Posts

ನೆನಪುಗಳದ್ದು ಸ್ವೇಚ್ಛಾಚಾರ.

ನೆನಪುಗಳೇಕೆ ಹೀಗೆ? ಬೇಕೆಂದರೂ ಬಾರದೆ ಬೇಡವೆಂದರೂ ಬಂದು ಪೀಡಿಸುತ ಅದೆಷ್ಟೋ ಬಾರಿ ಪ್ರಶ್ನಿಸಿದರೂ ಉತ್ತರ ಕೊಡದೆ  ತಮ್ಮದೇ ಹಳೆ ಚಾಳಿ ಮುಂದುವರೆಸುವವು. ಹಗಲಿಗೋ ಇರುಳ ಚೆಲ್ಲಿ ಇರುಳಲ್ಲಿ ಹಗಲ ತೇಲಿಸಿ ತೆಂವಿಸಿಹವು ಕಣ್ಣುಗಳ, ತಳಮಳಸಿ ಮನಸ್ಸು. ಮರೆತೆನೆಂದಾಗಲೇ ಅಸ್ತಿತ್ವದ ಮೆರವಣಿಗೆಯ ಹೂಡುವವು ತಾವುಗಳೇ ಇಲ್ಲಿ ರಾಯಭಾರಿಯೆಂದು ಬೀಗುವವು. ನೆನಪುಗಳವು ಸಹಜ ಅಸಹಜಗಳ ಚರ್ಚಿಸುವವು ನಟಿಸುವವು ತಮಗೇ ಬೇಕಾದ ರಂಗಮಂಟಪ ನಿರ್ಮಿಸಿ ನಾನೊಲ್ಲದ ಕೇಳದೆ, ತಾನೊಲಿದುದೇ ತೆರೆಗೆ ಎನ್ನುವವು ತಾವಾಗುವವು ತಮಗೇ ಬೇಕಾದ ತೆರತೆರನಾಗಿ ಆವರಿಸುವವು ಹಗಲಿರುಳ ಕನಸಿಗೆ ತಾವೇ ಅಧಿಪತಿಯೆಂದು. ನೆನಪುಗಳದ್ದು ಎಂತಹ ಸ್ವೇಚ್ಛಾಚಾರ? ಹಿತವನ್ನೇ ಆಲಿಂಗಿಸುವೆನೆಂಬುದಕೆ ಹಿಯಾಳಿಸಿ ಹ್ಯೆಯವಾಗಿ ಹೆಣಗುವಾಗ ಒಂದೊಮ್ಮೆ ಹಾಯೆನಿಸಿಹೋಗುವವು ಕ್ಷಣಕ್ಕಾದರೂ ತಾವು ಹೀಗೂ ಎಂಬುದ ತೋರಲು ತಿಳಿಯಾಗಿ ಹಿತ ತೇಲಿಸುವವು ನೆನಪುಗಳವು ಬಿಗುತ್ತಿರುವವು ಸ್ವೇಚ್ಛಾಚಾರದ ಪರಮಾವಧಿಯಲ್ಲಿ.                                                .......ಬಸವ.

ಸೂರಿನಾಚೆಗೊಂದು ಸೂರು.

