ಕತ್ತಲೆ ಮತ್ತು ಸತ್ಯ.



ಚಿಕ್ಕ ಹಳ್ಳಿಯ ಸಾಮಾನ್ಯ ರೈತ ಭಧ್ರಯ್ಯ, ಅಂಗೈಯಷ್ಟು ಭೂಮಿಯಲ್ಲಿ ಚೀಟಿಕೆಯಷ್ಟು ಬೆಳೆ ಬೆಳೆದು ಸ್ವತಂತ್ರವಾಗಿ ಜೀವಿಸುವ ಬಡವ. ಚಿಕ್ಕ ಪುಟ್ಟ ವಸ್ತುಗಳಿಗೂ ಹತ್ತಾರು ಮೈಲಿ ದೂರದ ಪೇಟೆಗೆಯೇ ಹೋಗಬೇಕು.ಮತ್ತು ಹೋಗಲೇಬೇಕು.

"ಮನೆ ಖಾಲಿ ಆಗಿದೆ, ನಾಲ್ಕು ದಿನ ಹಿಂಗೆ ಹೋದ್ರೆ ನಾಲಿಗೆ ಹಿತ ಅನ್ನುದೆ ಮರ್ತ್ ಹೋದಾತು, ನಾಳಿಗ್ ಪ್ಯಾಟಿ ಕಡಿ ಹೋಗಿಬರ್ಬೇಕ್ ನಿ" ಭಧ್ರಯ್ಯನ ಮಡದಿ ಗಂಗವ್ವ ಕಠೋರವಾಗಿಯೇ ಆಜ್ಞೆ ಮಾಡ್ತಿದ್ದಾಳೆ, ಎನಿಲ್ಲದಿದ್ದರೂ ತಿನ್ನಲಿಕೆ ತಟ್ಟೆಯಲ್ಲಿ  ಏನನ್ನಾದರೂ ಮಾಡಿ ಇಡುವಾಕೆ. ಎರಡು ಮಕ್ಕಳು ಮತ್ತು ಗಂಡನ ಹೊಟ್ಟೆ ಸುಡದಂತ್ತೆ ನೋಡಿಕೊಳ್ಳುವುದೇ ಆ ಭಗವಂತ ಆಕೆಗೆ ಕೊಟ್ಟ ಮೋಕ್ಷದ ಹಾದಿ ಅನ್ನುವಂತ್ತೆ ಬದುಕುವಾಕೆ.
"ಆಯ್ತ್ ಮಾರಾಯ್ತಿ, ಅದಕ್ ಎನಕ್ ಗಂಟಲು ಹರಿಯುವಂತ್ತೆ ಉದ್ತಿಯ, ನಾಳೆನೆ ಹೋಗ್ತೀನಿ" ಭಧ್ರಯ್ಯ ಅನಿವಾರ್ಯತೆ ಅರಿತಿದ್ದಾನೆ.

