ತಾಂಜಾವೂರಿನ ಬೃಹದೀಶ್ವರ.


ಐದಾರು ವರ್ಷಗಳ ಹಿಂದೆ ದುಬಾರಿಯಾಗಿದ್ದ ಅಂತರ್ಜಾಲ ಏಕಾಏಕಿ ಅಗ್ಗವಾಯಿತು, ಅಂತರ್ಜಾಲ ಎಲ್ಲೆಡೆ ಹಬ್ಬಿತು,ಅದರೊಂದಿಗೆ ಅನೇಕ ವಿಚಾರಗಳು,ಸಿದ್ಧಾಂತಗಳು,ಸತ್ಯಗಳು,ನೈಜ್ಯತೆಗಳು, ಎಲ್ಲವೂ ಎಲ್ಲರೆದುರಿಗೆ ಅನಾವರಣಗೊಳ್ಳಲಿಕೆ ಶುರುಯಾಯ್ತು. ಈ ಮೊದಲು,ಭಾರತೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಬಗ್ಗೆ ಅಭಿರುಚಿ ಹೊಂದಿದ ಅನೇಕರು ಅದೆಲ್ಲವನ್ನ ಪುಸ್ತಕದಲ್ಲಿ ತುಂಬಿಟ್ಟಿದ್ದರು,ಆದರೆ ಅದು ಭಾರತಿಯರೆಲ್ಲರಿಗೂ ತಲುಪಿತು ಅನ್ನುವುದು ಅಜೀರ್ಣದ ಮಾತು. ಈ ಅಂತರ್ಜಾಲದ ಬಳಕೆಯಿಂದ, ಭಾರತದ ವಾಸ್ತುಶಿಲ್ಪದ ಮತ್ತು ಅದರ ಪುರಾತನ ಪ್ರಾಚೀನ ಇತಿಹಾಸದ ಅನುಯಾಯಿಗಳು ಸುಂದರ ಮತ್ತು ಭವ್ಯ ದೇವಾಲಯಗಳ ಬಗ್ಗೆ ಮಾಹಿತಿ ಹಂಚುವದನ್ನ ಪ್ರಾರಂಭಿಸಿದರು,ಅದರ ಕೃತಾರ್ಥವಾಗಿ ಅಂತರ್ಜಾಲದಲ್ಲಿ ಎಲ್ಲೆಡೆ ಹಬ್ಬಿದ ಅನೇಕ ದೇವಾಲಯಗಳ ಚಿತ್ರಗಳಲ್ಲಿ ತಂಜಾವೂರಿನ ವಿಶ್ವವಿಖ್ಯಾತ, ಅಂತಾರಾಷ್ಟ್ರೀಯ ಸ್ಮಾರಕದ ಗುರುತಿನ, ಸಾವಿರ ವರ್ಷದ ಬೃಹದೀಶ್ವರ ದೇವಸ್ಥಾನವೂ ಒಂದು. ಸುಮಾರು ನಾಲ್ಕೈದು ವರ್ಷಗಳ ಹಿಂದಿನಿಂದಲೇ ಈ ದೇವಸ್ಥಾನವನ್ನ ನೋಡಬೇಕು,ಅದರ ಪ್ರಾಂಗಣದಲ್ಲಿ ಸುತ್ತಾಡಬೇಕೆನ್ನುವ ಹಂಬಲ,ಅದು ದಿನ ಕಳೆದಷ್ಟು ಸ್ಪುಟಗೊಳ್ಳುತ್ತಲೇ ಇತ್ತು. ಅದೆಷ್ಟೋ ಬಾರಿ ಕಲಬುರಗಿಯಿಂದ ತಾಂಜಾವೂರಿನ ತನಕ ಹೋಗುವ ವ್ಯವಸ್ಥೆಯ ಬಗ್ಗೆ ಮ್ಯಾಪ್ ನಲ್ಲಿ ವಿಹರಿಸಿ ವಿಚಾರಿಸಿದ್ದುಂಟು,ಒಮ್ಮೊಮ್ಮೆ ನಿಶ್ಚಯಿಸಿದ್ದು ಉಂಟು, ಆದರೆ ಅದ್ಯಾವು ಯಶಸ್ಸು ಕಾಣಲಿಲ್ಲ. ಬೆಂಗಳೂರಿಗೆ ಇದು ಇನ್ನೂ ಸಮೀಪ, ಇವಾಗ ಇದನ್ನ ಮಾಡಿಯೇ ತೀರಬೇಕು ಅನ್ನುವ ಹಂಬಲ ಮತ್ತಷ್ಟು ಬಲಿಷ್ಟಗೊಂಡಿತು.

ಯಥಾವತ್ತಾಗಿ ಸಿದ್ದಲಿಂಗನಿಗೆ ಸುಳಿವು ಕೊಟ್ಟೆ, ಮ್ಯಾಪಿನಲ್ಲಿ ಅವನೊಮ್ಮೆ ಇಣುಕಿ, ಹಿಂಗ್ಹಿಂಗೆ ಮತ್ತು ಹಾಂಗ್ಹಾಂಗೆ ಅಂತ ನಿಲ ನಕ್ಷೆ ಸಿದ್ಧಪಡಿಸಿದ, ಜೊತೆಗೆ ತಾರೀಖು ಸಹ ನಿಗದಿಪಡಿಸಿದ. ಮತ್ತೇಕೆ ತಡವೆಂದು ಸಿದ್ಧರಾಗಿ ಸಾಯಂಕಾಲದ ರೈಲು ಹತ್ತಿದ್ದಾಯ್ತು.

