ಟೆಂಪಲ್ ಸಿಟಿ ಮಧುರೈ.


ತಾಂಜಾವೂರಿನ ವೈಭವಪೂರಿತ ದೇವಸ್ಥಾನದಲ್ಲಿ ತಿರುಗಾಡಿದ್ದ ಹರ್ಷವೊಂದೆಡೆ, ಜೊತೆಗೆ ಅಷ್ಟೇ ಆಯಾಸವು ಆಗಿತ್ತು. ಸುಮಾರು 3 ತಾಸಿನ ಬಳಿಕ ಬಸ್ಸು ದೇವಾಲಯ ನಗರಿಗೆ ಸಮೀಪವಾಗಿತ್ತು. ಅಲ್ಲಲ್ಲಿ ಕಾಣಿಸುತ್ತಿದ್ದ ಸ್ವಾಗತಕೋರುವ ಬೋರ್ಡಗಳು,ದೇವಾಲಯದ ಹೆಸರಿನಲ್ಲಿರುವ ಹೋಟೆಲ್ಲುಗಳು ನಾವು ಅದಾಗಲೇ ಮದುರೈಯಲ್ಲಿದ್ದೇವೆ ಅನ್ನುವುದು ತಿಳಿಸುತ್ತಿದ್ದವು.

ಶಿವ ತನ್ನ ಜಡೆಯಿಂದ ಅಮೃತದ ಹನಿಗಳನ್ನ ಸುರಿಸಿದ್ದ ಎನ್ನುವುದರ ಅರ್ಥವಾಗಿ ಈ ನಗರ ಮಧುರೈ ಅನ್ನುವ ಹೆಸರನ್ನ ಪಡೆದುಕೊಂಡಿತು. ಮಧುರೈ ಎಂದಾಕ್ಷಣವೇ ಮೀನಾಕ್ಷಿ ಎಂಬ ಹೆಸರು ಉದ್ಘಾರಗೊಳ್ಳುತ್ತದೆ, ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಮಧುರೈ ಮೀನಾಕ್ಷಿ ದೇವಾಲಯ.

ದಕ್ಷಿಣ ಭಾರತದ ಪ್ರಾಚೀನ ನಗರಗಳಲ್ಲಿ ಇದೂ ಕೂಡ ಒಂದು.ಸಂಗಮರ ಸಮಯದ ಇತಿಹಾಸ ಹೊಂದಿದೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ. ಹಲವಾರು ಪ್ರಮುಖ ರಾಜವಂಶಗಳ ರಾಜಧಾನಿ ಮಧುರೈ.
ವಾಗೈ ನದಿಯ ತಟದ ಮೇಲೆ ಹದಿನಾಲ್ಕು ವೈಭವಿಕೃತ ಗೋಪುರಗಳ ಮಧ್ಯೆ ಸ್ಥಿತವಾದ ದೇವಸ್ಥಾನ. ದೇವಸ್ಥಾನದ ಸುತ್ತಲೂ ಕಮಲದ ಆಕಾರದಲ್ಲಿ ಬೆಳೆದ ಸುಸಜ್ಜಿತ ಸುಂದರ ನಗರವದು. ಪಾರ್ವತಿ ಸ್ವರೂಪಿಯಾದ ಮಿನಾಕ್ಷಿಯ ನಗರವಿದು. ತಾಂಜಾವೂರು ಶಿವನದ್ದಾದರೆ ಮಧುರೈ ಮಿನಾಕ್ಷಿಯದ್ದು. ಮಿನಾಕ್ಷಿ ದೇವಿಯೇ ಇಲ್ಲಿಯ ಮಹಾರಾಣಿ.

ದೇವಸ್ಥಾನದ ಸುತ್ತಲೂ ಬೆಳದ ನಗರವಾಗಿದ್ದರಿಂದ ಅಲ್ಲಿಯ ನದಿ ನಗರವನ್ನ ಇಬ್ಬಾಗವಾಗಿ ಬೇರ್ಪಡಿಸಿ ಹರಿಯುತ್ತದೆ.ಒಟ್ಟಾರೆ ಚಿಕ್ಕಪುಟ್ಟ ನಾಲ್ಕು ಬ್ರಿಡ್ಜ್ ಗಳು ನದಿಯ ಮೇಲಿಂದ ಹಾದು ನಗರದ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸುತ್ತವೆ. ಅಲ್ಲಿಯ ಸರ್ಕಾರ ಇಚ್ಛೆಪಟ್ಟರೆ ಒಳ್ಳೆಯ ರಿವರ್ ಫ್ರಾಂಟ್ ಮಾಡಿ ನಗರವನ್ನ ಇನ್ನಷ್ಟು ಸುಂದರಗೊಳಿಸಬಹುದಿತ್ತು.  ಚಿಕ್ಕಪುಟ್ಟ ವೃತ್ತಗಳಲ್ಲಿ ಜಯಲಲಿತಾ ಮತ್ತು ಎಂ ಜಿ ರಾಮಚಂದ್ರನ್ ಪುತ್ಥಳಿಗಳು. ಅಲ್ಲಲ್ಲಿ 'ಮುತ್ತು ರಾಮಲಿಂಗಮ್ ತೇವರ್' ಪುತ್ಥಳಿಗಳು ಕಾಣಸಿಗುತ್ತವೆ.ಒಟ್ಟಾರೆ ಸುಸಜ್ಜಿತ ನಗರ ಮಧುರೈ.

ಸಂಜೆ 8ರ ಸಮಯಕ್ಕೆ ಬಂದಿಳಿದ ನಮಗೆ ದೇವಸ್ಥಾನದ ಹತ್ತಿರವೇ ಉಳಿದುಕೊಳ್ಳಲು ವ್ಯವಧಾನ ಸಿಕ್ಕಿದ್ದು ಅಷ್ಟೇನು ಕಷ್ಟಕರವಿರಲಿಲ್ಲ. ದೇವಸ್ಥಾನದ ಕಡೆ ನಡೆದುಕೊಂಡು ಹೋಗುತ್ತಿರುವಾಗಲೇ ಬೋರ್ಡಿನಲ್ಲಿ ಕನ್ನಡದಲ್ಲಿಯೂ ಬರೆದ ಒಂದು ವಸುಹಾತಿನ ಕಡೆ ಗಮನ ಹೋಯ್ತು. ಎಲ್ಲೆಡೆ ಬರಿಯ ತಮಿಳೇ ಕಂಡ ನಮಗೆ ಏಕಾಏಕಿ ಕನ್ನಡ ಕಾಣಸಿಕ್ಕಿದ್ದು ಒಂತರಹದ ಖುಷಿ. ಅಲ್ಲೆಯೇ ಉಳಿದುಕೊಳ್ಳಲು ನಿರ್ಧರಿಸಿದೆವು. ಕನ್ನಡದಲ್ಲಿ ಬೋರ್ಡು ಹಾಕಿದ್ದಕ್ಕೆ ಸಿದ್ಲಿಂಗನಿಗೆ ಇಲ್ಲಿಯೇ ಉಳಿದುಕೊಂಡು ಕೃತಜ್ಞತೆ ಹೇಳುವ ಬಯಕೆ ಅವನದ್ದಾಗಿತ್ತು. ಆಯಾಸ ತುಂಬಿಕೊಂಡಿದ್ದ ದೇಹಕ್ಕೆ ಮೆತ್ತನೆಯ ಹಾಸಿಗೆಯ ಹಿತವು ಹಸಿದ ಬಡವನಿಗೆ ಬಿರಿಯಾನಿ ಒಲಿದು ಬಂದಂತ್ತಿತ್ತು.

ಸ್ವಲ್ಪಹೊತ್ತು ವಿಶ್ರಾಂತಿಸಿ ಫ್ರೆಶ್ ಆಗಿ ದೇವಸ್ಥಾನದ ಸುತ್ತಲೂ ಸುತ್ತುವರೆದ ಬೀದಿಗಳತ್ತ ಹೆಜ್ಜೆಹಾಕಿದೆವು. ಅಚ್ಚುಕಟ್ಟಾಗಿ ಪ್ಲಾನ್ ಮಾಡಿ ಕಟ್ಟಿದ್ದ ದೇವಸ್ಥಾನ. ದೇವಸ್ಥಾನದ ಬೀದಿಗಳುದ್ದಕ್ಕೂ ವ್ಯಾಪಾರ ಮಳಿಗೆಗಳು. ದೇವಸ್ಥಾನದ ದರ್ಶನದ ಸಮಯ ಮುಗಿದಿದ್ದರಿಂದ ಭಾಗಶಃ ಮುಚ್ಚಿದ್ದವು.
ಬೀದಿದೀಪಗಳ ಬೆಳಕಿನಲ್ಲಿ ಸ್ವಚ್ಛವಾದ ರಸ್ತೆಗಳು ಎಲ್ಲರನ್ನು ಒಂತರಹದ ಶಾಂತಚಿತ್ತಕ್ಕೆ ಅನುವು ಮಾಡಿಕೊಡುತ್ತದೆ. ಅಲ್ಲಲ್ಲಿ ಅವರವರದ್ದೇ ಯೋಚನೆಗಳಲ್ಲಿ ಮಗ್ನರಾಗಿ ಕಲ್ಲಿನ ಮೇಜುಗಳ ಮೇಲೆ ಕುಳಿತವರು ಹಲವರು. ಸ್ನೇಹಿತರೊಂದಿಗೋ ಕುಟುಂಬದವರೊಂದಿಗೋ ಬಂದವರದ್ದು ಮುಗಿಯದ ಮಾತುಗಳನ್ನಾಡುತ್ತ ಸಮಯ ಕಳೆಯುತ್ತಿದ್ದರು.
ಸಮೀಪದಲ್ಲಿಯೇ ಇದ್ದ ಪೂರ್ವದಗೋಪುರದ ಮಧ್ಯಭಾಗದಲ್ಲಿ ಅಳವಡಿಸಿದ್ದ ಸ್ಪೀಕರ್ ವೇದ ಮಂತ್ರಗಳನ್ನ ಊದುತ್ತಲಿತ್ತು. ಅಲ್ಲಿಯ ನೀರವ ಸಂಜೆ ಆಪರಿಯ ಸೊಬಗು ಬೀರಲು ಆ ಮಂತ್ರಗಳೇ ಕಾರಣವಾಗಿದ್ದವೇನೋ ಅನ್ನುವಷ್ಟು ಸಾತ್ವಿಕ ವಾತಾವರಣ ಸೃಷ್ಟಿ ಮಾಡಿದ್ದವು ಆ ಮಂತ್ರಗಳು. ಅದೆಷ್ಟು ನೆಮ್ಮದಿಯ ದಿನಗಳು ನಮ್ಮ ಪೂರ್ವಜರು ಇಂತಹ ದೇವಾಲಯದ ಸುತ್ತಲಿನಲ್ಲಿ ಕಳೆದಿದ್ದರೂ ಅನ್ನುವ ವಿಚಾರಗಳು ನನಗೂ ಮತ್ತು ಸಿದ್ದಲಿಂಗನಿಗೂ ಚರ್ಚೆಗೆ ನೂಕಿದ್ದವು. ಸುಮಾರು ಹೊತ್ತು ಬೀದಿಗಳಲ್ಲಿ ಅಡ್ಡಾಡಿ ಹೊಟ್ಟೆಗಿಷ್ಟು ಹಿಟ್ಟು ಹಾಕುವದಕ್ಕಾಗಿ ಹೋಟೆಲ್ಲೋ ಮತ್ತೊಂದನ್ನ ಹುಡುಕುತ್ತ ಬಂದದಾರಿಗೆ ಹಿಂತಿರುಗಿದೆವು.

ಹಗಲಿರಲಿ ರಾತ್ರಿ ಇರಲಿ, ಊಟ ಅಂದ್ರೆ ಅದೇ ದೋಸೆ ಅದೇ ಇಡ್ಲಿ ಅದೇ ರೈಸ್. ಹಾಗಾಗಿ ಸಿಕ್ಕಿದ್ದೇ ಶಿವ ಅನ್ನುವಂತಿತ್ತು ಪರಿಸ್ಥಿತಿ. ಹೋಟೆಲೊಂದರೊಳಗೆ ಹೊಕ್ಕಾಯ್ತು,ಟಕ್ ಟಕ್ ಅಂತ ಎರಡು ಗ್ಲಾಸ್ ತಂದಿಟ್ಟರು. "ಸೊಲ್ಲುಂಗಾ ಸಾರ್" ಅಂತ ಟೇಬಲ್ ಹತ್ತಿರ ಬಂದ ಸಪ್ಲಾಯರ್.  ಮೊದಲು ಇಡ್ಲಿ. ಪುಡಿ ಇಡ್ಲಿ ಅಂತ ಅಲ್ಲಿಯ ಸ್ಪೆಸಲ್,ಅದರ ಬಗ್ಗೆ ಬ್ರಹ್ಮ ಜ್ಞಾನ ಹೊಂದಿದ್ದವ ಸಿದ್ದಲಿಂಗ ವೇರಿ ಎಕ್ಸೈಟೆಡ್!.  ನಾಲ್ಕು ಇಡ್ಲಿ,ಜೊತೆಗೆ ನಾಲ್ಕು ತರಹದ ಚಟ್ನಿ. ಶುದ್ಧ ಬಾಳೆ ಎಲೆಯ ಮೇಲೆಯೇ ಊಟ. ಹಾಕಿದ್ದ ಒಂದು ಜಗ್ ಸಾಂಬಾರು ಅದರ ಜೊತೆಗಿನ ನಾಲ್ಕು ತರಹದ ಚಟ್ನಿ, ಎಲ್ಲೋ ಇದೆಲ್ಲಾ ಬಾಳೆ ಎಲೆ ದಾಟಿ ಹೋದಾತು ಅನ್ನುವುದು ನಮ್ಮ ಕಳವಳ. ಅದನ್ನ ಕ್ಯಾರೆ ಎನ್ನದೆ ಸಾಂಬಾರ ಸುರಿಯುವವನು ಅಲ್ಲಿಯ ಸಪ್ಲಾಯರ್.
ನಾನು ಮೂರು ಮೃಧುವಾದ ಇಡ್ಲಿ ಮುಗಿಸಿ ನಾಲ್ಕನೆಯದಕ್ಕೆ ಕೈ ಹಾಕುತ್ತಿದ್ದಾಗ ಸಿದ್ದಲಿಂಗ ಎರಡನೆಯದರಲ್ಲೇ ಇದ್ದ, ಹಾಗಿದ್ದರೂ ಎಲ್ಲಾ ಚಟ್ನಿಯನ್ನ ಖಾಲಿ ಮಾಡಿದ್ದ. "ಮತ್ತಾ?" ಅಂತ ಕಣ್ಣು ಹುಬ್ಬು ಎರಡನ್ನ ಬಳಸಿ ಕೇಳಿದ್ದಕ್ಕೆ ಸಾಂಬಾರ ಸುರುಗುಟ್ಟುತ್ತಲೇ "ದೋಸೆ" ಅಂದ. 'ರೋಸ್ಟ್ ದೋಸೆ' ಅದನ್ನೂ ಮುಗಿಸಿದ್ವಿ.
ಮತ್ತೆ ಸಾಕೆನ್ನುತ್ತಿರುವಾಗಲೇ ಸಿದ್ದಲಿಂಗ ಇನ್ನೊಮ್ಮೆ ಇನ್ನೆರಡು ಪುಡಿ ಇಡ್ಲಿ ಹೊಟ್ಟೆಗಿಳಿಸಿದ್ದ.ಮುಗಿಯಲಿ ಈ ಬಡ ಜೀವದ ಆಸೆಗಳು ಅನಿಸಿತು. ಅಲ್ಲಿಗೆ ಮುಕ್ತಾಯಗೊಂಡಿದ್ದ ಊಟ ಇನ್ನೇನೋ ವಿಶೇಷತೆಗೆ ಹೊಟ್ಟೆ ತಡವರಿಸುತ್ತಿತ್ತು. ಅದೇ ಅಲ್ಲಿಯ ಮತ್ತೊಂದು ಸ್ಪೆಸಲ್ 'ಜಿಗರ್ ಥಂಡಾ'. ಅದರ ರುಚಿಯೂ ನಾಲಿಗೆಗೆ ಪರಿಚಯ ಮಾಡಿಕೊಟ್ವಿ. ಅದೇ ಐಸ್ ಕ್ರೀಮು, ಅದರ ಜೊತೆಗೆ ನಮಗೆ ಅರಿವಿರದ ನಾಲ್ಕಾರು ರುಚಿಗಳು, ಗಾಜಿನ ಲೋಟ, ಕಟ್ಟಿಗೆಯ ಸ್ಪುನು.ಗಂಟಲಿಗೆ ಇನ್ನೊಂದು ಇಂಚು ಬಾಕಿ ಎನ್ನುವಷ್ಟು  ಹೊಟ್ಟೆಯ ಎಲ್ಲಾ ಮೂಲೆಗಳನ್ನ ತುಂಬಿಸಿದ್ವಿ. ತಂದಿಟ್ಟಿದ್ದ ಬಿಲ್ ಕೂಡ ಹೃದಯದ ಎಲ್ಲಾ ಮೂಲೆಗಳನ್ನ ತುಂಬಿಸಿತ್ತು, ಅದು ಎರಡನೆಯ ಮಾತು ಬಿಡಿ.
ದಿನದ ಪೂರ್ತಿ ಆಯಾಸ ಒಮ್ಮೆಲೇ ಹೆಡೆಮುರಿಕಟ್ಟಿ ಹಾಸಿಗೆ ಮೇಲೆ ಬಿಸಾಕಿಬಿಟ್ಟಿತ್ತು. ಪರಮ ಪ್ರೀತಿಯೊಂದು ಹಾಸಿಗೆಯ ಮೇಲೆ ಆಗಾಗ ಮೂಡುವುದು ಅಕ್ಷರಶಃ ನಿಜವೆನಿಸಿತು. ಅದಕ್ಕೆ ತಕ್ಕಂತಹ ಆರಾಮವನ್ನ ಅದೂ ಕೂಡ ಕೊಡುತ್ತದಲ್ಲವೇ.