ಅಮವಾಸೆ ಒಳಗಾಯಿತೋ ಹೊರಗಾಯಿತೋ ಗೊತ್ತಿಲ್ಲದ ದಿನವದು. ಕಗ್ಗತ್ತಲು ಆವರಿಸಿಕೊಳ್ಳುವ ದಿನ, ಆದರೂ ಹೋಗಲೇಬೇಕು. ಜೀವನದಲ್ಲಿ ಕಗ್ಗತ್ತಲೇ ಹೊಂದಿದವನಿಗೆ ಈ ಪ್ರಕೃತಿಯ ಕತ್ತಲು ಕತ್ತಲೇ ಅಲ್ಲ ಅನ್ನುವುದು ನಗ್ನ ಸತ್ಯ. 
ಭಧ್ರಯ್ಯ ಪೇಟೆಯಲ್ಲಿ ಬೇಕಾದದ್ದು ಬೇಕೋ ಬೇಡವೋ ಅನ್ನುವಷ್ಟು ಚೀಲಕ್ಕೆ ತುಂಬಿಸಿಕೊಂಡ. ಹೊಟ್ಟೆಗೆ ಬೇಕಾದ ಹಿಟ್ಟಿನ ಜೊತೆಗಿನ ನಾಲ್ಕಾರು ಪದಾರ್ಥಗಳು,ಮತ್ತೆ ಮತ್ತೆ ಒಡೆದು ಹೋಗುವ ಮಣ್ಣಿನ ಪಾತ್ರೆಗಳು ಇನ್ನು ಕೆಲ ಮನೆಗೆ ಬೇಕಾದ ಸಾಮಗ್ರಿಗಳು ಕೊಂಡದ್ದಾಯ್ತು. ಮಧ್ಯಾಹ್ನ ಮುಗಿದು ಸಾಯಂಕಾಲ ಶುರುವಾಗಿತ್ತು. ಕಾಡು ಮೇಡು ಸುತ್ತಿ,ಬೆಟ್ಟ ಏರಿ ಇಳಿದು ನಾಲ್ಕಾರು ಬಾರಿ ಬೆವರು ಸುರಿಯುವಷ್ಟು ನಡೆದಾಗ ಸಿಗುತ್ತದೆ ಮನೆ.ಜಾಸ್ತಿ ವಿಳಂಬ ಮಾಡದೆ ಮನೆಯತ್ತ ದಾಪುಗಾಲಿಡಲು ಶುರು ಮಾಡಿದ. ತಲೆಗೆ ವಸ್ತ್ರ ಕಟ್ಟಿ, ಹೆಗಲಿನ ಮೇಲೆ ಹೊತ್ತ ಸಂಸಾರ ಭಾರದ ಮೇಲೆ ಈ ಭಾರವೂ ಹೊತ್ತು ಮುನ್ನುಗುತ್ತಿದ್ದಾನೆ. ಸೂರ್ಯ ಇವನನ್ನೇ ದಿಟ್ಟಿಸಿ ನೋಡುತ್ತಿದ್ದಾನೆ ಎನ್ನುವಂತ್ತೆ ಮುಖದ ಮೇಲೆ ಬಿಸಿಲು ಬೀಳುತ್ತಲೇ ಇದೆ. "ಈ ಭಾರಿಯ ಮಳೆಗಾಲವೇ ಸರಿ ಇಲ್ಲ ಮಾರಾಯ್ರೆ, ಬಿಸಿಲು,ಚಳಿ,ಮಳಿ, ಮೂರನ್ನು ಹೊತ್ಕೊಂಡ್ ಹೊತ್ಕೊಂಡ್ ಬರ್ತಿದೆ ಬೆವರ್ಸಿದು, ಪಾಪ ಈ ಆಕಾಸಾ ಆದ್ರೂ ಎನ್ ಮಾಡಿಯಾತು, ಎಲ್ಲಾ ಆ ದೇವ್ರ್ ಹೇಳ್ದಂಗೆ ಕೇಳ್ತದೆ, ನಾವ್ ಅನುಭೌಸ್ಬೇಕ್ ಅಸ್ಟೆ" ತನ್ನಷ್ಟಕ್ಕೆ ತಾನೇ ಮಾತಾಡುತ್ತಲೋ ಅಥವಾ ಸುತ್ತಲಿನ ಗಿಡ ಮರ ಬಳ್ಳಿಗಳಿಗೆ ಹೇಳುತ್ತಲೋ ಸಾಗುತ್ತಿದ್ದಾನೆ. ಇತ್ತ ಸೂರ್ಯ ನುಸು ನಗುತ್ತಿದ್ದಾನೆ, "ದಿನವಿಡೀ ಬಿಸಿಲು ಕೊಡದೆ, ಬೆಳಿಗ್ಗೆ ಮತ್ತು ಸಾಯಂಕಾಲ ತಂಪು ಕೊಡ್ತೀನಿ,ಇದೆಲ್ಲಾ ಈ ಬೆಪ್ಪನಿಗೆ ಯಾರು ಅರ್ಥಮಾಡಿಸೋದು?" ಸೂರ್ಯ ನಗು ನಗುತ್ತಲೇ ಭಧ್ರಯ್ಯನಿಗಿಂತ್ತ ಜೋರ್ರಾಗಿಯೇ ಪಶ್ಚಿಮದೆಡೆಗೆ ಹೆಜ್ಜೆ ಬೆಳಸಿ ಬೆಟ್ಟದ ಕೆಳಗೆ ಇಳಿದೇ ಬಿಟ್ಟ.

ಅಸ್ಪಷ್ಟವಾಗಿ ಕಾಣುತ್ತಿದೆ ಎನ್ನುವಂತ್ತೆ ಬೆಳಕು ಮಾಯವಾಗಿದೆ, ಒಂಧೋತ್ತು ತಂಪು ಗಾಳಿ ಬಿಸಿದ್ದರಿಂದ ಭದ್ರಯ್ಯನಿಗೆ ಮಳೆ ಬರುವ ಮುನ್ಸೂಚನೆ ಅದಾಗಲೇ ತಿಳಿದಿತ್ತು,ಕ್ರಮೇಣ ಅದು ನಿಜವಾಗಲಾರಂಭಿಸಿತ್ತು. ಮಳೆ ಹನಿಗಳು ಒಂದೊಂದಾಗಿ ಭೂಮಿಗೆ ತಾಗುತ್ತಲಿವೆ, ಜಾಸ್ತಿ ದೂರ ಹೋದ್ರೆ ಅವಿತುಕೊಂಡು ಕುರಲಿಕೆ ಆಗುವಿದಿಲ್ಲವೆಂದು ಹತ್ತಿರದ ಒಂದು ದೊಡ್ಡ ಮರದ ಕೆಳಗೆ ಕೂತ. ಮಳೆ ಜೋರಾಗುತ್ತಿದೆ, ಥಟ್ಟನೆ ಅವನ ಕಣ್ಣಿಗೆ ಬಿದ್ದದ್ದು ದೀಪದ ಬೆಳಕು, ಹಳೆಯ ಶಿವನ ದೇವಸ್ಥಾನ. ಪಾಳುಬಿದ್ದ ದೇವಸ್ಥಾನ ಅಂತ ಹೇಳಿದಿದ್ದರು ಸಮೃದ್ಧವಾದ ದೇವಸ್ಥಾನವೂ ಅಲ್ಲ. ದೇವಸ್ಥಾನದ ಒಳಗೆ ಕಂಬಕ್ಕೆ ವರಗಿ ಕೂತ. ಮೊದಲಿಗೆ ಸ್ಪಷ್ಟವಾಗಿ ಏನೂ ಕಾಣದಿದ್ದರೂ ಸ್ವಲ್ಪ ಸಮಯದ ನಂತರ ದೀಪದ ತುಸು ಬೆಳಕಿಗೆ ಸ್ಪಷ್ಟವಾಗಿ ಕಾಣತೊಡಗಿತು. ದೇವಸ್ಥಾನದ ಮಂಟಪದಲ್ಲಿ ಇನ್ನೊಂದು ಬದಿಗೆ ಸನ್ಯಾಸಿಯೋರ್ವ ಧ್ಯಾನದಲ್ಲಿ ಮಗ್ನನಾಗಿ ಕುಳಿತಿದ್ದಾನೆ. ನೊಡಲಿಕೆ ದೊಡ್ಡ ಜಗಜಟ್ಟಿ ಎನ್ನುವಂತಹ ದೇಹ, ಎತ್ತರವಾಗಿ ಕಟುಮಾಸ್ತಾಗಿದ್ದಾನೆ, ಬೋಳು ತಲೆ. ದೇಹ ಸಂಪೂರ್ಣವಾಗಿ ಕಾವಿಯಿಂದ ಆವೃತ್ತಗೊಂಡಿದೆ. ಪಕ್ಕದಲ್ಲಿ ಕಮಂಡಲ ಮತ್ತು ದಂಡವಿದೆ, ಕೊರಳಲ್ಲಿ ರುದ್ರಾಕ್ಷಿ ಮಾಲೆಗಳು. ಭಧ್ರಯ್ಯನಿಗೆ ಚಿತ್ರಣ ಸ್ಪಷ್ಟವಾಯಿತು.