ಬೆಳಿಗ್ಗೆ ಐದರ ಸುಮಾರಿಗೆ ತಾಂಜುವುರಿನ ಜಂಕ್ಷನ್ ತಲಿಪಿದೆವು, ವಿಶ್ರಾಂತಿಯ ಅವಶ್ಯಕತೆಯೇನು ಇರಲಿಲ್ಲ. "ಫ್ರೆಶ್ ಆಗಿ ರೆಡಿ ಆಗ್ಬೇಕ್ ಅಲಾ, ಜಲ್ದಿ ಸಸ್ತಾ ಲಾಡ್ಜ್ ನೋಡು" ಅಂದ ಸಿದ್ದಲಿಂಗನಿಗೆ ಪ್ರತುತ್ತರವಾಗಿ ಕೇಳಿಸಿದ್ದು "ಎರಡ್ ತಾಸ್ ಸಲ್ಯಾಕ್ ಲಾಡ್ಜ್ ಯಾಕ್, ಬೇರೆ ಏನಾನಾ ನೋಡಿದ್ರ್ ಆಯ್ತು"ಅಂದೆ. ಪಕ್ಕದಲ್ಲಿಯೇ ನಿಂತಿದ್ದ ಟಾಕ್ಸಿ ಡ್ರೈವರ್,ವಿಚಾರಿಸಿದೆವು, ಸೂಕ್ತ ಸಲಹೆಯನ್ನೇ ಕೊಟ್ಟು ಸಮೀಪದ ಪರಿಚಿತರೊಬ್ಬರ ಹೋಮ್ ಸ್ಟೇ ಗೆ ಕರೆದುಕೊಂಡು ಹೋದ. ಕತ್ತಲೆಯಲ್ಲಿ ಸಂಪೂರ್ಣವಾಗಿ ಬೆಳ್ಳಗಾಗದೆ ಇದ್ರು ಫ್ರೆಶ್ ಅಂತೂ ಅದ್ವಿ. ಅಲ್ಲಿಂದ ದೇವಸ್ಥಾನದ ಕಡೆ ಆಟೋ ಟ್ಯಾಕ್ಸಿಯಲ್ಲಿ ಹೋಗದೆ,"ಒಂದೆರಡು ಕಿಲೋ ಮೀಟರ್ ನಡ್ಕೊಂಡ್ ಹೋಗೋಣ, ಇಲ್ಲಿನ ಸಂಸ್ಕೃತಿ,ಇಲ್ಲಿಯವರ ಜೀವನಶೈಲಿ ನೋಡಬಹುದು" ಅಂದ ಸಿದ್ದಲಿಂಗನ ಮಾತಿಗೆ ಹು ಅಂದು ಹೊರಟ್ವಿ.

ಪಾಪ ನಮ್ಮೆದುರು ಸಂಸ್ಕೃತಿಯನ್ನ ಬಿತ್ತರಿಸಬೇಕೆಂದವರು ಎಲ್ಲರೂ ಬೆಚ್ಚಗೆ ಹಾಸಿಗೆಯೊಳಗೆ ಅವಿತು ಮಲಗಿದ್ರು ಅನ್ನಿಸುತ್ತೆ,ಯಾವ ಸೆಲ್ವಿಯೂ ಕಾಣಿಸಲಿಲ್ಲ ಸೆಲ್ವಂ ನು ಕಾಣಿಸಲಿಲ್ಲ, ರಸ್ತೆ ಬೀದಿಗಳು ಸಂಪೂರ್ಣ ಖಾಲಿ.ಅದು ತೀರಾ ಬೆಳಗಿನಜಾವ,ಸೂರ್ಯನೂ ಫ್ರೆಶ್ ಅಪ್ ಅಗಲಿಕೆ ಹೋಗಿದ್ದನೇನೋ,ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಮುಖ ಮುಖ ನೋಡ್ಕೊಂಡು ಹಲ್ಲ್ ಕಿಸಿದ್ವಿ. ಹಾಗೆ ನಡೆದುಕೊಂಡು ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದೆವು, ದೇವಸ್ಥಾನ ಸುಮಾರು ಇನ್ನೂರು ಮೀಟರ್ ದೂರವಿದ್ದಾಗಲೇ ಅದರ ವಿಮಾನ ಶಿಖರ ಕಾಣಿಸುತ್ತಿತ್ತು. ಗ್ರಾನೈಟ್ ಕಲ್ಲುಗಳಿಂದ ಕೂಡಿದ ಗರ್ಭಗೃಹದ ಶಿಖರ,ನೀಲ ನಭದಲ್ಲಿ ತಲೆಯೆತ್ತಿ ನಿಂತಿದೆ. ಸುತ್ತಲಿನ ತೆಂಗಿನ ಮರಗಳ ಮಧ್ಯೆ,ತುಸು ಮಂಜು ಕವಿದ ವಾತಾವರಣದಲ್ಲಿ ದೇವಾಲಯ ಅದಾಗಲೇ ತನ್ನ ಮನೋಜ್ಞ ನೋಟಗಳನ್ನ ಎಲ್ಲೆಡೆ ಚೆಲ್ಲುತ್ತಿತ್ತು. ಕ್ಷಣಕಾಲ ಅಲ್ಲಿಯೇ ನಿಂತು ಆ ಚೆಲುವನ್ನ ಚಕ್ ಚಕ್ ಅಂತ ಫೋನಿನಲ್ಲಿ ಕ್ಲಿಕ್ಕಿಸಿದೆವು. ಅಕ್ಕಪಕ್ಕದ ವಸುಹಾತುಗಳನ್ನ ಗಮನಿಸುತ್ತಾ ಮತ್ತು ಅಲ್ಲಲ್ಲಿ ಬಿಡಿಸಿದ ಚಿತ್ರಗಳನ್ನ ನೋಡುತ್ತಾ ದೇವಸ್ಥಾನದ ಪ್ರವೇಶದ್ವಾರಕ್ಕೆ ಬಂದೇ ಬಿಟ್ಟಿದ್ದೆವು. ಉಲ್ಲಾಸ ಮತ್ತು ಉತ್ಸಾಹ ಎರಡೂ ಇಮ್ಮಡಿಗೊಂಡಿದ್ದವು, ತಸ್ವೀರ್ ಗಳಲ್ಲಿಯೇ ನೋಡುತ್ತಿದ್ದ ದೇವಸ್ಥಾನ ಇಂದು ನಮ್ಮೆದುರು ಅಕ್ಷರಶಃ ನಿಂತು ನಮ್ಮನ್ನ ಸ್ವಾಗತ್ತಿಸುತ್ತಿದೆ, ದೇವಸ್ಥಾನದ ಅಂಗಳದಲ್ಲಿ ಇಂಚಿಂಚು ಬಿಡದೆ ಸುತ್ತಾಡಲೇಬೇಕು, ಸುಮಾರು ಎರಡು ಮೂರು ತಾಸಿನ ಸಮಯ ಬೇಕೇ ಬೇಕು,"ಅಲ್ಲಿ ತನಕ ನಾಷ್ಟಾ? ಮತ್ ಹೊರಗ್ ಹೋಗಿ ನಾಷ್ಟಾ ಮಾಡಿ ಮತ್ ಒಳಗ ಹೋಗೋದು ಭಾಳ್ ತ್ರಾಸ್ ಆಗ್ತದ, ಮೊದ್ಲ ಹೊಟ್ಟೆ ಪೂಜೆ" ಎಂದು ನಾ ತಗಾದೆ ತೆಗೆದದ್ದಕ್ಕೆ ಯಾವುದೇ ವಾದವಿಲ್ಲದೆ ಸಿದ್ಲಿಂಗ್ ಸಮ್ಮತಿಸಿದ. ದೇವಸ್ಥಾನದ ಹೊರಗೆ ಉಪಹಾರ ಮುಗಿಸಿದ್ದಾಯ್ತು,ಹೊಟ್ಟೆ ತಂಪಾಯಿತು, ಇದೀಗ ಮನಸ್ಸು ಮತ್ತು ಆತ್ಮವನ್ನ ತಣಿಸಬೇಕೆಂದು ನಿಶ್ಚಯವಾಯ್ತು.

