ಗೈರಾಗಬೇಕಿತ್ತು.
ಗೈರಾಗಿ ಬಿಡಬೇಕಿತ್ತು ನಾವು ಕೆಲವೊಂದು ಸಮಯಕ್ಕೆ ಬದುಕಿನ ಕೆಲ ಕಹಿ ಘಟ್ಟಗಳು ಮರೆಯಾಗದೆ ಉಳಿಯುವ ಮುನ್ನ ಉಸಿರುಗಟ್ಟುವ ಭಾವಗಳು ಹೃದಯದಲೆಲ್ಲಾ ಹಬ್ಬುವ ಮುನ್ನ ಊಹಿಸದೆ ಹೋದ ಕೆಲವು ವಿಧಾಯಗಳು ಘಟಿಸುವ ಮುನ್ನ ಸದಾ ಬೆರೆತೆ ಇರುವೆನೆಂಬ ಹೆಬ್ಬಯಕೆಯೊಂದು ಸುಳ್ಳಾಗುವ ಮುನ್ನ ಭಾವನೆಗಳನ್ನ ಬಾಡಿಗೆಗೆ ಪಡೆದು ಹಿಂದಿರುಗಿಸುವುದ ಕಾಣುವ ಮುನ್ನ ನಾವು ಗೈರಾಗಿ ಬಿಡಬೇಕಿತ್ತು. ಗೈರಾಗಿ ಬಿಡಬೇಕಿತ್ತು ನಾವಲ್ಲಿಗೆ ಅರ್ಥವೊಂದು ನಾನಾರ್ಥಗಳ ಬಿತ್ತರಿಸುವಲ್ಲಿಗೆ ಬದುಕ ಹೆದ್ದಾರಿಯೊಂದು ಕವಲೊಡೆಯುವಲ್ಲಿಗೆ ಸದಾ ಸತ್ಯವೇ ಆಗಿದ್ದ ಸತ್ಯ ಮಿಥ್ಯವಾಗುವಲ್ಲಿಗೆ ನಾನು ನಾನಾಗಿರದೆ ಮತ್ತೊಬ್ಬ ಬೇರಾಗುವಲ್ಲಿಗೆ ಮತ್ತೆಂದೂ ಸರಿಪಡಿಸದಹಾಗೆ ಮನೋ ಆಕೃತಿಯೊಂದು ರೂಪಗೊಳ್ಳುವಲ್ಲಿಗೆ ನಾವು ಗೈರಾಗಿರಬೇಕಿತ್ತು. ಗೈರಾಗಿ ಬಿಡಬೇಕಿತ್ತು ನಾವೊಮ್ಮೆ ಅಂದು ಪರವಾನಗಿ ಕೇಳದೆಯೇ ಆ ಭಾವಗಳು ವಿಲೇವಾರಿಯಾದ ದಿನ ಕಣ್ ತಪ್ಪಿಸಿ ಕಣ್ಣೋಟಗಳವು ಬೇರೊಂದು ಕನಸು ಕಂಡ ದಿನ ಇಲ್ಲಿಯೇ ಮಿಡಿಯುತಿದ್ದ ಹೃದಯ ಮತ್ತೆಲ್ಲಿಗೋ ಮಿಡಿದ ದಿನ ಮೀಸಲಿಟ್ಟ ಆ ಮುಗುಳುನಗೆಯನ್ನ ಬೇರಾರೋ ಖರೀದಿಸಿದ ದಿನ ಅರ್ಥಗರ್ಭಿತ ಕಾವ್ಯವೊಂದು ಬರಿಯ ಸಾಲುಗಳಂತ್ತೆ ಆ ತುಟಿಗಳಿಂದ ಉಸುರಿಹೋದ ದಿನ ಗೈರಾಗಿರಲೇಬೇಕಿತ್ತು. ............ಬಸವ.