"ನಮಸ್ಕಾರ ಸ್ವಾಮ್ಗಳಿಗೆ" ಭಧ್ರಯ್ಯನ ಪ್ರಶ್ನೆಗಳಿಗೆ ಯಾವುದೇ ಉತ್ತರವಿಲ್ಲ. ಮಲಗಿಬಿಟ್ರೋ ಹೇಗೆ ಅಂತ ಇನ್ನಷ್ಟು ಸಮೀಪಕ್ಕೆ ಹೋದ. ತಕ್ಷಣವೇ ಕಣ್ಣು ತೆರೆದ ಸನ್ಯಾಸಿ, ಕಗ್ಗತ್ತಲಿನಲ್ಲೂ ಆ ಕಣ್ಣುಗಳ ಹೊಳಪು ಕಂಡ ಭಧ್ರಯ್ಯ ಒಂದೊಮ್ಮೆ ಭಯಭೀತಗೊಂಡ, ಭವ್ಯ ಶಕ್ತಿಗಳನ್ನ ತುಂಬಿಕೊಂಡಿವೆ ಕಣ್ಣುಗಳು, ವರ್ಷಾನುಗಟ್ಟಲೆ ಧ್ಯಾನ ಮಾಡಿ ಶಕ್ತಿ ತುಂಬಿಕೊಂಡಿವೆ ಅನ್ನುವಷ್ಟು ಹೊಳೆಯುತ್ತಿವೆ. ಅದರೊಂದಿಗೆ ಸಾತ್ವಿಕಭಾವದೊಂದಿಗೆ ಚೆಲುವು ಬಿರುತ್ತಿದ್ದ ಮುಖ ಭಧ್ರಯ್ಯನ ಭಯ ಹೋಗಲಾಡಿಸಿತು.
"ಹೆದ್ರಿಸಿ ಬಿಟ್ರಲ್ಲ ಸ್ವಾಮಿ" ಕಿರುನಗೆಯಿಂದ ಭಧ್ರಯ್ಯ ಹೇಳಿದ
"ಓಹ್,ಭದ್ರಯ್ಯನಿಗೆಯೇ ಅಭಧ್ರವೋ" ಎಂದ ಸನ್ಯಾಸಿ ಗಹಗಹಿಸಿ ನಕ್ಕ, ಅದಕ್ಕೆ ಭಧ್ರಯ್ಯನು ನಕ್ಕ. ಇವರಿಗೆ ತನ್ನ ಹೆಸರು ಹೇಗೆ ಗೊತ್ತಾಯ್ತು ಅನ್ನೋ ಪ್ರಶ್ನೆ ಭಧ್ರಯ್ಯ ನಗೆಯಲ್ಲಿ ಮರೆತೇ ಬಿಟ್ಟ, ಹಳ್ಳಿ ಬೆಪ್ಪಾ.
"ಎಲ್ಲಿಯವರೊ ತಾವುಗೊಳು"
"ನಾನೋ ನನ್ನ ದೇಹವೋ?" ಹಸನ್ಮುಖಿ ಸನ್ಯಾಸಿಯ ಮರುಪ್ರಶ್ನೆ
"ಏನೋ ಒಂದು ಹೇಳಿ, ದೊಡ್ಡೋರು ತಾವು,ಏನೇನೋ ಹೇಳ್ತೀರಿ" ತಲೆ ಕೆರೆಯುತ್ತ ಭಧ್ರ ಹೇಳಿದ.
"ನನ್ನ ದೇಹ ಇಲ್ಲಿಯದ್ದೇ,ನಾನು ಅಲ್ಲಿಯವನು"
"ಹಂಗಂದ್ರೆ ಇದೆ ಊರೇ?"
"ಒಂದು ಹಂತಕ್ಕೆ ಹೌದಪ್ಪ"
ಭಧ್ರನಿಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ, ಅದನ್ನ ಕೆದಕಿ ಕೇಳಿ ಪಡೆಯುವುದರಲ್ಲಿ ಏನೂ ಇಲ್ಲವೆಂದು ಏನನ್ನು ಮಾತನಾಡದೆ ಸುಮ್ಮನೆ ಕಂಬಕ್ಕೆ ಒರಗಿ ಕುಳಿತ.
ಗಂಗವ್ವ ಹಾದಿ ಕಾಯುತ್ತಾಳೆ, ಸಂಜೆ ಹೊತ್ತಿಗೆ ಬರುತ್ತೇನೆ ಎಂದು ಹೇಳಿ ಅದೆಷ್ಟೋ ಬಾರಿ ಮುಂಜಾವಿನಲ್ಲೇ ಬರುತ್ತಿದ್ದ ಭದ್ರಯ್ಯ, ಹಾಗಾಗಿ ಇದಾವುದೂ ಹೊಸತಿರಲಿಲ್ಲ. 