ಇಲ್ಲಿಯೇ ಹೀಗೆಯೇ ಹುಟ್ಟಲು  ಅಂದು ಗಸ್ತು ಹಿಡಿದು ಕೂತದ್ದು ಇಂದು ಮರೆತೆವು. ಮರೆತೆವು, ಎಂದಿಗೂ ಮತ್ತೆ ಏನನ್ನೂ ಮರುಕಳಿಸದಂತ್ತೆ ಅವನಲ್ಲಿ ತಟಸ್ತವಾಗುವುದ ಮರೆತೆವು. ಬದುಕಿಗೊಂದೇ ಏಕಮಾತ್ರ ಬಿಂದು ಇರುವುದ ಅರಿತಿದ್ದರೂ ಇಲ್ಲಿ ಮುಕ್ತಿಯೊಂದರ ಬಿಂದು ಬಿಟ್ಟು ಇನ್ನೆಲ್ಲವೂ ಕೂಡಿಸಲು ಹೊರೆಟವಲ್ಲ. ಎಲ್ಲವನ್ನ ತ್ಯಜಿಸಿ,ತಾಳಿ,ತಪಸ್ಸುಗೈದರೂ ಸಿಗದ ತತ್ವವನ್ನ ಲೋಭಗಳಲ್ಲಿ ತಪಿಸಿ ತಪಿಸಿ ಕಳೆದುಕೊಳ್ಳುತ್ತಿರುವೆವಲ್ಲ. ಸದಾ ರಂಜನೆಗಳಲ್ಲಿ ರಂಜಿಸುತ ನಿರಂಜನನಾಗಬೇಕೆಂದೇವಲ್ಲ. ಅಧ್ಯಾತ್ಮದಾಳಕ್ಕೆ ಮುಳುಗಿ ಪಡೆವ ಮುತ್ತೊಂದನ್ನ ಬರಿಗಣ್ಣಿಂದ ಮೇಲೆಯೇ ಹುಡುಕ ಹೊರಟೆವಲ್ಲ. ಸಿಗದಲ್ಲಿಗೆ, ಸೋತ ಭಾವವೂ ಇಲ್ಲದೆ ಮತ್ತೇ ಹೀಗೆಯೇ ಹುಟ್ಟಲು ಹುಲ್ಲುಕಡ್ಡಿಯಾಗಿಯೋ, ಅದರಡಿಯ ಇರುವೆಯಾಗಿಯೋ ಅಳತೊಡಗಿದೆವಲ್ಲ. ಮರೆತೆವಲ್ಲ ಮೋಕ್ಷವನ್ನ ಮಾಯೆಗಳಡಿಯಲ್ಲಿ. ನೆನಪಿಗೂ ಬಾರದ ಸುಕರ್ಮಗಳಿಂದ ಕೂಡಿಟ್ಟ ಕೂಳನ್ನ ಇಂದು ಬೇಡದ ಪಾಪವೆಂಬ ಮಾಂಸ ಮಜ್ಜನಗಳಲ್ಲಿ ಮುಳಿಗಿಸಿ ಮೋಕ್ಷಕ್ಕೆ ಮೈಲಿಗೆಯಾಯಿತೆಂದವಲ್ಲ. ಸೂರಿನಾಚೆಗೊಂದು ಸೂರಿರುವದ ಅರಿತರೂ  ಮತ್ತೆ ಮತ್ತೆ ಇದೇ ಸೂರಿನೊಳಗೇ ಸಿಲುಕಿ ಸೋತೆವಲ್ಲ.                                             ...........ಬಸವ.

ಒಲವ ಬೀದಿಗಳು.

ಗುರುತಿಲ್ಲದೆ ಇದ್ದ ಬೀದಿಗಳೇ ಅದೆಷ್ಟೋ ನೆಮ್ಮದಿಗಳ ಹಾಸುತಿದ್ದವಲ್ಲ, ಇಂದು ಅದೇ ಬೀದಿಗಳು ಪರಿಚಯವಾದ ಮೇಲೆ ಅಸಂಬಂಧಿತ ಎಂಬಂತ್ತೆ ದೂರಿತ್ತಿವೆ, ಮರುಗನ್ನಡಿಯನ್ನ ತೋರಿಸುತ್ತಿವೆ ಅಂದಿಗೂ ಇಂದಿಗೂ ಕಂಡ ಬಿಂಬಗಳ ಸೂತ್ರ ಬಿಡಿಸಿ, ಅದೇ ಬೀದಿಯ ಎರಡೂ ದಂಡೆಯ ಮೇಲೆ ನಿಂತ ಒಲವುಗಳ ಪ್ರಶ್ನೆಗಳಿಗೆ ಉತ್ತರ ಮಾತ್ರ ನಿರುತ್ತರ. ಒಟ್ಟಿಗೆ ಅದೆಷ್ಟೋ ಸಾವಿರ ಹೆಜ್ಜೆಗಳ ತುಳಿದರೂ ಅಗದಿದ್ದ ಆಯಾಸ ಇಂದೊಂದೇರೇಡ್ಹೆಜ್ಜೆಗೆ ದಣಿವಾವರಿಸಿದೆ, ಒಲವಿನೆದುರು ಎತ್ತಲೂ ಹೊರಳಿದಿದ್ದ ಕಣ್ಣೋಟಗಳು ಇಂದು ಕ್ಷಣಕ್ಕೂ ದೃಷ್ಟಿ ಬೆರೆಸುತ್ತಿಲ್ಲ, ಸದಾ ಉತ್ಸಾಹಗಳಿಂದ ಸ್ವಾಗತಿಸುತಿದ್ದ ಬೀದಿಗಳ ತಿರುವುಗಳು ಮೆಲ್ಲಗೆ ನಿರಾಸಕ್ತಿಯನ್ನ ಹೊರಚೆಲ್ಲುತ್ತಿವೆ, ಒಮ್ಮೆ ಆ ಬೀದಿಗಳ ಕಾಣಲು ಹಾತೊರೆಯುತ್ತಿದ್ದ ಹೃದಯ ಇಂದು ತಲ್ಲಣಿಸುತ್ತಿದೆ ಕಂಡು ನೋವೆಂಬ ಭಿತ್ತಿಚಿತ್ರಗಳ. ಕೋನೆಯದೊಂದು ಹೆಜ್ಜೆ ಕೂಡಿಡುವ ಸಮಯ ಈ ಬೀದಿಗಳಲ್ಲಿ ಇನ್ನೆಂದೂ ತುಳಿಯೇನೆಂಬ ಸತ್ಯಕ್ಕೆ ಹ್ಞೂಗೊಟ್ಟು, ಹೋಗುತ್ತ ಮೂಡಿಸಿದ್ದ ಅದ್ರ್ಯಶ್ಯ ಹೆಜ್ಜೆಗಳನ್ನ ಅಳಿಸುತ್ತ ಬರಬೇಕಿದೆ ಒಂದೊಮ್ಮೆ ಮತ್ತದೇ ಬೀದಿಗಳಲ್ಲಿ, ರುಜುಹಾಕಬೇಕಿದೆ ಆ ಬೀದಿಗಳಲ್ಲಿ ಮೂಡಿದ ಅಳು ನಗುಗಳು ತಾತ್ಕಾಲೀಕವೆಂಬ ಸ್ಪಷ್ಟಿಕರಣದ ಕಡತಕ್ಕೆ, ದುಃಖಿಸುವ ಉಸಿರಲ್ಲೂ ಒಂದೊಮ್ಮೆ ಬಿಡುವಿಟ್ಟುಕೊಂಡು ಕೊಡಬೇಕಿದೆ ನಿಟ್ಟುಸಿರ ಹಿನ್ನೋಟ ಆ ಒಲವ ಬೀದಿಗಳಲ್ಲಿ ಅಂತಿಮ ವಿಧಾಯವೆಂಬಂತ್ತೆ.             ...