ಕ್ರಿ.ಶ 1010 ರಲ್ಲಿ ಅರುಲ್ಮೊಳಿ ವರ್ಮನ್ ಅಲಿಯಾಸ್ ಮೊದಲನೇ ರಾಜರಾಜನ್ ನಿಂದ ನಿರ್ಮಿತಗೊಂಡ ಒಂದು ಸಾವಿರ ವರ್ಷಗಳ ಇತಿಹಾಸಹೊಂದಿದ "ಪೇರಿಯ ಕೋವಿಲ್",ದೊಡ್ಡ ದೇವಸ್ಥಾನ,ಬೃಹದೀಶ್ವರ. ದ್ರಾವಿಡ ವಾಸ್ತುಶಿಲ್ಪ,ಅದರಲ್ಲೂ ಚೋಳವಾಸ್ತುಶಿಲ್ಪವನ್ನ ಬಿತ್ತರಿಸುವ ಈ ದೇವಾಲಯ ಇನ್ನೂ ಬಲಿಷ್ಠವಾಗಿಯೇ ನಿಂತಿದೆ.ಸುಮಾರು 44 ಎಕ್ಕರೆಯಷ್ಟು ಜಾಗದಲ್ಲಿ ಹಬ್ಬಿದ ದೇವಸ್ಥಾನವಿದು,ಸುತ್ತಲೂ ಬೃಹತ್ ಗೋಡೆ,ಅದರ ಮೇಲೆ ಸಾಲು ಸಾಲಾಗಿ ಇರುವ ನಂದಿ ವಿಗ್ರಹ, ಒಟ್ಟು ನೂರೆಂಟು ಇದ್ದವು ಅನ್ಸುತ್ತೆ.ಮತ್ತೆ ಆಕ್ರಮಣವಾದಾಗ ರಕ್ಷಣೆಗೆಂದು ಕೊರೆದ ರಂಧ್ರಗಳು. ಗೋಡೆಯ ಹೊರಗೆ 20 ಅಡಿ ಆಳದಷ್ಟು ಸುತ್ತಲೂ ಕೊರೆದ ರಕ್ಷಣಾ ಗುಂಡಿ, ಮೊದಲು ಅಲ್ಲಿ ನೀರು ಹರಿಯುತ್ತಿತ್ತು ಅನ್ಸುತ್ತೆ. ರಾಜರುಗಳು ತಮ್ಮ ಕೋಟೆಗೆ ಒದಗಿಸಿದ ರಕ್ಷಣಾ ವ್ಯವಸ್ಥೆ ಈ ದೇವಸ್ಥಾನಕ್ಕಿಂತು ಅನ್ನುವುದು ಕಂಡುಬರುತ್ತೆ, ಯಾಕಂದರೆ ಈ ದೇವಸ್ಥಾನದ ಮೇಲೂ ಆದ ಮರುಳುಗಾಡಿನ ಅವಿವೇಕಿಗಳ ಆಕ್ರಮಣ ಮತ್ತು ಲೂಟಿ. ಆದ್ದರಿಂದ ದೇವಸ್ಥಾನವನ್ನ ಅನೇಕ ಬಾರಿ ಜೀರ್ಣೋದ್ಧಾರಗೊಳಿಸಿದ ಇತಿಹಾಸ ಕಾಣಸಿಗುತ್ತದೆ.