"ಏನು ಚಿಂತೆ ಭಧ್ರ"? ಸ್ವಲ್ಪ ಹೊತ್ತಿನ ನಂತರ ಸನ್ಯಾಸಿಯೇ ಕೇಳಿದ
"ಮೊನ್ನೆ ಒಂದು ಮೇಕೆ ಚಿರತೆ ಬಾಯಿಗೆ ಬಲಿ ಆಯ್ತು, ಅದಕ್ಕಿಂತ ಮೊದಲು ಒಂದು ಹಸುನು ತಿಂದಿತ್ತು, ಹಿಂಗೆ ಆದ್ರೆ ನಾವ್ ಎನ್ ಮಾಡೋದು ಸ್ವಾಮಿ" ಭಧ್ರ ಭಾವುಕನಾಗಿ ಹೇಳಿದ.
"ಅಯ್ಯೋ ಹುಚ್ಚಪ್ಪ, ನೀನಾದ್ರು ಬದುಕಿದೆಯಲ್ಲ" ಜೋರಾಗಿ ನಗುತ್ತಲೇ ಸನ್ಯಾಸಿ ಉತ್ತರಿಸಿದ.
"ಮನೆ ಮಡದಿ ಇಲ್ಲದೆ ಇರೋ ಸನ್ಯಾಸಿ ನೀವು, ಆರಾಮ ಆಗಿ ಇದಿರ, ನಮ್ ಕಷ್ಟ ನಿಮಗೇನ್ ಗೊತ್ತು? ಆ ದೇವರಿಗೂ ಗೊತ್ತಿಲ್ಲ"  ಕಂಬಕ್ಕೆ ಒರಗಿದ್ದ ಭಧ್ರ ಸೆಟೆದು ನೇರವಾಗಿ ಕುಳಿತು ಉತ್ತರಿಸಿದ.
"ನಿನ್ನದೂ ಒಂದು ದುಡಿಮೆಯೇ, ನನ್ನದೂ ಒಂದು ದುಡಿಮೆಯೇ"
"ನಿಮ್ಮದು ಎಂತಹ ದುಡಿಮೆ? ಕಣ್ಣು ಮುಚ್ಚಿ ಧ್ಯಾನ ಮಾಡೋದೇ?, ಬದುಕು ನಡುಸ್ತಾ ಇರೋನು ನಾನು ಸ್ವಾಮಿ, ನಂಗೊತ್ತು"
"ಬದುಕನ್ನ ನಡೆಸಬೇಕಿಲ್ಲಪ್ಪ, ಅದು ತಾನಾಗಿಯೇ ಹೋಗುತ್ತದೆ, ನೀನು ಜೀವನ ನಡೆಸುವದಕ್ಕಾಗಿ ಹೊಟ್ಟೆ ತುಂಬಿಸಬೇಕು, ಹೊಟ್ಟೆ ತುಂಬಿಸಲಿಕೆ ದುಡಿಮೆ ಬೇಕು, ಆ ದುಡಿಮೆಯೇ ಉಪಜೀವನ ಹೊರತು ಜೀವನ ಅಲ್ಲ. ಷಡ್ವರ್ಗಗಳಲ್ಲಿ ನೀನು ಸಿಲುಕಿಕೊಂಡಿರುವೆ, ಜೀವ ಸಾಗಿಸಬೇಕೋ ಅಥವಾ ಜೀವನ ಸಾಗಿಸಬೇಕೋ ಅನ್ನುವ ಗೊಂದಲ ನಿನ್ನಲ್ಲಿದೆ, ಎಲ್ಲರದ್ದೂ ಒಂದೇ ಗುರಿ, ಎಲ್ಲಾ ಜೀವಾತ್ಮಗಳದು ಒಂದೇ ಗುರಿ, ಅದುವೇ ಪರಮಾತ್ಮನಲ್ಲಿ ಲೀನ, ಮೋಕ್ಷ"
"ಅಯ್ಯೋ ಅದೇನು ಮೋಕ್ಷನೋ ಏನೋ, ಹೆಂಡರು ಮಕ್ಕಳಿಗೆ ಹಿಟ್ಟಿಲ್ಲ ಅಂದಮೇಲೆ ಅದೆಲ್ಲಾ ತಕ್ಕಂಡು ಎನ್ ಮಾಡದು, ಆ ಶಿವಪ್ಪಾ ಆದ್ರೂ ಒಂದು ಗಂಟು ಚಿನ್ನದ ನಾಟ್ಯ ಕೊಡ್ಲಿ, ಹಾಯಾಗಿ ಬದುಕ್ತಿನಿ"
"ಸರಿ, ಕೊಡ್ತಾನೆ ಆ ಶಿವಪ್ಪ"
ಸನ್ಯಾಸಿಯ ಈ ಮಾತಿಗೆ ಒಮ್ಮೆಲೇ ಹೊಟ್ಟೆ ಹಿಡಿದು ನಕ್ಕು ಬಿಟ್ಟ ಭಧ್ರಯ್ಯ
"ಸ್ವಾಮಿ, ನೀವ್ ಹೇಳಿದಂಗ್ ಆಗ್ತಿದ್ರೆ ನೀವು ಈ ಹಳೆ ದೇವಸ್ಥಾನದಲ್ಲಿ ಇರುತ್ತಿರಲಿಲ್ಲ, ದೊಡ್ಡ ಮಠದಲ್ಲಿ ಸಾವಿರಾರು ಜನಗಳ ಎದುರಿಗೆ ಇರ್ತೀದ್ರಿ ಬಿಡಿ"
"ಹೌದಪ್ಪ, ನಿ ಹೇಳೋದು ನಿಜ" ಸನ್ಯಾಸಿಯದ್ದು ವಾಸ್ತವದ ಚಿತ್ರಣ ಕಣ್ಣೆದುರಿಗೆ ಬಂತು , ಆಡಂಬರ ರಹಿತ ಸನ್ಯಾಸಿ ಸನ್ಯಾಸಿಯೇ ಅಲ್ಲ ಅನ್ನುವ ಮಟ್ಟಕ್ಕೆ ಜನಗಳ ಮನಸ್ಥಿತಿ ಬಂದು ತಲುಪಿದೆ ಅನ್ನುವ ವಿಚಾರ ಇನ್ನೊಂದು ನಗೆಗೆ ಕಾರಣವಾಯಿತು.

