ದಕ್ಷಿಣ ಕಾಶಿ ರಾಮೇಶ್ವರಮ್.


'ರಾಮೇಶ್ವರಮ್' ಚಾರ್ ಧಾಮಗಳಲ್ಲಿ ಇದೂ ಒಂದು.
ದಕ್ಷಿಣದ ತುತ್ತತುದಿಯಲ್ಲಿ ಶ್ರೀ ರಾಮನಿಂದಲೇ ಸ್ಥಾಪಿತಗೊಂಡ ಸುಂದರ ಮತ್ತು ಸುಭಧ್ರ ದೇವಾಲಯ. ಮಹಾಬ್ರಾಹ್ಮಣ ರಾವಣನನ್ನ ಸಂಹರಿಸಿದ ಪ್ರಾಯಶ್ಚಿತಕ್ಕಾಗಿ ನಿರ್ಮಿಸಿದ ದೇವಾಲಯ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿನದೊಂದು.

ಮಧುರೈ ಅಲ್ಲಿ ಅಡ್ಡಾಡಿದ್ದು ಅಷ್ಟೇನು ಆಯಾಸಕರವಾಗಿರಲಿಲ್ಲ. ಬಸ್ಸು ರಾಮನಾಡ್ ಅಥವಾ ರಾಮನಾಥಪುರದಿಂದ ರಾಮೇಶ್ವರದ ಕಡೆ ತೆರುಳುತ್ತಿತ್ತು. ಸ್ನಿಗ್ದ ಕತ್ತಲು,ಚಳಿಯೋ ಅಥವಾ ತಂಗಾಳಿಯೋ ಎಂದು ವ್ಯಾಖ್ಯಾನಿಸಲಾಗದ ಸಮಯ. ಮೊದಲಿಗೆ ಭೇಟಿಸಿಗುವುದು ಪಂಬನ್ ಎಂಬ ಹಳ್ಳಿ, ರಸ್ತೆಬದಿಯಲ್ಲಿ ಮಿನಿನಂಗಡಿಗಳು,ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡ ಶಿಲುಬೆಗಳು ಕಾಣಸಿಗುತ್ತಿವೆ. ಬ್ರಿಡ್ಜ್ ದಾಟಿದ ನಂತರ ರಾಮೇಶ್ವರಮ್ ದ್ವೀಪ.ಬ್ರಿಡ್ಜ್ ಇಂದಲೇ ಕತ್ತಲಲ್ಲಿ ಕಾಣಸಿಗುವ ದೊಡ್ಡ ಸಮುದ್ರ ನಮ್ಮನ್ನ ಅದಾಗಲೇ ಉತ್ತೇಜನಗೊಳಿಸಿತ್ತು. ರಾಮೇಶ್ವರಮ್ ಅಬ್ದುಲ್ ಕಲಾಂ ರ ಹುಟ್ಟುರು ಸಹ ಹೌದು. ಸುತ್ತಲೂ ಸಮುದ್ರದ ಮಧ್ಯೆಗಿನ ಚಿಕ್ಕ ದ್ವೀಪ,ಲಂಕೆಗೆ ಹನುಮಂತ ಲಗ್ಗೆ ಇಟ್ಟ ಸ್ಥಳ. ಅದೆಷ್ಟೋ ಬಾರಿ ಸುನಾಮಿಗಳನ್ನ ಎದುರಿಸಿದೆ ಈ ಪುಣ್ಯಭೂಮಿ. ಇಲ್ಲಿನ ನಿವಾಸಿಗಳು ಬಾಗಶಃ ಮೀನುಗಾರರೆ, ಸುಮಾರು ನಲವತ್ತಿಕ್ಕಿಂತ ಹೆಚ್ಚು ಚಿಕ್ಕಪುಟ್ಟ ಹಳ್ಳಿಗಳನ್ನ ಈ ದ್ವೀಪ ಸಾಕಿ ಸಲಹುತ್ತಿದೆ.

ದೇವಸ್ಥಾನದ ಮಾರ್ಗದಲ್ಲಿಯೇ ಒಳ್ಳೆಯ ಬೆಲೆಗೆ ಸಿಕ್ಕ ಚಿನ್ನಸ್ವಾಮಿ ಖಾಸಗಿ ವಸುಹಾತಿನಲ್ಲಿ ಉಳಿದುಕೊಂಡ್ವಿ. ಅದರ ಎದುರಿಗೆಯೇ ಇದ್ದ 'ಜಂಮಗಮವಾಡಿ ಮಠ' ಕೈಬಿಸಿ ಕರೆಯುತ್ತಿತ್ತು,ಲಿಂಗಾಯತರದ್ದು,ಮಠದ ದಾಸೋಹದ ಊಟ ಇದ್ದೆ ಇರುತ್ತೆ. ಆದರೂ  ಸಂತರು ಸ್ವಾಮಿಗಳು ಆಶ್ರಯಕ್ಕೆಂದು ಇರುವುದಿದೆ,ನಮಗೇಕೆ ಅಲ್ಲಿಯ ಬಿಡಾರ ಅನ್ನುವ ನಮ್ಮದೇ ಅಲಿಖಿತ ನಿಯಮಾವಳಿಗಳಿಂದ ಅಲ್ಲಿ ಉಳಿದುಕೊಳ್ಳುವ ಯೋಚನೆ ದೂರತಳ್ಳಿದ್ವಿ.ಆಯಾಸವೇನು ಇಲ್ಲದ್ದರಿಂದ ಆದಷ್ಟು ಬೇಗನೆ ಫ್ರೆಶ್ ಆಗಿ ಅಲ್ಲಿನ ಬೀದಿಗಳ ಸುತ್ತಾಟಕ್ಕೆ ಹೊರಬರುವಿದೆ. ಪ್ರವಾಸದುದ್ದಕ್ಕೂ ಬಳಸಿ ಉಳಿಸಿದ್ದ ಚಿಕ್ಕ ಸಾಬೂನು ಇನ್ನೊಂಚುರು ದಪ್ಪವಿದೆ, ಮುಗಿಸಲೇಬೇಕು ಅನ್ನುವ ಹಠವೊಂದಿದೆ,ಅದಕ್ಕೆ ತಕ್ಕಂತ್ತೆ ಸ್ವಲ್ಪ ಮುಖಕ್ಕೆ ಉಜ್ಜಾಡಿ ಫ್ರೆಶ್ ಆಗಿ ಹೊರಗಡೆ ಬಂದ್ವಿ. ಜಂಗಮವಾಡಿ ನಮ್ಮವರದ್ದು ಅನ್ನುವ ಸೆಲೆ ಸೆಳೆದಿದ್ದರಿಂದ ಅಲ್ಲಿಯವರನ್ನ ಭೇಟಿ ಮಾಡಿದೇವು. ಒಳಗಿದ್ದವರೊಂದಿಗೆ ಪರಿಚಯ ಮಾಡಿಕೊಂಡು ಲೋಕಾಭಿರಾಮದ ನಾಲ್ಕು ಮಾತುಗಳ ವಿನಿಮಯ ಮಾಡಿಕೊಂಡ್ವಿ. ಸುಮಾರು ವರ್ಷಗಳಿಂದ ಅಲ್ಲಿಯೇ ಇದ್ದಾರೆ,ಮೂಲತಃ ಬಾಗಕೋಟೆಯವರು, ಅಷ್ಟು ವರ್ಷಗಳಿಂದ ಅಲ್ಲಿಯೇ ಇದ್ದರೂ ನಮ್ಮ ಭಾಷಾ ವೈಖರಿ ಬಿಟ್ಟಿಲ್ಲ ನೋಡಿ, ನಾಲಿಗೆಯಿಂದ ಅದೇ ಧಾಟಿ ಹೊರಹೊಮ್ಮುತ್ತಿದೆ. "ಇಲ್ಲೇ ಇರದ್ ಇತ್ರಿ, ಸುಮ್ನೆ ಬ್ಯಾರೇಕಡಿ ಹೋಗಿ ತ್ರಾಸ್ ತಗೊಂಡಿರಿ" ಮಠದ ನಿರ್ವಾಹಕರ ಒಡತಿಯ ಆತ್ಮೀಯತೆಯ ಮಾತುಗಳು. "ಸದ್ಯಕ್ಕೆ ಇಲ್ಲೇ ಸಮೀಪದಲ್ಲೇ ಉಳ್ಕೊಂಡಿದಿವಿ, ಹಂಗೆ ಮಾತಾಡಿಸ್ಕೊಂಡ್ ಹೊದ್ರಾಯ್ತು ಅಂತ ಬಂದ್ವಿ". ಕೆಳಗಡೆ ಅವರಿಗೆ ಉಳಿದುಕೊಳ್ಳಲು ಮನೆ, ಮೇಲಿನ ಮಹಡಿಯಲ್ಲಿ ಬಂದ ಯಾತ್ರಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ.
"ಇನ್ನೊಂಮಿಗಿ ಬಂದಾಗ ಇಲ್ಲಿಗಾ ಬರ್ಬೇಕ್ ನೋಡ್ರಿ" ವಿದಾಯದ ಮುಗುಳುನಗೆ ಆತ್ಮೀಯತೆಗೆ ಒಂಚೂರು ಸಕ್ಕರೆ ಹಾಕಿದಂತಿತ್ತು. ಹಲ್ಲುಗಳು ಕಾಣದಂತ್ತೆ ನಾವೂ ಸಹ ಮುಗುಳ್ನಕ್ಕು ಹೊಸ್ತಿಲು ದಾಟಿದೆವು.

ದೇವಸ್ಥಾನದ ಹಿಂಬದಿಯ ಬಿದಿಗಳುದ್ದಕ್ಕೂ ವಸುಹಾತುಗಳು,ಹೋಟೆಲ್ಲುಗಳು,ಇನ್ನಿತರ ವ್ಯಾಪಾರ ಮಳಿಗೆಗಳು. "ಜಲ್ದಿ ನಡಿ, ಸಮುದ್ರ ಕಡೆ ಹೋಗ್ಬೇಕು,ಬೀಚ್ ಡಿನ್ನರ್ ತರ ಏನಾದ್ರು ಇರಬಹುದು" ಸಿದ್ಲಿಂಗನದು ಎಲ್ಲಿಲ್ಲದ ಆತುರ.ಅವನದ್ದೇ ಕಲ್ಪನಾಲೋಕದಲ್ಲಿ ಬಿತ್ತಿದ್ದ ಆಲೋಚನೆಗಳು ಸತ್ಯವಾದೀತೆ ಎನ್ನುವ ಖಯಾಲಿಗಳು ಅವನದು. ದೇವಸ್ಥಾನದ ಹತ್ತಿರ ಹೋದಂತೆಲ್ಲಾ ಸಮುದ್ರದ ಸದ್ದು ಜೋರಾಗಿಯೇ ಕೇಳಿಸುತ್ತಿತ್ತು, ಅದು ಇವನನ್ನ ಇನ್ನಷ್ಟು ಉತ್ತೇಜಿಸುತ್ತಿದೆ. ಅಕ್ಕಪಕ್ಕದ ಗಲ್ಲಿಗಳನ್ನ ಭೇಧಿಸಿಯಾದರು ಆದಷ್ಟು ಬೇಗ ಸಮುದ್ರವನ್ನ ನೋಡಬೇಕು ಅನ್ನುವ ತವಕ. ಹೆಜ್ಜೆಗಳು ಹೆಚ್ಚಾದಂತ್ತೆ ಸಮುದ್ರದ ಸದ್ದು ಹೆಚ್ಚುತ್ತಿದೆ. ದೈತ್ಯ ಪ್ರಕೃತಿ ಸಮುದ್ರ. ಹುಣ್ಣಿಮೆಯ ರಾತ್ರಿಗೆ ಹುಚ್ಛೆದ್ದು ಕುಣಿಯುತ್ತಲಿದೆ, ಮೈದುಂಬಿ ಪುಟಿದೇಳುತ್ತಿವೆ ಅಲೆಗಳು, ಶಶಿಯೊಂದಿಗೆ ಬಿಡದ ಸಮರ ನಡೆಯುತ್ತಿದೆ ಅಲೆಗಳದ್ದು. ಇದೇ ಸಮುದ್ರವಲ್ಲವೇ ರಾಮನಿಗೆ ಆಡಚಣೆಯಾಗಿದ್ದು, ಅವನ ಬಾಣಗಳನ್ನ ಎದುರಿಸಿದ್ದು,ಮತ್ತೆ ಅವನಲ್ಲಿಗೆ ಶರಣಾಗಿದ್ದು.ಬೃಹತ್ ಸಮುದ್ರಾವಾದರೇನಂತ್ತೆ, ಅವನೂ ರಾಮನಲ್ಲವೇ? ರಾವಣನೂ ಒಂದೊಮ್ಮೆ ಪಲಾಯನಕ್ಕೆ ಯೋಚಿಸಿದ್ದನಂತ್ತೆ, ಇದಂತು ಯಕಶ್ಚಿತ ಬಡ ಸಮುದ್ರ.ಬೇರೆ ವಿಧಿಯಿರಲಿಕ್ಕಿಲ್ಲ.

ಮನಸೋಇಚ್ಛೆಯಂತ್ತೆ ಚಾಚಿಕೊಳ್ಳುವ ಪ್ರಯತ್ನ ಮಾಡುತ್ತಲಿವೆ  ಅಲೆಗಳು.ಕತ್ತಲೆಯಲ್ಲಿ ಅಸ್ಪಷ್ಟವಾಗಿ ಕಂಡರೂ ಸನುದ್ರದ ವಿಶಾಲತೆ ಅನುಭವಕ್ಕೆ ಬರುತ್ತಿದೆ. ಅಲ್ಲಿಯೇ ಹೋಮ ಹವನ ಕಾರ್ಯಗಳಿಗೆ ಸಿದ್ದ ಪಡಿಸಿದ್ದ ಮಂಟಪದಲ್ಲಿ ಕುಳಿತೇವು. ಗಾಳಿ ಸಮುದ್ರದ ಮೇಲ್ಮೈಗೆ ಮುತ್ತಿಟ್ಟಂತ್ತೆ ಅಲೆಗಳು ಪುಟಿದೇಳುತ್ತಿವೆ,ಪುರದೊಳು ಪ್ರವೇಶಕ್ಕೆ ಹವಣಿಸುತ್ತಿವೆ ಏನೋ ಎಂಬಂತ್ತೆ ಪದೇ ಪದೇ ಮಿತಿ ಮೀರಿ  ಕಡಲ ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಸಮುದ್ರ ತನ್ನೆದುರಿಗೆ ಕುಳಿತವರಲ್ಲಿಗೆ ಕೇವಲ ಅಸಂಖ್ಯಾತ ಅಲೆಗಳನ್ನಷ್ಟೇ ಅಲ್ಲದೆ ಅಸಂಖ್ಯಾತ ಆಲೋಚನೆಗಳನ್ನೂ ಕೊಡುತ್ತಿದೆ. ಅಲ್ಲೆಲ್ಲೋ ಮನದ ಮೂಲೆಯಲ್ಲಿ ಹುದುಗಿಹೋಗಿದ್ದ ನೆನಪುಗಳನ್ನ ಹೆಕ್ಕಿ ತೇಗೆಯುತ್ತವೆ ಅಲೆಗಳು,ಥೇಟ್ ಸಮುದ್ರದಾಚೆಗಿನ ಮರುಳನ್ನ ಎಳೆತಂದು ಮತ್ತೆ ಹೊರಹಾಕಿದಂತ್ತೆ. ಅದಕ್ಕೆಯೇ ಸಮುದ್ರವೆಂದರೆ ಎಲ್ಲರಿಗೂ ಒಂತರಹದ ಖುಷಿ,ಒಂದೊಮ್ಮೆ ಎಲ್ಲರನ್ನ ಅಂತರ್ಮುಖಿಯನ್ನಾಗಿಸುತ್ತದೆ. ಪ್ರಕೃತಿಯ ಒಂದು ಭಾಗವಾದ ಸಮುದ್ರವನ್ನ ಹೋಗಳುವರೂ ಇದ್ದಾರೆ ತೆಗಳುವರೂ ಇದ್ದಾರೆ. ಸಮುದ್ರದೊಳಕ್ಕೆ ಬದುಕಲೂ ಇಳಿಯುತ್ತಾರೆ,ಸಾಯಲೂ ಇಳಿಯುತ್ತಾರೆ,ಸತ್ತವರಿಗೆ ಶಾಂತಿ ಕೊಡಲು ಸಹ ಇಳಿಯುತ್ತಾರೆ. ಆದರೆ ಇಲ್ಲಿ ಘಟಿಸಿಸುವ ಎಲ್ಲಾ ಅಹಿತಗಳಿಗೆ ಮನುಷ್ಯ ಮಾಡುವ ಧೋರಣೆ ಎದುರಿಸಬೇಕಾದದ್ದು ಸಮುದ್ರ ಮಾತ್ರ,ಎಷ್ಟು ವಿಪರ್ಯಾಸವಲ್ಲವೇ.
ಹುಣ್ಣಿಮೆಯ ರಾತ್ರಿಯೇ ಹಾಗೆ, ಅಲ್ಲೆಲ್ಲೋ ಬೆಟ್ಟದ ತುದಿಯಲ್ಲಿ ಕುಳಿತವರಿಗೆ ಶಶಿಯ ಶಿತಲತೆಯ ಅನುಭೂತಿ ಒಂದೊಮ್ಮೆ ಪ್ರಕೃತಿಯನ್ನ ಹಾಡಿಹೋಗುಳುವಂತ್ತೆ ಮಾಡುತ್ತದೆ, ಇನ್ನೊಂದೆಡೆ ಹೊಟ್ಟೆಪಾಡಿಗಾಗಿ ಸಮುದ್ರದೊಳಗೆ ಹೊಕ್ಕ ಮೀನುಗಾರರು ಬೃಹತ್ ಅಲೆಗಳನ್ನ ಎದುರಿಸುತ್ತಾ ಇದೆ ಹುಣ್ಣಿಮೆಯನ್ನ ಶಪಿಸುತ್ತಿರುತ್ತಾರಲ್ಲವೇ. ಪ್ರಕೃತಿ ಮನುಷ್ಯನನ್ನ ರಂಜಿಸುವ ಕಾರ್ಯವಂತ್ತು ಕೈಗೆತ್ತಿಕೊಂಡಿಲ್ಲ, ಪ್ರಕೃತಿ ತನ್ನದೇ ಆದ ಮನೋಲ್ಲಾಸಗಳಲ್ಲಿ ಮೈಮರೆತಿರುತ್ತದೆ. ಮನುಷ್ಯ ತನ್ನ ಪ್ರಸಕ್ತ ಮನಸ್ಥಿಥಿಗೆ ತಕ್ಕಂತ್ತೆ ಪ್ರಕೃತಿಯ ಆಗುಹೋಗುಗಳನ್ನ ಅನುಭವಿಸುತ್ತಾನೆ,ಆನಂದಿಸುತ್ತಾನೆ,ದೂಷಿಸುತ್ತಾನೆ. ಇವುಗಳಾವುದರ ಪರಿವೇ ಇಲ್ಲದೆ ತನ್ನಿಷ್ಟದಂತ್ತೆ ಬದುಕುತ್ತಿದೆ ಬಡಪಾಯಿ ಪ್ರಕೃತಿ.

ಸಮಯ ಹನ್ನೊಂದು ಮುಗಿದು ಹನ್ನೆರಡಾಗುತ್ತಿದೆ, ನಮ್ಮ ಮಾತುಗಳೂ ಸಹ ಅಲೆಗಳಂತ್ತೆ ಹೊರಬರುತ್ತಲೇ ಇವೆ, ಬೀದಿ ದೀಪದಲ್ಲಿ ಜಗಮಗಿಸುತ್ತಿರುವ ಸಮುದ್ರದಂಚಿನ ನೀರವ ಬೀದಿಗಳು ಇನ್ನಷ್ಟು ಸುಂದರವಾಗಿ ಕಾಣುತ್ತಿವೆ. ಸಿದ್ಲಿಂಗ ಈ ಪರಿಯ ಸೊಬಗಿಗೆ ಸಂಪೂರ್ಣವಾಗಿ ಸೋತು ಪ್ರಕೃತಿಗೆ ಪರವಶನಾಗಿದ್ದ. ರಾತ್ರಿಯಿಡೀ ಅಲ್ಲೇ ಕುರುವ ಹುನ್ನಾರ ಅವನ ಮನಸ್ಸಿನಲ್ಲಿ ಸಿದ್ಧವಾಗಿದೆ ಅನ್ನುವ ಮುನ್ಸೂಚನೆ ಅದಾಗಲೇ ನನಗೆ ತಿಳಿದಿದ್ದರಿಂದ, ನಾ ಬಲ್ಲ ಎಲ್ಲಾ ತಂತ್ರಗಳನ್ನ ಬಳಸಿ ಅಲ್ಲಿಂದ ಹಿಂತಿರುಗಲು ಒಪ್ಪಿಸಿದೆ. ಮರುದಿನದ ವ್ಯಾಪಾರಕ್ಕೆ ಮತ್ತೆ ಬಿದಿಗಿಳಿಯಬೇಕು ಅಲ್ಲಿಯ ಸ್ಥಳೀಯರು, ಸಂಪೂರ್ಣ ಸ್ತಬ್ಧವಾಗಿವೇ ಬೀದಿಗಳು. ಇತ್ತ ರಾಮೇಶ್ವರನೂ ಮಲಗಿದ್ದಾನೆ ಅನ್ನುವಷ್ಟು ಶಾಂತತೆ ದೇವಸ್ಥಾನದ ಗೋಪುರಗಳು,ಗೋಡೆಗಳು ಹೇಳುತ್ತಿವೆ. ಮತ್ತೆ ಬೆಳಿಗ್ಗೆ ಸೂರ್ಯನೋಡನೆ ಸಂಚರಿಸಬೇಕಾದ ನಾವುಗಳು ಸೂರ್ಯನಿಲ್ಲದಿದ್ದಾಗ ಮಲಗಲೇಬೇಕಾದ ಅನಿವಾರ್ಯವಿದೆ ಎನ್ನುವ ಅರಿವು ಹಾಸಿಗೆಯತ್ತ ತಂದು ಬೀಸಾಡಿತ್ತು.