"ಕರೆಕ್ಟ್ ಆರಕ್ ಎದ್ದು ಜಲ್ದಿ ರೆಡಿ ಆಗ್ಬೇಕು", ಸಿದ್ಲಿಂಗ್  ಸಮ್ಮತಿಸಿದ. ಇದು ಆಗದ ಕೆಲಸ ಅಂತ ಅವನಿಗೆ ಗೊತ್ತಿತ್ತು. ಎದ್ದಿದ್ದು 8 ಕ್ಕೆ. ಬಿಸಿ ನೀರಿಲ್ಲ. ಬಿಸಿಲುನಾಡ ಕಲಿಗಳು ನಾವು, ಚಳಿ ನಮ್ಮ ಆಜನ್ಮ ಶತ್ರು. ಸಿದ್ಲಿಂಗ್ ಸಿನೆಮಾ ಡೈಲಾಗ್ ಹೇಳಿ ಹುರಿದುಂಬಿಸಿದ್ದ, "ಸ್ಟಾರ್ಟಿಂಗ್ ಸ್ವಲ್ಪ್ ತ್ರಾಸ್,ಆಮ್ಯಾಗ್ ಇಜಿ ಆಗ್ತದ, ಹೊಡಿ" ಅಂದ. ಅದು ಸಿನೆಮಾ,ಇದು ರಿಯಾಲಿಟಿ ಅಂತ ಗೊತ್ತಾಗಿದ್ದು ಮೊದಲಿನಿಂದ ಕೊನೆಯ ತನಕ ಚಳಿ ಅನುಭವಿಸುತ್ತಲೇ ಸ್ನಾನ ಮುಗಿಸಿದಾಗ.ಈ ಪಿಡನೆಗೆ ನೂಕಿದ ಪರಮಶತ್ರುವಿನಂತ್ತೆ ಈ ಸಿದ್ಲಿಂಗ್ ಹಲ್ಲು ಕಿಸಿಯುತ್ತಿದ್ದ. ಚಳಿಗೆ ನಡುಗುತ್ತಿದ್ದರಿಂದ ನಾನೇನೂ ಉದ್ಘರಿಸಲಿಲ್ಲ

ದೇವಸ್ಥಾನದ ಕಡೆ ಹೊರಟಾಯ್ತು. ದಕ್ಷಿಣದ ಸಂಕೃತಿ ಬಿರುವಂತಹ ಬೀದಿಗಳು,ಸಾಲು ಸಾಲಾಗಿ ಕೂತ ಹೂ ಮಾರುವರು.ದಿನಸಿ ಅಂಗಡಿಗಳು,ಹೋಟೆಲ್ಲುಗಳು,ಇನ್ನಿತರ ವ್ಯಾಪಾರ ಮಳಿಗೆಗಳು, ಶುಭ್ರ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗುವ ಬರುವ ಜನರು. ಅವರಿವರ ಟೀಕೆಗೆ ಕ್ಯಾರೆ ಅನ್ನದೆ ಹಣೆಯ ತುಂಬೆಲ್ಲಾ ವಿಭೂತಿಯೊ ಕುಂಕಮವನ್ನೋ ಬಳಿದುಕೊಂಡವರು ಎಲ್ಲೆಡೆ ಕಾಣಸಿಗುತ್ತಾರೆ. ಮತ್ತೆ ಅದೇ ಹಳೆ ಸಿದ್ಧಾಂತ ಅನ್ನುವಂತ್ತೆ ಬ್ರೆಕ್ಫಾಸ್ಟ್ ಮುಗಿಸಿ ದಕ್ಷಿಣ ಗೋಪುರದಿಂದ ಒಳಗೆ ಪ್ರವೇಶಿಸಿದೆವು.ಪ್ರವೇಶ ದ್ವಾರದ ಹೊರಗೆಯೇ ವ್ಯಾಲೇಟು,ಮೊಬೈಲು,ಪಾದರಕ್ಷೇ ಕೌಂಟರ್ ಅಲ್ಲಿಯೇ ಬಿಡಬೇಕು.
ಉದ್ದನೆಯ ದೊಡ್ಡ ಮಂಟಪದೊಳಕ್ಕೆ ಸ್ವಾಗತಕೋರುವ ಶಿಲಾಬಾಲಿಕೆಯರು, ಕೆತ್ತನೆಗಳಿಂದ ಕುಡಿದ ಕಂಬಗಳು. ಛಾವಣಿಯಲ್ಲಿ ರಂಗು ರಂಗಿನ ಚಿತ್ರಕಲೆ, ಸ್ವಲ್ಪವೇ ದೂರದಲ್ಲಿ ಒಂದು ಸುಂದರವಾದ ಕೊಳ. ತಾವರೆ ಕೊಳವದು.ಬಂಗಾರದ ತಾವರೆ ಕೊಳ, ಶಿವನೇ ಇದನ್ನ ನಿರ್ಮಿಸಿದ್ದ ಅನ್ನುವುದು ಅಲ್ಲಿಯವರ ವಾಡಿಕೆ.
ಅಂದು ಪೂರ್ಣಿಮೆಯ ದಿನ,ದೈನಂದಿನಕ್ಕಿಂತ ಒಂಚೂರು ಜನ ಜಾಸ್ತಿಯೇ. ಹಾವಿನ ಬಾಲದಂತ್ತೆ ಸರತಿ ಸಾಲು. 100 200 ರೂಪಾಯಿಗೆ ಸ್ಪೆಷಲ್ ದರ್ಶನ,ಅರ್ಧ ಘಂಟೆ ಮುಂಚೆಯೇ ಹೋಗಬಹುದಿತ್ತೇನೋ ಅಷ್ಟೇ. ಎಲ್ಲರೂ ಸಿರಿವಂತರೆ ಅನ್ನಿಸಿತ್ತು ಎರಡೂ ಸಾಲುಗಳನ್ನ ನೋಡಿದಾಗ. ಇದರ ಬಗ್ಗೆ ಸಿದ್ಲಿಂಗ್ ಕಡೆ ನೋಡಿದೆ, ಸಿದ್ಲಿಂಗನ ಉತ್ತರ, "ನೋ ವೇ, ಲೇಟ್ಸ್ ಎಂಜಾಯ್ ದಿ ರಿಯಾಲಿಟಿ" ಅಂದ.
ದೊಡ್ಡ ದೊಡ್ಡ ಮಂಟಪಗಳು,ಅನೇಕ ಶಿಲಾಕೃತಿಗಳು,ಚಿತ್ರಕಲೆಗಳು,ಭವ್ಯ ಮಂದಿರದ ಮೂಲೆ ಮೂಲೆಯೂ ಅಳೆದು ನೋಡವಷ್ಟು ಸಮಯ ಆ ಸಾಮಾನ್ಯ ಸರತಿ ಸಾಲು ಒದಗಿಸಿಕೊಟ್ಟಿತ್ತು. "ನೋಡು,ಸ್ಪೆಷಲ್ ದರ್ಶನ ತಗೊಂಡೋರಿಗ್ ಇದು ಸಿಗಲ್ಲ, ದಟ್ಸ್ ದಿ ಲಾಜಿಕ್" ಅಂದು ತನ್ನ ನಿಲುವು ಸಮರ್ಥಿಸಿಕೊಂಡ ಸಿದ್ಲಿಂಗ್.