"ನಿಮ್ಮದು ಎಂತಹ ದುಡಿಮೆ? ಯಾರಿಗೆ ಸಾಕಲು ಈ ದುಡಿಮೆ?"
"ಆತ್ಮ ಮಂಥನದ ದುಡಿಮೆ, ಆತ್ಮ ಸಾಕಲು ಮಾಡುವ ದುಡಿಮೆ" ಸನ್ಯಾಸಿಯ ಉತ್ತರ ಉಪ್ಪಿಲ್ಲದ ಊಟದಂತೆನಿಸಿತು ಭಧ್ರನಿಗೆ. ಭಧ್ರಯ್ಯ ಏನೂ ಹೇಳದೇ ಇದ್ದರೂ, ಅವನ ಗೊಂದಲ ಅರಿತ ಸನ್ಯಾಸಿಯೇ ಮತ್ತೆ ಮುಂದುವರೆಸಿದ.
"ಜಗತ್ತಿನ ಪ್ರತಿಯೊಂದು ಜೀವಿಯ ಗುರಿ ಮೋಕ್ಷವೇ ಆಗಿರುತ್ತದೆ. ಪರಮಾತ್ಮನಲ್ಲಿ ಲೀನವಾಗುವುದೇ ಪ್ರತಿಯೊಂದು ಆತ್ಮದ ಪರಮ ಗುರಿ, ಅದಕ್ಕಾಗಿ ಲಕ್ಷಾಂತರ ದೇಹಗಳಲ್ಲಿ ಉಳಿದುಕೊಳ್ಳುತ್ತದೆ ಈ ಆತ್ಮ, ಇಂದು ಇದು ನನ್ನ ದೇಹದಲ್ಲಿ,ನಾಳೆ ಮತ್ತೊಂದು ದೇಹದಲ್ಲಿ, ಹೀಗೆ ಮೋಕ್ಷ ತಲುಪವರೆಗೂ ಮುಂದುವರೆಯುತ್ತದೆ, ಅದರ ಏಳಿಗೆಗಾಗಿ ನಮ್ಮ ಬುದ್ಧಿಯನ್ನ ಉಪಯೋಗಿಸಬೇಕು, ಬೇಕು ಮತ್ತು ಬೇಡಗಳ ವ್ಯತ್ಯಾಸ, ಸತ್ಯ ಮತ್ತು ಅಸತ್ಯಗಳ ವ್ಯತ್ಯಾಸ, ಧರ್ಮ ಮತ್ತು ಅಧರ್ಮದ ವ್ಯತ್ಯಾಸ ತಿಳಿದು, ಪುರುಷಾರ್ಥದಲ್ಲಿ ಜೀವನ ನಡೆಸಬೇಕು, ಅದುವೇ ಪ್ರತಿಯೊಬ್ಬರು ಮಾಡಬೇಕಾದ ಕೆಲಸ"
"ಹಾಗಿದ್ದರೆ ನನಗೆ ಮೋಕ್ಷ ಸಿಗುವುದಿಲ್ಲವೇ? ನನಗೆ ಹೆಂಡ್ತಿ ಮಕ್ಕಳು ಇದ್ದಾರೆ, ಅವರನ್ನ ಬಿಟ್ಟು ಸನ್ಯಾಸಿ ಆದ್ರೆ ಮಾತ್ರ ಇದು ಮೋಕ್ಷ ಸಿಗುತ್ತದೆಯೇ?" ಭಧ್ರಯ್ಯನಲ್ಲಿ ಬೇರೂರಿದ ಚಿಂತನೆಗಳು ಬೆಳಕನ್ನ ಬಯಸುತ್ತಿವೆ.
"ನೀನೂ ಮೋಕ್ಷವನ್ನ ಪಡೆಯಬಹುದು, ಸಂಸಾರಿಯಾಗುವುದು ಸುಲಭ, ಸನ್ಯಾಸಿಯಾಗುವುದಲ್ಲ ಭಧ್ರ. ಸನ್ಯಾಸಿ ಎಲ್ಲಾ ಬಂಧನಗಳಿಂದ ವುಮುಕ್ತನಾಗ ಬೇಕು, ಎಲ್ಲಾ ವಿಷಯಗಳಿಂದ ವಿರಕ್ತನಾಗಬೇಕು, ಇದು ಸಾಮಾನ್ಯ ವಿಷಯವಲ್ಲ. ಲೌಕಿಕ ಜೀವನದಲ್ಲಿದ್ದು ಸಹ ಪುರುಷಾರ್ಥದಲ್ಲಿ ಜೀವನ ನಡೆಸಿದರೆ ಸಾಕು, ಅದು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ"
"ಏನಿದು ಪುರುಷಾರ್ಥ? ಹೇಗಿರುತ್ತೆ ಅದು?" ಭಧ್ರಯ್ಯನ ಈ  ಪ್ರಶ್ನೆ ಅವನು ಅದಾಗಲೇ ಸುಭದೃನಾಗುತ್ತಿದ್ದಾನೆ ಅನ್ನುವ ಸೂಚನೆ ಕೊಡುತ್ತಿತ್ತು.
"ಧರ್ಮಾರ್ಥ ಕಾಮ ಮೋಕ್ಷವೇ ಪುರುಷಾರ್ಥ" ಹಸನ್ಮುಖಿ ಸನ್ಯಾಸಿಯ ನಿರಾಳ ಉತ್ತರ. ದಿಕ್ಕೆ ತೋಚದ ಹಾವಭಾವ ಭಧ್ರಯ್ಯನದು. ನಿರುತ್ತರ ಮತ್ತು ನಿರವತೆ ಸುತ್ತೆಲ್ಲಾ, ಚಿರುಂಡೆಗಳ ಶಬ್ದ,ಮಳೆ ಹನಿಗಳ ಶಬ್ದ, ಅದರೊಂದಿಗೆ ಭಧ್ರಯ್ಯನ ಎದೆಬಡಿತದ ಸದ್ದು, ಪರ್ವತವನ್ನೇ ಎದುರಿಸುವ ವಿಷಯಗಳಿಗೆ ಅವನ ಬುದ್ದಿ ಕೈಹಾಕಿದೆಯಲ್ಲವೇ, ಇಂತಹ ವಾತಾವರಣ ಸಾಮಾನ್ಯವೆ. ಮತ್ತೆ ಸನ್ಯಾಸಿಯೇ ಆ ನಿರವತೆಯ ಶಾಂತಿಯಲ್ಲಿ ಮಾತಿನ ಅಲೆ ಮೂಡಿಸಿ ಹೇಳಿದರು
"ಧರ್ಮ,ಅರ್ಥ,ಕಾಮ,ಮೋಕ್ಷ. ಇವುಗಳಿಗಾಗಿಯೇ ನಮ್ಮ ಪ್ರತಿಯೊಂದು ಕೆಲಸ ಕಾರ್ಯಗಳು ನೆರವೇರಬೇಕು, ಇವಕ್ಕಾಗಿಯೇ ಕರ್ಮ ಮಾಡಬೇಕು. ಧರ್ಮದ ಕೆಲಸಕ್ಕೆ ಅರ್ಥ ಬೇಕು, ಅದು ವೆಚ್ಚ ಬೌದ್ಧಿಕ,ಆರ್ಥಿಕ ಅಥವಾ ಇನ್ನಿತರ ಯಾವ ಸಂಪತ್ತಾದರು ಸರಿ, ಅರ್ಥ ಬೇಕು, ಆ ಅರ್ಥ ಸಂಪಾದನೆಗೆ ಇಚ್ಛೆ ಬೇಕಲ್ಲವೇ? ಸಂಪಾದನೆಗೆ ಸಂಪಾದನೆ ಮಾಡುವ ಮನಸ್ಥಿತಿ ಬೇಕಲ್ಲವೇ? ಧರ್ಮಕ್ಕಾಗಿಯೋ ಮೋಕ್ಷಕ್ಕಾಗಿಯೋ ಏನನ್ನೋ ಸಂಪಾದಿಸುವ ಇಚ್ಛೆಯೇ ಕಾಮನೆ, ಇದೆ ರೀತಿಯಲ್ಲಿ ನಮ್ಮಿಂದಾಗುವ ಕರ್ಮ ಧರ್ಮದ ಚೌಕಟ್ಟಿನಲ್ಲಿ ಮತ್ತು ಸತ್ಯದ ನೆರಳಿನಲ್ಲಿ ನೆರವೇರಬೇಕು, ಅಂತಲೇ ಮೋಕ್ಷದೆಡೆಗೆ ನಾವು ಸಮೀಪವಾಗುತ್ತೇವೆ. ಅದು ಸನ್ಯಾಸಿಯೇ ಇರಲಿ, ಸಂಸಾರಿಯೇ ಇರಲಿ, ಎಲ್ಲರೂ ಮೋಕ್ಷದೆಡೆಗೆ ಹೋಗಬಹುದು" ಒಂದೇ ಸಮನೆ ಸುರಿಯುವ ಮಳೆಯಂತ್ತೆ ಭಧ್ರಯ್ಯನಲ್ಲಿ ಅಧ್ಯಾತ್ಮದ ಮಳೆ ಸುರಿಸಿದ ಸನ್ಯಾಸಿ.