ಬೆಳಿಗ್ಗೆ ಚಳಿ ಇಲ್ಲದಿದ್ದರು ತಂಪು ಗಾಳಿ, ದೇವಸ್ಥಾನದಿಂದ ವೇದ ಮಂತ್ರಗಳು ನಾಲ್ಕು ದಿಕ್ಕುಗಳಲ್ಲಿ ಏಕಕಾಲಕ್ಕೆ ಸಂಚಿರುಸುತ್ತಿವೆ. ಸಮುದ್ರದಲ್ಲಿ ಮಿಂದೆದ್ದು ಬರುತ್ತಿರುವ ಜನಗಳು, ಸಮಯ ಹೆಚ್ಚಾದಂತ್ತೆ ಜನಗಳ ಓಡಾಟವು ಹೆಚ್ಚುತ್ತಿದೆ. ಬೇಗನೆ ಸಮುದ್ರದಕಡೆ ಹೋಗಬೇಕೆಂದು ನಿರ್ಧರಿಸಿ ಹೊರಟದ್ದಾಯ್ತು. ಮೊದಲು ಸಮುದ್ರದಲ್ಲಿ ಸ್ನಾನ, ನಂತರ ಅಗ್ನಿ ತೀರ್ಥದ 22 ಕುಂಡಗಳಲ್ಲಿ ಸ್ನಾನ.

ಹುಣ್ಣಿಮೆ ಕಳೆದಿದ್ದರಿಂದ ಸಮುದ್ರ ಶಾಂತವಾಗಿತ್ತು, ಸಹಸ್ರಾರು ಜನ ಸಮುದ್ರಗಳಲ್ಲಿ ಇಳಿದಿದ್ದಾರೆ, ದೂರದಲ್ಲಿ ತೇಲುತ್ತ ನಿಂತಿರುವ ಮೀನುಗಾರರ ಖಾಲಿ ಬೋಟ್ ಗಳು. ಸಮುದ್ರದ ಅಂಚಿನಲ್ಲೇ ಹೋಮ ಹವನ ಕಾರ್ಯಗಳು ಜೋರಾಗಿಯೇ ನಡೆಯುತ್ತಿವೆ,ಬ್ರಾಹ್ಮಣರ ಸಹಾಯದೊಂದಿಗೆ ಪೂಜೆಗಳು ಪುನಸ್ಕಾರಗಳು ನೆರವೇರುತ್ತಿವೆ.ಎಲ್ಲರದ್ದೂ ಅವಿಶ್ರಾಂತ ಸಮಯ.ತೀರಾ ನೀಲವಾಗಿ ಕಾಣುವ ಬೀಚ್ ಅಂತ ಹೇಳೋದಕ್ಕಿಂತ ಸಾಮಾನ್ಯ ಸಮುದ್ರ ತೀರ ಎನ್ನಬಹುದಾದ ಸಮಾನ್ಯತೆ ಅಲ್ಲಿದೆ. ಸಮುದ್ರಕ್ಕೆ ಇಳಿಯುವರೆಲ್ಲರು ಪವಿತ್ರ ಸ್ನಾಕ್ಕೆಯೇ, ಮೋಜು ಮಸ್ತಿಗಳಿಗಲ್ಲ ಎನ್ನುವಂತಿತ್ತು ಎಲ್ಲರ ಉಡುಗೆ ತೊಡುಗೆಗಳು. ತೀರ್ಥಕ್ಷೇತ್ರ ಅನ್ನುವ ಪರಿಜ್ಞಾನ ಎಲ್ಲರೂ ಹೊಂದಿದ್ದು ಪ್ರಶಂಶನಿಯ ವಿಷಯ.ಒಂದೊಮ್ಮೆ ಎಲ್ಲರೂ ಮುಳಿಗೆದ್ದು ಸೂರ್ಯನಿಗೆ ನಮಸ್ಕರಿಸುತ್ತಿದ್ದಾರೆ, ಈಜಲು ಬರುತ್ತಿರುವರು ತಾವೇನೋ ಲಂಕೆಗೆ ಹೊರಟೇಬಿಟ್ಟೆವು ಅನ್ನುವಂತ್ತೆ ದೊಡ್ಡ ದೊಡ್ಡ ಅಲೆಗಳನ್ನ ದಾಟುತ್ತಿದ್ದಾರೆ.  ಈಜು ಬರದ ಸಿದ್ಲಿಂಗ್ ಸೊಂಟದಾಳದಷ್ಟಿದ್ದಲ್ಲಿ ಮನಸೋಇಚ್ಛೆ ಮಿಯುತ್ತಿದ್ದ, ಹುಡುಗಾಟಿಕೆ ಮತ್ತೆ ಜೀವ ತಾಳಿದೆ ಅನ್ನುವಂತ್ತೆ ಅವನದ್ದೇ ಖುಷಿಯಲ್ಲಿದ್ದಾನೆ.ನೀರಿನಲ್ಲಿ ತೇಲುವಷ್ಟು ಈಜು ನಾ ಬಲ್ಲವನಾಗಿದ್ದೆ, ಈಜುತ್ತ ಸ್ವಲ್ಪ ಆಳಕ್ಕೆ ನಾ ಹೋಗಿದ್ದು ನೋಡಿ, "ಎಲ್ಲಿಗ್ ಶ್ರೀ ಲಂಕಾ ಹೊಂಟಿ ಎನ್?" ಅಂತ ಕನ್ನಡಕ ಇಲ್ಲದೆ ಅಸ್ಪಷ್ಟವಾಗಿ ಕಂಡ ನನ್ನ ನೋಡಿ ಉದ್ಘರಿಸುತ್ತಿದ್ದ ಸಿದ್ಲಿಂಗ್. ನೀರಿನಲ್ಲಿ ಭಾರ ಎತ್ತುವುದು ಅಷ್ಟೇನು ಕಷ್ಟವಲ್ಲ, ಅದರಲ್ಲಂತ್ತು ಸಿದ್ಲಿಂಗನದು ಖಾಲಿ ದೇಹ. ಅವನನ್ನ ಸಾಧ್ಯವಾದಷ್ಟು ಆಳಕ್ಕೆ ಕೊಂಡೊಯ್ದೆ, ಆ ಸಮಯದಲ್ಲಿ ಯಾವುದೇ ವೈಚಾರಿಕ ಅಥವಾ ಸೈದ್ಧಾಂತಿಕ ಚರ್ಚೆ ನಮ್ಮಲ್ಲಿ ಆಗಿರಲಿಲ್ಲ, ಇಲ್ಲವಾದಲ್ಲಿ ಅವನನ್ನ ಒಮ್ಮೆಲೆ ಲಂಕೆಗೆ ಎಸೆದು ಬಿಟ್ಟರು ಯಾರೂ ಕೇಳುವಂತಿರಲಿಲ್ಲ, ಅಂದು ಅವನದು ಸುಧೈವ ಬಿಡಿ, ಬದುಕಿದ ಬಡಪಾಯಿ.

ಸಾಕಷ್ಟು ಸಮಯ ಸಮುದ್ರದಲ್ಲಿ ಕಳೆದಾಗಿದೆ. ಕಾಲಿಗೆ ಸಿಕ್ಕ ಹಳೆ ಬಟ್ಟೆಗಳನ್ನ ಸಾಧ್ಯವಾದಷ್ಟು ಹೊರತಂದು ಹಾಕಿದ್ದೂ ಆಯ್ತು, ಶತಕೋಟಿ ಜನಸಂಖ್ಯೆಯ ದೇಶ ನಮ್ಮದು,ಇದು ಮುಗಿಯದ ಕಾರ್ಯ ಅನ್ನುವುದು ಅರಿವಾಗಿ ಹೊರಗೇ ಬಂದ್ವಿ. ಅಲ್ಲಿಂದ ಸಮೀಪದಲ್ಲೇ ಇದ್ದ ಅಗ್ನಿ ತೀರ್ಥದ ಕಡೆ ಹೊರಟಾಯ್ತು. ದೇವಸ್ಥಾನದ ಆವರಣದಲ್ಲೇ ಇವೆ 22 ಕುಂಡಗಳು. 50 ರೂಪಾಯಿ ಟಿಕೇಟು. ರೈಲಿಗಿಂತಲು ಉದ್ದನೆಯ ಸಾಲು, ಎಲ್ಲರ ಕೈಯಲ್ಲಿ ಚಿಕ್ಕ ಪುಟ್ಟ ಪ್ಲಾಸ್ಟಿಕ್ ಕ್ಯಾನ್ ಗಳು. ಎಲ್ಲಾ ಕುಂಡಗಳಿಂದ ಸ್ವಲ್ಪ ಸ್ವಲ್ಪ ಜಲ ಶೇಖರಿಸಿಕೊಂಡು ಹೋಗಲಿಕ್ಕೆ ಅನ್ನುವುದು ಸ್ಪಷ್ಟವಾಗಿ ಗೋಚರಿಸುವ ಚಿತ್ರಣ. ಇಲ್ಲಿಯೂ ಸ್ಪೆಷಲ್ ಪಾಸ್. ಅಲ್ಲಿಯ ಗೈಡ್ ಗಳಿಗೆ ನೂರು ಇನ್ನೂರು ಕೊಟ್ಟರೆ ಹತ್ತಿಪ್ಪತ್ತು ನಿಮಿಷದಲ್ಲಿ ಎಲ್ಲಾ ಕುಂಡಗಳಿಗೆ ಭೇಟಿ ಮಾಡಿಸಿ ತೀರ್ಥ ಸ್ನಾನಕ್ಕೆ ಅನುವು ಮಾಡಿಕೊಡುತ್ತಾರೆ,ಒಂದು ಹಂತದಲ್ಲಿ ಅವರೇ ಸ್ನಾನ ಮಾಡಿಸುತ್ತಾರೆ ಎಂದರ್ಥ. ವೆಚ್ಚಕ್ಕೆ ಬೇಕಾದ ನಗದು ತಂದಿರಲಿಲ್ಲ, ಆದರೂ ಏನಾದರೂ ಒಂದು ವ್ಯವಸ್ಥೆ ಆಗಿಯೇ ಆಗುತ್ತದೆ ಅನ್ನುವುದು ನಮ್ಮ ನಂಬಿಕೆ, ಅದಕ್ಕೆ ಪೂರಕ ಅನ್ನುವಂತ್ತೆ ಥಟ್ಟನೆ ಎದುರಿಗೆ ನಿಂತವ ಒಬ್ಬ ಗೈಡ್, ಸಾಕ್ಷಾತ್ ಶಿವಸುತ ಮುರುಗನ್ ಪ್ರತ್ಯಕ್ಷಗೊಂಡಂತ್ತಿತ್ತು. ನಮ್ಮ ಮುಖ ನೋಡಿದ, ಬಾರದ ತಮಿಳಿನಲ್ಲಿ ದುಡ್ಡು ತಂದಿಲ್ಲ ಅಂತ ಹೇಳ ಹೊರಟ್ವಿ, ಅದು ಅವನಿಗೆ ಅರ್ಥವಾಗಿತ್ತು. "ಆಯಿಯೇ ಆಯಿಯೇ" ಅಂತ ತನ್ನ ಜೊತೆಗಿದ್ದ ಇನ್ನಿತರರೊಂದಿಗೆ ನಮ್ಮನ್ನೂ ಸೇರಿಸಿಕೊಂಡ. ಸ್ನಾನ ಮುಗಿದ ನಂತರ  ಮನೆಗೆ ಹೋಗಿ  ಹಣ ಪಾವತಿ ಮಾಡುತ್ತಾರೆ ಅನ್ನುವುದು ಅವನ ಮತ್ತು ನಮ್ಮಲ್ಲಿಯೇ ಯಾವುದೇ ರೀತಿಯ ಕರಾರುಗಳಿಲ್ಲದೆ ಹೇಳಿಕೆ ಆಶ್ವಾಸನೆಗಳಿಲ್ಲದೆ  ನಮ್ಮಲ್ಲಿಯೇ ಒಪ್ಪಿಕೊಂಡ ವಿಷಯ. 'ವಾಟ್ ಎ ಮೆಚೂರ್ಡ್ ಅಂಡ್ ಪ್ರೋಗ್ರೆಸ್ಸಿವ್ ಎನ್ವಿರಾನಮೆಂಟ್'.