ಮುಖ್ಯ ದೇವಸ್ಥಾನ ಪೂರ್ವಾಭಿಮುಖ, ಮೊದಲ ಒಂದು ದೊಡ್ಡ ಪ್ರವೇಶಗೋಪುರ, ಅದಾದಮೇಲೆ ಇನ್ನೊಂದು ಚಿಕ್ಕ ಪ್ರವೇಶದ್ವಾರ,ತದನಂತರ ಮತ್ತೊಂದು ದೊಡ್ಡ ಪ್ರವೇಶ್ವದಾರ ಮತ್ತು ಅದು ಮೂಲ ದ್ವಾರವೂ ಹೌದು, ಇದು ವಿಮಾನ ಶಿಖರಕ್ಕಿಂತ ಕಮ್ಮಿ ಎತ್ತರದ್ದು.ಸುಮಾರು 30 ಮೀಟರ್ ಎತ್ತರ. ದ್ರಾವಿಡ ಶೈಲಿಯ ದೇವಸ್ಥಾನಗಳ ಪ್ರಾಮುಖ್ಯತೆ ಏನೆಂದರೆ ಅವುಗಳ ಗೋಪುರ ಶಿಖರಗಳಿಗಿಂತ ಎತ್ತರವಾಗಿರ್ತಾವೇ, ಆದರೆ ಇದನ್ನ "ರಿವರ್ಸ್ ದ್ರಾವಿಡ ಆರ್ಕಿಟೆಕ್ಟುರ್" ಅಂತ ಕರೆಯಲಾಗುತ್ತೆ, ಕಾರಣ ಇದರ ಶಿಖರ ಗೋಪುರಗಳಿಗಿಂತ ದೊಡ್ಡದು. ಇದರ ಮೊದಲ ದ್ವಾರವನ್ನ ಕೆರಳಾಂತಕರ ಪವಿತ್ರದ್ವಾರವೆಂದಲು ಕರಿಯುತ್ತಾರೆ,ಅದಾದ ನಂತರದ ಬೃಹತ್ ಪ್ರವೇಶದ್ವಾರವನ್ನ ರಾಜರಾಜನ್ ದ್ವಾರವೆಂದಲೂ ಕರೆಯುತ್ತಾರೆ, ಇದರಲ್ಲಿ ಪೂರ್ವಾಭಿಮುಖವಾಗಿ ಹಲವಾರು ಕೆತ್ತನೆಗಳು ಮತ್ತು ಬೃಹತ್ ದ್ವಾರಪಾಲಕರ ಕೆತ್ತನೆಗಳಿವೆ. ಸುತ್ತಲಿನ ಗೋಡೆಯಲ್ಲಿ ತಮಿಳಿನಲ್ಲಿ ಕೆತ್ತಿದ ಶಾಸನಗಳಿವೆ, ದೇವಸ್ಥಾನದ ನಿರ್ಮಾಣದ ಸಂಪೂರ್ಣ ಮಾಹಿತಿಯನ್ನ ಒದಗಿಸುತ್ತವೆ. ಪ್ರವೇಶದ್ವಾರದ ಎಡ ಮತ್ತು ಬಲಕ್ಕೆ ಗಣೇಶ ಮತ್ತು ಕಾರ್ತಿಕೇಯರ ಮೂರ್ತಿಗಳು ಸ್ವಾಗತಿಸುತ್ತವೆ. ಅಲ್ಲಿಂದಲೇ ದೇವಸ್ಥಾನದ ದೊಡ್ಡ ಪ್ರಾಂಗಣ ತೆರೆದುಕೊಳ್ಳುತ್ತದೆ, ಸಂಪೂರ್ಣ ಗ್ರಾನೈಟ್ ಕಲ್ಲುಗಳ ಬಳಕೆ, ಕಾವೇರಿ ನದಿಯ ಪ್ರದೇಶವಾಗಿದ್ದರಿಂದ ಇಲ್ಲಿ ಎಲ್ಲಿಯೂ ಕಲ್ಲುಗಳು ಸಿಕ್ಕುವುದಿಲ್ಲ, ಆದ್ದರಿಂದ ಇವುಗಳನ್ನ ಸುಮಾರು 70 ಕಿಲೋಮೀಟರ್ ದೂರದಿಂದ ಕಲ್ಲುಗಳನ್ನ ತರಿಸಿ ಈ ಬೃಹತ್ ದೇವಾಲಯವನ್ನ 7 ವರ್ಷಗಳ ಸಮಯದಲ್ಲಿ ನಿರ್ಮಿಸಲಾಗಿದೆ ಅನ್ನುವುದು ಇತಿಹಾಸ ಹೇಳುತ್ತದೆ.