ಇದೀಗ ಭಧ್ರಯ್ಯ ಅಧ್ಯಾತ್ಮದ ತೆಕ್ಕೆಯಲ್ಲಿದ್ದಾನೆ, ಆತ್ಮ ಮಂಥನಕ್ಕೆ ಅವನ ಮನಸ್ಸು ಅಣಿಗೊಂಡಿದೆ, ಆಳವಾದ ಧ್ಯಾನ ಅದಾಗಲೇ ಶುರುವಾಗಿದೆ, ಸನ್ಯಾಸಿಯ ಹೊಳೆಯುವ ಕಣ್ಣುಗಳೇ ಅವನ ಏಕಾಗ್ರತೆಯ ಬಿಂದು. ಸಮಗ್ರ ಶಕ್ತಿಯೊಂದು ತನ್ನೊಳಗೆ ಪ್ರವೇಶಿಸುತ್ತಿದೆ ಎನ್ನುವ ಅರಿವು ಅವನಿಗಿಲ್ಲ, ಸ್ವಯಂಭುವಿನೋಪಾದಿಯಲ್ಲಿ ಆ ಸನ್ಯಾಸಿ ಇವನಿಗೆ ಅಧ್ಯಾತ್ಮ ಉಣಬಡಿಸುತ್ತಿದ್ದಾನೆ, ಅಗಾಧ ಶಕ್ತಿಯನ್ನ ತನ್ನ ದಿವ್ಯ ದೃಷ್ಟಿಯಿಂದ ಭಧ್ರಯ್ಯನಲ್ಲಿ ಪಸರಿಸುತ್ತಿದ್ದಾನೆ. ಇವನಲಿ ಸಾಕ್ಷಾತ್ಕಾರವಾಯಿತು ಅನ್ನುವ ಧನ್ಯತಾ ನಗೆ ಸನ್ಯಾಸಿಯದ್ದು.