ಬಿಳಿ ಶರ್ಟು,ಬಿಳಿ ಲುಂಗಿ,ಕೊರಳಲ್ಲಿ ಗೈಡ್ ಐಡಿ.ಹಣೆಯ ಮೇಲೆ ಅಡ್ಡ ವಿಭೂತಿ.  ಅವನ ಹಿಂದೆ ನಾವುಗಳು ಆರೆಂಟು ಜನ. ಅವನದು ಒಂತರಹದ ವೈಯ್ಯಾರದ ನಡಿಗೆ,ಸುಂದರಿಗೂ ಸಿಗದ ನಾಜೂಕಿನ ನಡಿಗೆ. ಸಟಪಟನೆ ಕೈ ಬಿಸುತ್ತ ಅವನು ಮುಂದೆ ಮುಂದೆ ಸಾಗುತ್ತ "ಸಿಕಿರಮ ವಾಂಗಾ ವಾಂಗಾ" ಅಂತ ಹೇಳಿ ಒಂದರ ನಂತರ ಒಂದರಂತ್ತೆ ಎಲ್ಲಾ ಕುಂಡಗಳಿಗೆ ಭೇಟಿ,ಅಲ್ಲಿನ ನೀರಿನಿಂದ ಸ್ನಾನ.ಅವುಗಳು ಚಿಕ್ಕ ಚಿಕ್ಕ ಕುಂಡಗಳು,ಸುತ್ತಲೂ ಕಟ್ಟೆ, ಅದರ ಮೇಲೆ ನಿಂತು ಹಗ್ಗ ಕಟ್ಟಿ ಅವರ ಜೊತೆಯಲ್ಲೇ ಇಟ್ಟು ಕೊಂಡಿದ್ದ  ಚಿಕ್ಕ ಬಕೆಟ್ ಇಂದ ನೀರು ತೆಗದು ನಮ್ಮವರ ತಲೆಯ ಮೇಲೆ ಸುರಿಯುವುದು. ಒಂದು ಬಕೆಟ್ ಅಲ್ಲಿ ಇಬ್ಬರಿಗೆ,ಜಾಸ್ತಿ ಇದ್ದರೆ ಮೂರು ಜನಕ್ಕೆ ನೀರು ಹೊಯ್ಯುವುದು. ಮೊದಲಿಗೆ ಸಿಗೋದು ಮಹಾಲಕ್ಷ್ಮಿ ತೀರ್ಥಮ್. ಪಕ್ಕದಲ್ಲಿಯೇ ತಣ್ಣನೆಯ ಸಮುದ್ರದ ಉಪ್ಪು ನೀರಿದ್ದರು ಇವುಗಳಲ್ಲಿ ಮಾತ್ರ ಸಿಹಿನಿರು, ಸ್ವಲ್ಪ ಬೆಚ್ಚನೆಯ ನೀರು.ಅಂಜಲಿ ಮುದ್ರೆಯಲ್ಲಿ ತಲೆ ತಗ್ಗಿಸಿ ನಿಂತು ಪಂಚಬಿಜಾಕ್ಷರಗಳ ಉಚ್ಚಾರಣೆ ಮೂಲಕ  ಧನ್ಯರಾಗಬೇಕು. ಒಂದೊಮ್ಮೆ ದೇಹ ಹಗುರಗೊಂಡ ಅನುಭವ,ಇದು ಅದ್ಭುತ ತಂತ್ರಜ್ಞಾನವೋ ಅಥವಾ ದೈವಿಶಕ್ತಿಯ ಪವಾಡವೋ ಅನ್ನುವ ಯೋಚನೆ ಒಂದೊಮ್ಮೆ ಎಲ್ಲರಲ್ಲೂ ಬಿತ್ತುತ್ತದೆ. ತದನಂತರ ಒಂದಾದಮೇಲೊಂದು ಅನ್ನುವಂತ್ತೆ ಮಿಕ್ಕ 21 ಕುಂಡಗಳ ಕಡೆ ಅವನನ್ನ ಹಿಂಬಾಲಿಸಿ ಹೋಗಬೇಕು,ಅಥವಾ ಒಡಬೇಕು. ಮಹಾಲಕ್ಷ್ಮಿ ಕುಂಡದ ನಂತರ ಗಾಯತ್ರಿ,ಸಾವಿತ್ರಿ,ಸರಸ್ವತಿ,ಗವ್ಯ,ಗವ್ಯಾಕ್ಷ,ನಳ, ನೀಲ, ಸೇತುಮಾಧವ,ಗಂಧಮಾಧವ,ಬ್ರಹ್ಮಹತ್ಯಾ ವಿಮೋಚನಾ,ಶಂಖು,ಸೂರ್ಯ,ಚಂದ್ರ,ಚಕ್ರ,ಶಿವ,ಸರ್ವ,ಸತ್ಯಮಿತ್ರ,ಗಯಾ,ಗಂಗಾ,ಯಮುನಾ ಕೊನೆಯದಾಗಿ ಕೋಡಿ.
ಸೇತುಮಾಧವ ಕುಂಡ ಸ್ವಲ್ಪ ದೊಡ್ಡದಾಗಿದೆ,ಕೊಂಚ ದೂರದಲ್ಲೇ ನಿಲ್ಲಬೇಕು,ಇನ್ನೊಬ್ಬ ಗೈಡ್ ಎಲ್ಲರಿಗೂ ದೂರದಿಂದ ಬಕೆಟ್ ಇಂದ ನೀರು ಉಗ್ಗುತ್ತಿದ್ದಾನೆ. ನಮಗೂ ಅದೇ ಸೇವೆ. ಜೋರಾಗಿ ಉಗ್ಗಿದ ನೀರು ಮುಖಕ್ಕೆ ರಪ್ ಅಂತ ತಾಗಿತ್ತು,ಸರಿಯಾಗಿ ಓಂ ನಮಃ ಶಿವಾಯ ಅಂತ ಹೇಳಲಿಕು ಆಗಲಿಲ್ಲ, ಹದಿನಾರು ಹನಿ ಮುಖದಮೇಲೆ,ನಾಲ್ಕು ಹನಿಯಾದರು ತಲೆ ಮೇಲೆ ಬಿದ್ದಿವೆ ಅನ್ನುವುದು ಅವನು ಗುರಿ ಇಟ್ಟು ಉಗ್ಗಿದ ರೀತಿ ಖಾತ್ರಿ ಪಡಿಸಿತ್ತು.ಒಟ್ನಲ್ಲಿ ಕೃತಾರ್ಥರಾದ್ವಿ.