ಪ್ರಾಂಗಣದಲ್ಲಿ ದೇವಸ್ಥಾನದ ಎದುರಿಗೆಯೇ ಬೃಹತ್ ಏಕಶಿಲಾ ನಂದಿ, ಬೃಹದೀಶ್ವರನಿಗೆ ತಕ್ಕನಾದ 6 ಮೀಟರ್ ಎತ್ತರದ ಮತ್ತು 25 ಸಾವಿರ ಕೆಜಿಯ ಬೃಹದ್  ನಂದಿ ಶಿವನೆದುರು ಬಿಳಿಯ ವಸ್ತ್ರವೊಂದು ಕತ್ತಿಗೆ ಸುತ್ತಿಕೊಂಡು ಮಂಡಿಯೂರಿ ಕುಳಿತ್ತಿದ್ದಾನೆ, ಅವನಿಗೂ ಒಂದು ಸುಂದರವಾದ ಮಂಟಪ, ಕಂಭಗಳಲ್ಲಿ ಕೆತ್ತನೆಗಳು, ಮಂಟಪದ ಛಾವಣಿಯಲ್ಲಿ ಸುಂದರವಾದ ಚಿತ್ರಗಳು, ತಾಂಜಾವೂರು ಚಿತ್ರಕಲೆಗೂ ಹೆಸರುವಾಸಿಯಾಗಿದೆ ಅನ್ನುವದನ್ನ ಸಾರಿ ಸಾರಿ ಹೇಳುತ್ತವೆ ಇವುಗಳು. ಈ ನಂದಿಗೆ ಹದಿನಾಲ್ಕು ದಿನಕ್ಕೊಮ್ಮೆ 22 ಪ್ರಕಾರದ ಅಭಿಷೇಕಗಳು ನೆರವೇರುತ್ತವಂತೆ. ಸ್ವಲ್ಪ ಹೆಜ್ಜೆಗಳ ನಂತರ ಮುಖ್ಯ ದೇವಸ್ಥಾನಕ್ಕೆ ಪ್ರವೇಶ, ಪ್ರವೇಶ್ವದಾರದ ಎರಡು ಬದಿ ಬೃಹತ್ ಶಿವನ ಮೂರ್ತಿಗಳು. ಒಂದು ದೊಡ್ಡ ಆನೆಯನ್ನ ಹಾವು ನುಂಗತ್ತಲಿದ್ದು ಮತ್ತು ಅದನ್ನ ಶಿವ ತನ್ನ ಕಾಲಿನಿಂದ ಒತ್ತಿ ಹಿಡಿದಿರುವ ಕೆತ್ತನೆ. ಅಲ್ಲಿ ಆನೆಯೇ ದೊಡ್ಡದು,ಅದನ್ನ ನುಂಗುವ ಸರ್ಪ ಇನ್ನಷ್ಟು ದೊಡ್ಡದು,ಅದನ್ನ ಮೆಟ್ಟಿ ನಿಂತ ಆ ಶಿವ ಇನ್ನೆಷ್ಟು ದೊಡ್ಡವನು ಅನ್ನುವ ಕಲ್ಪನೆ ಅಲ್ಲಿನ ದೇವಸ್ಥಾನ ಪ್ರವೇಶಿಸುವರಿಗೆ ಬರಬೇಕು ಅನ್ನುವುದು ಅಲ್ಲಿನ ರಾಜನ ಕಲ್ಪನೆಯಾಗಿದ್ದು ಸ್ಪಷ್ಟತೆ ಕೊಡುತ್ತದೆ. ದೇವಸ್ಥಾನವು ಒಂದು ಮಹಾ ಮಂಟಪ ಮತ್ತು ಮುಖ ಮಂಟಪಗಳನ್ನ ಒಳಗೊಂಡು ತದನಂತರ ಅರ್ಧಮಂಟಪ,ಅಲ್ಲಿಂದ ಗರ್ಭಗೃಹಕ್ಕೆ ತೆರೆದುಕೊಳ್ಳುತ್ತದೆ. ಮಹಾ ಮಂಟಪ ಒಟ್ಟು ಹನ್ನೆರಡು ದೊಡ್ಡ ಕಂಬಗಳನ್ನ ಒಳಗೊಂಡಿದೆ, ಅಕ್ಕಪಕ್ಕದಲ್ಲಿ ದ್ವಾರಪಾಲಕರನ್ನ ಹೊಂದಿದ್ದು ಮುಖ ಮಂಟಪಕ್ಕೆ ತೆರೆದುಕೊಳ್ಳುತ್ತದೆ. ಮುಖ ಮಂಟಪವು ದ್ವಾರಪಾಲಕರನ್ನ ಹೊಂದಿದ್ದು, ಒಳಗಡೆ ಎರಡು ಬದಿಯಲ್ಲಿ ಅಗ್ನಿ,ಇಂದ್ರ,ಕುಬೇರರನ್ನ ಕಾಣಬಹುದು. ಗರ್ಭಗೃಹದ ಮಧ್ಯದಲ್ಲಿ ಬೃಹತ್ 12 ಅಡಿಯ ಏಕಶಿಲಾ ಶಿವಲಿಂಗ, ಗರ್ಭಗೃಹದ ಒಳಗೋಡೆಗಳಲ್ಲಿಯೂ ಚಿತ್ರಕಲೆ ಕಾಣಬಹುದು. ಶಿವಲಿಂಗದ ಮೇಲಿನಿಂದ ಗೋಪುರದ ಉದ್ದಕ್ಕೂ ತೆರೆದುಕೊಳ್ಳುವಂತ್ತೆ ತ್ರಿಕೋನ ಆಕರಾದ 217 ಅಡಿ ಎತ್ತರದ 13 ಅಂತಸ್ತಿನ ಶಿಖರ. ಶಿಖರದ ತುತ್ತತುದಿಯಲ್ಲಿ 80 ಸಾವಿರ ಕೆಜಿಯ ಕೆತ್ತನೆಗಳನ್ನೊಳಗೊಂಡ ಏಕಶಿಲೆಯ ದೊಡ್ಡ ಕಲ್ಲು, ಅದನ್ನ ಸುಮಾರು 6 ಕಿಲೋಮಿತರ ಉದ್ದದ ಏರು ಪಥ ನಿರ್ಮಿಸಿ ತಂದು ಕುರಿಸಲಾಗಿದೆ ಅನ್ನುವದನ್ನ ಹೇಳುತ್ತದೆ ಇತಿಹಾಸ. ಶಿಖರದ ಸುತ್ತಲೂ ನಾಟ್ಯಶಾಸ್ತ್ರದ 108 ಭಂಗಿಗಳಲ್ಲಿನ ಸುಮಾರು ಭಂಗಿಗಳನ್ನ ಕೆತ್ತಲಾಗಿದೆ. ದೊಡ್ಡದಾದ ಬಲಿಷ್ಠ ಪೀಠಗಳ ಮೇಲೆ ವಿಮಾನ ಶಿಖರ ನಿಂತಿದೆ, ನಾಲ್ಕು ದಿಕ್ಕಿನಿಂದ ನೋಡಿದರು ಒಂದೇ ತೆರನಾಗಿರುವ ಕೆತ್ತನೆಗಳು, ಅವುಗಳ ಸೂಕ್ಷ್ಮತೆ ಮತ್ತು ಶಿಲ್ಪಿಗಳ ಚಾಕಚಕ್ಯತೆಗೆ ನಾವೆಲ್ಲರೂ ತಲೆಬಾಗಲೇಬೇಕು. ಇದು ತ್ರಿಕೂಟ ದೇವಾಲಯ, ಮುಖ್ಯದ್ವಾರದಿಂದ ಪ್ರವೇಶಗೊಂಡು, ಗರ್ಭಗೃಹದ ಎಡದಿಂದಲೋ ಅಥವಾ ಬಲದಿಂದದಲೋ ಹೊರಕ್ಕೆ ಪ್ರವೇಶ ಪಡೆಯಬಹುದು. ದೇವಸ್ಥಾನದ ಪೀಠದ ಸುತ್ತಲೆಲ್ಲಾ ಅಚ್ಚುಕಟ್ಟಾದ ಶಾಸನಗಳು, ಅವುಗಳನ್ನ ಸ್ಪರ್ಶಿಸಿದ ಅಚ್ಚಿನ ಅನುಭವ ಇನ್ನೂ ಸಹ ನನ್ನ ಕೈಯಲ್ಲಿ ಹಾಗೆಯೇ ಉಳಿದಿದೆ. ಅರ್ಥವಾಗದಿದ್ದರು ಇದು ದೇವಸ್ಥಾನದ ಇತಿಹಾಸವನ್ನೇ ಹೇಳುತ್ತದೆ ಅನ್ನುವುದು ಅರಿವಾಗಿತ್ತು.

