೆರೆ. ಬೋಟಿಂಗ್ ವ್ಯವಸ್ಥೆ ಇನ್ನೇನು ಮುಗುಸಿವಂತಹ ಸಮಯ. ಒಂದೊಮ್ಮೆ ಸ್ಪೀಡ್ ಬೋಟಿಂಗ್ ಕಡೆ ಸಿದ್ಲಿಂಗ್ ಒಲವು ತೋರಿದ್ದನಾದರೂ ಇಂತಹದುಕ್ಕೆಲ್ಲ ಇಷ್ಟು ವ್ಯಯ ಮಾಡುವುದು ಅನವಶ್ಯಕ ಎಂಬ ನಿರ್ಧಾರಕ್ಕೆ ಇಬ್ಬರು ಹುಂಗೂಡಿಸೆದೆವು. ಕೆಳಗಿಳಿದು, ವಿಹಾರ ಮುಗಿಸಿ ಬಂದ ಬೋಟ್ ಒಂದರಲ್ಲಿ ಕೂತು ರಮಣೀಯ ಕೆರೆಯ ಸೌಂದರ್ಯ ಸವಿಯುತ್ತಿದ್ದೆವು. ಸ್ವಲ್ಪ ಕೆರೆಯಂತ್ತೆ ನಿರ್ಮಿತಗೊಂಡ ಇಂತಹ ಸ್ಥಳಗಳನ್ನ ಹಾಗೆಯೇ ಲೆಕ್ಕಿಸದೆ ಬಿಡುವ ಚಾಳಿ ತಮಿಳುನಾಡು ಸರ್ಕಾರಕ್ಕಿಲ್ಲ. ಹಾಗೋ ಹೀಗೋ ಅಂತ ಏನನ್ನಾದರೂ ವ್ಯವಸ್ಥೆ ಮಾಡಿ ಅಲ್ಲೊಂದು ಟೂರಿಸ್ಟ್ ಸ್ಪಾಟ್ ಮಾಡಿಯೇ ಬಿಡುತ್ತಾರೆ. ಅದಕ್ಕೆ ಹೌದೆಂಬಂತ್ತೆ ಅಲ್ಲಿ ಸುತ್ತಮುತ್ತಲಿನ ಜನಕ್ಕೆ ಉದ್ಯೋಗ. ಸರ್ಕಾರಕ್ಕೂ ಲಾಭ. ಬೋಟ್ ವ್ಯವಸ್ಥೆ ಮಾಡಿದವರ ಆಫೀಸಿನಲ್ಲಿ ಹಳೆ ತಮಿಳು ಹಾಡುಗಳು ಒಂದಾದರೊಂದಂತ್ತೆ ಬರುತ್ತಲೇ ಇದ್ದವು. ಸಾಹಿತ್ಯ ಮಾತ್ರ ಬೇರೆ, ಸಂಗೀತ ಕನ್ನಡದ ಕೆಲವು ಹಾಡುಗಳನ್ನ ನೆನಪಿಸುತ್ತವೆ. ಅರ್ಥವಾಗದಿದ್ದರೂ ಕೇಳಲಿಕೆ ಇಂಪು, ನಾವಲ್ಲಿ ಸಂಗೀತಕ್ಕೆ ಮಾರುಹೋಗಿದ್ದೆವು. ಸಮಯ ಸಂಜೆಯ 6 ಗಂಟೆ. ಅಲ್ಲಿನ ಸಿಬ್ಬಂಧಿಗಳು ಕೊನೆಯ ಬೋಟ್ ವಿಹಾರ ಮುಗಿಸಿ ತಮ್ಮ ಸಮಗ್ರಿಗಳನ್ನ ಕಟ್ಟಿಡುತ್ತಿದ್ದರು. ತಮಿಳುನಲ್ಲಿ ಕ್ಲೋಸ್ ಆಯ್ತು ಬನ್ನಿ ಅಂತ ಹೇಳುತ್ತಿರುವುದು ಮೇಲಾಗಿ ಅರ್ಥವಾಯ್ತು. ಇನ್ನಷ್ಟು ಕಾಲ ಅಲ್ಲೇ ಕುಳಿತು ನೀರಲ್ಲಿ ತೇಲುತ್ತಿದ್ದ ಬೋಟ್ ಮನಸ್ಸಿಗೆ ಹಿತ ನೀಡುತ್ತಿತ್ತು. ಅತ್ತಕಡೆ ಸೂರ್ಯ ಬೆಟ್ಟದ ತುದಿಯೊಂದರ ಮೇಲಿಂದ ಕೆಳಗಿಳಿಯುತ್ತಿದ್ದ. ಇಳಿ ಸಂಜೆ ತನ್ನ ಸರದಿ ಶುರುವಾಯ್ತು ಎಂಬಂತ್ತೆ ಬಾನಲ್ಲೆಲ್ಲ ಕೆಂಪು ರಂಗು ಹರಡಿಸುತ್ತಿತ್ತು. ಹಗುರಾದ ಭಾವಾದೊಂದಿ ಅಲ್ಲಿಂದ ಹೊರಟ್ವಿ. ಮತ್ತೇ ಮುಂದಿನ ನಿಲ್ದಾಣ ಊಟಿ ಎಂದು ಹೊರಟ್ವಿ. ಇಳಿ ಸಂಜೆಯಲ್ಲಿ ಬಿಸಿಲು ಸಂಬಂಧವೇ ಇಲ್ಲವೇನೋ ಎಂಬಂತ್ತೆ ಮಾಯವಾಗಿತ್ತು. ತಣ್ಣನೆ ವಾತವಾರಣ ಅದಾಗಲೇ ಅಕ್ರಮಿಸಿತ್ತು. ದಟ್ಟಡವಿಯಲ್ಲಿ ಬೈಕು ಮುನ್ನುಗ್ಗುತ್ತಿದ್ದಂತ್ತೆ ತಣ್ಣನೆಯ ಸ್ವರ್ಗದಲ್ಲಿ ಇನ್ನಷ್ಟು ಆಳಕ್ಕೆ ಹೋಗುತ್ತಿದ್ದೇವೆ ಎನ್ನುವ ಅನುಭೂತಿ. ದೇಹಕ್ಕೆ ತಂಪು ಆಹ್ಲಾದವೆನಿಸುತ್ತಿತ್ತು. ಮತ್ತೆ ತಿರುವುಗಳ ಮಜಲು. ಮತ್ತೆ ಸುಂದರಯಾನದ ಖುಷಿ. ಕೆಲ ಕಿಮೀ ಕ್ರಮಿಸಿತಿದ್ದಂತ್ತೆ ಅಲ್ಲಲ್ಲಿ ನಿಂತಿರುವ ವಾಹನಗಳು. ಕೊಂಚಮಟ್ಟದ ಜನದಟ್ಟಣೆ. ಬೈಕ್ ಎಡಬದಿಗೆ ಎಳೆದು ನಿಲ್ಲಿಸಿದ್ವಿ. ಎತ್ತರೆತ್ತದ ಸಮತಟ್ಟವಾದ ಪರ್ವತಗಳು. ಅಲ್ಲಲ್ಲಿ ಕುದುರೆಗಳು ಓಡುತ್ತಿದ್ದವು. "ದೀಸ್ ಇಸ್ ದಿ ಶೂಟಿಂಗ್ ಪಾಯಿಂಟ್" ಸಿದ್ಲಿಂಗನ ಹುಮ್ಮಸ್ಸು ಭರಿತ ಸ್ಟೇಟಮೆಂಟ್ ನನ್ನ ತಲೆಯೊಳಗೆ ಹೋಗುವ ಮೊದಲೇ ಅವನು ಟಿಕೆಟ್ ಕೌಂಟರಿನಲ್ಲಿ ಎರಡು ಟಿಕೆಟ್ ಖರಿಧಿಸಿ ಹಲ್ಲು ಕಿಸಿಯುತ್ತ ನಿಂತಿದ್ದ.
ಸಾವಿರಾರು ಏಕರೆಗಳಷ್ಟು ವಿಶಾಲವಾದ ನುಣುಪಾದ ಬೆಟ್ಟಗಳು, ಸುತ್ತಲೂ ಕೆಂಪು ನಭ, ಅಲೆಗಳಂತ್ತೆ ಹಿಂದಿನಿಂದ ಫ್ರೆಮ್ ಇಟ್ಟಂತಹ ಬೆಟ್ಟ ಗುಡ್ಡಗಳು. ನಿಜಕ್ಕೂ ಇದು ಶೂಟಿಂಗ್ ಪಾಯಿಂಟ್ ಹೌದೆಂಬಂತ್ತೆ ಒಂದಾದಮೇಲೊಂದು ಕಣ್ಣೋಟಕ್ಕೆ ಸಿಗುವ ದೃಶ್ಯಾವಳಿಗಳು. ಬೆಟ್ಟದ ತುಂಬೆಲ್ಲಾ ಅಲ್ಲಲ್ಲಿ ಇರಿಸಿಟ್ಟಿದ್ದ ಬೆಂಚುಕಲ್ಲುಗಳ ಮೇಲೆ ದಂಪತಿಗಳೋ ಅಥವಾ ಭಾವಿ ದಂಪತಿಗಳೋ ಸೂರ್ಯಾಸ್ತಕ್ಕೆ ಕಾಯುತ್ತಿದ್ದರು. ಅಲ್ಲಿ ಗುಂಪಿಗೆ ಸೇರದ ಜೋಡಿ ಎಂದರೆ ನಾವುಗಳೇ. ಬೆಟ್ಟದ ಒಂದು ಹಂತಕ್ಕೆ ಹತ್ತಿ ಸಾಕ್ಷ್ಯಕ್ಕೆ ಒಂದೆರಡು ಫೋಟೋ ಕ್ಲಿಕ್ಕಿಸೋಕೊಂಡೆವು. ಇತ್ತ ಸೂರ್ಯನೂ ಗಂಟುಮೂಟೆಕಟ್ಟಿ ಕೆಳಗಿಳಿಯುತ್ತಿದ್ದ. ಅದಕ್ಕಾಗಿಯೇ ಅಲ್ಲವೇ ಅಲ್ಲಿ ಹತ್ತಾರು ಜನ ಕಾಯ್ದು ಕುತದ್ದು. ನಾವುಗಳೂ ಅಲ್ಲೇ ನೆಲಕ್ಕೆ ಒರಗಿದೆವು. ಸೂರ್ಯ ಯಾಂತ್ರಿಕವಾಗಿ ಬಲು ನಿಧಾನಕ್ಕೆ ಕೆಳಗಿಳಿಯುತ್ತಿದ್ದಾನೆ. ಬೇಡವೆಂದನಿಸಿದರು ಇರಲಿ ಅಂತ ಒಂದೆರಡು ಚಿತ್ರಗಳನ್ನ ಕ್ಲಿಕ್ಕಿಸಿದೆ. ಅವುಗಳನ್ನ ನೋಡಿ ಗಹಗಹಿಸಿ ನಕ್ಕ ಸಿದ್ಲಿಂಗ್. ಫೋನಿನಲ್ಲಿ ಸೆರೆಹಿಡಿಯುವುದು ಅನುಚಿತವೆನಿಸಿ ಕಣ್ಣಲ್ಲೇ ಸೆರೆಹಿಡಿದರಾಯ್ತು ಅಂತ ಅತ್ತಲೇ ನೋಡುತ್ತಾ ಕುಳಿತೆವು. ತುಂಬಾ ಪ್ರಸನ್ನವಾದ ಅನುಭವದಲ್ಲಿ ಮನಸ್ಸು ಹಗುರಗೊಂಡಿತ್ತು. ಬೇಡವೆಂದರೂ ಕಾವ್ಯಾತ್ಮಕವಾಗಿ ಮನಸ್ಸು ಮಾತಡಲಿಚ್ಚಿಸುತ್ತಿತ್ತು. ಸಿದ್ಲಿಂಗ್ ಬಿಟ್ಟರೆ ಬೇರಾರು ಅಲ್ಲಿ ನನ್ನ ಬೇಡದ ಕವನಗಳನ್ನ ಕೇಳುವರಿರಲಿಲ್ಲ. ಅವನೆದುರಿಗೆ ಮನಬಂದಂತ್ತೆ ಊದುತ್ತಿದ್ದೆ. ಸೂರ್ಯನೇನೋ ತನ್ನ ಸಂಬಂಧಿಕ, ಮನೆ ಬಿಟ್ಟು ಹೋಗುತ್ತಿದ್ದನೇನೋ ಎನ್ನುವಷ್ಟು ಗಾಂಭೀರ್ಯದಿಂದ ಅವನ ಚಿತ್ತ ಅತ್ತಲೇ ಇತ್ತು. ಅಷ್ಟೊತ್ತು ನಾನು ಉಸಿರಿದರೂ "ಏನೋ ಹೇಳದಿ, ಏನು?" ಒಂದು ಅರ್ಧ ಕ್ಷಣ ಇತ್ತ ಹೊರಳಿ ಹೇಳಿ ಮತ್ತೆ ಅತ್ತಕಡೆ ನೋಡ ತೊಡಗಿದ. ಹಂತ ಹಂತವಾಗಿ ಸೂರ್ಯ ಎಲ್ಲರಿಗೂ ಬಾಯ್ ಹೇಳುತ್ತಾ ಇಂಚಿಂಚಾಗಿ ಕಣ್ಮರೆಯಾದ. ಅವನು ಹೋದರೂ ಸುತ್ತಲೆಲ್ಲ ಹಬ್ಬಿದ್ದ ಕೆಂಪು ಮಾತ್ರ ಕೆಲ ನಿಮಿಷಗಳ ಕಾಲ ಇನ್ನೂ ತಾನಿದ್ದೇನೆ, ತನ್ನನ್ನೂ ನೋಡಿ ಖುಷಿ ಪಡಿ ಎನ್ನುವರ್ಥದಲ್ಲಿ ಜೀವಂತವಾಗಿಯೇ ಇತ್ತು. ಅಂಗಾತ ಮಲಗಿ ಸೂರ್ಯಾಸ್ತ ನೋಡುತ್ತಿದ್ದದ್ದು ಅಲ್ಲಿ ನಾವಷ್ಟೇ. ಮಲಗಿದ್ದು ನಮಗಾದ ನೋವಿಗೆ ಅನ್ನುವ ನಗ್ನ ಸತ್ಯ ಬೇರೆಯವರಿಗೆ ಹೇಳುವುದಾದರು ಯಾರು?. "ಲೇಟ್ಸ್ ಗೋ, ಕತ್ತಲಾದಾಗ ಘಾಟ್ಸ್ ಭಾಳ್ ಡೇಂಜರ್" ಅಲರ್ಟ್ ವಾಣಿ ಸಿದ್ಲಿಂಗ್ ಯಾಂತ್ರಿಕವಾಗಿ ಹೇಳಿದ. ಕೆಳಗಿಳಿದು ಬೈಕ್ ಸಿದ್ಧಗೊಳಿಸುವಲ್ಲೇ ಇಬ್ಬರಿಗೂ ಧರ್ಮ ಸಂಕಟ. ಬಹುಶಃ ನನಗೆ ಮಾತ್ರವೆನಿಸುತ್ತೆ. ಬಲಕ್ಕೆ ಹೋಗಬೇಕೋ ಅಥವಾ ಎಡಕ್ಕೋ?. ಬಂದ ವಿರುದ್ಧ ದಿಕ್ಕಿನಲ್ಲೇ ಹೋಗಬೇಕು ಅಂತ ನಾ ವಾದವಿಟ್ಟೆ. ಈ ವಿಷಯದಲ್ಲಿ ಸಿದ್ಲಿಂಗನಿಗೆ ತುಂಬಾ ಚೆನ್ನಾಗಿ ಗೊತ್ತಿತ್ತು. ನಾನೆಂಬ ಪ್ರಾಣಿ ದಿಕ್ಕುಗಳನ್ನ ಗುರುತಿಟ್ಟುಕೊಳ್ಳುವಲ್ಲಿ ಹೆಬ್ಬೆಟ್ಟು ಎಂಬುದು. ಹೆಗಲಿನ ಮೇಲೆ ನಾಲ್ಕು ಬಾರಿಸಿ ಇತ್ತಕಡೆ ಅಲ್ಲ ಅತ್ತಕಡೆಯಂತ ಮಾರ್ಮಿಕವಾಗಿ ಹೇಳಿದ. ಅದ್ಹೇಗೆ ಈ ಮಟ್ಟಕ್ಕೆ ದಿಕ್ಕು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತೇನೆ ಎನ್ನುವುದು ಇಂದಿಗೂ ನನಗರ್ಥವಾಗದ ವಾದವೇ ಅದು. ಇಳಿಸಂಜೆ ಸಂಪೂರ್ಣವಾಗಿ ಇಳಿದಿತ್ತು. ಕತ್ತಲು ಎಲೆಯಡಕೆ ಇಲ್ಲದೆಯೇ ಇದೀಗ ತನ್ನ ಸರದಿ ಎಂಬಂತ್ತೆ ತಮಿಳಿನ ಲುಂಗಿ ಎತ್ತಿಕಟ್ಟಿ ನಿಂತ್ತಂತ್ತಿತ್ತು. ಹೋಗು ಹೋಗುತ್ತಲೇ ಸುತ್ತೆಲ್ಲಾ ಅವರಿಸಿಯೇ ಬಿಟ್ಟಿತು ಕತ್ತಲು. ಓವರ್ಟೇಕಿಂಗ್ ಇವಾಗ ನುಂಗಲಾಗದ ತುತ್ತು. ಇನ್ನು ಹದಿನೈದು ಕಿಮೀ ಊಟಿಗೆ. ಹಾಗೋ ಹೀಗೆ ಸರ್ಕಸ್ ಮಾಡುತ್ತ ಮುಂದೆ ಸಿಗುವ ವಾಹನಗಳಿಗೆ ಹಿಂದಕ್ಕೆ ತಳ್ಳಿ ಹೊರಟೆವು.