ಬೆಳಕಾಯಿತು,ಭದ್ರನ ಒಳಗೂ ಮತ್ತು ಹೊರಗೂ. ಏನೋ ಸಾಧಿಸಿದ ಹಗುರತೆಯ ಅನುಭವ ಅವನಲ್ಲಿ ಮನೆ ಮಾಡಿದೆ, ಸುತ್ತಲೂ ಸೂಕ್ಷ್ಮ ಶಾಂತಿ ತಾಳಿದೆ ಪ್ರಕೃತಿ, ಸುಗಂಧ ದ್ರವ್ಯವೊಂದು ಅವನತ್ತ ಬಂದು ಅನುಭವಕ್ಕೆ ಇಳಿದಾಗ ಅತ್ತಿತ್ತ ಕೊರಳು ಹೊರಳಿಸಿದ, ತಾನಿರುವುದು ದೇವಸ್ಥಾನದಲ್ಲಿ ಎನ್ನುವುದು ಅರಿವಿಗೆ ಬರುತ್ತಲೇ ಹಿಂದಿನ ರಾತ್ರಿ ಘಟಿಸಿದ ಘಟನೆಯಲ್ಲ ಒಮ್ಮೆ ಸ್ಮೃತಿ ಪಟಲದಿಂದ ಹೊರಹೊಮ್ಮಿದವು, ಅವಕ್ಕಾಗಿ ಒಮ್ಮೆಲೇ ಹುಡುಕಲು ಶುರು ಮಾಡಿದ ಆ ಸನ್ಯಾಸಿಯನ್ನ, ಅವನೆಲ್ಲಿ ಸಿಕ್ಕಾನು, ಅದಾಗಲೇ ಅದಾರಿಂದಲೋ ಪೂಜೆಗೆ ಒಳಪಟ್ಟ ಶಿವಲಿಂಗದಲ್ಲಿ ಮಾಯವಾಗಿದ್ದಾನೆ. ಅದ್ಭುತದ ಅನುಭವ ಪಡೆದ ಭಧ್ರ ಭಾವುಕನಾಗಿ ಶಿವಲಿಂಗದೆದುರು ನಮಸ್ಕರಿಸಿದ. ತಾನು ಸ್ವಯಂ ಸ್ವಯಂಭುವಿನಲ್ಲಿ ರಾತ್ರಿ ಕೇಳಿದ್ದ ಧನರಾಶಿಯ ಗಂಟು ಅವನೆದುರಿಗಿದೆ, ಶಿವನೇ ಕೊಟ್ಟದ್ದು, ಆದರೆ ಇದೀಗ ಭದ್ರ ಮೊದಲಿನ ಅಭಧ್ರನಲ್ಲ, ಅದಕ್ಕಾಗಿ ಇದ್ದ ಕತ್ತಲೆಯ ವ್ಯಾಮೋಹ ಕಳೆದ ಕತ್ತಲೆಯಲ್ಲೇ ಕಳೆದು ಹೋಗಿದೆಯಲ್ಲ, ಆ ಶಿವನಲ್ಲಿ ತಾನು ಇಂತಹ ತುಚ್ಛವನ್ನ ಕೇಳಿದ್ದೇನೆಲ್ಲ ಎಂದು ನೆನದು ತನ್ನ ಮೂರ್ಖತನಕ್ಕೆ ಒಮ್ಮೆ ಮುಗುಳ್ನಕ್ಕ. ಅವನಿಗೆ ಇದೀಗ ಆ ಧನರಾಶಿಯ ಅವಶ್ಯಕತೆಯೇ ಇಲ್ಲ, ಅದನ್ನ ಅಲ್ಲಿಯೇ ಸಮರ್ಪಿಸಿ ಮನೆಗೆ ಹೊರಡಲು ಸಿದ್ಧನಾದ.