ದೇವಸ್ಥಾನದ ಪ್ರಾಂಗಣದಲ್ಲಿ 16 ಮತ್ತು 17 ನೆ ಶತಮಾನದಲ್ಲಿ ನಿರ್ಮಾಣಗೊಂಡ ಹಲವು ದೇವಸ್ಥಾನಗಳಿವೆ.ಅದಕ್ಕಾಗಿಯೇ ಇದು ಕೇವಲ ಶೈವ ದೇವಲಾಯವಷ್ಟೇ ಅಲ್ಲದೆ,ಶಾಕ್ತ ಮತ್ತು ವೈಷ್ಣವ ದೇವಾಲಯವು ಹೌದು ಅನ್ನಲಿಕೆ ಅಲ್ಲಿನ ದೇವಸ್ಥಾನಗಳು ಮತ್ತು ಕೆತ್ತನೆಗಳು ಸಾಕ್ಷಿ. ಅವುಗಳಲ್ಲಿ ಮರಾಠರು ನಿರ್ಮಿಸಿದ ಪೂರ್ವಾಭಿಮುಖ ಗಣೇಶ ದೇವಸ್ಥಾನ,ಚೋಳ ನಿರ್ಮಿತ ದಕ್ಷಿಣಾಭಿಮುಖ ಚಂಡಿಕೇಶ್ವರ ದೇವಸ್ಥಾನ, ಸೇವಪ್ಪ ನಾಯಕರಿಂದ 17 ನೆ ಶತಮಾನದಲ್ಲಿ ನಿರ್ಮಿತಗೊಂಡ ಪೂರ್ವಾಭಿಮುಖ ಸುಬ್ರಹ್ಮಣ್ಯ ದೇವಸ್ಥಾನ ತುಂಬಾ ನವನವಿನವಾಗಿದೆ,ಮಹಾ ಮಂಟಪ,ಅರ್ಧಮಂಟಪ ಮತ್ತು ಗರ್ಭಗ್ರಹ ಹೊಂದಿದ್ದು,ಇಲ್ಲಿನ ಕೆತ್ತನೆಗಳು ತುಂಬಾ ಸುಂದರ ಮತ್ತು ಸೂಕ್ಷ್ಮವಾಗಿವೆ. ಹೊಸತನವನ್ನ ಸಾರಿಹೇಳುತ್ತದೆ ಈ ದೇವಸ್ಥಾನ. ದೇವಸ್ಥಾನದ ಆಗ್ನೇಯ ದಿಕ್ಕಿನಲ್ಲಿ ಪಾರ್ವತಿಯ ದೇವಸ್ಥಾನವು ಪಾಂಡ್ಯರಿಂದ ನಿರ್ಮಿತಗೊಂಡಿದೆ, ಇದು ಸಹ ಮಹಾ ಮಂಟಪ,ಮುಖ ಮಂಟಪ,ಅರ್ಧ ಮಂಟಪ ಮತ್ತು ಗರ್ಭಗ್ರಹ ಒಳಗೊಂಡಿದ್ದು, ಮಹಾ ಮಂಟಪದಲ್ಲಿ ವೀರಭದ್ರ,ಗಣೇಶ,ಕಾರ್ತಿಕೇಯ ಮತ್ತು ಕಿನ್ನರರ ಮೂರ್ತಿಗಳನ್ನ ಕಾಣಬಹುದು. ಇದರ ಪಕ್ಕವೇ ನಟರಾಜನ್ ದೇವಸ್ಥಾನವಿದೆ, ಇಲ್ಲಿ ಬ್ರಹತ್ ನಟರಾಜನ ಮೂರ್ತಿಯನ್ನ ಕಾಣಬಹುದಾಗಿದೆ.

ದೇವಸ್ಥಾನದ ಆವರಣದಲ್ಲಿ ಕಪ್ಪು ವಸ್ತ್ರಧಾರಿ ಅಯ್ಯಪ್ಪಸ್ವಾಮಿಯ ಭಕ್ತರ ದಂಡು ಒಂದೆಡೆಯಾದರೆ, ಕೆಂಪು ಸೀರೆ ಧರಿಸಿದ ಓಂ ಶಕ್ತಿಯ ದಂಡು ಇನ್ನೊಂದೆಡೆ. ಇಬ್ಬರ ಮಧ್ಯೆ ಅಲ್ಲಲ್ಲಿ ಕಂಡುಬರುವ ಪ್ರವಾಸಿಗರು,ಭಕ್ತರು. ಸಂಪ್ರದಾಯಕವಾಗಿತ್ತು ವಾತಾವರಣ.

450 ಮಿಟರ್ ಉದ್ದದ ಪರಿಕ್ರಮದಲ್ಲಿ, ಚಿತ್ರಕಲೆಗಳನ್ನ ಒಳಗೊಂಡ ಕಂಬಗಳ ಉದ್ದನೆಯ ಮಂಟಪ ಇಡೀ ದೇವಸ್ಥಾನ ಸುತ್ತುವರೆದಿದೆ, ಅದರೊಳಗೆ ಚಿತ್ರಕಲೆ ಮತ್ತು ಸಾಲುಸಾಲಾಗಿ ಶಿವಲಿಂಗಗಳು ಕಾಣಬಹುದು, ಎಲ್ಲವೂ ಪೂಜೆಗೆ ಒಳಪಡುವಂತಹವೆ. ಈ ಮಂಟಪದ ಒಂದೊಂದು ಕಂಬದ ಪಕ್ಕದಲ್ಲಿ ನಿಂತು ದೇವಸ್ಥಾನದ ಸೌಂದರ್ಯ ನೋಡುವುದು ಅಕ್ಷರಶಃ ಸ್ವರ್ಗಾನುಭೂತಿ ಅನ್ನಬಹುದು. ದೇವಸ್ಥಾನದ ಸುತ್ತಲಿನ ನೋಟಗಳು ಬೇರೆ ಬೇರೆ ದೃಷ್ಟಿಕೋನಕ್ಕೆ ಬೇರೆ ಬೇರೆ ತರಹದ ನೋಟ ಕೊಡುತ್ತಲೇ ಹೋಗುತ್ತದೆ, ಅಲ್ಲಲ್ಲಿ ಕುಳಿತು ದೇವಸ್ಥಾನದ ಮನೋಜ್ಞ ಸೌಂದರ್ಯವನ್ನ ಫೋನಿನಲ್ಲಿ ಸೆರೆಹಿಡಿಯುವುದಾಯ್ತು. ಆಗತಾನೆ ತೇಲಿ ಬಂದ ಸೂರ್ಯನ ಚೊಚ್ಚಲ ಕಿರಣಗಳಿಗೆ ಗ್ರಾನೈಟ್ ಕಲ್ಲುಗಳು ಮತ್ತಷ್ಟು ಬಣ್ಣ ಬೀರಲು ಶುರು ಮಾಡಿದ್ದವು, ಹೊಳೆಯುವಂತಹ ಸೊಬಗು ಕಾಣಸಿಗುತ್ತಿತ್ತು.