ವಿಜೃಂಭಿತ ದೇವಾಲಯವದು, ಸುಂದರೇಶ್ವರ ಮತ್ತು ಮಿನಾಕ್ಷಿಯ ಗರ್ಭಗೃಹಕ್ಕೆ ಬಂಗಾರದ ಶಿಖರ. ಬಲಕ್ಕೆ ಸುಂದರೇಶ್ವರನ ದೇವಸ್ಥಾನ,ದೇವಸ್ಥಾನದ ಪ್ರಾಂಗಣದಲ್ಲಿ ದೊಡ್ಡದಾದ ಮತ್ತು ಸುಸಜ್ಜಿತವಾದ ದೇವಸ್ಥಾನ ಶಿವನಿಗೆಯೇ. ಆದರೆ ಪ್ರಾಮುಖ್ಯತೆ ಮಾತ್ರ ಮಿನಾಕ್ಷಿಗೆಯೇ,ಶಿವಸದನದ ಒಡತಿ ಅವಳೇ ಅಲ್ಲವೇ ಹಾಗಾಗಿ. ಎಡಕ್ಕೆ ಥಲವಿ ಮೀನಾಕ್ಷಿ ಅಮ್ಮನ್ ದೇವಸ್ಥಾನ. ಅಲ್ಲಲ್ಲಿ ಕಾರ್ತಿಕೇಯ ಮತ್ತು ಗಣೇಶನ ಮಂದಿರಗಳು,ಮೂರ್ತಿಗಳು.
ತುಸು ಹೊತ್ತಿನ ನಂತರವೇ ಮುಖ್ಯ ಮಂದಿರದೊಳಗೆ ಪ್ರವೇಶ. ವೈಭವಪುರಿತ ಅಲಂಕಾರದೊಂದಿಗೆ ಶಿವನ ಮಡದಿ ಎಂದು ಬೀಗುವಂತಹ ವೈಭವದಿಂದ ಸರ್ವರನ್ನು ರಕ್ಷಿಸುವಳು ನಾನೇ ಅನ್ನುವಂತೆ ಎಲ್ಲರಿಗೂ ಆಶೀರ್ವದಿಸುತ್ತಿದ್ದಳು. ಮಿನಿನಂತಹ ಕಣ್ಣುಗಳನ್ನ ಹೊಂದಿದಾಕೆ ಎಂದರ್ಥ ಮೀನಾಕ್ಷಿ. ಸಂಪೂರ್ಣ ಧನ್ಯತಾಭಾವದೊಂದಿಗೆ ಹೊರಗೆ ಬಂದ್ವಿ. ಅಲ್ಲಿಂದ ಸುಂದರೇಶ್ವರನ ದೇವಸ್ಥಾನದ ಕಡೆ, ಸುಸಜ್ಜಿತವಾಗಿ ಅಲಂಕಾರಗೊಂಡ ಶಿವ,ಬಿಳಿಯ ವಸ್ತ್ರ ಧರಿಸಿ ಎಲ್ಲರಿಗೂ ಲಿಂಗ ರೂಪದಲ್ಲಿ ದರ್ಶನ ತೋರುತ್ತಿದ್ದ. ಸುಂದರೇಶ್ವರ ದೇವಸ್ಥಾನದ ಒಳಗಡೆ ಬಲ ಭಾಗದಲ್ಲಿದ್ದ ನಟರಾಜನ ಮೂರ್ತಿ ವಿಷೇಶವಾದದ್ದು. ಸಾಮಾನ್ಯವಾಗಿ ನಟರಾಜ ಎಡಗಾಲು ಮೇಲಿತ್ತಿದ್ದ ನಾಟ್ಯ ಭಂಗಿಯಲ್ಲೇ ಕಾಣಸಿಗುತ್ತಾನೆ, ಆದರೆ ಇಲ್ಲಿ ಶಿವ ತನ್ನ ಬಲಗಾಲು ಮೇಲೆತ್ತಿ ಎಡಗಾಲು ನೆಲಕ್ಕೆ ಉರಿದ್ದ ಮೂರ್ತಿ ಇದೆ. "ಓಂ ನಮಃ ಶಿವಾಯ" ಉದ್ಘೋಷಗಳೊಂದಿಗೆ ಅಲ್ಲಿಯ ಭಕ್ತರು ಭಕ್ತಿಯಲ್ಲಿ ಮಿಂದೇಳುತ್ತಿದ್ದರು.