ಗೈರಾಗಬೇಕಿತ್ತು.

ಗೈರಾಗಿ ಬಿಡಬೇಕಿತ್ತು ನಾವು ಕೆಲವೊಂದು ಸಮಯಕ್ಕೆ ಬದುಕಿನ ಕೆಲ ಕಹಿ ಘಟ್ಟಗಳು ಮರೆಯಾಗದೆ ಉಳಿಯುವ ಮುನ್ನ ಉಸಿರುಗಟ್ಟುವ ಭಾವಗಳು ಹೃದಯದಲೆಲ್ಲಾ ಹಬ್ಬುವ ಮುನ್ನ ಊಹಿಸದೆ ಹೋದ ಕೆಲವು ವಿಧಾಯಗಳು ಘಟಿಸುವ ಮುನ್ನ ಸದಾ ಬೆರೆತೆ ಇರುವೆನೆಂಬ ಹೆಬ್ಬಯಕೆಯೊಂದು ಸುಳ್ಳಾಗುವ ಮುನ್ನ ಭಾವನೆಗಳನ್ನ ಬಾಡಿಗೆಗೆ ಪಡೆದು ಹಿಂದಿರುಗಿಸುವುದ ಕಾಣುವ ಮುನ್ನ ನಾವು ಗೈರಾಗಿ ಬಿಡಬೇಕಿತ್ತು.   ಗೈರಾಗಿ ಬಿಡಬೇಕಿತ್ತು ನಾವಲ್ಲಿಗೆ ಅರ್ಥವೊಂದು ನಾನಾರ್ಥಗಳ ಬಿತ್ತರಿಸುವಲ್ಲಿಗೆ ಬದುಕ ಹೆದ್ದಾರಿಯೊಂದು ಕವಲೊಡೆಯುವಲ್ಲಿಗೆ ಸದಾ ಸತ್ಯವೇ ಆಗಿದ್ದ ಸತ್ಯ ಮಿಥ್ಯವಾಗುವಲ್ಲಿಗೆ ನಾನು ನಾನಾಗಿರದೆ ಮತ್ತೊಬ್ಬ ಬೇರಾಗುವಲ್ಲಿಗೆ ಮತ್ತೆಂದೂ ಸರಿಪಡಿಸದಹಾಗೆ ಮನೋ ಆಕೃತಿಯೊಂದು ರೂಪಗೊಳ್ಳುವಲ್ಲಿಗೆ ನಾವು ಗೈರಾಗಿರಬೇಕಿತ್ತು.   ಗೈರಾಗಿ ಬಿಡಬೇಕಿತ್ತು ನಾವೊಮ್ಮೆ ಅಂದು ಪರವಾನಗಿ ಕೇಳದೆಯೇ ಆ ಭಾವಗಳು ವಿಲೇವಾರಿಯಾದ ದಿನ ಕಣ್ ತಪ್ಪಿಸಿ ಕಣ್ಣೋಟಗಳವು ಬೇರೊಂದು ಕನಸು ಕಂಡ ದಿನ ಇಲ್ಲಿಯೇ ಮಿಡಿಯುತಿದ್ದ ಹೃದಯ ಮತ್ತೆಲ್ಲಿಗೋ ಮಿಡಿದ ದಿನ ಮೀಸಲಿಟ್ಟ ಆ ಮುಗುಳುನಗೆಯನ್ನ ಬೇರಾರೋ ಖರೀದಿಸಿದ ದಿನ ಅರ್ಥಗರ್ಭಿತ ಕಾವ್ಯವೊಂದು ಬರಿಯ ಸಾಲುಗಳಂತ್ತೆ  ಆ ತುಟಿಗಳಿಂದ ಉಸುರಿಹೋದ ದಿನ ಗೈರಾಗಿರಲೇಬೇಕಿತ್ತು.                                       ...