ಒದ್ದೆ ಬಟ್ಟೆಯಲ್ಲೇ ಅಲ್ಲಿಂದ ನೇರವಾಗಿ ರೂಮಿಗೆ ಬಂದು ಇನ್ನೊಮ್ಮೆ ಶುಭ್ರವಾಗಿ ಸ್ನಾನ. ತದನಂತರ ಹೊಟ್ಟೆಪೂಜೆ ಮುಗಿಸಿ ದೇವರ ದರ್ಶನಕ್ಕೆ ಹೊರಡಬೇಕೆನ್ನುವುದು ನಮ್ಮ ಪ್ಲಾನ್ ಆಗಿತ್ತು. ಸ್ನಾನ ಮುಗಿಸಿ ಕೆಳಗೆ ಬರುತ್ತಿದ್ದಂತ್ತೆ ಚಿನ್ನ ಸ್ವಾಮಿಯ ಮ್ಯಾನೇಜರ್ ಸಲಹೆ ನಮ್ಮ ಪ್ಲಾನ್ ಬದಲಿಸಿತು, ಒಂದು ಹಂತಕ್ಕೆ ಸಹಾಯವೂ ಆಯ್ತು. "ಅಭಿ ಮಾರ್ನಿಂಗ್ ಟೈಮ್ ಹೈ ನಾ,ಬೊಹತ್ ರಶ್ ಹೈ, ಆಫ್ಟರನುನ್ ತಿನ್ ಕ್ಲಾಕ್ ದರ್ಶನ್ ಜಾನಾ,ಫುಲ್ ಫ್ರಿ,ಖಾಲಿ ಖಾಲಿ" ಎನ್ನುವುದು ಅವನ ಸಲಹೆಯ ಮಾತು. ಇದು ಜ್ಯೋತಿರ್ಲಿಂಗ ವಾಗಿದ್ದರಿಂದ ಉತ್ತರ ಭಾರತಿಯರೂ ಸಹ ಹೆಚ್ಚಾಗಿಯೇ ಬರುತ್ತಾರೆ, ಹಾಗಾಗಿ ತಮಿಳುನಾಡಿನಲ್ಲಿ ಎಲ್ಲಿಯೂ ಕಾಣದ ಹಿಂದಿ ರಾಮೇಶ್ವರದ ತುಂಬೆಲ್ಲಾ ಕಾಣ ಸಿಗುತ್ತದೆ,ಅದಕ್ಕೆ ಸಾಕ್ಷ್ಯ ಎನ್ನುವಂತ್ತೆ ನಮ್ಮ ಲಾಡ್ಜಿನ ಮ್ಯಾನೇಜರನ ಅರ್ಧ ಸತ್ತ ಹಿಂದಿಯಲ್ಲಿ ಕೊಟ್ಟ ಸಲಹೆ. ನಮಗೂ ಒಂದೆಡೆ ಇದು ಸರಿ ಅನ್ನಿಸಿ ಪ್ಲಾನ್ ಬದಲಾಯಿಸೆದೆವು. ರಾಮೇಶ್ವರದ ದ್ವೀಪದ ತುಂಬೆಲ್ಲಾ ಸುತ್ತಾಡಬೇಕು,ಧನುಷ್ಕೋಟಿಯ ಕಡೆ ಹೋಗಬೇಕು, ಇನ್ನಿತರ ಅನೇಕ ಸ್ಥಳಗಳನ್ನ ಭೇಟಿಕೊಡಬೇಕು, ಆಟೋ ಬಸ್ಸು ಟ್ಯಾಕ್ಸಿ ಅಂತ ಅಲೆದಾಡುವುದು ಅಷ್ಟೇನು ಸೂಕ್ತ ಅನ್ನಿಸಲಿಲ್ಲ. ಹಾಗಾಗಿ ಬಾಡಿಗೆ ಬೈಕುಗಳ ಬಗ್ಗೆ ವಿಚಾರಿಸಿದ್ವಿ, ಲೈಸೆನ್ಸ್ ಇಬ್ಬರಲ್ಲೂ ಇಲ್ಲ, ಆದರೂ ಬೈಕ್ ಸಿಕ್ಕೇ ಸಿಗುತ್ತದೆ ಅನ್ನುವಷ್ಟು ಕಾನೂನಿನ ವ್ಯವಸ್ಥೆಯ ಅರಿವು ನಮಗಿರಲ್ಲವೇ? ಅಂತೆಯೇ ಬೈಕ್ ಸಿಗುವುದು ಖಾತ್ರಿಯಾಯ್ತು. ತಿರುಗುವ ಎರಡು ಚಕ್ರ,ಬ್ರೇಕ್ ಇದ್ದರೆ ಸಾಕು ಎನ್ನುವಂತಹ ಒಂದು ಬೈಕ್ ಸಿಕ್ಕರೆ ಸಾಕು ಅನ್ನುವದು ನಮ್ಮ ಇಚ್ಛೆ. ಅಂತೆಯೇ ಕಡಿಮೆ ಬೆಲೆಯಲ್ಲಿ ಸ್ಕೂಟಿ ಸಿಕ್ತು. ನನ್ನ ಮಾರುದ್ದದ ಕಾಲುಗಳಿಗೆ ಸ್ಕೂಟಿ ನಿಜಕ್ಕೂ ತುಂಬಾ ತ್ರಾಸದಾಯಕ. ಸಾಧ್ಯವಾದಷ್ಟು ಅಗಲಕ್ಕೆ ಕಾಲು ಕಿಸಿದು ಮ್ಯಾನೇಜ್ ಮಾಡಿಕೊಂಡೆ. "ಹೋಗುವಾಗ ನಾ, ಬರುವಾಗ ನಿ" ಸಿದ್ಲಿಂಗ್ ಮತ್ತು ನನ್ನ ಮಧ್ಯೆಗಿನ ಡೀಲ್ ಯಾವುದೇ ತಕರಾರಿಲ್ಲದೆ ತಲೆ ಅಲ್ಲಾಡಿಸುವದರ ಮೂಲಕ ಮುಗಿದಿತ್ತು.

ಮೊದಲಿಗೆ ಸಮೀಪದಲ್ಲಿಯೇ ಇದ್ದ ಪಂಬನ್ ಬ್ರಿಡ್ಜ್ ಕಡೆ ತುಡಿತ. 1914  ರಲ್ಲಿ ಪ್ರಾರಂಭಗೊಂಡಿದ್ದ ಭಾರತದ ಮೊದಲ ಸಮುದ್ರ ಸೇತುವೆ.ಮುಂಬೈನ ಸಿ ಲಿಂಕ್ ಆಗುವ ತನಕ ಇದೇ ಅಂತಂತ್ಯ ದೊಡ್ಡ ಬ್ರಿಡ್ಜ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹಲವುಭಾರಿ ಸುನಾಮಿಗೆ ತುತ್ತಾಗಿದೆ,ಆದರೂ ಸಂಪರ್ಕಕ್ಕೆ ಜಾಸ್ತಿ ದಿನ ಅಡ್ಡಿಮಾಡದೆ ರೆಡಿ ಆಗಿದೆ. ಹವಾಮಾನ ಸ್ಥಿರವಿಲ್ಲದಿದ್ದಾಗ ಸೇತುವೆಯ ಸೇವೆ ನಿಲ್ಲಿಸಲಾಗುತ್ತದೆ, ಹಾಗಾಗಿ 1988 ರಲ್ಲಿ ಇನ್ನೊಂದು ರಸ್ತೆಯ ಬ್ರಿಡ್ಜ್ ನಿರ್ಮಿಸಲಾಯಿತು. ಎತ್ತರದಲ್ಲಿ ನಿರ್ಮಿತಗೊಂಡಿದ್ದ ಬ್ರಿಡ್ಜ್ ಮೇಲಿಂದ ಸುತ್ತೆಲ್ಲಾ ಕಾಣುವ ನೋಟ ಎರಡು ಕಣ್ಣುಗಳಿಗೆ ಸಾಲದು, ವಿಶಾಲವಾದ ನೀಲ ಸಮುದ್ರದ ಸೌಂದರ್ಯ ಮನಸೂರೆಗೊಳಿಸುತ್ತಿದೆ. ಅಲ್ಲಲ್ಲಿ ಚಿಕ್ಕಪುಟ್ಟ ದೋಣಿಗಳು,ಸಮುದ್ರದೊಡೆಯರು ಅನ್ನುವಂತ್ತೆ ಬೃಹತ್ ಬೋಟ್ ಗಳು. ಬ್ರಿಡ್ಜ್ ಮಧ್ಯದಲ್ಲಿ ನಿಂತು ಈ ವಿಹಂಗಮ ನೋಟ ಸವೆಯುವರಿಂದ ಆಗಾಗ ಟ್ರಾಫಿಕ್ ತೊಂದರೆ, ಆದರೆ ಯಾವುದೇ ಪೋಲೀಸರ ಅಡಚಣೆಗಳಿಲ್ಲ.ಅಲ್ಲಿಯೇ ಸ್ವಲ್ಪ ಸಮಯ ಕಳೆದು ಮತ್ತೆ ಹಿಂತಿರುಗಿದೇವು.  ಬರುವ ಮಾರ್ಗದಲ್ಲೇ ಮಾಜಿ ರಾಷ್ಟ್ರಪತಿ ದಿವಂಗತ ಕಲಾಂ ರ ಮ್ಯೂಸಿಯಂ. ಸುಸಜ್ಜಿತವಾಗಿ,ಅಚ್ಚುಕಟ್ಟಾಗಿ ನಿರ್ಮಿತಗೊಂಡಿದೆ.ಕೆಲ ವರ್ಷಗಳ ಹಿಂದಷ್ಟೇ ಪ್ರಧಾನಿ ಮೋದಿಯವರೇ ಉದ್ಘಾಟಿಸಿದ್ದರು. ಒಳಗಡೆ ಕಲಾಂ ಅವರು ಬಳಸುತ್ತಿದ್ದ ವಸ್ತುಗಳು,ಗಣ್ಯರೊಂದಿಗಿನ ಫೋಟೋಗಳು,ಅವರ ಅವಿಸ್ಮರಣೀಯ ಫೋಟೋಗಳನ್ನ ಗಾಜಿನ ಸಂಕೋಲೆಯೊಳಗೆ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲಿಯ ಕಂಡ ಒಂದು ವಸ್ತು ಎಲ್ಲರನ್ನ ಒಮ್ಮೆ ಅಂತರ್ಮುಖಿಗೊಳಿಸುತ್ತದೆ. ಅದೇ ಅವರ ಶೂಗಳು. ಹೌದು, ಹಿಂಬದಿಯಲ್ಲಿ ಸ್ವಲ್ಪ ಕಿತ್ತುಹೋಗಿದೆ, ಭಾರದ ರಾಷ್ಟ್ರಪತಿಯಾಗಿದ್ದ ಮಹಾನರೂ ತೂತು ಬಿದ್ದ ಶೂ ಧರಿಸುತ್ತಾರಲ್ಲ! ಎಂತಹ ಸರಳ ಜೀವನ ಅವರದ್ದು ಅನ್ನುವ ಯೋಚನೆಗಳು ಅಳಿಯದೆ ನಮ್ಮೊಳಗಿದ್ದು ಅಂತಹ ಸರಳ ಜೀವನಕ್ಕೆ ಪ್ರೇರಣೆ ಕೊಡುತ್ತವೆ. ಅಲ್ಲಿಂದ ನೇರವಾಗಿ 25 ಕಿಲೋಮೀಟರ್ ದೂರದಲ್ಲಿರುವ ಧನುಷ್ಕೋಟಿಯ ಕಡೆ ಪಯಣ.