ಮಂಟಪದಲ್ಲಿ ಒಂದು ಹೊತ್ತು ಕುಳಿತಿರುವಲ್ಲಿಯೇ ಸಿದ್ಲಿಂಗ್ ನಿದ್ದೆಗೆ ಜಾರಿದ್ದ, ಅಷ್ಟೊಂದು ಪ್ರಶಾಂತತೆ ಮತ್ತು ತಂಪನ್ನ ಕಾಯ್ದುಕೊಂಡಿದ್ದ ದೇವಸ್ಥಾನದ ವಾತಾವರಣವದು. ಅಲ್ಲಿಯೇ ಕುಳಿತು ದೇವಸ್ಥಾನವನ್ನ ಎಡೆಬಿಡದೆ ನೋಡುತ್ತಾ ಹಲವಾರು ಖಯಾಲಿಗಳಿಗೆ ಮನಸ್ಸನ ಸಾಕ್ಷಿಗೊಳಿಸಿ, ಆತ್ಮ ಸಾಕೆನ್ನುವಷ್ಟು ಅನುಭೂತಿಗಳನ್ನ ಹೀರಿಕೊಂಡೆ. ದೇವಸ್ಥಾನದ ಶಿಖರ ನೀಲ ಗಗನದಲ್ಲಿ ವೈಭವ ಮೆರೆಯುತ್ತಿದ್ದ ವೈಭವಗಳಿಗೆ ಆ ಸಮಯ ಸಾಕ್ಷಿಯಾಗಿತ್ತು.

ಅವನು ದೇವರು, ಅವನಿಗೆ ಕೈಲಾಸದಷ್ಟಲ್ಲವಾದರು, ಇಂತಹ ವೈಭವಪೂರಿತ ದೇವಸ್ಥಾನವನ್ನಾದರು ಕಟ್ಟಬೇಕು ಅನ್ನುವ ಹಲವು ಮನುಷ್ಯರ ಕನಸುಗಳು, ಅದನ್ನ ಸಾಕಾರಗೊಳಿಸಿಕೊಂಡಿದ್ದ ರಾಜರಾಜ ಚೋಳನೆ ಭಾಗ್ಯಶಾಲಿ ಮತ್ತು ಧನ್ಯ. ಅದೆಷ್ಟು ವೈಭವ ಅದೆಷ್ಟು ಸೌಂದರ್ಯ,ಹೊಗಳಿದರು ಪೂರ್ಣಗೊಳ್ಳದ ವೈಭವವದು. ದೇವಸ್ಥಾನದ ಇಂಚಿಂಚು ಭಾಗವನ್ನ ಸ್ಪರ್ಶಿಸಿ ಅನುಭೂತಿ ಪಡೆಯಬೇಕು ಅನ್ನುವ ಹಂಬಲ,ಆ ಮಹಾರಾಜರು, ಮಹಾನ್ ಶಿಲ್ಪಿಗಳು ಇದನ್ನೆಲ್ಲಾ ಸ್ಪರ್ಶಿಸಿದ್ದಾರೆ ಅನ್ನುವ ಕಲ್ಪನೆಗಳೇ ರೋಮಾಂಚನಕಾರಿ.ಇಂತಹ ಒಂದು ಸೌಂದರ್ಯಕ್ಕೆ ಈ ದಿನ ಸಾಕ್ಷಿಯಾಗಿದೆ. ಕನಸು ನನಸಾದ ಘಳಿಗೆ. ಹೃದಯ ಆಹ್ಲಾದತೆಯಿಂದ ಶಾಂತವಾಗಿತ್ತು.ಚಿತ್ತ ಹೊಸ ಅನುಭೂತಿಯ ಚಿಂತೆನೆಗಳಿಗೆ ಅಣಿಗೊಂಡಿತ್ತು.ಎಲ್ಲರೂ ಒಂದೊಮ್ಮೆ ಈ ದಕ್ಷಿಣ ಮೇರುವಿನಲ್ಲಿ ವಿಹರಿಸಿ ಆನಂದ ಲಹರಿಯ ಅನುಭವ ಪಡೆಯಲೇಬೇಕು.

ಈ ವೈಭವವನ್ನ ಪುಸ್ತಕಗಟ್ಟಲೇ ಬರೆದರು ಸಾಲದು, ಇನ್ನು ಪುಟಗಳಷ್ಟು ಬರೆದರೆ ಅಸಮಂಜಸವೆನ್ನಿಸುತ್ತೆ,ಅಷ್ಟೊಂದು ವೈಭವೋಪುರಿತ ದೇವಸ್ಥಾನ,ಅಂತಾರಾಷ್ಟ್ರೀಯ ಸ್ಮಾರಕಗಳಲ್ಲಿ ಒಂದು. ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ಇದ್ದ ತಾಂಜಾವೂರಿನ ಮ್ಯೂಸಿಯಂ,ಲೈಬ್ರರಿ ಮತ್ತು ಅರಮನೆ ಆವರಣವನ್ನ ತಲುಪಿ, ಅಲ್ಲಿನ ವಿಶೇಷಗಳನ್ನ ಅವಲೋಕಿಸಿದ್ದಾಯ್ತು.ಮೈಸೂರಿನ ಅರಮೇಯಷ್ಟಂತ್ತು ಇಲ್ಲವೇ ಇಲ್ಲ, ಅರಮನೆಯ ಅನುಭವವೇ ಕೊಡಲಿಲ್ಲ,ಮಾಡ್ರನ್ ಟಚ್ ಪಡೆದುಕೊಂಡು ಇತಿಹಾಸಿಕ ಕಲೆ ಕಳೆದುಕೊಂಡಿದೆ. ಅರಮನೆಯ ಮೇಲ್ಬಾಗದ ಖಾಲಿ ಜಾಗವೂ ತಾಂಜಾವೂರಿನ ಎಲೆಮರೆಕಾಯಿಯಂತಿರುವ  ಸೆಲ್ವಂ ಸೆಲ್ವಿಯ ಪ್ರೀತಿಯ ತಂಗುದಾನವಾಗಿದೆ,ಅಲ್ಲಲ್ಲಿ ಕಂಡ "ತಮಿಳ್ ಕಾದಲ್ ಮಕ್ಕಳ್" ಇದಕ್ಕೆ ಸಾಕ್ಷಿ. ತಮಿಳುನಾಡಿನ ಹಲವಾರು ಭಾಗಗಳಿಂದ ದೊರೆತ ಅನೇಕ ಮೂರ್ತಿಗಳು ಮತ್ತು ಇತಿಹಾಸಿಕ ಸಾಮಾನುಗಳನ್ನ ಕಾಣಬಹುದು. ಲೈಬ್ರರಿಯಲ್ಲಿ ಸುಮಾರು 60 ಸಾವಿರ ಸಂಸ್ಕೃತ ಲೇಖನಗಳು ಮತ್ತು 70 ಸಾವಿರ ತಮಿಳು ಲೇಖನಗಳಿರುವ ತಾಳೆಗರಿಗಳು ಸಂಗ್ರಹಿಸಿದ್ದಾರೆ.ಇದನ್ನೆಲ್ಲ ಕಂಡು"ದಿ ವರ್ತ್ ಪ್ಲೇಸ್ ಟು ಸ್ಪೆನ್ಡ್ ಟೈಮ್" ಅಂದ ಸಿದ್ದಲಿಂಗ. ಅಲ್ಲಿನ  ಆರ್ಟ್ ಗ್ಯಾಲರಿಯಲ್ಲಿ 30 ನಿಮಿಷ ಇತಿಹಾಸ ಅಹೇಳುವ ಥಿಯೇಟರ್ ವ್ಯವಸ್ಥೆ ಇತ್ತು, ತಣ್ಣನೆಯ ಎಸಿಯೂ ಇತ್ತು, ಸಿದ್ದಲಿಂಗ ಎಂಗ್ರಾ ವಂಗ್ರಾ ಅಂತಿದ್ದ ತಮಿಳು ಭಾಷೆಯ ಇತಿಹಾಸ ಕೇಳುತ್ತಿದ್ದ.ಇತ್ತ ಅರ್ಥವಾಗದ ಭಾಷೆ ಕೇಳಬೇಕೋ ಅಥವಾ ನೋಡಬೇಕೋ ಅಥವಾ ಕೆಳಗಿನ ಇಂಗ್ಲಿಷ್ ಸಬ್ ಟೈಟಲ್ ಒದಬೇಕೋ ಅನ್ನುವುದು ಅರ್ಥವಾಗುವದರಲ್ಲಿ  ನಾನು ನಿದ್ದೆಗೆ ಜಾರಿ ಭರ್ಜರಿ 20 ನಿಮಿಷದ ನಿದ್ದೆ ಸವೆದೆ. ಹೊರಗೆ ಬಂದಾಗ "ಹಿಸ್ಟರಿ ಮಸ್ತ್ ಇತ್ತು" ಅಂದ, "ನನ್ನ ನಿದ್ದೆಯೂ ಮಸ್ತ್ ಇತ್ತು" ಅಂದೆ ಹಲ್ಲು ಕಿರಿದು, ಮುಖ ಸಿಂಡರಿಸಿ "ಮುಚ್ಕೊಂಡ್ ನಡಿ" ಅಂದ, ಅದೇನು ಮುಚ್ಕೊಂಡು ನಡಿಬೇಕು ಎಂದು ಹೇಳದಿದ್ದಕ್ಕೆ ಮೂಗು ಮತ್ತು ಬಾಯಿಯ ಕೆಳಗೆ ಜಾರಿದಿದ್ದ ಮಾಸ್ಕನ್ನ ಮೇಲೇರಿಸಿ,ಎಲ್ಲವೂ ಮುಚ್ಚಿಕೊಂಡು ಮುಂದೆ ನಡೆದೇ.
ಮಧ್ಯಾನ್ಹದ ಸಮಯ,ಊಟದ ಸಮಯ, ಭರ್ಜರಿ ಊಟ ಬೇಕಿತ್ತು, ಅಂತಹದೇ ಹೊಟೇಲೊಂದು ಸಿಕ್ಕಿತು. ಶುದ್ಧ ಸಸ್ಯಾಹಾರಿ ಹೋಟೆಲ್ಲು. ಮಿಲ್ಸ್ ಅಂದ್ರೆ ರೈಸ್,ಅದರ ಜೊತೆ ಹತ್ತು ವಿಧವಾದ ಭಕ್ಷ್ಯಗಳು, ತಾಂಜಾವೂರು ಸಂಬಾರಿಗೂ ಫೇಮಸ್ಸು ಅನ್ನುವುದು ಎರೆಡೆರಡು ಬಾರಿ ರೈಸ್ ತರಿಸಿದ್ದಕ್ಕೆ ಗೊತ್ತಾಯ್ತು. ನಿಲ ನಕ್ಷೆಯ ಪ್ರಕಾರ ಅಲ್ಲಿಂದ ಮಧುರೈ ಗೆ ಹೊರಡಬೇಕಿತ್ತು. ಶತಮಾನದ ಹಳೆಯದಾದ ಬಸ್ಸುಗಳು, ಅದರಲ್ಲಿ ಅದಕ್ಕಿಂತ ಹಳೆಯದಾದ ತಮಿಳು ಹಾಡುಗಳು. ತಮಿಳು ಸಾಂಗ್ ಇಲ್ಲದೆ ಅಲ್ಲಿನ ಬಸ್ಸುಗಳು ಒಡಾಡಿದ್ರೆ ಇಡೀ ತಮಿಳುನಾಡಿಗೆ ಅಪಮಾನವೇನೋ ಅನ್ನುವಂತ್ತೆ ಪ್ರತಿ ಬಸ್ಸಿನಲ್ಲೂ ಹಾಡಿನ ವ್ಯವಸ್ಥೆ. ದಕ್ಷಿಣದ ಸಿನಿಮಾ ಸಂಗೀತ, ನಮ್ಮಲ್ಲೂ ಅವರಲ್ಲೂ ಅವರೇ ಸಿಂಗರ್ ಗಳು, ಲಿರಿಕ್ಸ್ ಅರ್ಥವಾಗದೆ ಇದ್ರು ಮ್ಯೂಸಿಕ್ ಅರ್ಥವಾಗುತ್ತಿತ್ತು. ಅರ್ಧ ಸಾಂಗಿನಲ್ಲೇ ಇಬ್ಬರೂ ನಿದ್ದೆಗೆ ಜಾರಿದ್ವಿ......

                                                          ..........ಬಸವ.

Comments

  1. ಅಲ್ಲಿಗೆ ಹೋಗಿ ನೋಡಿದರು ಇಷ್ಟೊಂದು ತಿಳಿತಿತೋಲ್ಲ ಗೊತ್ತಿಲ್ಲ ಆದ್ರೆ ಬರೆದದ್ದು ಇತಿತಿಹಾಸಕಾರನೊ ಅಥವಾ ಗೆಳೆಯ ಅನ್ನೋದು ಅರ್ಥವಾಗುತ್ತಿಲ್ಲ...

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