6ನೇ ಶತಮಾನದಲ್ಲಿ ಕುಲಶೇಖರ ಪಾಂಡ್ಯನಿಂದ ನಿರ್ಮಿತಗೊಂಡ ದೇವಸ್ಥಾನವಿದು. ದಕ್ಷಿಣವನ್ನ ಮಲಿನಗೊಳಿಸಬೇಕೆಂದು ಬಂದವ ಮಲಿಕ್ ಕಫೂರನ ವಕ್ರದೃಷ್ಟಿ ಬಿದ್ದದ್ದು ಇದೆ ದೇವಸ್ಥಾನದ ಮೇಲೆ. ದೋಚಿದ್ದಾಯ್ತು,ದ್ವಂಸವೂ ಮಾಡಿದ್ದಾಯ್ತು. ತದನಂತರ ಅಲ್ಲಿಯ ನಾಯಕರು ಕ್ರಮೇಣ ಸಂಧರ್ಭೋಚಿತವಾಗಿ ಭವ್ಯತೆಯನ್ನ ಶೇಖರಿಸಿದರು. ಒಟ್ಟಾರೆ 33 ಸಾವಿರ ಶಿಲ್ಪ ಕಲಾಕೃತಿಗಳನ್ನ ಒಳಗೊಂಡಿವೆ ಇಲ್ಲಿನ ಹದಿನಾಲ್ಕು ಗೋಪುರಗಳು. ದಕ್ಷಿಣದ ಗೋಪುರ ಅತ್ಯಂತ ದೊಡ್ಡದು, 170 ಅಡಿ ಎತ್ತರದ್ದು.
ತಮಿಳುನಾಡಿನ ಸರ್ಕಾರದ ಲಾಂಛನ ಗೋಪುರವೇ ಆಗಿದೆ.ದೇವಸ್ಥಾನಗಳು ಇಲ್ಲಿನ ಹೆಗ್ಗುರುತುಗಳು. ಪ್ರತಿಯೊಂದು ಜಿಲ್ಲೆಯಲ್ಲಿ ಒಂದಲ್ಲವೊಂದು ಪ್ರಾಚೀನ ದೇವಸ್ಥಾನ ಇದ್ದೆ ಇದೆ,ಮತ್ತು ಒಳ್ಳೆಯ ಸ್ಥಿತಿಯಲ್ಲಿಯೇ ಇವೆ. ದಕ್ಷಿಣ ಭಾರತದ್ಯಾಂತ ಅಲ್ಲಲ್ಲಿ ಗೋಪುರನಿರ್ಮಾಣಕ್ಕೆ ಬರುವ ಕಾರ್ಮಿಕರು ಮದುರೈಯವರೆ. ಗೋಪುರ, ಶಿಖರಗಳ ನಿರ್ಮಾಣಕ್ಕೂ ಹೆಸರುವಾಸಿ ಮಧುರೈ.

ದೇವಸ್ಥಾನದ ಆವರಣದ ಒಳಗಿನ ಇನ್ನಿತರ ದೇವಸ್ಥಾನಗಳನ್ನ ನೋಡಿದ್ದಾಯ್ತು. ಸಾವಿರ ಕಂಬಗಳ ಮಂಟಪ ವಿಶೇಷದ್ದು. ಯಾವುದೇ ಮೂಲೆಯಿಂದ ನೋಡಿದರು ಒಂದೇ ಕೋನದಲ್ಲಿ ಕಾಣುವಂತ್ತೆ ನಿರ್ಮಿಸಲಾದ ಮಂಟಪವಿದು.ವೈಭವ ವಿಜೃಂಭಣೆಗಳ ಪ್ರತಿಕವದು. ಅಲ್ಲಿಂದ ಎಡಕ್ಕೆ ಭೋಜನಾಲಯ. ತಮಿಳಿನಲ್ಲಿ ಬರೆದದ್ದು ತಿಳಿಯಲಿಲ್ಲವಾದರು ಅಲ್ಲಿಯ ಸರತಿ ಸಾಲು ಇದು ಭೋಜನಾಲಯವೇ ಎಂದು ಹೇಳಿತ್ತು. ದೇವಸ್ಥಾನದಲ್ಲಿ ಅಷ್ಟೆಲ್ಲಾ ಜನವಿದ್ದರು ಊಟಕ್ಕೆ ಯಾಕೆ ಇಷ್ಟು ಕಮ್ಮಿ ಜನ? ಅನ್ನುವುದು ನಮ್ಮ ಯಕ್ಷ ಪ್ರಶ್ನೆಯಾಗಿತ್ತು.
ನಾವುಗಳೂ ಸಾಲಿನಲ್ಲಿ ನಿಂತೆವು. ಹೀಗೆ ಯಾವುದೋ ಚರ್ಚೆಯಲ್ಲಿ ತೊಡಗಿದ್ದೆವು, ಹಿಂದೆ ನಿಂತಿದ್ದ ಒಬ್ಬ ಪಟಪಟನೆ "ದಿ ತಮಿಳುನಾಡು ಗೋರ್ಮಿಂಟ್ ಇಸ್ ಆಫರಿಂಗ್ ಫ್ರಿ ಮಿಡ್ ಡೇ ಲಂಚ್ ಇನ್ ಎವರಿ ಟೆಂಪಲ್" ಅಂದು ಬಿಡಬೇಕೆ!.  ಫ್ರಿ ಮಿಡ್ ಡೆ ಲಂಚ್? ಇಡೀ ತಮಿಳುನಾಡು ಸರ್ಕಾರವೇ ದೇವಸ್ಥಾನದ ಹುಂಡಿಯಿಂದ ನಡಿಯುತ್ತಿದೆ ಅನ್ನುವಷ್ಟು ಸಂಪತ್ತು ದೇವಸ್ಥಾನ ಒದಗಿಸುತ್ತಿವೆ ಸರ್ಕಾರಕ್ಕೆ,ಅಲ್ಲ ದೋಚುತ್ತಿದೆ ಅಲ್ಲಿಯ ಸರ್ಕಾರ. ಅದೇನೋ ದೊಡ್ಡ ಉಪಕಾರ ಮಾಡಿದೆ ಅನ್ನುವಂತ್ತೆ ಹೇಳಿಬಿಟ್ಟನಲ್ಲ, ಇವನೇನಾದರು ಸ್ಟಾಲಿನ್ ಸೇಕ್ರೆಟರಿಯ ಸಂಬಂಧಿಕನೊ ಎನ್ನುಅವಂತಿತ್ತು. ತಿರುಗಿ ಏನಾದರೂ ಕೇಳಬೇಕು ಅನ್ನುವಷ್ಟರಲ್ಲಿ ಮಾಯವಾಗಿದ್ದ.

ಮುಂದೆ ನಿಂತಿದ್ದ ಓರ್ವ ನೀರ್ವೃತ್ತ ವಯಸ್ಕ, ಅವರೊಂದಿಗೆ ಅಲ್ಲಿನ ಸರ್ಕಾರ ಮತ್ತು ಮತಾಂತರದ ಕುರಿತಾಗಿ ಸಿದ್ಲಿಂಗ್ ಚರ್ಚಿಸಿದ, ಸ್ಟಾಲಿನ್ ಬಗ್ಗೆ ಪಾಸಿಟಿವ್ ವ್ಯುವ್. ಆದರೆ ಮತಾಂತರದ ಬಗ್ಗೆ ನಿಸ್ಸಹಾಯಕ ಮನೋಭಾವ ತೋರಿದ್ರು ಅವರು. ಇನ್ನು ಜಾಸ್ತಿ ಮಾತಾಡಿಸುವುದು ಒಳಿತಲ್ಲವೆನಿಸಿತು.
ಊಟದ ವ್ಯವಸ್ಥೆ ಧರ್ಮಕ್ಷೇತ್ರದ ಅನುಭವವೇನು ಕೊಡಲಿಲ್ಲ. ಕಬ್ಬಿಣದ ಮೇಜುಗಳಲ್ಲಿ ಊಟ. ಬಡಿಸವವರು ಸರ್ಕಾರದಿಂದ ನಿಯೋಜಿತಗೊಂಡಿರುವರು, ಸ್ಥಳ ಅಷ್ಟೇನು ಶುಭ್ರವಾಗಿರಲಿಲ್ಲ. ಎಲ್ಲರಿಗೂ ಬಾಳೆ ಎಳೆಯಲ್ಲೇ ಊಟ.
ಎದುರಿಗೆ ಕುಳಿತಿರುವ ಒಬ್ಬ ವ್ಯಕ್ತಿಯ ಊಟದ ವೈಖರಿ ನೋಡಿ ಮೃಷ್ಟಾನ್ನ ಭೋಜನವೇ ಇರಬಹುದೇನೋ ಅಂದುಕೊಂಡ್ವಿ. ನಮ್ಮ ತಟ್ಟೆಗೆ ಊಟ ಬರದೆ ಇದ್ದಾಗ ಬೇರೆಯವರ ತಟ್ಟೆ ಕಡೆ ನೋಡುವುದು ಮಾನವ ಸಹಜ ಪ್ರವೃತ್ತಿಯಲ್ಲವೇ, ಇದು ನಮಗೂ ಬಿಟ್ಟಿದ್ದಲ್ಲ. ಎದುರು ಕುಳಿತ ಸಾಹೇಬರು ಐದು ಬೆರಳು ಮತ್ತು ಅಂಗೈಯನ್ನ ಬಳಸಿ ಊಟದ ರುಚಿ ಸವಿಯುತ್ತಿದ್ದ. ಅವನ ಒಂದು ತುತ್ತು ನಮ್ಮ ನಾಲ್ಕು ತುತ್ತಿಗೆ ಸಮ. "ಇವಾ ಊಟ ಮಾಡ್ಲಾಕೆ ಹುಟ್ಯಾನ್" ಸಿದ್ಲಿಂಗ್ ಉದ್ಘರಿಸಿಯೇ ಬಿಟ್ಟ.
ಅಬ್ಬಾ! ಬಂತಲ್ಲ ನಮ್ಮ ಸರದಿ. ಬಾಳೆ ಎಲೆ, ಅದನ್ನ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಅಂಗೈ ಇಂದ ಗುದ್ದಿ ಮದ್ಯದ ದಂಟಿಗೆ ಅಂಟಿಕೊಂಡಿದ್ದ ಎಲೆಗಳನ್ನ ಸಡಿಲಗೊಳಿಸಬೇಕು,ಆಮೇಲೆ ನೀರು ಚಿಮ್ಮಿಸಿ ಶುಚಿ ಗೊಳಿಸಬೇಕು. ಸರ್ಕಾರದಿಂದ ನಿಯೋಜಿಯಗೊಂಡ  ಸೆಲ್ವಿ ಬಂದು ಒಂದು ಪಲ್ಲೆ,ಒಂದು ಚಟ್ನಿ ಬಡಸಿ ಒಂದು ಗ್ಲಾಸ್ ಬದಿಗೆ ಕುಕ್ಕರಿಸಿದಳು. ಇನ್ನೊವ್ರ ಸೆಲ್ವಿ ಬಂದು ಒಂದು ಸೇರು ಅನ್ನ ಬಡಿಸಿದ್ಲು. ಅಲ್ಲಿರುವರು ಎಲ್ಲರೂ ಅದನ್ನ ಎರಡು ಗುಂಪಾಗಿ ವಿಂಗಡಿಸಿದ್ರು, ನಮಗೆ ಅದರ ಬಗ್ಗೆ ಯಾವುದೇ ಇಂಫಾರ್ಮೇಷನ್ ಇಲ್ಲ. ಹಾಗಾಗಿ ನಾವು ಅನ್ನದಲ್ಲಿ ಒಂದು ಭಾವಿ ನಿರ್ಮಿಸಿದ್ವಿ, ಅದರೊಳೊಗೆ ಗುರಿಯಿಟ್ಟು ಸಾಂಬಾರ್ ಬಡಿಸಿದಾಕೆಗೆ ನಮ್ಮ ಧನ್ಯವಾದ. ಎದುರಿರುವವ ಉಂಡ ವೈಖರಿ ನೋಡಿ ರುಚಿಯ ಬಗ್ಗೆ ಅವಲೋಕಿಸಿದ್ದ ನಮಗೆ ಅದು ಅಷ್ಟೇನು ಹಿತ ಕೊಡಲಿಲ್ಲ, ಸರ್ಕಾರಿ ಮಿಡ್ ಡೇ ಲಂಚ್ ಅಂತ ಹೇಳಿದ್ದಕ್ಕೆಯೇ? ಅಥವಾ ಅಡುಗೆ ಮಾಡುವವರು ಧರ್ಮಕ್ಷೇತ್ರದವರು ಅಲ್ಲದೆ ಸರ್ಕಾರಿ ನೌಕರರು ಆಗಿರುವುದಕ್ಕೆಯೇ? ಜನ ಯಾಕೆ ಕಮ್ಮಿ ಅನ್ನುವುದಕ್ಕೆ ನಮಗೆ ಅದಾಗಲೇ ಉತ್ತರ ಸಿಕ್ಕಿತ್ತು.

ಎರಡು ಗುಂಪು ಅನ್ನವನ್ನ ಒಂದು ಬಾರಿ ಸಾಂಬಾರ ಜೊತೆಗೆ ಮತ್ತೊಂದು ಬಾರಿ ರಸಂ ಜೊತೆಗೆ ಮುಗಿಸುವುದು ಅಲ್ಲಿನವರ ವಾಡಿಕೆ ಅನಿಸುತ್ತೆ, ಅದಾದಮೇಲೆ ಇನ್ನೊಮ್ಮೆ ಅನ್ನ ಬಡಿಸಿಕೊಂಡು ಅದನ್ನ ಮಜ್ಜಿಗೆ ಜೊತೆಗೆ ಮುಗಿಸಬೇಕು. ಇದರ ಅರಿವೇ ಇಲ್ಲದ ನಮಗೆ ಎಲ್ಲವನ್ನ ಎಲ್ಲೆಲ್ಲೋ ಬಡಿಸಿಕೊಂಡ್ವಿ. ಒಂದೊಮ್ಮೆ ಅವರ ಶೈಲಿಯಲ್ಲಿ ಊಟ ಮಾಡಿದ್ರಾಯ್ತು ಅಂತ ಹೇಳಿ ಟ್ರೈ ಮಾಡಿದೆ. ಐದು ಬೆರಳು ಅಂಗೈ ಬಳಸಿ ಎತ್ತಿದ್ದ ತುತ್ತು, ಬಾಯಿಯೊಳಗೆ ಹೇಗೆ ಹೋದಾತು? ಆಗಲಿಲ್ಲ. ಸಾಂಬಾರ ಮುಂಗೈವರೆಗೆ ಸುರಿಯುವ ಸಂಭವ ಜಾಸ್ತಿ ಅನ್ನಿಸ್ತು. ಅಲ್ಲಿಗೆ ಮುಕ್ತಾಯಗೊಂಡಿತ್ತು ನಮ್ಮ ಊಟ.ಬಾಳೆ ಎಲೆ ಸಂಪೂರ್ಣ ಖಾಲಿ ಮಾಡಲಾಗಲಿಲ್ಲ,ಅದನ್ನ ಅಲ್ಲಿಯೇ  ಮಡಿಚಿಟ್ಟೆವು,ಅದೊಂದು ಖೇದ ಮನದ ಮೂಲೆಯಲ್ಲೇ ಉಳಿಯಿತು.ಪ್ರಸನ್ನವಾಗದಿದ್ದರೂ ಹೊಟ್ಟೆ ತುಂಬಿದ ಭಾವ.ಅನ್ನದಾತೋ ಸುಖಿ ಭವಃ. ಅಲ್ಲಿಂದ ಹೊರ ಬಂದು ಒಂದೊಮ್ಮೆ ದೇವಸ್ಥಾನದ ಸುತ್ತಲೂ ತಿರುಗಾಡಬೇಕಲ್ಲವೇ. ಹೊರಟ್ವಿ.