ಒಂದು ಸಮಯದಲ್ಲಿ ಜನವಸತಿಗಳಿಂದ ತುಂಬಿದ್ದ ಪ್ರದೇಶವಾಗಿತ್ತು,1964 ರ ಪ್ರಭಲ ಸುನಾಮಿಗೆ ತತ್ತರಿಸಿ ಸಂಪೂರ್ಣ ಮುಳುಗಿ ಹೋಗಿತ್ತು, ಅಂದು ಖಾಲಿಯಾಗಿದ್ದ ಧನುಷ್ಕೊಡಿ ಇಂದಿಗೂ ಖಾಲಿಯಾಗಿಯೇ ಇದೆ. NH 49 ದಕ್ಷಿಣ ಭಾರತದ ಕೊನೆಯ ರಸ್ತೆ. ಕಿರಿದಾದ ರಸ್ತೆ,ಅಕ್ಕಪಕ್ಕ ಸಮುದ್ರ. ಗೂಗಲ್ ಮ್ಯಾಪ್ ಅಲ್ಲಿ ಈ ಸ್ಥಳವನ್ನ ಒಂದೊಮ್ಮೆ ಜೂಮ್ ಮಾಡಿ ನೋಡದವರೆ ಇಲ್ಲ. ಅವರಲ್ಲಿ ನಾವುಗಳು ಸಹ ಒಬ್ಬರು. ರಸ್ತೆ ಪೂರ್ತಿ ಖಾಲಿ ಖಾಲಿ,ಖಡಕ್ ರಣ ಬಿಸಿಲು, ಕಲಬುರಗಿಯವರಾದ ನಾವುಗಳೂ ತತ್ತರಿಸುತ್ತಿರುವುದು ವಿಪರ್ಯಾಸವೆನಿಸಿತು.ರಸ್ತೆಯುದ್ದಕ್ಕೂ ವಾಹನಗಳ ಸಂಚಾರವು ಕಮ್ಮಿಯೇ. ಯಾವುದೋ ದೆವ್ವದ ಊರಿಗೆ ಹೋಗುತ್ತಿದ್ದೇವೆ ಅನ್ನುವಷ್ಟು ನೀರವತೆ ಆ ರಸ್ತೆಯಲ್ಲಿದೆ. ಸಾಯಂಕಾಲ 6 ಗಂಟೆಯ ನಂತರ ಹೋಗಲು ನಿರ್ಬಂಧಿತ ಪ್ರದೇಶವದು. ಧನುಷ್ಕೊಡಿಯಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಆರೈಚಲ್ ಮುನೈ. "ದಿ ಎಂಡ್ ಪಾಯಿಂಟ್ ಆಫ್ ಸೌತ್ ಇಂಡಿಯಾ" ತುತ್ತತುದಿಯಲ್ಲಿ ಭಾರತದ ಲಾಂಛನ,ಅದನ್ನ ಸುತ್ತುವರೆದು ಹಿಂತಿರುಗಲು ವೃತ್ತ. ಸಾಲುಗಟ್ಟಿದ ವಾಹನಗಳು. ಜಾತ್ರೆ ಅನ್ನುವಷ್ಟು ಜನ ಸಮೂಹ. ಅಲ್ಲಿಯ ವಾಹನಗಳಂತ್ತು ಈ ವೃತ್ತವನ್ನ ಬಳಸಿ ಹಿಂತಿರುಗದೆ ಇದ್ದರೆ ಬಂದದ್ದು ನಿರಾರ್ಥಕ ಅನ್ನುವಂತ್ತೆ ಹಪಾಹಪಿಯಲ್ಲಿ ಸಾಲುಗಟ್ಟಿ ವೃತ್ತದ ಕಡೆ ಹೋಗುತ್ತಿವೆ, ಅವರನ್ನ ಹೆದರಿಸಿ ಬೆದರಿಸಿ ಹಿಂದೆ ಕಳಿಸುವರು ಪೊಲೀಸರು. ಇವರ ಮಧ್ಯೆ ಫೋಟೋಗಳಲ್ಲಿ ಬಿಜಿಯಾಗಿರುವ ಜನರು. ಅಲ್ಲಿಯ ಸೌಂದರ್ಯ ಸವಿಯಲು ಈ ಫೋಟೋಗಳು ಅಡಚಣೆ ಮಾಡುತ್ತವೆ ಎಂದರೆ ತಪ್ಪಾಗದು. ಅನುಭವಿಸುವದನ್ನ ಬಿಟ್ಟು ಬರಿ ಫೋಟೋದಲ್ಲಿಯೇ ಮಗ್ನರಾಗುತ್ತಿದ್ದಾರೆ ಈ ಜನಗಳು ಅನ್ನುವ ಖೇದ, ಅದರಲ್ಲಿ ನಾವುಗಳೂ ಸಹ ಒಬ್ಬರು.  ಸಮುದ್ರ ಮಟ್ಟ ಮೇಲೇರಿದೆ, ವೃತ್ತದ ಸುತ್ತಲೂ ಭಾರಿ ಕಲ್ಲುಬಂಡೆಗಳು, ಸಮುದ್ರದ ಅಲೆಗಳ ಹೊಡೆತ ತಡೆಯುತ್ತಿವೆ. ಬೇರೆ ಸಮಯದಲ್ಲಿ ನೀರಿನ ಮಟ್ಟ ಕಮ್ಮಿ. ಉದ್ದನೆಯ ಕಿರಿದಾದ ರಸ್ತೆಯ ಬದಿಯಲ್ಲಿ ಬೀಚ್. ಅಲ್ಲಲ್ಲಿ ನಿಂತಿರುವ ಖಾಲಿ ಬೋಟ್ ಗಳು. ಅಲ್ಲೇ ತುಸುಹೊತ್ತು ಸಮಯ ಕಳೆದು ಮತ್ತೆ ಹೆಲ್ಮೆಟ್ ಧರಿಸಿದೆವು. ಅದೇ ಮಾರ್ಗದಲ್ಲಿ ವಿಭೀಷಣನ ಪಟ್ಟಾಭಿಷೇಕ ಮಾಡಿದ ಸ್ಥಳವು ಸಿಕ್ಕಿತು,ಅದನ್ನೂ ಸಂದರ್ಶಿಸಿ ಮತ್ತೆ ಹೊರಟೆವು. ದೇವಸ್ಥಾನದ ಆವರಣಕ್ಕೆ ಹೋಗುವಷ್ಟರಲ್ಲಿ ಸಮಯ ಮೂರಾಗಿತ್ತು. ದೇವರ ದರ್ಶನಕ್ಕೆ ಒಳ್ಳೆಯ ಸಮಯ ಎಂದಿದ್ದನ್ನಲ್ಲ ಚಿನ್ನ ಸ್ವಾಮಿಯ ಮ್ಯಾನೇಜರ್ ಚನ್ನಸ್ವಾಮಿಯೋ ಅಥವಾ ಸೆಲ್ವಂನೋ ಅಥವಾ ಮುರುಗನ್ನೋ, ನಾವು ಅವನ ಹೆಸರು ಕೇಳಿರಲಿಲ್ಲ.

ಸಮುದ್ರಕ್ಕೆ ಮುಖಮಾಡಿ ಮರುಳಿನ ಮೇಲೆ ಸ್ಥಿತವಾದ ದೇವಸ್ಥಾನ.ತ್ರೇತಾಯುಗದ ಇತಿಹಾಸ ಹೊಂದಿದೆ. 12 ನೆ ಶತಮಾನದಲ್ಲಿ ಪಾಂಡ್ಯರಿಂದ ಇನ್ನಷ್ಟು ನವಿನಗೊಂಡಿದೆ, ಅದಾದಮೇಲೆ ಬಂದ ರಾಮನಾಡ್ ನಾಯಕರುಗಳು ಕ್ರಮೇಣವಾಗಿ ದೇವಸ್ಥಾನವನ್ನ ಸುಂದರಗೊಳಿಸಿದ್ದಾರೆ. ಮೊದಲಿಗೆ ದೊಡ್ಡ ಗೋಪುರದಿಂದ ಪ್ರವೇಶ. ಪ್ರವೇಶದುದ್ದಕ್ಕೂ ಮಂಟಪ,ಅಚ್ಚುಕಟ್ಟಾದ ದ್ರಾವಿಡ ಶೈಲಿ, ದೇವಸ್ಥಾನದ ಸುತ್ತಲೂ ಉದ್ದನೆಯ ಮಂಟಪಗಳು, ಅತ್ಯಂತ ದೊಡ್ಡ ಮಂಟಪಗಳನ್ನ ಹೊಂದಿದ ದೇವಸ್ಥಾನ ಇದಾಗಿದೆ. ಶಿವನ ಎದುರಿಗೆ ನಂದಿ. ಹನುಮಂತ ಹಿಮಾಲಯದಿಂದ ಶಿವಲಿಂಗ ತರಲು ತಡವಾದಾಗ ಸೀತೆಯೇ ಮರಳಿನಿಂದ ಶಿವಲಿಂಗ ಮಾಡಿದ್ದಳು,ಅದನ್ನೇ ಪ್ರತಿಷ್ಠಾಪಿಸಲಾಯಿತು, ತದನಂತರ ಹನುಮ ತಂದ ಶಿವಲಿಂಗವೂ ಸ್ಥಾಪಿಸಲಾಯಿತು, ಅದು ವಿಶ್ವಲಿಂಗವೆಂದಲೂ ಕರೆಯಲ್ಪಟ್ಟಿತು. ಎರಡೂ ಅಕ್ಕಪಕ್ಕದಲ್ಲಿಯೇ ಪ್ರತ್ಯೇಕ ಗರ್ಭಗೃಹ ಹೊಂದಿವೆ. ಮಧ್ಯಾನದಹೊತ್ತಾಗಿದ್ದರಿಂದ ಅಷ್ಟೇನು ಜನರಿರಲಿಲ್ಲ. ಗರ್ಭಗೃಹದಲ್ಲಿ ಯಾವುದೇ ಆಧುನಿಕ ವಿದ್ಯುತ ಬಲ್ಬ್ ಬಳಸಿಲ್ಲ, ಸುತ್ತಲೂ ದೀಪಗಳಿವೆ, ಅದರ ಬೆಳಕಿನಲ್ಲಿಯೇ ಅಲಂಕೃತಗೊಂಡ ಶಿವಲಿಂಗವನ್ನ ಕಾಣಬಹುದು. ವೇದ ಮಂತ್ರಗಳೊಂದಿಗೆ ಪೂಜೆ ಆರತಿ ಸಲ್ಲುತ್ತಲಿರುತ್ತದೆ. ಪಕ್ಕದ ಸಾಲಿನಲ್ಲಿ ಇದ್ದ ಅಯ್ಯಪ್ಪ ಸ್ವಾಮಿಯ ಭಕ್ತರುಗಳು ಆರತಿವೇಳೆಯಲ್ಲಿ ತಮ್ಮಲ್ಲಿದ್ದ ಶಂಖದಿಂದ ಒಬ್ಬರಾದ ಮೇಲೊಬ್ಬರರಂತ್ತೆ ಶಂಖನಾದ ಮೊಳಗಿಸುತ್ತಿದ್ದಾರೆ, ಸಂಪೂರ್ಣ ಸಾತ್ವಿಕ ಶಕ್ತಿ ದೇವಸ್ಥಾನದ ಆವರಣದಲ್ಲಿ ಇಮ್ಮಡಿಗೊಂಡಿದೆ. ಶಿವನೂ ಪ್ರಸನ್ನನಾದನು ಅನ್ನುವ ಹಾವಭಾವ ಶಿವಲಿಂಗ ಸೂಸುತ್ತಿದೆ. ದೇವಸ್ಥಾನದ ಎಲ್ಲೆಡೆ ವಿಭೂತಿ. ಅಲಂಕೃತ ಕಂಬಗಳ ದೇವಸ್ಥಾನ. ಅದೇ ಪ್ರಾಂಗಣದಲ್ಲಿ ಪಾರ್ವತಿ,ವಿಶಾಲಾಕ್ಷಿ, ಗಣೇಶ,ವಿಷ್ಣು ಮತ್ತು ಮುರುಗನ್ ದೇವಸ್ಥಾನಗಳನ್ನೂ ಕಾಣಬಹುದು. ಅಯ್ಯಪ್ಪ ಸ್ವಾಮಿಯ ಭಕ್ತರು ಅಲ್ಲಿಯ  ಪ್ರತಿಯೊಂದು ದೇವಸ್ಥಾನಕ್ಕೂ ಶಂಖನಾದದಿಂದಿಗೆ ನಮಸ್ಕರಿಸುತ್ತಿದ್ದರು, ಅವರನ್ನ ಹಿಂಬಾಲಿಸಿಯೇ ನಾ ಹೊರಟು ಬಿಟ್ಟೆ. ಇತ್ತ ಸಿದ್ದಲಿಂಗ ಬೈಕಿನ ಮೇಲೆ ಸೆಟೆದು ಕುತಿದ್ದಕ್ಕೋ ಏನೋ ಆಯಾಸಗೊಂಡಂತಿದ್ದ, ಹಾಗಾಗಿ ತಾನು ಹೊರಗಡೆ ಇರುವೆನೆಂದು ಸನ್ನೆ ಮಾಡಿ ಹೊರಟಿದ್ದ.  ಇಡಿಯ ದೇವಸ್ಥಾನವನ್ನ ಒಂದೊಮ್ಮೆ ಸುತ್ತಾಡಿದೆ. ಉದ್ದನೆಯ ಕಾರಿಡಾಗಳ ಛಾವಣಿಯಲ್ಲಿ ರಂಗು ರಂಗಿನ ಚಿತ್ರಗಳು, ತಮಿಳುನಾಡಿನ ದೇವಸ್ಥಾನಗಳ ಅಲಿಖಿತ ಸಂಸ್ಕೃತಿ ಇದಾಗಿದೆ ಎನ್ನಬಹುದು. ವಿಶಾಲವಾದ ದೇವಸ್ಥಾನ ನಾಲ್ಕು ದಿಕ್ಕಿನಲ್ಲೂ ಒಂದೊಂದು ಗೋಪುರಗಳನ್ನ ಹೊಂದಿದೆ. ಮರುಳಿನ ಮೇಲೆ ಅದೆಷ್ಟೋ ಸುನಾಮಿ ಪ್ರವಾಹಗಳನ್ನ ಎದುರಿಸಿ ಅಳುಕದೆ ನಿಂತಿದೆಯಲ್ಲ ಈ ದೇವಸ್ಥಾನ, ನಮ್ಮ ಪೂರ್ವಜರ ಚಾಕಚಕ್ಯೆತೆಗೆ ಎಷ್ಟೇ ಮೆಚ್ಚುಗೆ ಸಲ್ಲಿಸಿದರು ಕಮ್ಮಿಯೇ.