ಬಾಬಾ ಶಿವಾನಂದ - ಒಂದು ವ್ಯಕ್ತಿ ಪರಿಚಯ.

ತುಂಬಾ ದಿನಗಳಿಂದ ತಿರುವಣ್ಣಮಲೈನ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡುವ ವಿಚಾರವಿತ್ತು. ಈ ಬಾರಿಯ ವಾರಾಂತ್ಯದ ಒಂದು ದಿನ ಅದಕ್ಕಂತಲೇ ಮೀಸಲಿಟ್ಟು ಬೆಳಿಗಿನ ಜಾವ 5.30 ಗೆ ಹೊರಟವರು 200ಕಿಮೀ ಕ್ರಮಿಸಿ ಕೆಲ ತಾಸಿನಲ್ಲಿಯೇ ಸುಂದರ ದೇವಸ್ಥಾನದ ಗೋಪುರಗಳ ಮುಂದೆಯೇ ನಿಂತಿದ್ವಿ. ನಾನು ಮತ್ತೆ ನನ್ನ ಸಹದ್ಯೋಗಿ, ಸ್ನೇಹಿತ ಸುವೆಂದು.  ಅರುಣಾಚಲೇಶ್ವರ ಪಂಚಭೂತ ಲಿಂಗಗಳಲ್ಲಿ ಅಗ್ನಿಯನ್ನ ಪ್ರತಿನಿಧಿಸುತ್ತಾನೆ. ದೇವಸ್ಥಾನದೊಳಗೆ ಶಿವ ತನ್ನ ಮಡದಿ ಪಾರ್ವತಿಯೊಂದಿಗೆ ಭವ್ಯ ಮತ್ತು ಸುಂದರ ಕಟ್ಟಡದೊಳಗೆ ಒಂದೊಂದು ಪ್ರತ್ಯೇಕ ಗರ್ಭಗೃಹಗಳಲ್ಲಿ ನೆಲೆಯುರಿದ್ದಾರೆ. ಭಾರತದಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನ ಪ್ರಾಂಗಣ ಹೊಂದಿರುವ ದೇವಸ್ಥಾನ ಇದು. ಅರುಣಾಚಲ ಬೆಟ್ಟದಡಿಯಲ್ಲಿ ಗಗನಚುಂಬಿ ಗೋಪುರಗಳ ಮಧ್ಯಗಿನ ಸುಂದರ ದೇವಸ್ಥಾನದಲ್ಲಿ ಅಂಗಾಲುಗಳು ನೆಲಕ್ಕೆ ಸ್ಪರ್ಶಿ ಅಲ್ಲಿ ತಿರುಗಾಡುತ್ತಾ ಪಡೆದುಕೊಳ್ಳುವ ದಿವ್ಯ ಅನುಭೂತಿಯೇ ವಿಶೇಷ ನೆಮ್ಮದಿ. ದೇವರ ದರ್ಶನ ಮುಗಿಸಿಕೊಂಡು ಅಲ್ಲೇ ದೇವಸ್ಥಾನದ ಪ್ರಾಂಗಣದಲ್ಲಿ ತಿರುಗಾಡುತ್ತಿದ್ದಾಗ ಸುಮಾರು 65ರ ಮೇಲಿನ ವಯಸ್ಕರೊರ್ವ ಬಿಳಿಯ ಪಂಚೆ, ಕಾವಿ ಜುಬ್ಬಾ, ಉದ್ದನೆಯ ಬಿಳಿಕೂದಲಿಗೆ ಜುಟ್ಟೊಂದು ಹಾಕಿಕೊಂಡಿದ್ದ. ಕೊರಳಲ್ಲಿ ಒಂದೆರಡು ರುದ್ರಾಕ್ಷಿಗಳು, ಹೆಗಲಮೇಲೊಂದು ಕಾವಿ ಶಾಲು, ಹುಬ್ಬುಗಳ ಮಧ್ಯೆ ಕುಂಕುಮ, ಸ್ವಲ್ಪ ಉದ್ದನೆಯ ಬಿಳಿ ಗಡ್ಡ ಮತ್ತು ಬೆಳ್ಳನೆಯ ತೇಜಸ್ಸು ಭರಿತ ಮುಖ. ಈ ಕಾಯ ಅಲ್ಲಿ ಕಂಡದ್ದೇ ತಡ...