ಊಟಿ ನಗರವ್ಯಾಪ್ತಿ ಶುರುವಾಯ್ತು. ಅಸ್ಪಷ್ಟ ಬೆಳಕಿನ ಬಲ್ಬುಗಳಲ್ಲಿ ಅಲ್ಲಲ್ಲಿ ದಟ್ಟವಾಗಿ ಕಾಣುವ ನಗರ. ಮೊದಲಿಗೆಯೇ ಸಿಗುವ ಹೋಟೆಲುಗಳಲ್ಲಿ ತಂಗಿದಾರಾಯ್ತು ಎನ್ನುವುದು ನಮ್ಮ ಯೋಚನೆಯಾಗಿತ್ತು. ಮೊದಲಿನದೊಂದೇರಡು ಹೋಟೆಲುಗಳಲ್ಲಿ ತಂಗಲು ವಿಚಾರಿಸಿದ್ವಿ. ನಾವು ನೋಡುತ್ತಾ ಬಂದಿದ್ದ ಬೆಟ್ಟದ ತುದಿಗಿಂತಲೂ ಎತ್ತರವಾದ ರೇಟ್ಸ್ ಹೇಳಿತ್ತಿದ್ದರು. ನಾವುಗಳು ಮಧುಚಂದ್ರಕ್ಕೆ ಬಂದವರಲ್ಲ ಎನ್ನುವುದು ಅವರಿಗೆ ಹೇಳುವುದಾದರೂ ಹೇಗೆ? ಪ್ರತಿ ಹೋಟೆಲಿನವರು ಕಪಲ್ಸ್ ಕಪಲ್ಸ್ ಅಂತ ಕೇಳುತ್ತಲೇ ಇದ್ದರು. "ಓನ್ಲಿ ಬಾಯ್ಸ್" ಎಂಬ ಹಣೆಪಟ್ಟಿಯಾದರೂ ಹಾಕಿಕೊಳ್ಳಣವೇ ಎನಿಸಿತ್ತು. ಇನ್ನೊಂದು ಸ್ವಲ್ಪ ದೂರಕ್ಕೆ ಹೋಗುತ್ತಲೇ ಗ್ರೀನ್ ಹಿಲ್ಸ್ ಲಾಡ್ಜ್ ಅಂತ ಕಣ್ಣಿಗೆ ಬಿತ್ತು. ನಿಲ್ಲಿಸಿ ಕಣ್ಣಿಗೆ ಕಾಣುತ್ತಿದ್ದ ಫೋನಿಗೆ ಕರೆ ಮಾಡಿದ್ವಿ. "ಅಣ್ಣಾ ರೂಮ್ ಇರುಕಾ?" ಅರಿವಿಗೆ ಬಂದ ತಮಿಳಿನಲ್ಲಿ ಕೇಳಿದೆ. "ವಾಂಗಾ ವಾಂಗಾ" ಅಂತ ಹೇಳಿದ್ದಕ್ಕೆ ಬೈಕ್ ಸ್ಟಾಂಡ್ ನೆಲಕ್ಕೆ ಗುದ್ದಿ, ಹೆಲ್ಮೆಟ್ ಧರಿಸಿಯೇ ಹೋದ್ವಿ. ಹೋಗುತ್ತಲೇ ಸಿಕ್ಕ ಒಂದೆರಡು ತಮಿಳು ಜೋಡಿಗಳು "ರೂಮ್ಸ್ ಇಲ್ಲ್ಯಾ, ಖಾಲಿ ಆಯಿಡ್ಚ್" ಹಲ್ಲುಕಿಸಿಯುತ್ತ ಹೇಳತೊಡಗಿದನೋರ್ವ ತಮಿಳು ಸೆಲ್ವಂ. ಈ ಆದಿಮಾನವನ್ನ ಎಲ್ಲೋ ನೋಡಿದ್ದೇನಲ್ಲ ಎಂಬುದು ನೆನಪಿಗೆ ಬರುತ್ತಿದ್ದಂತ್ತೆ, ಅದು ನೀಡಲ್ ರಾಕ್ ವಿವ್ ಪಾಯಿಂಟ್ ಹತ್ತಿರ ಎಂಬುದು ಖಾತರಿಯಾಯ್ತು. ಇವನಿಗೆ ಉತ್ತರಿಸುವಲ್ಲೇ ಹೊಟ್ಟೆ ಬಿಟ್ಟುಕೊಂಡು ಬಂದ ಲಾಡ್ಜಿನ ಮ್ಯಾನೇಜರ್, ಎಷ್ಟು ಜನ ಏನು ಎತ್ತ ಅಂತ ವಿಚಾರಿಸಿ ಸಂದಿಯಲ್ಲಿದ್ದ ಒಂದು ತೀರಾ ಚಿಕ್ಕದಾದ ಸಿಂಗಲ್ ರೂಮ್ ತೋರಿಸಿದ. ನಮಗೂ ಹಂತಹುದೇ ಬೇಕು. ಬೇಕು ಎಂದ ತಕ್ಷಣ ಹೌಹಾರಿ ಡೀಲ್ ಮಾಡುವುದು ನಮ್ಮ ನಡೆ ಅಲ್ಲವೇ ಅಲ್ಲ. "ಅಣ್ಣಾ ರೂಮ್ ರೊಂಬ ಚಿಕ್ಕದು" ಅಲ್ಲಲ್ಲಿ ಅಂಟಿದ್ದ ಡಸ್ಟ್ ಬೆರಳಿಂದ ತಿಕ್ಕಿ ತೋರಿಸಿದ್ವಿ. "ನಲ್ಲ ರೂಮ್ ವೇಣುಮಾ? ಇಂಗ ವಾ" ಅಂತ ಮೇಲಕ್ಕೆ ಎಳೆದುಕೊಂಡು ಹೋದ. ರೂಮ್ ತೋರಿಸುವ ಮೊದಲು ನಾವುಗಳು ಡ್ರಿಂಕ್ ಸ್ಮೋಕ್ ಮಾಡುವುದಿಲ್ಲ ಎಂಬ ಖಾತರಿಪಡಿಸಿಕೊಂಡು ಬಾಗಿಲು ತೆಗದು ತೋರಿಸಿದ. ರೇಟ್ ಕೆಳಗಿನ ರೂಮಿಗಿಂತ ಜಾಸ್ತಿ, ಶುಚಿಯಾಗಿಯೇನೋ ಇತ್ತು. ನಮಗೇನು ಇಲ್ಲಿ ಸಂಸಾರ ಮಾಡುವ ಯೋಚನೆಯೇನೂ ಇಲ್ಲ. ರೇಟ್ ಕೇಳಿ ಇರಿಸು ಮುರಿಸು ತೋರಿದೆವು. ಕೆಳಗಿನ ರೋಮ್ಮಿಗೆನೇ ಇನ್ನಷ್ಟು ಕಮ್ಮಿ ರೇಟ್ ಹೇಳಿದ್ರಾಯ್ತು ಎಂಬುದೇ ನಮ್ಮಿಬ್ಬರ ಪ್ಲಾನ್. ಅದಕ್ಕೆ ತಕ್ಕಂತ್ತೆ ಮಾನ್ಯೆಜರ್ ಒಪ್ಪಿದ. ಡೀಲ್ ಆದ ಖುಷಿ ಇಬ್ಬರದಾಯ್ತು. ಬೈಕ್ ಪಾರ್ಕ್ ಮಾಡಿ ಲಗ್ಗೇಜ್ ತಂದು ರೋಮಿನಲ್ಲಿ ನೆಲಕ್ಕಪಳಿಸಿದೆವು.
ಹೊಟ್ಟೆ ಮುಂದಕ್ಕೆ ಮಾಡಿಕೊಂಡು, ತಲೆಗೊಂದು ಟೋಪಿ, ದೇಹಕ್ಕೊಂದು ಜಾಕೆಟು ಧರಿಸಿಕೊಂಡಿದ್ದ ಮಾನ್ಯೆಜರ್ ರಾಮಚಂದ್ರನ್ ಒಳಕ್ಕೆ ಬರುತ್ತಲೇ "ಕಾಸು" ಎಂದ. ಮೊದಲಿಗೆ ಅವನ ಲೆಕ್ಕ ಚುಪ್ತವಾಗಬೇಕು. ರಾತ್ರಿಯಿಡೀ ಕಾದುಕುರುವ ತ್ರಾಸು ಅವನಿಗೆ ಬೇಕಿರಲಿಲ್ಲ. ಊಟಕ್ಕೆ ಹೋಟೆಲ್ ವಿಚಾರಿಸಿದೆವು, ಎಲ್ಲವೂ ಕಿಮೀ ವ್ಯಾಪ್ತಿಯಲ್ಲೇ ಇರುವುದು ಹೇಳುತ್ತಿದ್ದ. ಗೋಡೆಗೆ ಅಂಟಿಸಿದ್ದ ಒಂದು ಮೆನು ಕಾರ್ಡ್ ಕಣ್ಣಿಗೆ ಬಿತ್ತು, ಅದು ಅವರದೇ ಹೋಟೆಲಿನದು. ಹೋಮ್ ಡೆಲಿವರಿ, ಹೋಮ್ ಫುಡ್. ಅರ್ಧ ಗಂಟೆಯ ಮುಂಚೆ ಆರ್ಡರ್ ಮಾಡಿದರೆ ಸಾಕೆಂದ. ಗಗನಚುಂಬಿ ಪರ್ವತಗಳಿರುವ ಊಟಿಯಲ್ಲಿ ತೀರಾ ಕಮ್ಮಿ ಬೆಲೆಯ ಮೆನು ಕಾರ್ಡ್ ಅದೇನಿಸಿತ್ತು. ನಮಗೂ ಬೇಕಿದ್ದದ್ದು ಅದೇ ಅಲ್ಲವೇ?. "ಚಲೋ ಇರ್ಲಿಲ್ಲ ಅಂದ್ರ್ ಹೆಂಗ್?" ಸಿದ್ಲಿಂಗ್ ತನ್ನ ಕೆಲಸ ಮರೆಯುವ ಪ್ರಶ್ನೆಯೇ ಇಲ್ಲ, ಇಂತಹ ಸಂಧರ್ಭದಲ್ಲಿಯೇ ಅಲ್ಲವೇ ಅವನ ಚಾಕಚಕ್ಯತೆ ತೋರಿಸುವುದು. "ಎಲ್ಲೆಲ್ಲೋ ಹೋಗಿ ತ್ರಾಸ್ ತಗೊಂಡು ಅಲ್ಲಿಯೂ ಖರಾಬ್ ಇದ್ರ್ ಹೆಂಗ್?, ಸಧ್ಯಕ್ ಇಲ್ಲಿ ನೋಡಿದ್ರ್ ಆಯ್ತು, ಸರಿ ಇಲ್ಲ ಅಂದ್ರ್ ಮುಂಜಾನೆ ಬ್ಯಾರೆ ಕಡಿ" ಚರ್ಚಿಸಲು ಅವನಲ್ಲಿ ತ್ರಾಣವಿರಲಿಲ್ಲ. ಅದಕ್ಕೆ ಅವನದು ಸದ್ದು ರಹಿತ ಮುದ್ರಣ ಒತ್ತಿಟ್ಟು, ಒಪ್ಪಿಗೆ ಕೊಟ್ಟ. ಆರ್ಡರ್ ಕೊಡುವುದಾಗಿ ಮಾನ್ಯೆಜರ್ ಗೆ ಹೇಳಿ ಕಳಿಸಿಯಾಯ್ತು. ಮೈ ಮನ ಎರಡೂ ದಣಿದಿದ್ದವು. ಕಣ್ಣುಗಳಲ್ಲಿ ಆಯಾಸ ಉಕ್ಕುತಿತ್ತು. ಮಕಕ್ಕೆ ನೀರೆರಚಿಕೊಂಡು ಹಗುರವಾಗಿ ಅಂಗಾತವಾಗಿ ಹಾಸಿಗೆಗೆ ಹಿತವಾದೆವು. ಊಟ ಆರ್ಡರ್ ಮಾಡಿದ ಕೆಲ ಹೊತ್ತಿನ ನಂತರ ತಂದ ಊಟ ರುಚಿಯಾಗಿಯೇ ಇತ್ತು. ನೆಮ್ಮದಿಯ ಊಟ. ಊಟ ಮುಗಿಯುತ್ತಿದ್ದಂತ್ತೆ ಮಾನ್ಯೆಜರ್ ನ ದರ್ಶನ. ಮತ್ತೆ ಕಾಸು, ಅಲ್ಲಿಗ್ ಅಲ್ಲಿಗೆ ಎಲ್ಲವೂ ಕ್ಲಿಯರ್ ಆಗಬೇಕು. ಅದಾಗಾಯ್ತು.
ಇತ್ತ ಟಿವಿ ಆನ್ ಮಾಡುತ್ತಿದ್ದಂತ್ತೆ ಸ್ಟ್ಯಾಲಿನ್ ಭಾಷಣ ಓದುತ್ತಿದ್ದ. ಬೇಡವೆಂದರೂ ಕೇಳದ ಮನಸ್ಸು ಮಾನ್ಯೆಜರ್ ಜೊತೆ ಒಂದು ರಾಜಕೀಯ ಚರ್ಚೆಗೆ ತಳುಕು ಹಾಕಿಯೇ ಬಿಟ್ಟಿತು. "ಯಾರಿಗೆ ನಿಮ್ಮ ಸಪೋರ್ಟ್?" ಕೇಳಿದ ಅರ್ಧ ಕ್ಷಣಕ್ಕೆ ಡಿಎಂಕೆ ಎಂದ. ಸಿದ್ಲಿಂಗ್ ಟಕ್ ಅಂತ "ಅಣ್ಣಾಮಲೈ" ಅಂದ. ಮಾನ್ಯೆಜರ್ ಗೆ ಎಲ್ಲಿಲ್ಲದ ಇರುಸು ಮುರುಸು. ಬಿಜೆಪಿ ಒಂದೂ ಗೆಲ್ಲಲ್ಲ, ಅಣ್ಣಾಮಲೈ ಯಾರಂತಲೂ ಗೊತ್ತಿಲ್ಲ ಅಂತ ಕ್ಲಿಯರ್ ಸ್ಟೇಟ್ಮೆಂಟ್ ಕೊಟ್ಟೆ ಬಿಟ್ಟ. ಸ್ಟಾಲಿನ್ ನ ಮಗ ಸನಾತನ ಧರ್ಮವನ್ನ ಮಲೇರಿಯಾ ಗೆ ಹೋಲಿಸಿದ್ದು, ಹಿಂದೂ ಧರ್ಮದ ಅವಹೇಳನೆ ಮಾಡಿದ ಕೆಲವು ವಿಷಯಗಳನ್ನ ಹೇಳು ಅಂತ ನನ್ನನ್ನ ಪ್ರಚೋದಿಸಿದ್ಧನಾದರೂ ನನಗೆ ಅದು ಅನವಶ್ಯಕವೆನಿಸಿತು. ಮೊದಲಿದ್ದ ತಾಳ್ಮೆ ಈಗೀಗ ಇಲ್ಲ. ಇದೆ ಮಾನ್ಯೆಜರ್ ಕೆಲ ವರ್ಷಗಳ ಹಿಂದೆ ಚರ್ಚೆಗೆ ಸಿಕ್ಕಿದ್ದರೆ, ಡಿಎಂಕೆಯನ್ನೇ ತೆಗಳುವ ಹಾಗೆ ವಾದಿಸಿ ಗೆಲ್ಲುವ ತ್ರಾಣ ತಾಳ್ಮೆ ಇದ್ದವು. ಇದೀಗ ಇಲ್ಲ. ಅದಕ್ಕಿಂತ ಮೊದಲು ಈ ಮ್ಯಾನೇಜರ್ ರಾಮಚಂದ್ರನೊ ಅಥವಾ ಜೋಸೆಫ್, ಡೇವಿಡ್, ಆಲ್ಬರ್ಟ್ ರಾಮಚಂದ್ರನೊ ಯಾರಿಗೆ ಗೊತ್ತು. ಹೋಟೆಲಿನ ಯಾವ ಮೂಲೆಯಲ್ಲೂ ದೇವರ ಯಾವ ಕುರುಹು ಇರಲಿಲ್ಲ. ತಮಿಳು ಹಿಂದುವಾಗಿ ದೇವರಲ್ಲಿ ನಂಬಿಕೆ ಇಲ್ಲದವರಿರುತ್ತಾರೆ ಎನ್ನಲು ಸಾಧ್ಯವೇ? ಇದೀಗ ಈ ಗೋಜುಗಳು ಹೋದಲ್ಲಿ ಬಂದಲ್ಲಿ ಬೇಡವನಿಸಿತು. ಚರ್ಚೆ ಮುಂದುವರಸದೆ ಇದ್ದುದಕ್ಕೆ ಮುಖ ಮುಖ ನೋಡಿ ಮಾನ್ಯೆಜರ್ ಹೊರಟು ಹೋದ. ತೆಳುವಾದ ಚಳಿ, ಹೊಟ್ಟೆ ತುಂಬಿದ ತೃಪ್ತಿ, ಮೈಯಾವರಿಸಿದ ದಣಿವು ಎಲ್ಲವೂ ಸೇರಿ ಅನಾಸ್ಥೆಷಿಯ ಕೊಟ್ಟಹಾಗಾಯ್ತು, ಕಣ್ಣು ಮುಚ್ಚಿದ ತಕ್ಷಣ. ಇಡಿಯ ದಿನ ಘಾಟ್ಸ್ ಅಲ್ಲಿನ ತಿರುವುಗಳಲ್ಲಿ ಬೈಕು ಹೊರಳುತ್ತ ಹೋಗಿದ್ದರಿಂದ ಕೆಲ ಹೊತ್ತು ದೇಹ ಅದೇ ಮಂಪರಿನಲ್ಲಿತ್ತು. ನಿದ್ದೆಯಲ್ಲಿಯೂ ಬೈಕ್ ಹೊರಳಿಸುತ್ತ ಹೋಗುವ ಅನುಭವ. ಇಡಿಯ ರಾತ್ರಿಯ ನಿದ್ದೆ ಕ್ಷಣಕ್ಕೇನೆ ಮುಗಿಸಿದೆವು ಎನ್ನುವ ಹಾಗೆ ಮುಗಿದು ಹೋಯಿತು. ನಯವಾದ ಹಾಸಿಗೆ ಮತ್ತು ಹಿತವಾದ ಚಳಿಗೆ ಇನ್ನೇನಾಗುತ್ತೆ. ಕೈ ಕಾಲು ಹಾಕಿ ಮಲಗಲಿಕೆ ಮಡದಿಯನ್ನ ಪಡೆದ ಅದೃಷ್ಟ ನಮ್ಮದಿಲ್ಲ. ಕೈ ಕಾಲು ಹೊರಳಿಸಿದರೂ ತಾಕುವುದು ಸಿದ್ಲಿಂಗನ ಅಸ್ತಿಪಂಜರ. ಕ್ಷಣಕ್ಕೇನೆ ನಿದ್ದಿ ಮುಗಿದು ಹೋದದ್ದು ಒಂಟಿಜೀವನಕ್ಕೆ ಪ್ರಕೃತಿ ನಮಗಾಗ ಮಾಡಿದ ಉಪಕಾರವೇ ಸರಿ ಎನ್ನಬಹುದು.
ಮುಂದುವರೆಯುವುದು........
Mast
ReplyDeleteNinna jothe nanu ಊಟಿ payana madidage baasa vaytu..
ReplyDeleteಇದು ಓದುತ್ತಿದ್ದರೆ ರವಿ ಬೆಳಗೇರಿ ಬರೆದಿರುವ ಹಾಗೆ ಅನಿಸುತ್ತದೆ...
Deleteಒಟ್ಟನಲ್ಲಿ ಊಟಿ ಪ್ರಯಾಣ ತುಂಬಾ ಜಬರದಸ್ತಾಗಿತ್ತು .
Delete