ಚೌಕಾಕರದಲ್ಲಿ ಸ್ಥಿತಗೊಂಡಿದ್ದ ದೇವಸ್ಥಾನದ ಸುತ್ತಲೂ ನಾಲ್ಕು ಬೀದಿಗಳು. ಅದರ ಅಂಚಿನಲ್ಲಿ ಅನೇಕ ವ್ಯಾಪಾರದ ಅಂಗಡಿಗಳು. ದಕ್ಷಿಣದ ಗೋಪುರದ ಹೊರಗಿನ ಮಂಟಪಗಳನ್ನ ವ್ಯಾಪಾರ ಮಳಿಗೆಗಳನ್ನಾಗಿ ಮಾರ್ಪಾಡು ಮಾಡಿದ್ದರು. ಒಳಗಡೆ ಪೂಜೆ ಸಾಮಾನುಗಳು,ಅಡುಗೆಗೆ ಬೇಕಾದ ಪಾತ್ರೆಗಳೇ ಹೆಚ್ಚು. ಏನನ್ನಾದರೂ ಕೊಂಡೊಯ್ಯಬೇಕೆಂದರೆ "ಎನ್ ತಂದಿರಿ" ಅಂತ ಕೇಳುವ ಮಡದಿ ಇಲ್ಲ. ಹಾಗಾಗಿ ಆ ಗೋಜಿಗೆ ಹೋಗಲಿಲ್ಲ. ಅಲ್ಲೋರ್ವ ಪಾತ್ರೆ ಪಗಡೆ ಖರೀದಿಸುತ್ತಿದ್ದ, ಖರೀದಿಸಿದ್ದು ಮಡದಿಗೆ ಇಷ್ಟವಾಗಬೇಕಲ್ಲವೇ? ಸ್ವರ್ಗದ ಮೂಲೆಯನ್ನು ಅಳೆದು ನೋಡುವ ಹೆಂಗಸರಿಗೆ ಇನ್ನೂ ಗಂಡಸು ಖರೀದಿಸಿ ತಂದ ಪಾತ್ರೆ ಇಷ್ಟವಾದೀತೆ? ಅವನು ಇದನ್ನೆಲ್ಲ ಅರಿತಿದ್ದನೆನಿಸುತ್ತೆ,ಹೆಂಡತಿಗೆ ವಿಡಿಯೋ ಕಾಲ್ ಮಾಡಿದ್ದ.ದೊಡ್ಡ ತಾಪತ್ರಯಕ್ಕೆ ಸಿಲುಕಿದವನ ಹಾಗಾಗಿತ್ತು ಅವನ ಸ್ಥಿತಿ,ಆದರೂ ಆತ ಬುದ್ಧಿವಂತನೆ. ಇದರ ಗೋಜು ನಮಗಿಲ್ಲವಲ್ಲ ಎಂಬ ಖುಷಿ ನಮಗೆ.
ನಾಲ್ಕೂ ದಿಕ್ಕಿನ ಗೋಪುರಗಳಲ್ಲಿ ಸಾವಿರಾರು ಶಿಲ್ಪಕಲೆಗಳು,ರಂಗು ರಂಗಿನ ಚಿತ್ರಕಲೆ. ಕೊರೆಯುವಂತಹ ನಾಜೂಕು ಕೆತ್ತನೆಗಳು, ಅದೆಷ್ಟು ಸೂಕ್ಷ್ಮತೆ,ಅದೆಷ್ಟು ಚಾಕಚಕ್ಯತೆ,ಅದೆಷ್ಟು ಭಕ್ತಿ,ಶ್ರದ್ಧೆ. ಒಂದೊಮ್ಮೆ ಇದನ್ನೆಲ್ಲಾ ನಿರ್ಮಿಸಿದ ಅವರೆಲ್ಲರೂ ಮಹಾನರೂ ಅನ್ನುವ ಭಾವನೆ ಮನದಟ್ಟಾಗದೆ ಇರದು.

ಬಂದದಾರಿಗೆ ಹಿಂತಿರುಗಿದೆವು. ಒಂತರಹದ ಬಿಸಿಲು,ನಮ್ಮದಲ್ಲದ ಬಿಸಿಲು. ಕಮ್ಮಿ ಇದ್ದರೂ ಜಾಸ್ತಿಯೇ ಅನ್ನಿಸುತ್ತಿತ್ತು. ಸಿದ್ಲಿಂಗ್ ಇಲ್ಲಿಯ ಸ್ಪೆಷಲ್ ಎಳನೀರಿನ ಬಗ್ಗೆ ಜ್ಞಾಪಿಸಿದ. ಹೌದು,ಹಳದಿ ಎಳನಿರಂತ್ತೆ. ಹತ್ತಿರವೇ ಮಾರುತ್ತಿದ್ದ ಸೆಲ್ವಿಯ ಅಂಗಡಿಯೊಂದರಲ್ಲಿ ಅದರ ಸ್ವಾದವೂ ಹಿರಿಯಾಯ್ತು. "ಜರ ಡಿಫರೆಂಟ್ ಅದಾ" ಹೌದೆಂದು ತಲೆ ಅಲ್ಲಾಡಿಸಿ ಮುಂದಕ್ಕೆ ಹೊರಟ್ವಿ. ಬೀದಿಯುದ್ದಕ್ಕೂ ಚಿಕ್ಕ ಪುಟ್ಟ ವ್ಯಾಪಾರಸ್ಥರು,ಭಾಗಶಃ ಎಲ್ಲರೂ ಮಹಿಳೆಯರೇ. ತಮಿಳುನಾಡಿನ ಉದ್ದಕ್ಕೂ ಕಂಡಲೆಲ್ಲಾ ಕೆಲಸಮಾಡುವವರು ಮಹಿಳೆಯರೇ ಆಗಿದ್ದರು. "ಜಯಲಲಿತಾ ರಿಯಲ್ಲಿ ಸ್ಟ್ರಗಲ್ಡ್ ಫಾರ್ ವುಮೆನ್ ಎಂಪಾವರಮೆಂಟ್" ಅಂತ ಹೇಳುತ್ತಿದ್ದ ರಾಜಕಾರಣಿಗಳ ಭಾಷಣ ನಿಜವೆನಿಸಿತ್ತು.

ದಿನದ ಆಯಾಸವೇನು ಇರಲಿಲ್ಲ, ಆದರೂ ಹಾಸಿಗೆಗೆ ಒಂಚೂರು ಒರಗಿದೆವು. ಸಮೀಪದಲ್ಲಿಯೇ ಇದ್ದ ವಾಗೈ ನದಿಗೆ ವಿಸಿಟ್ ಕೊಡಬೇಕು ಅನ್ನುವುದು ಸಿದ್ಲಿಂಗ್ ನ ಮಹದಾಸೆ. ಸನ್ನದರಾಗಿ ಸ್ವಲ್ಪವೇ ದೂರವಿದ್ದ ನದಿಗೆ ಹೋದೆವು. ಎಲ್ಲೋ ಇರಿಸಿದ್ದ ಡ್ಯಾಮ್ ನಲ್ಲಿ ನೀರು ಶೇಖರಿಸಲಾಗಿದೆ ಅನ್ನಿಸಿತ್ತು, ನದಿ ಭಾಗಶಃ ಖಾಲಿ ಖಾಲಿ. ಅಲ್ಲಲ್ಲಿ ಜಾಲಿ ಟೋಪಿಯವರು ಮೀನುಹಿಡಿಯುತ್ತಿದ್ದರು. ಸೇತುವೆಯ ಕೆಳಗೆ ಇನ್ನೊಂದು ರೋಡು, ದೊಡ್ಡ ವಾಹನಗಳ ಸಂಚಾರವಿಲ್ಲದಿದ್ದರೂ ಚಿಕ್ಕಪುಟ್ಟ ವಾಹನಗಳಿಗೆ ನೀರಿಲ್ಲದಿದ್ದಾಗ ಯಾವುದೇ ಅಡ್ಡಿಯಿಲ್ಲ.

ಅಲ್ಲಿಂದ ಮುಂದಿನ ಬಸ್ ನಿಲ್ದಾಣಕ್ಕೆ ಹೋಗುವುದಿದೆ, ಎರಡು ಬಸ್ ನಿಲ್ದಾಣಗಳು. ಹೋಗಬೇಕಾಗಿದ್ದು ಪೆರಿಯಾರ್ ಬಸ್ ನಿಲ್ದಾಣ. ಇಡೀ ತಮಿಳುನಾಡಿನಲ್ಲಿ ಮೊದಲಬಾರಿಗೆ ರಾಮಸ್ವಾಮಿ ಪೆರಿಯಾರ್ ಹೆಸರು ಕೇಳಿದೆ. ಅಲ್ಲಿಯವರೆಗೂ ಈ ಯಕಶ್ಚಿತ ಕುನ್ನಿ ಒಂದು ಮಿಕ ಅನ್ನುವ ಯೋಗ್ಯತೆ ಅಲ್ಲಿಯವರು ಕೊಟ್ಟಿದ್ದಾರೆ ಎನ್ನುವುದು ಅರ್ಥವಾಯ್ತು. ಸದಾ ಹಿಂದುಗಳನ್ನು, ಅವರ ಸಂಸ್ಕೃತಿ,ಅವರ ದೇವರುಗಳನ್ನ ತೆಗಳುತ್ತಾ ತಾನೊಬ್ಬ ಮಹಾ ಕ್ರಾಂತಿಕಾರಿ ಎಂದು ಬಿಂಬಿಸಿಕೊಂಡಿದ್ದ, ದಕ್ಷಿಣ ಭಾರತವನ್ನ ಪ್ರತ್ಯೇಕ ಮಾಡ್ತೀನಿ ಅಂದು ಹೊರಟಿದ್ದ ತಲೆಹಿಡುಕನ ಅಸ್ತಿತ್ವ ಅಲ್ಲಿ ಶೂನ್ಯ.ನಗಣ್ಯ. ಆದರೆ ಹೊರಗಿನ ಗಂಜಿ ಗಿರಾಕಿಗಳಿಗೆ,ರೋಲ್ ಕಾಲ್ ಹೋರಾಟಗಾರರಿಗೆ,ಎಡಚರರಿಗೆ ಇವನೊಬ್ಬ ಮಹಾನಾಯಕ. ಬುದ್ಧಿಗೇಡಿ ಬುದ್ಧಿಜೀವಿಗಳು.

ಅಲ್ಲಿಯ ಆಟೋಗಳದ್ದು ಒಂತರಹದ ವಿಷೇಶ. ಹಿಂದೆ ಮೂರು ಜನ ಕುರುವದಕ್ಕೆ ಎತ್ತರದ ಸೀಟು, ಅದನ್ನ ಹಿಂದಕ್ಕೆ ಜರಿಸಿದರೆ ಇನ್ನೂ ಮೂರು ಜನ ಕುರುವರ ಜಾಗ ಕೆಳಗಡೆ ಸಿಗುತ್ತದೆ. ಮೇಲೆ ಮೂರು ಜನ, ಅವರ ಕಾಲುಗಳ ಮುಂದೆ ಇನ್ನೂ ಮೂರು ಜನ. ಈ ಐಡಿಯಾ ನಮ್ಮವರಿಗೆ ತಿಳಿಯದಿರಲಿ ಅನ್ನಿಸಿತ್ತು. ಇವಾಗಲೇ ಹಿಂದೆ ನಾಲ್ಕು ಜನ,ಮುಂದೆ ನಾಲ್ಕು ಜನ. ಕೋನೆಯಲ್ಲಿಯ ಇಬ್ಬರು ಡ್ರೈವರ್ ನ ಕುತ್ತಿಗೆಗೋ ಸೊಂಟಕ್ಕೆ ಹಾವಿನ ತರಹ ಕೈ ಹಾಕಿ ಜೋತು ಬೀಳುತ್ತಾರೆ, 'ಕಂಪ್ಲೀಟ್ ಈಕ್ವಿಲೂಬ್ರಿಯಮ್ ಇನ್ ಆಟೋ'. ಡ್ರೈವರ್ ಮಾತ್ರ ಹೆಂಡತಿ ಸತ್ತವರಂತ್ತೆ ಥೇಟ್ ಮುಂದಕ್ಕೆ ನೋಡುತ್ತಾ, ಬಾಯಲ್ಲಿ ಗುಟ್ಕಾ ಹಿಡಿದು,ಹಳ್ಳ ಕೊಳ್ಳ ಎನ್ನದೆ ತದೇಕಚಿತ್ತವಾಗಿ ಚಲಾಯಿಸ್ತಾನೆ. ಹಿಂದೆ ಕೂತವರ ಸೊಂಟಕ್ಕೆ ಯಾವುದೇ ವಿಮೆ ಇಲ್ಲ, ಮುಂದೆ ಕುಳಿತವರು ಇವನ ಬಿಸಿನೆಸ್ ಪಾರ್ಟ್ನರ್ ಅನ್ನುವಂತ್ತೆ ಫುಲ್ ಕೋಆಪ್ರೆಷನ್. ಇಲ್ಲಿ 'ಸಮಾಜ ಸಂಗಜೀವಿ' ಅನ್ನುವುದು ಖರೆ ಆಗುತ್ತೆ. ಜೋತು ಬಿದ್ದು ಕುಳಿತವರ ಬುಡ ಪೂರ್ತಿ ಶೇಪ್ ಔಟ್. ಒಂಚೂರು ನಡೆದ್ರೆ ಸಾಕು ತಾನಾಗಿಯೇ ಸೀದಾ ಆಗುತ್ತದೆ ಅನ್ನುವ ಕಾಂಫೀಡೆನ್ಸ್ ಎಲ್ಲರದ್ದೂ. ಮನೆಗೆ ಹೋಗಿ ಮಡದಿ ಹತ್ತಿರ "ಯಾಕೋ ಮಗ್ಗಲ್ ಹಿಡ್ಕೊಂಡದ" ಅನ್ನುವ ರಗಳೆ ಇದಾವುದಕ್ಕೂ ಸಂಬಂಧವೇ ಇಲ್ಲ. ಸಧ್ಯ ಇವಾಗ ನಾನಿರುವ ಆಟೋ ತಮಿಳುನಾಡಿನದ್ದು ಅನ್ನಿಸಿತ್ತು.

ಅಲ್ಲಲ್ಲಿ ಖಾಲಿ ಇದ್ದ ಹೊಟ್ಟೆಯ ಮೂಲೆಗಳನ್ನ ಇನ್ನೊಮ್ಮೆ ತುಂಬಿಸಿದ್ವಿ, ಕಣ್ಣಿಗೆ ಕಾಣುವ ಬಸ್ ಎಲ್ಲವೂ ರಾಮೇಶ್ವರದ ಕಡೆಗೆ ಅನ್ನಿಸುತ್ತಿತ್ತು. ಗಂಟಲು ಹರಿಯುವಂತ್ತೆ ಕಿರುಚಾಡಿ ಬಸ್ ತುಂಬಿಸುತ್ತಿದ್ದ ಡ್ರೈವರ್ ಕಂಡೆಕ್ಟರ್ಗಳು. ಅವರೆಡೆಗೆ ನೋಡಿ "ರಾಮೇಶ್ವರಮ್"? ಅಂತ ಕೇಳಿದ್ದೆ ತಡ, "ಆಮಾ, ವಾಂಗಾ..ವಾಂಗಾ" ಅಂತ ಹತ್ತಿಸಿಕೊಂಡ್ರು.


ಅದೇ ಬಸ್ಸು,ಅದೇ ಹಳೆ ಸಾಂಗು,ಅದೇ ಸೆಲ್ವಂ ಸೆಲ್ವಿಯರ್ ಮಧ್ಯೆ ನಮ್ಮ ಪ್ರಯಾಣ ರಾಮೇಶ್ವರಮ್ ಕಡೆ ಶುರುಯಾಯ್ತು........

                                                       .......ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