ಹಿಂತಿರುಗುವ ಹಾದಿ ಹಾಳಾಗಿದ್ದರೂ ಅವನಲ್ಲಿ ಯಾವುದೇ ಬೇಸರವೂ ಇಲ್ಲ, ಪ್ರಕೃತಿಯನ್ನ ನೋಡುವ ಅವನ ನೋಟವೇ ಬದಲಾಗಿದೆ, ಸೂರ್ಯನೊಂದಿಗೆ ಇವನೂ ಲವಲವಿಕೆಯಿಂದ ಹೆಜ್ಜೆ ಇಡುತ್ತಿದ್ದಾನೆ. ಭಧ್ರನಲ್ಲಿ ಆದ ಬದಲಾವಣೆಗಳು ಸೂರ್ಯನಿಗೆ ಹೊಸತೇನಲ್ಲ, ಅದೆಷ್ಟೋ ಅಸಂಖ್ಯಾತ ಶತಮಾನಗಳಿಂದ ಶಿವನ ಕೃಪೆ ಪಡೆದವರನ್ನ ನೋಡುತ್ತಲೇ ಬಂದಿದ್ದಾನಲ್ಲ, ಸೂರ್ಯನೂ ಪ್ರಸನ್ನನಾಗಿದ್ದಾನೆ. 
ಭಧ್ರಯ್ಯನ ಮೇಲಿರುವ ಸಂಸಾರದ ಭಾರ ಭಾರವೇ ಅಲ್ಲ ಎನ್ನುವಂತಾಗಿದೆ, ಬೇಕು ಬೇಡಗಳನ್ನ ಅರಿತಾಗಿದೆ, ಕತ್ತಲೆ ಮತ್ತು ಬೆಳಕನ್ನ ಅರಿತಾಗಿದೆ, ಸತ್ಯ ಮತ್ತು ಮಿಥ್ಯಗಳನ್ನ ಅರಿತಾಗಿದೆ, ಧರ್ಮ ಮತ್ತು ಅಧರ್ಮಗಳನ್ನ ಅರಿತಾಗಿದೆ, ಇನ್ನೇನು ಬೇಕು ಬದುಕಲು ಅನ್ನುವ ಯೋಚನೆ ಅವನಲ್ಲಿದ್ದ ಕಾರಣ ಅವನಲ್ಲಿ ಉತ್ಕೃಷ್ಟವಾದ ಹೊಸ ಹುರುಪು ಹುಟ್ಟಿಕೊಂಡು ಇಮ್ಮಡಿಗೊಂಡಿದೆ.

ಜಗತ್ತಿನ ಸಂಸಾರವನ್ನ ಮತ್ತು ಅವನ ವೈಯಕ್ತಿಕ ಸಂಸಾರಾಗಳನ್ನೆರಡೂ ನಡೆಸಿಕೊಂಡು ಹೋಗುವ ನಿರಾಳತೆ ಅವನು ಕಲಿತಿದ್ದಾನೆ. ಅಭಧ್ರನಾಗಿದ್ದ ಭದ್ರ ಇದೀಗ ಸ್ವಯಂಭುವಿನ ಅನುಭೂತಿಯಿಂದ ಸುಭಧ್ರನಾಗಿದ್ದಾನೆ. ಸಂಭ್ರಮಿತನಾಗಿದ್ದಾನೆ.

                                               ...............ಬಸವ.

Comments

  1. ಶಂಭೋ ಶಂಕರ.. ಹರ ಹರ ಮಹಾದೇವ.

    ReplyDelete
  2. ಮುಕ್ತಿ ಹೊಂದಲೇಬೇಕು ಈ ಮುಖ ಜನ್ಮ... ವಿಮುಕ್ತ ನಾಗುವವರೆಗೆ ಅದು ದೊರೆಯದು

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