ಹಾಗೆಯೇ  ಸುತ್ತಾಡಿ ಬರುವಾಗ ಹೊರಗಿನ ಒಂದು ಚಿಕ್ಕ ದೇವಸ್ಥಾನದ ಹತ್ತಿರ "ಹಣವನ್ನ ಹುಂಡಿಯಲ್ಲಿಯೇ ಹಾಕಬೇಕು" ಅನ್ನುವ ಬೋರ್ಡಿದೆ. ಸರ್ಕಾರ ಮಿತಿ ಮೀರಿ ಬಿಕ್ಷೆ ಬೇಡುತ್ತಿದೆಯೋ ಅಥವಾ ಅಲ್ಲಿಯ ಅರ್ಚಕರ ಹೊಟ್ಟೆ ಸುಡಬೇಕು ಅನ್ನುವ ಹುನ್ನಾರ ಹೊಂದಿದೆಯೋ,ರಾಮೇಶ್ವರನೇ ಬಲ್ಲ. ಮೊದಲಿನಿಂದಲೂ ನಾನು ಜೇಬಿಗೆ ಕೈ ಹಾಕಿ ಹೊರತೆಗೆದ ಸಂಪತ್ತನ್ನ ಮನಸಾಪುರ್ವಕವಾಗಿ ಪೂಜಾರಿಯ ತಟ್ಟೆಗೆಯೇ ಹಾಕುತ್ತಿದ್ದೇನೆ.ಇಲ್ಲಿಯೂ ಹಾಗೆ ಮುಂದುವರಿಸಿದೆ. ದೇವಸ್ಥಾನದ ಆವರಣದಲ್ಲಿಯೇ ಇನ್ನೋರ್ವ ಮನುಷ್ಯನ್ನ ದ್ವೇಷಿಸುವ ನೀಚ ಬುದ್ದಿ ಬರುವುದಾದರು ಹೇಗೆ? ಅದು ಪೂಜಾರಿಯೇ ಆಗಲಿ ಅಥವಾ ಹೊರಗಿನ ಬಿಕ್ಷುಕನೆ ಆಗಲಿ.  ಇದೆ ತರಹದ ಹುಂಡಿಯನ್ನ ಮತ್ತು ಬೋರ್ಡುಗಳನ್ನ ಮಸೀದಿಯಲ್ಲೋ,ದರ್ಗಾದಲ್ಲಿಯೋ ಅಥವಾ ಚರ್ಚಿನಲ್ಲೋ ಇಡಲು ಯಾವುದೇ ಸರ್ಕಾರದ ತೊಡೆ ಇನ್ನೂ ಬಲಿಷ್ಟಗೊಂಡಿಲ್ಲ. ಕೇವಲ ದೇವಸ್ಥಾನಗಳು ಮಾತ್ರ ಸರ್ಕಾರದ ಆಸ್ತಿ, ಅಲ್ಲಿಂದ ಬಾಚಿದ ಹಣ ಸೆಕ್ಯುಲಾರಿಸ್ಮ್ ಅನ್ನುವ ಫಲಕದಲ್ಕಿ ಅನ್ಯಕೋಮಿನ ಸ್ವೇಚ್ಚಾರಕ್ಕೆ ಹೋಗುತ್ತಿದೆ. ಹುಟ್ಟು ಸೆಕುಲರ್ ಗಳಾದ ಹಿಂದುಗಳು ಮಾತ್ರ ಹುಂಡಿಗೆ ಹಣ ಸುರಿದು,ಸರ್ಕಾರದ ಬೊಕ್ಕಸೆ ತುಂಬಿಸಿಯೂ ಕೋಮುವಾದದ ಹಣೆ ಪಟ್ಟಿ ಪಡೆಯುತ್ತಿರುವುದು ನಿಜಕ್ಕೂ ಶೋಚನೀಯ.ಎಲ್ಲದಕ್ಕೂ ಒಂದು ಅಂತ್ಯ ಇದ್ದೆ ಇರುತ್ತದೆ, ಸಮರ್ಪಕ ಸಮಯ ಮತ್ತು ನಮ್ಮ ಹಿಂದುಗಳ ಜಾಗೃತಿ ಅತ್ಯವಶ್ಯಕವಾಗಿದೆ.

ದೇವಸ್ಥಾನದ ಹೊರಗೆ ಬಂದು ಸಮುದ್ರ ಅಂಚಿನಲ್ಲಿಯೇ ಚಾಚಿಕೊಂಡಿದ್ದ ರಸ್ತೆ ಕಡೆ ಹೊರಟೆವು. ಸ್ವಲ್ಪ ದೂರದಲ್ಲೇ ಒಂದು ಚಿಕ್ಕ ಹಳ್ಳಿ, ಎಲ್ಲವೂ ಶಿಲುಬೆಗಳನ್ನ ಹೊಂದಿದ ಮನೆಗಳು, ಮತಾಂತರಕ್ಕೆ ತುತ್ತಾದ ಅಮಾಯಕರೊ ಅಥವಾ ಸ್ವಾರ್ಥದ ಬದುಕಿಗಾಗಿ ಸ್ವಧರ್ಮ ತ್ಯೆಜಿಸಿದ ಸ್ವಾರ್ಥಿಗಳೋ, ಇದು ಅವರ ಅಂತಃಕರಣಕ್ಕೆ ಬಿಟ್ಟ ವಿಷಯ. ಆದರೂ ಇವರುಗಳೇ ಅಲ್ಲವೇ ಮೂರ್ತಿಪೂಜೆಯನ್ನ ಹಿಯಾಳಿಸಿ ತೆಗಳಿಹೋದದ್ದು? ಇದೀಗ ಮನೆಯ ಮುಂದೆ ಶಿಲುಬೆಯೊಂದಿಗೆ ಏಸುವಿನದ್ದೋ ಅಥವಾ ಮೆರಿಯ ಮೂರ್ತಿಗಳನ್ನ ಮಾಡಿಟ್ಟುಕೊಂಡಿದ್ದಾರಲ್ಲ, ಮೂಲ ಕ್ರಿಶ್ಚನ್ನರಿಂದ ಜಾತಿ ತಾರತಮ್ಯಕ್ಕೆ ಒಳಗಾಗುತ್ತಿದ್ದಾರಲ್ಲ, ಇವರ ಹೆಣ ಹೂಳಲು ಮೂಲತಃ ಕ್ರಿಶ್ಚಿಯನ್ನರು ತಮ್ಮಲ್ಲಿನ ಸ್ಮಶಾನದಲ್ಲಿ ಜಾಗ ಕೊಡದೆ ದೂರ ತಳ್ಳುತ್ತಿದ್ದಾರಲ್ಲ, ಮತಾಂತರಗೊಂಡವರು ಕ್ರಿಶ್ಚಿಯನ್ನರಲ್ಲಿ ಕೆಳಜಾತಿಯವರು ಅನ್ನುವ ಅವಮಾನ ಅನುಭವಿಸುತ್ತಿದ್ದಾರಲ್ಲ, ಇದೆಲ್ಲಾ ಅವರ ಕರ್ಮಕ್ಕೆ ಸಿಕ್ಕ ಫಲವೇ ಇರಬೇಕು ಬಿಡಿ. ಹೇಗಿದ್ದರೂ ಎಲ್ಲಿದ್ದರೂ ಎಲ್ಲರೂ ಚೆನ್ನಾಗಿರಲಿ, ಎಲ್ಲರ ಹೊಟ್ಟೆ ತಣ್ಣಗಿರಲಿ ಅನ್ನುವುದೇ ಅಲ್ಲವೇ ನಮ್ಮ ಸನಾತನ ಧರ್ಮದ ಸಂಸ್ಕೃತಿ "ಸರ್ವೇ ಜನ ಸುಖಿನೌ ಭವಂತು".

ಸಮಯ ನಾಲ್ಕು ದಾಟಿ ಐದಕ್ಕೆ ಹತ್ತಿರವಾಗುತ್ತಿದೆ. ಸೂರ್ಯನೂ ಸಮುದ್ರದ ಮೇಲ್ಮೈ ಇಂದ ಸ್ವಲ್ಪವೇ ದೂರ. ಸಂಜೆಯ ಸಂಧ್ಯಾವಂದನೆಯೊಂದಿಗೆ ಅವನೂ ಮತ್ತೊಂದೆಡೆ ತೆರಳಬೇಕು, ಅವನೊಂದಿಗೆ ನಾವೂ ಸಹ ಹೊರಡಬೇಕು.
"ಇನ್ನೂ ಆರುಗಂಟೆ ತನಕ ಟೈಮ್ ಅದಾ, ಸನ್ ಸೆಟ್ ಫ್ರಮ್ ರಾಮರ ಪಾದ ಇಸ್ ಎ ಮಸ್ಟ್ ವಿಟನೆಸ್ ಪ್ಲೇಸ್" ಅಲ್ಲಲ್ಲಿನ ಖ್ಯಾತಿಗಳನ್ನ ಕೆದಕಿ ಪಟ್ಟಿ ಮಾಡಿದ್ದ ಸಿದ್ಲಿಂಗನದು ಸಂಜೆ ಹೊತ್ತಿನ ಸೂರ್ಯಾಸ್ತವನ್ನ ರಾಮರ ಪಾದ ಅಥವಾ ಗಂಧಮಾದನ ಬೆಟ್ಟದಿಂದ ವೀಕ್ಷಿಸಬೇಕೆನ್ನುವುದು ಮತ್ತು ಉಳಿದ ಇನ್ನೊಂದು ತಾಸಿನಲ್ಲಿ ಸ್ವರ್ಗದ ಅಲ್ಪ ಅನುಭವವಾದರು ಪಡೆದು ತೀರಬೇಕು ಅನ್ನುವುದು ಅವನ ಹಂಬಲ.
"ವೆಲ್,ಲೇಟ್ಸ್ ಗೋ" ಅಂತ ಹೇಳಿ ಮತ್ತೆ ಹೆಲ್ಮೆಟ್ ಧರಿಸಿದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿದೆ ಗಂಧಮಾದನ ಬೆಟ್ಟ ಅಥವಾ ರಾಮರ ಪಾದ. ಹನುಮಂತ ಲಂಕೆಗೆ ಹಾರಿ ಹೋದ ಸ್ಥಳವದು. ರಾಮ ತನ್ನ ಸೈನ್ಯದೊಂದಿಗೆ ರಣತಂತ್ರ ರೂಪಿಸಿದ ಸ್ಥಳ. ನೆಲದಿಂದ ಸ್ವಲ್ಪವೇ ಅಡಿ ಎತ್ತರದಲ್ಲಿದೆ ಅಷ್ಟೇ. ಅಲ್ಲಿಂದ ಭಾಗಶಃ ರಾಮೇಶ್ವರಮ್ ಕಾಣಿಸುತ್ತದೆ, ದೂರದಲ್ಲಿನ ದೇವಸ್ಥಾನದ ಗೋಪುರಗಳು ಭೂಮಿಯಿಂದ ಹೊರಹೊಮ್ಮುತ್ತಿವೆ ಅನ್ನುವಂತ್ತೆ ಸುತ್ತಲಿನ ತೆಂಗಿನ ಮರಗಳ ಮಧ್ಯೆಗಿನಿಂದ ಕಂಗೊಳುಸುತ್ತಿವೆ. ನಾಲ್ಕು ದಿಕ್ಕುಗಳಿಗೆ ಒಂದೇ ಸಮಯದಲ್ಲಿ ಹೊರಹೊಮ್ಮುತ್ತಿವೆ ಸಂಯಂಕಾಲದ ಪೂಜೆಯ ವೇದ ಮಂತ್ರಗಳು. ದಕ್ಷಿಣಕ್ಕೆ ಸಮುದ್ರ, ಊರೊಳಗೆ ತೇಲಿ ಬಂದ ಮರುಳಿನಲ್ಲಿ ಅಲ್ಲಿಯ ಮನೆಗಳು ಅರ್ಧಕ್ಕೆ ಮುಳಿಗಿವೆ, ಕಣ್ಣುಗಳಿಗೆ ಹಿತವೆನಿಸುವಷ್ಟು ಮನೋಜ್ಞ ನೋಟ ನಮ್ಮೆದುರಿಗಿದೆ.

ರಾಮರ ಪಾದ ಸ್ಥಳದ ಬಗ್ಗೆ ತಮಿಳು ಸೆಲ್ವಿಯೋರ್ವಳು ತನ್ನ ಅಮ್ಮನಿಗೆ ಅದರ ಐತಿಹಾಸಿಕ ಹಿನ್ನೆಲೆ ಹೇಳುತ್ತಿದ್ದಳು,ಅದು ತಮಿಳಿನಲ್ಲಿ. ಅವಳ ಭಾಷಣದುದ್ದಕ್ಕೂ ರಾಮ ಮತ್ತು ಸೀತೆ ಅನ್ನುವ ಎರಡಕ್ಷರ ಬಿಟ್ಟರೆ ಏನೂ ಅರ್ಥವಾಗಲಿಲ್ಲ. "ಕ್ಯಾನ್ ಯು ಎಕ್ಸ್ ಪ್ಲೈನ್ ಇನ್ ಇಂಗ್ಲಿಷ್" ಅಂತ ಕೇಳಿಬಿಡಲೇ? ಅಯ್ಯೋ! ಆ ಛಾತಿ ನನ್ನಲ್ಲಿದ್ದರೆ ಈ ಪ್ರಯಾಣದುದ್ದಕ್ಕೂ ಸಿದ್ಲಿಂಗನ ಬದಲಾಗಿ ಸುಂದರ ಸಖಿಯೇ ಇರುತಿದ್ದಳಲ್ಲ?  ಅದೆಲ್ಲಾ ನಮ್ಮಿಂದಾಗದ ವಿಷಯ ಅಂತ ತಿಳಿದು ಬೇರೆ ಮೂಲಗಳಿಂದ ಸ್ಥಳದ ಮಾಹಿತಿ ತಿಳಿದುಕೊಳ್ಳಬೇಕಾಯ್ತು.

ಸೂರ್ಯ ಸಮಯಕ್ಕೆ ತಕ್ಕಂತ್ತೆ ಕೇಳಗಿಳಿಯುತ್ತಿದ್ದಾನೆ, ನೀಲ ನಭದಲ್ಲಿ ಕಡುಗೆಂಪಾಗಿ ತಂಪಾಗಿ ಮುಳುಗುತ್ತಿದ್ದಾನೆ.ಬೈಕನ್ನ ಅದರ ಮಾಲೀಕನಿಗೆ ಒಪ್ಪಿಸಬೇಕು. ಸಮಯ ಮತ್ತು ಸಂಧರ್ಭ ಎಲ್ಲವನ್ನೂ ಹೊಂದಿಸಿಟ್ಟಿವೆ ಅನ್ನುವಂತಿದೆ ಸುತ್ತಲಿನ ಆಗುಹೋಗುಗಳು. ಪ್ರಯಾಣದುದ್ದಕ್ಕೂ ಹಲವು ಅಲ್ಪ ವಿರಾಮಗಳನಿಟ್ಟ ನಂತರ ಇದೀಗ ಒಂದು ಪೂರ್ಣ ವಿರಾಮವಿಡುವ ಸಮಯ ಬಂದಿದೆ. ಸೂರ್ಯ ಕ್ಷಣ ಕ್ಷಣದಂತ್ತೆ ಕೆಳಗಿಳಿದು, ಮತ್ತೆ ಸಿಗುವೇನೆಂದು ಹೇಳಿ ಕಣ್ಮರೆಯಾದ. ಎಲ್ಲವೂ ಒಂದೊಳ್ಳೆ ಪುಸ್ತಕ ಮುಗಿಯುತ್ತಿರುವ ಅನುಭವ ಕೊಡುತ್ತಿವೆ,ಕೊನೆಯ ಪುಟಗಳಂತ್ತೇಯೇ ಇಂದಿನ ಕೊನೆಯ ಸಮಯ ಅದೆಷ್ಟು ಮುದನಿಡುತ್ತಿದೆಯಲ್ಲ, ಸಾಕೆನ್ನುವಷ್ಟು ಅಲ್ಲದಿದ್ದರು ಕಳೆದ ಸಮಯವೆಲ್ಲಾ ತೃಪ್ತಿಕರ ಮತ್ತು ಧನ್ಯತಾ ಅನುಭವ ಈ ಪ್ರಯಾಣ ಮೂಟೆಕಟ್ಟಿ ಕೊಟ್ಟಿದೇ. ಹೊರಡಬೇಕು ಅಥವಾ ಹೊರಡಲೇಬೇಕು ಅನ್ನುವ ವ್ಯಥೆಗೆ ನಾವು ಪಾಲುದಾರರು.ಬೆಟ್ಟವಿಳಿದು ಬಸ್ಸಿನೆಡೆಗೆ ಹೆಜ್ಜೆ ಬೆಳೆಸಿದೆವು.
ಮತ್ತೆ ಅದೇ ಹಳೆ ಬಸ್ಸು,ಅದೇ ಹಳೆಯ ತಮಿಳು ಹಾಡುಗಳು,ಇಳಿಸಂಜೆಯ ತಂಪೆರಚಿ ಬಿಳ್ಕೊಡುತ್ತಿದೆ ಅಲ್ಲಿಯ ಪ್ರಕೃತಿ. ಸಂಚರಿಸಿದ ದಿಕ್ಕುಗಳನ್ನ,ದೇವಾಲಯಗಳನ್ನ,ಅಲ್ಲಿಯ ಹಾದಿ ಬೀದಿಗಳನ್ನ ಮನಸ್ಸಿನಲ್ಲಿಯೂ,ಛಾಯಾಚಿತ್ರದಲ್ಲಿಯೂ ಮತ್ತು ಅಕ್ಷರದಲ್ಲಿಯೂ ಸೆರೆಹಿಡಿದ ಈ ಸುಂದರ ಸಮಯಗಳೇ ಆಗಾಗ ಈ ಮಧುರ ನೆನಪುಗಳ ಬುತ್ತಿ ಬಿಚ್ಚಿಡಲಿವೆ. ಕೊನೆಯದಾಗಿ ಎಲ್ಲದಕ್ಕೂ ಒಂದೊಮ್ಮೆ ಧನ್ಯವಾದ ಹೇಳಿ ಪ್ರಸನ್ನಗೊಂಡಿದೆ ನಮ್ಮ ಅಂತರಂಗ.

                                                   ...........ಬಸವ.

Comments

  1. ಮನುಷ್ಯನಿಗೆ ಬೀಳ್ಕೊಡುವ ಸಮಯವು ಅತ್ಯಂತ ರೋಧನೆಯ ಸಮಯ ಆದರೂ ಬಿಳ್ಕೊಡಲೇಬೇಕು.....
    ಮಸ್ತ್ ಬರ್ಧಿ ಹಾಗೆ ಮುಂದುವರಿಲಿ

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